ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಕೊರಳಿನ ಕ್ಯಾನ್ಸರ್‌: ಹೆಂಗಳೆಯರಲ್ಲಿ ಅರಿವಿನ ಕೊರತೆ

ಜನವರಿ; ಗರ್ಭಕೊರಳಿನ ಕ್ಯಾನ್ಸರ್‌ ಜಾಗೃತಿ ಮಾಸಾಚರಣೆ
Last Updated 18 ಜನವರಿ 2021, 19:30 IST
ಅಕ್ಷರ ಗಾತ್ರ

ಸ್ತನ, ಗರ್ಭಾಶಯ ಇವು ಹೆಣ್ತನದ ದ್ಯೋತಕ. ಆದರೆ ಹೆಂಗಳೆಯರಲ್ಲಿ ಕ್ಯಾನ್ಸರ್‌ನ ದೃಷ್ಟಿಯೇನಾದರೂ ಬೀಳುವುದಿದ್ದರೆ ಹೆಚ್ಚಾಗಿ ಇವುಗಳ ಮೇಲೆಯೇ. ಹತ್ತು ವರ್ಷಗಳ ಹಿಂದೆ ಗರ್ಭಕೊರಳಿನ ಕ್ಯಾನ್ಸರ್‌ಗೆ ಮಹಿಳೆಯರು ಹೆಚ್ಚು ಬಲಿಯಾಗುತ್ತಿದ್ದರು. ಹತ್ತು ವರ್ಷಗಳಿಂದೀಚೆಗೆ ಸ್ತನ ಕ್ಯಾನ್ಸರ್‌ ಕುರಿತು ಅರಿವು ಹೆಚ್ಚಿದ್ದರಿಂದ ಸ್ತನ ಕ್ಯಾನ್ಸರ್‌ಯಿಂದ ಜೀವ ಕಳೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ ಎಂಬುದು ಅಧ್ಯಯನ ವರದಿಗಳಲ್ಲಿ ಕಾಣಬಹುದು. ಆದರೆ ಮಹಿಳೆಯರನ್ನು ಕಾಡುವ ಕ್ಯಾನ್ಸರ್‌ಗಳಲ್ಲೇ ಸ್ತನ ಕ್ಯಾನ್ಸರ್‌ ನಂತರದ ಸ್ಥಾನ ಗರ್ಭಕೊರಳಿನ ಕ್ಯಾನ್ಸರ್‌ನದೇ.

ಜನವರಿ ತಿಂಗಳು ಗರ್ಭಕೊರಳಿನ ಕ್ಯಾನ್ಸರ್‌ ಜಾಗೃತಿ ಮಾಸವಾಗಿ ಆಚರಿಸಲಾಗುತ್ತಿದೆ. ಮಹಿಳೆಯರಲ್ಲಿ ಗರ್ಭಕೊರಳಿನ/ಗರ್ಭಕಂಠದ (Cervical Cancer) ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸುವುದೇ ಈ ಜಾಗೃತಿಮಾಸದ ಮೂಲ ಉದ್ದೇಶ.

ಹ್ಯೂಮನ್‌ ಪ್ಯಾಪಿಲೋಮಾ ವೈರಸ್‌(HPV) ಗರ್ಭಕೊರಳಿನ ಕ್ಯಾನ್ಸರ್‌ಗೆ ಮೂಲ ಕಾರಣ ಎನ್ನುತ್ತಾರೆ ಹುಬ್ಬಳ್ಳಿಯ ಎಚ್‌ಸಿಜಿ ಎನ್‌ಎಂಆರ್‌ನ ರೇಡಿಯೇಷನ್‌ ಅಂಕಾಲಾಜಿಸ್ಟ್‌ ಡಾ.ವಿನಯ ಮುತ್ತಗಿ. ಈ ವೈರಾಣು ಲೈಂಗಿಕ ಸಂಪರ್ಕದಿಂದ ಹುಟ್ಟಿಕೊಳ್ಳಬಹುದು. ಅಸುರಕ್ಷಿತ ಹೆರಿಗೆ ಸಮಯದಲ್ಲಿ ಗರ್ಭಕಂಠಕ್ಕೆ ಆಗುವ ಗಾಯಗಳಲ್ಲಿ ಸೋಂಕು ಉಂಟಾಗಿ ಅದು ಕ್ಯಾನ್ಸರ್‌ ಕಾರಣವಾಗಬಹುದು. ಆದರೆ ಲೈಂಗಿಕ ಸಂಪರ್ಕ ಅಥವಾ ಹೆರಿಗೆ ಸಮಯದಲ್ಲಿ ಉಂಟಾಗುವ ಸೋಂಕು ಗರ್ಭಕೊರಳಿನ ಕ್ಯಾನ್ಸರ್‌ನ ಆಗಿ ರೂಪಾಂತರ ಹೊಂದಲು 15–20 ವರ್ಷಗಳೇ ಬೇಕು. ಈ ಅವಧಿಯಲ್ಲಿ ಕ್ಯಾನ್ಸರ್‌ (CIN) ನಾಲ್ಕು ಹಂತಗಳನ್ನು ದಾಟಿ ಬರಲಿದೆ. ಆರಂಭಿಕ ಹಂತದಲ್ಲಿದ್ದರೆ (CIN-1) ಆ ಹಂತದಲ್ಲಿ ಚಿಕಿತ್ಸೆ ಪಡೆದರೆ ಶೇ 90ರಷ್ಟು, CIN-2 ಹಂತದಲ್ಲಿ ಶೇ 85, CIN-3ನೇ ಹಂತದಲ್ಲಿದ್ದರೆ ಶೇ 70 ಹಾಗೂ CIN-4 ನೇ ಹಂತದಲ್ಲಿ ಶೇ 40 ಗುಣಪಡಿಸಬಹುದು.

ಪ್ರಮುಖ ಲಕ್ಷಣಗಳು: ಬಿಳಿಮಟ್ಟು/ಕೆಂಪು ಮುಟ್ಟು ಹೋಗುವುದು, ಕಿಬ್ಬೊಟ್ಟೆ ಹಾಗೂ ಸೊಂಟದ ಕೆಳಭಾಗದಲ್ಲಿ ನೋವು ಕಾಣಿಸುವುದು, ಅನಿಯಮಿತ ಸ್ರಾವ.

ಮುಂಜಾಗ್ರತೆ ಹೇಗೆ?

ಗರ್ಭಕಂಠದ ಕ್ಯಾನ್ಸರ್‌ ತಡೆಯುವಲ್ಲಿ ಪ್ಯಾಪ್‌ ಸ್ಮೀಯರ್‌ ತಪಾಸಣೆ ಸುಲಭ ಮಾರ್ಗ. ಪ್ರತಿ ಮೂರು ವರ್ಷಕ್ಕೊಮ್ಮೆ ಮಹಿಳೆಯರು ಪ್ಯಾಪ್‌ ಸ್ಮೀಯರ್‌ ತಪಾಸಣೆಗೆ ಒಳಪಟ್ಟರೆ ಕ್ಯಾನ್ಸರ್‌ನ ಸಾಧ್ಯತೆಯನ್ನು ತಿಳಿಯಬಹುದು.

ಗರ್ಭಕಂಠದ ಕ್ಯಾನ್ಸರ್‌ ತಡೆಯುವಲ್ಲಿ ಸಿದ್ಧಪಡಿಸಲಾದ ಮಾರ್ಗಸೂಚಿ ಪ್ರಕಾರ 21 ವರ್ಷದೊಳಗಿನವರಿಗೆ ಪ್ಯಾಪ್‌ ಸ್ಮಿಯರ್‌ ತಪಾಸಣೆ ಅಗತ್ಯವಿಲ್ಲ. 21–29 ವರ್ಷದವರಿಗೆ ಪ್ರತಿ ಮೂರು ವರ್ಷಕ್ಕೊಮ್ಮೆ ಪ್ಯಾಪ್‌ ಸ್ಮೀಯರ್‌ ತಪಾಸಣೆಗೊಳಪಡಬೇಕು.30–65 ವಯೋಮಿತಿಯವರು 5 ವರ್ಷಕ್ಕೊಮ್ಮೆ ಪ್ಯಾಪ್‌ ಸ್ಮೀಯರ್‌ ಜೊತೆಗೆ ಹ್ಯೂಮನ್‌ ಪ್ಯಾಪಿಲೋಮಾ ವೈರಸ್‌ ಪರೀಕ್ಷೆಗೊಳಪಡಬೇಕು. 65 ವರ್ಷ ಮೇಲ್ವಟ್ಟವರಿಗೆ ಈ ತಪಾಸಣೆಯ ಅಗತ್ಯವಿಲ್ಲ. ಋತು ಬಂಧಕ್ಕೂ, ಗರ್ಭಕೊರಳಿನ ಕ್ಯಾನ್ಸರ್‌ಗೂ ಸಂಬಂಧವಿಲ್ಲ ಎನ್ನುತ್ತಾರೆ ಡಾ. ವಿನಯ ಮುತ್ತಗಿ.

ಆದರೆ ಗರ್ಭಕೊರಳಿನ ಕ್ಯಾನ್ಸರ್‌ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಲ್ಲ. ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಈ ಕ್ಯಾನ್ಸರ್‌ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ಇದಕ್ಕೆ ತಿಳಿವಳಿಕೆ ಕೊರತೆಯೇ ಕಾರಣ ಎನ್ನಲಾಗಿದೆ. ಈ ಕುರಿತು ತಿಳಿವಳಿಕೆ ಹೊಂದುವುದು ಮುಖ್ಯ. ಮಹಿಳೆಯರು ಕೊಂಚ ಮುಂಜಾಗ್ರತೆ ವಹಿಸಿದರೆ ಅಂದರೆ ಈ ಮೇಲೆ ಹೇಳಲಾದ ಮಾರ್ಗಸೂಚಿ ಪ್ರಕಾರ ಪ್ಯಾಪ್‌ ಸ್ಮೀಯರ್‌ ತಪಾಸಣೆಗೊಳಪಟ್ಟಲ್ಲಿ ಗರ್ಭಕೊರಳ ಕ್ಯಾನ್ಸರ್‌ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ, ಚಿಕಿತ್ಸೆಗೊಳಪಟ್ಟಲ್ಲಿ ಗುಣಮುಖರಾಗಬಹುದು. ಗರ್ಭಕೊರಳಿನಲ್ಲಿ ಆಗುವ ಗಾಯ, ಸೋಂಕು ಗಮನಕ್ಕೆ ಬರುತ್ತಲೇ ವೈದ್ಯರನ್ನು ಕಂಡು ಪರೀಕ್ಷಿಸಿಕೊಳ್ಳುವುದು ಮುಖ್ಯ.

ಪ್ಯಾಪ್‌ಸ್ಮೀಯರ್‌ ತಪಾಸಣೆಗೊಳಪಡಲು ಸ್ತ್ರೀರೋಗ ತಜ್ಞರು ಇಲ್ಲವೆ ಅಂಕಾಲೊಜಿಸ್ಟ್‌ ಅವರನ್ನು ಭೇಟಿ ಮಾಡಿ ಪರೀಕ್ಷಿಸಿಕೊಳ್ಳಬಹುದು.ಈ ತಪಾಸಣೆಯಲ್ಲಿ ಗರ್ಭಾಶಯದ ಕೊರಳಿನ ಜೀವಕೋಶಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗುವುದು.

ಗರ್ಭಕೊರಳಿನ ಕ್ಯಾನ್ಸರ್‌ನಲ್ಲಿ ಅಗತ್ಯವಿದ್ದಾಗ ನೀಡುವ ಕಿಮೊಥೆರಪಿಯಿಂದ ಕೂದುಲುದುರದು. ಕಿಮೊದಲ್ಲಿ ಕಡಿಮೆ ಡೋಸ್‌ ಬಳಸುವುದರಿಂದ ಅಡ್ಡಪರಿಣಾಮಗಳ ಬಾಧೆ ಕಮ್ಮಿಯಿರಲಿದೆ ಎನ್ನುವುದು ತಜ್ಞ ವೈದ್ಯರ ಹೇಳಿಕೆ.

***
ಮಹಿಳೆಯರಲ್ಲಿ ಗರ್ಭಕೊರಳಿನ ಕ್ಯಾನ್ಸರ್‌ ಕುರಿತ ಅರಿವು ಹೆಚ್ಚಬೇಕಿದೆ. ಆರಂಭದಲ್ಲೇ ಪತ್ತೆ ಹಚ್ಚಿದಲ್ಲಿ ಗುಣಪಡಿಸಬಹುದು
-ಡಾ.ವಿನಯ ಮುತ್ತಗಿ,ರೆಡಿಯಾಲಾಜಿಸ್ಟ್‌ ಅಂಕಾಲೋಜಿ, ಎಚ್‌ಸಿಜಿ ಎನ್‌ಎಂಆರ್‌ ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT