ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಯಾಶೀಲ ಹಗಲಿಗೆ ಉಲ್ಲಾಸದ ಮುಂಜಾವು

Last Updated 19 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ನಮ್ಮ ದಿನ ಕ್ರಿಯಾಶೀಲವಾಗಿರಬೇಕು ಎಂದರೆ ಮುಂಜಾನೆ ಎದ್ದ ಕೂಡಲೇ ಮನಸ್ಸು ಉಲ್ಲಸಿತವಾಗಿರಬೇಕು. ಹಾಗಿದ್ದಾಗ ಮಾತ್ರ ಬೆಳಗಿನಿಂದ ಸಂಜೆಯವರೆಗೆ ಚಟುವಟಿಕೆಯಿಂದಿರಲು ಸಾಧ್ಯ, ಜೊತೆಗೆ ನಾವು ಮಾಡುವ ಕೆಲಸಗಳು ಸಕಾರಾತ್ಮಕವಾಗಿರುತ್ತವೆ.

ಬೆಳಿಗ್ಗೆ ಎದ್ದ ಕೂಡಲೇ ಮನಸ್ಸು ಉಲ್ಲಸಿತವಾಗಿರಲು ‘ರೈಸ್‌ ಅಪ್‌ ವಿಧಾನ’ ವನ್ನು ಅನುಸರಿಸಬೇಕು ಎನ್ನುತ್ತಾರೆ ತಜ್ಞರು. ಈ ವೈಜ್ಞಾನಿಕ ವಿಧಾನವು 2018ರಿಂದ ಪ್ರಚಲಿತದಲ್ಲಿದೆ. ಇದು ನಮ್ಮಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸಿ ದೈಹಿಕ ಕ್ಷಮತೆ ಹೆಚ್ಚಲು ಸಹಾಯ ಮಾಡುತ್ತದೆ.

‘ಕೊರೊನಾ ಕಾರಣದಿಂದ ಹೆಚ್ಚು ಸಮಯ ಮನೆಯ ಒಳಗೇ ಇರುವುದು, ಚಿಂತೆ, ಆತಂಕದ ಕಾರಣದಿಂದ ನಿದ್ದೆಯ ಜಡತ್ವ ನಮ್ಮನ್ನು ಹೆಚ್ಚು ಕಾಡುತ್ತಿದೆ. ನಿದ್ದೆಯ ಮಧ್ಯೆ ಮಧ್ಯೆ ಎಚ್ಚರವಾಗುವುದರಿಂದ ಕಾರ್ಯಕ್ಷಮತೆಯ ಕಡಿಮೆಯಾಗುತ್ತಿದೆ. ಅಲ್ಲದೇ ನಿದ್ದೆಯ ಕ್ರಮದಲ್ಲೂ ವ್ಯತ್ಯಾಸವಾಗಿದೆ. ಜೊತೆಗೆ ಅಲಸ್ಯವೂ ಹೆಚ್ಚಿದೆ. ಹಾಗಾಗಿ ಮುಂಜಾವಿನಲ್ಲಿ ನಿದ್ದೆಯ ಮಂಪ‍ರನ್ನು ಹೋಗಲಾಡಿಸಿ ಕ್ರಿಯಾಶೀಲತೆ ಹೆಚ್ಚಲು ರೈಸ್ ಅಪ್‌ ವಿಧಾನ ಉತ್ತಮ’ ಎನ್ನುತ್ತಾರೆ ಆಪ್ತಸಮಾಲೋಚಕಿ ಜಾಹ್ನವಿ ಪಿ.

ಈ ರೈಸ್‌ ಅಪ್ ವಿಧಾನದಲ್ಲಿ 6 ತಂತ್ರಗಳಿವೆ. ಅದನ್ನು ತಪ್ಪದೇ ಪಾಲಿಸಿದರೆ ಬೆಳಗಿನಿಂದ ರಾತ್ರಿವರೆಗೆ ಚಟುವಟಿಕೆಯಿಂದ ದಿನ ಕಳೆಯಬಹುದು.

ಅಲಾರ್ಮ್‌ ಆಫ್ ಮಾಡಿ ಮಲಗುವ ಅಭ್ಯಾಸಕ್ಕೆ ಬ್ರೇಕ್‌ ಹಾಕಿ: ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಒಂದೇ ಸಮಯಕ್ಕೆ ಎದ್ದೇಳಬೇಕು. ದಿನಕ್ಕೊಂದು ಸಮಯಕ್ಕೆ ಎದ್ದೇಳುವುದು ತಪ್ಪು. ಅಲ್ಲದೇ ಅಲಾರ್ಮ್‌ ಇರಿಸಿಕೊಂಡು ಮಲಗಿದರೆ ಸ್ನೂಜ್‌ ಮಾಡಿ ಮಲಗುವುದನ್ನು ಬಿಡಬೇಕು. ಈ ರೀತಿ ಮಾಡುವುದರಿಂದ ಮತ್ತೆ ಮತ್ತೆ ಎಚ್ಚರವಾಗಿ ಪರಿಪೂರ್ಣ ನಿದ್ದೆಗೆ ತೊಂದರೆಯಾಗುತ್ತದೆ. ಅಲ್ಲದೇ ಪುನಃ ಮಲಗುವುದರಿಂದ ಮಂಕು ಕವಿದಂತಾಗುತ್ತದೆ. ಪ್ರತಿದಿನ ಬೇರೆ ಬೇರೆ ಸಮಯದಲ್ಲಿ ಎದ್ದೇಳುವುದರಿಂದ ನಮ್ಮ ದೈಹಿಕ ವ್ಯವಸ್ಥೆಯಲ್ಲಿನ ಬದಲಾವಣೆಗೂ ಕಾರಣವಾಗುತ್ತದೆ. ಒಂದು ವೇಳೆ ರಾತ್ರಿ ಮಲಗುವ ಸಮಯದಲ್ಲಿ ವ್ಯತ್ಯಾಸವಾಗಿದ್ದರೆ ಬೆಳಿಗ್ಗೆ ತಡವಾಗಿ ಏಳುವುದೂ ತಪ್ಪು.

ಬೆಳಗಿನ ಚಟುವಟಿಕೆಗೆ ನೀಡದಿರಿ ವಿರಾಮ: ಬೆಳಗಿನ ಚಟುವಟಿಕೆಗಳು ಎಂದಿಗೂ ನಮಗೆ ಭಾರವಾಗಬಾರದು. ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಒಂದು ಗಂಟೆ ಕಾಲ ದೈಹಿಕ ಚಟುವಟಿಕೆಗೆ ಸಮಯ ಮೀಸಲಿಡಬೇಕು. ಯಾವುದೇ ಕಾರಣಕ್ಕೂ ಚಟುವಟಿಕೆಯನ್ನು ತಪ್ಪಿಸಬಾರದು. ನಾಯಿಯನ್ನು ವಿಹಾರಕ್ಕೆ ಕರೆದ್ಯೊಯುವುದು, ಕಾಫಿ ಶಾಪ್‌ಗೆ ನಡೆದುಕೊಂಡು ಹೋಗುವುದು, ಹಾಲು, ಮೊಸರು, ತರಕಾರಿ ತರಲು ದೂರದ ಅಂಗಡಿಗಳಿಗೆ ನಡೆದುಕೊಂಡು ಹೋಗುವುದು ಮಾಡಬೇಕು. ಈ ರೀತಿಯ ಚಟುವಟಿಕೆಗಳು ಸುಗಮ ರಕ್ತಸಂಚಾರಕ್ಕೆ ನೆರವಾಗುತ್ತವೆ. ಅಲ್ಲದೇ ದೇಹದಲ್ಲಿ ಹೊಸ ಚೈತನ್ಯ ಮೂಡಿಸುತ್ತವೆ. ಇದರಿಂದ ನಿದ್ದೆಯ ಮಂಪರು ದೂರಾಗುತ್ತದೆ ಎನ್ನುತ್ತಾರೆ ಜಾಹ್ನವಿ.

ಬೆಳಗಿನ ಸ್ನಾನ: ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಅವಶ್ಯ. ಇದರಿಂದ ದೇಹ ಹಾಗೂ ಮನಸ್ಸು ಎರಡೂ ಸಂತಸದಿಂದಿರುತ್ತದೆ. ಅಲ್ಲದೇ ನಿದ್ದೆಯ ಮಂಪರನ್ನು ದೂರ ಮಾಡಿ ಚಟುವಟಿಕೆಯಿಂದಿರಲು ಸಹಾಯ ಮಾಡುತ್ತದೆ. ದೈಹಿಕ ಚಟುವಟಿಕೆಯ ನಂತರ ತಪ್ಪದೇ ಸ್ನಾನ ಮಾಡಬೇಕು.

ಸಂಗೀತ ಆಲಿಸುವುದು: ಸಂಗೀತಕ್ಕೆ ಎಲ್ಲಾ ನೋವನ್ನು ಮರೆಸುವ ಶಕ್ತಿಯಿದೆ. ನಮ್ಮ ಮುಂಜಾನೆಯು ಖುಷಿಯಿಂದ ಆರಂಭವಾಗಬೇಕು ಎಂದರೆ ಬೆಳಿಗ್ಗೆ ಲಘುವಾದ ಸಂಗೀತ ಆಲಿಸಬೇಕು. ಸಂಗೀತವು ಮನಸ್ಸು ಹಾಗೂ ದೇಹ ಎರಡರಲ್ಲೂ ಉತ್ಸಾಹ ಹೆಚ್ಚುವಂತೆ ಮಾಡುತ್ತದೆ. ವಾಕಿಂಗ್‌ ಅಥವಾ ರನ್ನಿಂಗ್ ಮಾಡುವಾಗ ಲಘು ಸಂಗೀತ ಆಲಿಸಬೇಕು. ಮನೆಯಲ್ಲಿಯೂ ಸಣ್ಣ ಧ್ವನಿಯಲ್ಲಿ ಸಂಗೀತ ಕೇಳಬಹುದು.

ಆಪ್ತರಿಗೆ ಕರೆ ಮಾಡಿ ಮಾತನಾಡಿ: ಈಗ ಕೊರೊನಾ ಹೆಚ್ಚುತ್ತಿರುವ ಕಾರಣ ನಮ್ಮ ಆಪ್ತರನ್ನು ಭೇಟಿ ಮಾಡುವುದು ಕಷ್ಟ. ಅಕ್ಕಪಕ್ಕದ ಬೀದಿಯ ಪ್ರತಿದಿನ ಸಿಗುವ ಸ್ನೇಹಿತರನ್ನೂ ಭೇಟಿ ಮಾಡುವುದು ಕಷ್ಟವಾಗಬಹುದು. ಆ ಕಾರಣಕ್ಕೆ ಬೆಳಗಿನ ಹೊತ್ತು ಬಿಡುವಿನ ವೇಳೆ ನಿಮ್ಮ ಆಪ್ತರಿಗೆ ಕರೆ ಮಾಡಿ ಮಾತನಾಡಿ. ಅವರೊಂದಿಗೆ ವಿಷಯಗಳನ್ನು ಹಂಚಿಕೊಳ್ಳುವುದರಿಂದ ಮನಸ್ಸಿಗೆ ಖುಷಿ ಸಿಗುತ್ತದೆ.

ಸೂರ್ಯನ ಬೆಳಕಿಗೆ ಮೈ ಒಡ್ಡಿ

ಸೂರ್ಯನ ಎಳೆ ಬಿಸಿಲಿಗೆ ಮೈ ಒಡ್ಡುವುದರಿಂದ ದೇಹಕ್ಕೆ ಬೇಕಾದ ವಿಟಮಿನ್‌ ಅಂಶಗಳು ಸಿಗುವುದಲ್ಲದೇ ಚುರುಕುತನ ಮೂಡುತ್ತದೆ. ದೇಹದಲ್ಲಿ ಅಂತರಿಕ ಶಕ್ತಿ ಹೆಚ್ಚಲು ಬಿಸಿಲಿಗೆ ಮೈ ಒಡ್ಡುವುದು ತುಂಬಾ ಅಗತ್ಯ. ಎಳೆ ಬಿಸಿಲಿನಲ್ಲಿ ಅರ್ಧ ಗಂಟೆ ಕಾಲ ಓಡಾಟ ನಡೆಸುವುದರಿಂದ ಮನಸ್ಸು ಉಲ್ಲಾಸದಿಂದಿರುತ್ತದೆ.

– ಜಾಹ್ನವಿ ಪಿ., ಆಪ್ತಸಮಾಲೋಚಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT