ಗುರುವಾರ , ಜುಲೈ 7, 2022
23 °C

ಕ್ಷೇಮ ಕುಶಲ | ಕೋವಿಡ್‌ ಕೊಟ್ಟ ಸಕ್ಕರೆ

ಡಾ. ವಿನಯ ಶ್ರೀನಿವಾಸ್ Updated:

ಅಕ್ಷರ ಗಾತ್ರ : | |

Prajavani

ಕೋವಿಡ್ ಸೋಂಕಿನಿಂದ ಬಳಲಿದ ಕೆಲವರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ವೈದ್ಯರು ಗುರುತಿಸಿದ್ದಾರೆ. ಕೋವಿಡ್‍ನಿಂದ ಗುಣಮುಖರಾದರೂ ಒಂದಿಷ್ಟು ದಿನಗಳ ನಂತರ ವಿವಿಧ ಆರೋಗ್ಯ ಸಮಸ್ಯೆಗಳನ್ನು ಹೊತ್ತು ರೋಗಿಗಳು ವೈದ್ಯರಲ್ಲಿಗೆ ಬರುವುದಿದೆ. ಈ ಸೋಂಕು ಮುಖ್ಯವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರಿದರೂ ಶರೀರದ ಇತರ ಅಂಗಾಂಗ ವ್ಯವಸ್ಥೆಗಳ ಕಾರ್ಯಕ್ಷಮತೆ ಕ್ಷೀಣಿಸುವಲ್ಲಿಯೂ ಇದು ಕಾರಣವಾಗಬಹುದು. ಸೋಂಕಿನ ಸಮಯದಲ್ಲಿ ಹೃದಯ, ಮೇದೋಜೀರಕ ಗ್ರಂಥಿ, ಜೀರ್ಣಾಂಗವ್ಯವಸ್ಥೆಯ ಸ್ನಾಯುಗಳು ಮೊದಲಾದ ಅಂಗಾಂಗ ವ್ಯೂಹಗಳೂ ಉರಿಯೂತದ ಸೂಚಕಗಳ ಪ್ರಭಾವಕ್ಕೆ ಒಳಗಾಗುವುದೇ ಇದಕ್ಕೆ ಮುಖ್ಯ ಕಾರಣ. ಹಾಗಾಗಿಯೇ ಹಲವರಲ್ಲಿ ದೀರ್ಘಾವಧಿಯ ಕೆಮ್ಮು, ಕ್ಷಯರೋಗ, ಮಧುಮೇಹ, ನಿದ್ರಾಹೀನತೆ, ಅತಿಯಾದ ಸುಸ್ತು, ಹಸಿವು ಕಡಿಮೆಯಾಗುವುದು ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ಈಗಾಗಲೇ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದ್ದು, ಇನ್ನು ಸ್ವಲ್ಪ ಸಮಯದಲ್ಲಿಯೇ ಭಾರತ ಮಧುಮೇಹದ ರಾಜಧಾನಿ ಎನ್ನಿಸಿಕೊಳ್ಳುತ್ತದೆ ಎಂಬುದು ತಜ್ಞರ ಎಣಿಕೆ. ಕೋವಿಡ್ ಬಾಧಿತರಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಮಧುಮೇಹವು ಎಲ್ಲರಲ್ಲಿಯೂ ಆತಂಕವನ್ನು ಹೆಚ್ಚಿಸಿದೆ. ಇದಕ್ಕೆ ಕಾರಣವೇನಿರಬಹುದು ಎಂಬುದನ್ನು ಅವಲೋಕಿಸಿದಾಗ ಕೆಲವು ಅಂಶಗಳು ಬೆಳಕಿಗೆ ಬರುತ್ತವೆ.

ಕೋವಿಡ್ ಸೋಂಕಿನ ಉರಿಯೂತವನ್ನು ನಿಯಂತ್ರಿಸಲು ವೈದ್ಯರು ಸ್ಟಿರಾಯ್ಡ್ ಬಳಸಬೇಕಾಗಿ ಬಂದಿದ್ದನೋ ಸರಿ. ನುರಿತ, ತಜ್ಞವೈದ್ಯರು ಅದನ್ನು ಸರಿಯಾದ ಕ್ರಮ ಮತ್ತು ಪ್ರಮಾಣದಲ್ಲಿ ಉಪಯೋಗಿಸುವುದರ ಬಗ್ಗೆ ಒತ್ತುಕೊಟ್ಟರು. ಆದರೆ ಆ ಬಗ್ಗೆ ಸರಿಯಾದ ವೈಜ್ಞಾನಿಕ ಮಾಹಿತಿಯಿಲ್ಲದ ಅನೇಕರಿಂದ ಆದ ಅತಿಯಾದ ಸ್ಟಿರಾಯ್ಡ್ ಬಳಕೆ. ಜನರಿಂದ ವೈದ್ಯರನ್ನು ಸಂಪರ್ಕಿಸದೇ ತಮ್ಮ ಪರಿಚಿತರಿಗೆ ವೈದ್ಯರು ಸೂಚಿಸಿದ ಮಾತ್ರೆ–ಔಷಧಗಳ ಸೇವನೆ. ವೈದ್ಯರ ಸಮಾಲೋಚನೆಯಿಲ್ಲದೆ ದೀರ್ಘಾವಧಿಯವರೆಗೆ ಸ್ಟಿರಾಯ್ಡ್ ಔಷಧಗಳ ಉಪಯೋಗ.

ಮೊದಲ ಎರಡು ಅಲೆಗಳ ಸಮಯದಲ್ಲಿ ವ್ಯಕ್ತಿ ತಾನು ಅಥವಾ ತನ್ನ ಹತ್ತಿರದವರು ಕೋವಿಡ್ ಸೋಂಕಿಗೆ ತುತ್ತಾದಾಗ ಅತಿಯಾದ ಒತ್ತಡ ಮತ್ತು ಆತಂಕಕ್ಕೆ ಒಳಗಾಗಿದ್ದು ನಿಜ. ಹತ್ತಿರದವರ ಸಾವು-ನೋವುಗಳಿಂದಾಗಿ ಹಲವರು ದುಖಿಃತರಾಗಿದ್ದೂ ಇದೆ. ಈ ರೀತಿಯ ಅತಿಯಾದ ಒತ್ತಡ ಮತ್ತು ಆತಂಕದಿಂದಾಗಿ ವ್ಯಕ್ತಿಯ ಶರೀರದಲ್ಲಿ ಹೆಚ್ಚಾದ ಆಂತರಿಕ ಸ್ಟಿರಾಯ್ಡ್ ಉತ್ಪತ್ತಿ.

ಸೋಂಕನ್ನು ನಿಯಂತ್ರಿಸಲೆಂದು ಜಾರಿಗೆ ಬಂದ ಲಾಕ್‍ಡೌನ್, ಅದರ ಪರಿಣಾಮವಾಗಿ ನಾವು ಅಳವಡಿಸಿಕೊಳ್ಳಬೇಕಾಗಿ ಬಂದ ಆನ್‍ಲೈನ್ ತರಗತಿ, ಮನೆಯಿಂದಲೇ ಕಚೇರಿಯ ಕೆಲಸ, ಮನೆಯಿಂದ ಹೊರಗೆ ಹೋಗುವುದನ್ನು ತಪ್ಪಿಸಲು ಎಲ್ಲ ಅಗತ್ಯ ಸಾಮಗ್ರಿಗಳನ್ನು ಆನ್‍ಲೈನ್‍ನಲ್ಲಿ ತರಿಸಿಕೊಳ್ಳುವ ಅಭ್ಯಾಸ ಮುಂತಾದುವು ನಮ್ಮ ಬದುಕನ್ನೇ ಜಡವಾಗಿಸಿಬಿಟ್ಟವು. ಇದರಿಂದ ಹೆಚ್ಚಾದ ಬೊಜ್ಜು, ಅಧಿಕ ತೂಕ ಮತ್ತು ರಕ್ತದ ಕೊಲೆಸ್ಟೆರಾಲ್ ಮಟ್ಟ.

ಮನೆಯಲ್ಲಿ ಕುಳಿತು ಒಂದು ರೀತಿಯ ಆತಂಕ ಅಥವಾ ಮನಸ್ಸಿನ ಅಸ್ಥಿರತೆಯಿಂದಾಗಿ ಅತಿಯಾದ ತಿನ್ನುವ ಅಭ್ಯಾಸ. ಲಾಕ್‍ಡೌನ್ ಸಮಯದಲ್ಲಿ ಹೆಚ್ಚಾದ ಜಂಕ್ ಆಹಾರ, ಎಣ್ಣೆಯಲ್ಲಿ ಕರಿದ, ಹುರಿದ ತಿನಿಸುಗಳ ಸೇವನೆ.

ಮನೆಯಲ್ಲಿಯೆ ಕಡ್ಡಾಯವಾಗಿ ಇರಬೇಕಾಗಿ ಬಂದದ್ದರಿಂದ ಜಾಗಿಂಗ್, ವಾಕಿಂಗ್, ಜಿಮ್, ಈಜು ಮೊದಲಾದ ಹೊರಾಂಗಣ ದೇಹದಂಡನೆಗೆ ಹೊಂದಿಕೊಂಡವರಿಗೆ ದಿಢೀರ್ ವ್ಯಾಯಾಮದ ಕೊರತೆ.

ಮನೆಯ ಹೊರಗಿನ ಚಟುವಟಿಕೆಗಳು ಸ್ತಬ್ಧವಾದ್ದರಿಂದ ಕಡಿಮೆಯಾದ ಸೂರ್ಯನ ಹಾಗೂ ಪ್ರಕೃತಿಯೊಂದಿಗಿನ ಒಡನಾಟ. ಸದೃಢ ರೋಗನಿರೋಧಕ ವ್ಯವಸ್ಥೆಗೆ ಇವೆರಡೂ ಬಹಳ ಮುಖ್ಯ.

ಈ ಎಲ್ಲ ಅಂಶಗಳು ಕೋವಿಡ್ ಬಾಧಿತರ ಶರೀರದಲ್ಲಿ ಉರಿಯೂತ ಮತ್ತು ರಕ್ತನಾಳಗಳ ತಡೆಯನ್ನು ಹೆಚ್ಚು ಮಾಡಲು ಪೂರಕವಾದವು. ಅದು ಮೇದೋಜಿರಕ ಗ್ರಂಥಿಯ ಐಲೆಟ್ ಜೀವಕೋಶಗಳ ನಶಿಸುವಿಕೆಗೆ ಕಾರಣವಾದಾಗ ಶರೀರದಲ್ಲಿ ಇನ್‍ಸುಲಿನ್ ಉತ್ಪತ್ತಿ ಕುಂಠಿತಗೊಳ್ಳುತ್ತದೆ. ಹಾಗಾಗಿಯೇ ಮಧುಮೇಹದ ಹೊಸ್ತಿಲಲ್ಲಿದ್ದ (ಪ್ರಿ–ಡಯಾಬಿಟಿಸ್) ಬಹಳಷ್ಟು ಮಂದಿ ಪೂರ್ಣ ಪ್ರಮಾಣದ ಮಧುಮೇಹಕ್ಕೆ ತುತ್ತಾದರು.

ನಾವು ಮಾಡಬೇಕಾದದ್ದೇನು?

*ಸುದೀರ್ಘ ಅವಧಿಯವರೆಗೆ ಒಂದೇ ಜಾಗದಲ್ಲಿ ಕುಳಿತಿರುವುದು ಬೇಡ, ಕನಿಷ್ಠ ಅರ್ಧ ಗಂಟೆಗೊಮ್ಮೆ ಎದ್ದು ಕೈಕಾಲುಗಳಿಗೆ ಚಲನೆ ನೀಡಿ.
*ದಿನವೂ ಯಾವುದಾದರೊಂದು ಬಗೆಯ ವ್ಯಾಯಾಮವನ್ನು ತಪ್ಪದೇ ಮಾಡಿ.
*ದಿನನಿತ್ಯದ ಆಹಾರದಲ್ಲಿ ಕನಿಷ್ಠ ಮೂರು ಬಗೆಯ ತರಕಾರಿಗಳು, ಸೊಪ್ಪು ಹಾಗೂ ಮೂರು ಬಗೆಯ ಹಣ್ಣುಗಳಿರಲಿ. ಮೂರರಿಂದ ನಾಲ್ಕು ಲೀಟರ್ ನೀರನ್ನು ತಪ್ಪದೇ ಕುಡಿಯಿರಿ.
*ಆಹಾರದಲ್ಲಿ ಅತಿಯಾದ ಸಕ್ಕರೆ ಮತ್ತು ಎಣ್ಣೆಯ ಅಂಶವಿರುವ ಪದಾರ್ಥಗಳನ್ನು ವರ್ಜಿಸಿ.
*ಜಂಕ್ ಆಹಾರ ಹಾಗೂ ಇಂಗಾಲಯುಕ್ತ ತಂಪು ಪಾನೀಯಗಳನ್ನು ಆದಷ್ಟು ಮಿತಗೊಳಿಸಿ.
*ವಾರದಲ್ಲಿ ಕನಿಷ್ಠ ಮೂರು ದಿನಗಳಾದರೂ ಸೂರ್ಯನ ಬಿಸಿಲಿನಲ್ಲಿ ಅಡ್ಡಾಡಿ. ಪ್ರಕೃತಿಯೊಂದಿಗೆ ಹೆಚ್ಚು ಸಮಯವನ್ನು ಕಳೆಯಿರಿ.
*ಒಳ್ಳೆಯ ಸ್ನೇಹಿತರನ್ನು ಸಂಪಾದಿಸಿರಿ ಹಾಗೂ ಅವರೊಂದಿಗೆ ನಿಮ್ಮ ಮನಸ್ಸಿನ ತಳಮಳವನ್ನು ಹಂಚಿಕೊಂಡು ಹಗುರಾಗಿರಿ.
*ವೈದ್ಯರ ಸಲಹೆಯಿಲ್ಲದೆ ಔಷಧಗಳ ಸೇವನೆ ಬೇಡ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು