ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಒಂದಷ್ಟು ತಿಳಿಯೋಣ: ಗರ್ಭಿಣಿ, ಬಾಣಂತಿಯರಿಗೆ ವಿಶೇಷ ಆರೈಕೆ ಅಗತ್ಯ

Last Updated 23 ಅಕ್ಟೋಬರ್ 2020, 20:26 IST
ಅಕ್ಷರ ಗಾತ್ರ

ಬೆಂಗಳೂರು: ಗರ್ಭಿಣಿಯರು ಹಾಗೂ ಬಾಣಂತಿಯರನ್ನು ಈ ಕೋವಿಡ್‌ ಕಾಲದಲ್ಲಿ ವಿಶೇಷವಾಗಿ ಆರೈಕೆ ಮಾಡಬೇಕು. ತಾಯಿಗೆ ಜ್ವರ, ಕೆಮ್ಮಿನಂತಹ ಲಕ್ಷಣಗಳು ಕಾಣಿಸಿಕೊಂಡಲ್ಲಿ ಅಥವಾ ಉಸಿರಾಟದ ಸಮಸ್ಯೆ ಉಂಟಾದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ವೈದ್ಯಕೀಯ ನೆರವು ಪಡೆಯಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಿಗೆ ಕೊರೊನಾ ಸೋಂಕು ಅಪಾಯ ಉಂಟುಮಾಡುವ ಸಾಧ್ಯತೆ ಹೆಚ್ಚು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ. ರಾಜ್ಯದಲ್ಲಿ ಕೋವಿಡ್‌ ಪೀಡಿತ ಗರ್ಭಿಣಿಯರಿಗೆ ವಿವಿಧ ಆಸ್ಪತ್ರೆಗಳಲ್ಲಿ ಯಶಸ್ವಿಯಾಗಿ ಹೆರಿಗೆ ಮಾಡಿಸಿ, ಆರೈಕೆ ಮಾಡಲಾಗಿದೆ. ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯೊಂದರಲ್ಲಿಯೇ 200ಕ್ಕೂ ಅಧಿಕ ಹೆರಿಗೆಗಳು ನಡೆದಿವೆ. ಸೂಕ್ತ ಮುನ್ನೆಚ್ಚರಿಕೆಯೊಂದಿಗೆ ತಾಯಿ–ಮಗುವಿನ ಸಂಪರ್ಕಕ್ಕೆ ಅವಕಾಶ ನೀಡಲಾಗುತ್ತಿದೆ. ಈ ಅವಧಿಯಲ್ಲಿ ಕೆಲವು ನವಜಾತ ಶಿಶುಗಳು ಕೂಡ ಕೋವಿಡ್ ಪೀಡಿತವಾಗಿವೆ. ಆದರೆ, ಅವುಗಳು ಬೇಗ ಚೇತರಿಸಿಕೊಳ್ಳುತ್ತಿವೆ ಎನ್ನುತ್ತಾರೆ ವೈದ್ಯರು.

‘ಗರ್ಭಿಣಿಯರು ಹಾಗೂ ಬಾಣಂತಿಯರು ಅನಗತ್ಯವಾಗಿ ಮನೆಯಿಂದ ಹೊರಗಡೆ ಹೋಗಬಾರದು. ಕೋವಿಡ್ ಕಾರಣ ಈ ಸಂದರ್ಭದಲ್ಲಿ ಮನೆಗೆ ಅತಿಥಿಗಳು ಬರದಂತೆ ನೋಡಿಕೊಳ್ಳಬೇಕು. ವ್ಯಕ್ತಿಗಳ ನಡುವೆ ಅಂತರ ಕಾಯ್ದುಕೊಳ್ಳಬೇಕು. ವೈದ್ಯರ ಸಲಹೆ ಪಡೆದೇ ಮಾತ್ರೆಗಳನ್ನು ಸೇವಿಸಬೇಕು. ಸ್ತನ್ಯಪಾನವು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಹೆಚ್ಚು ಪರಿಣಾಮಕಾರಿ. ಮಗು ಹುಟ್ಟಿದ ಒಂದು ಗಂಟೆಯೊಳಗೆ ಹಾಲುಣಿಸಲು ಪ್ರಾರಂಭಿಸಿ, ಆರು ತಿಂಗಳವರೆಗೆ ಎದೆಹಾಲನ್ನು ಮಾತ್ರ ನೀಡಬೇಕಾಗುತ್ತದೆ. ಒಂದು ವೇಳೆ ತಾಯಿ ಕೋವಿಡ್ ಪೀಡಿತರಾದರೂ ಮುಖಗವಸು ಧರಿಸುವ ಜತೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ, ಮಗುವಿಗೆ ಸ್ತನ್ಯಪಾನ ಮಾಡಿಸಬಹುದು’ ಎಂದುವಾಣಿವಿಲಾಸ ಆಸ್ಪತ್ರೆಯ ವೈದ್ಯ ಅಧೀಕ್ಷಕಿ ಡಾ. ಗೀತಾ ಶಿವಮೂರ್ತಿ ತಿಳಿಸಿದರು.

ಒಂದೇ ಕೋಣೆಯಲ್ಲಿ ಅವಕಾಶ: ‘ತಾಯಿ ತೀವ್ರವಾದ ಅನಾರೋಗ್ಯಕ್ಕೆ ಒಳಗಾಗಿದ್ದಲ್ಲಿ ಬೇರೆ ವಿಧಾನಗಳ ಮೂಲಕ ಸ್ತನ್ಯಪಾನ ಮಾಡಿಸಬೇಕು. ಅದು ಸಾಧ್ಯವಾಗದಿದ್ದರೆ ದಾನಿಗಳಿಂದ ಪಡೆದ ಹಾಲನ್ನು ಮಗುವಿಗೆ ನೀಡಬೇಕಾಗುತ್ತದೆ. ಎಲ್ಲ ರೀತಿಯಲ್ಲಿಯೂ ಸುರಕ್ಷತೆ ಇದ್ದಲ್ಲಿ ಅಂತರ ಕಾಯ್ದುಕೊಳ್ಳುವ ಮೂಲಕ ತಾಯಿ ಮತ್ತು ಮಗು ಒಂದೇ ಕೋಣೆಯನ್ನು ಹಂಚಿಕೊಳ್ಳಬಹುದು. ಇಲ್ಲವಾದಲ್ಲಿ ಪ್ರತ್ಯೇಕವಾಗಿ ಇರಬೇಕಾಗುತ್ತದೆ. ರೋಗನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಉತ್ತಮವಾದ ಆಹಾರವನ್ನು ಸೇವಿಸಬೇಕು. ಕೋವಿಡ್ ಕಾರಣ ವಿಡಿಯೊ ಸಂವಾದದ ಮೂಲಕವೂ ವೈದ್ಯರು ಸಲಹೆ ನೀಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT