ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಬದುಕು | ರಜೆಯಲ್ಲಿದ್ದೀರಿ ಡಯಟ್ ಮರೆಯದಿರಿ...

Last Updated 1 ಏಪ್ರಿಲ್ 2020, 8:23 IST
ಅಕ್ಷರ ಗಾತ್ರ

‘ಕೋವಿಡ್‌–19‘ ರಜೆ ಮಾನಸಿಕವಾಗಿ ಮತ್ತು ದೈಹಿಕವಾಗಿಯೂ ಜರ್ಝರಿತವಾಗಿಸುತ್ತಿದೆ. ಈ ಸಮಯ ದಲ್ಲಿ ಆಹಾರ ಕ್ರಮ ಬದಲಾಗುವ ಸಾಧ್ಯತೆ ಇರುತ್ತದೆ. ಸಮತೋಲಿತ ಆಹಾರ ಕ್ರಮವನ್ನು ಪಾಲಿಸದಿದ್ದರೆ,ಬೊಜ್ಜು ಬೆಳೆದು, ದೇಹದ ತೂಕ ಹೆಚ್ಚಾಗುತ್ತದೆ. ಇದು ಅನೇಕ ರೋಗಗಳು ಹರಡಲು ಸಾಧ್ಯವಾಗುತ್ತದೆ ಎಂದು ಎಚ್ಚರಿಕೆ ನೀಡುತ್ತಾರೆ ವೈದ್ಯರು.

ಮನೆಯಲ್ಲಿರುವವರು ಉದಾಸೀನ ಮಾಡದೇ ನಿಯಮಿತ ಆಹಾರ ಕ್ರಮ ಪಾಲಿಸಬೇಕು. ಹೇಗೂ ಕಚೇರಿ ಕೆಲಸವಿಲ್ಲ ಎಂದು ತಡರಾತ್ರಿ ಮಲಗುವುದು, ಲೇಟಾಗಿ ಏಳುವುದು ಇವ್ಯಾವ ಅಭ್ಯಾಸವೂ ಒಳ್ಳೆಯದಲ್ಲ. ಪ್ರತಿದಿನ ಒಂದೇ ಸಮಯಕ್ಕೆ ಏಳುವ ಹಾಗೂ ಮಲಗುವ ಕ್ರಮ ಪಾಲಿಸಬೇಕು ಎನ್ನುತ್ತಾರೆ ಪ್ರಮೇಯ ಆಸ್ಪತ್ರೆಯ ನ್ಯೂಟಿಷನಿಸ್ಟ್‌ ಡಾ. ಲಲಿತಾ ಪ್ರಿಯಾ.

‘ಫಿಟ್‌ ಹಾಗೂ ಆರೋಗ್ಯವಾಗಿರಲು ಕಟ್ಟುನಿಟ್ಟಿನ ಡಯೆಟ್‌ ಮುಂದುವರಿಸಬೇಕು. ಮನೆಯಲ್ಲೇ ಇರುವುದರಿಂದ ಕೊಂಚ ಜಾಸ್ತಿ ಸಮಯ ಸಿಗುವುದರಿಂದ ಬಿಸಿ ಬಿಸಿ, ತಾಜಾ ಆಹಾರ ಸೇವಿಸಬೇಕು. ಆಹಾರವನ್ನು ಫ್ರಿಡ್ಜ್‌ನಲ್ಲಿಟ್ಟು ಬಿಸಿ ಮಾಡಿ ತಿನ್ನುವ ಅಭ್ಯಾಸ ಒಳ್ಳೆಯದಲ್ಲ‘ ಎನ್ನುತ್ತಾರೆ ಅವರು.

ಸಮ ಪ್ರಮಾಣದ ಆಹಾರ

ತೂಕ ಇಳಿಸಿಕೊಂಡು, ಫಿಟ್‌ ಆಗಿರಬೇಕು ಎಂದು ಬಯಸುವವರು ಈಗ ಅವರ ಡಯೆಟ್‌ ಕ್ರಮವನ್ನು ಪಾಲಿಸಲು ಒಳ್ಳೆ ಸಮಯ.ಆದರೆ, ತೂಕ ಕಳೆದುಕೊಳ್ಳಬೇಕು ಎಂದು ತಿನ್ನುವುದನ್ನು ಕಡಿಮೆ ಮಾಡುವುದಲ್ಲ. ಬದಲಾಗಿ ಮೂರು ಹೊತ್ತಿನ ಆಹಾರದಲ್ಲಿ ದೇಹಕ್ಕೆ ಅಗತ್ಯವಾದ ನಾರಿನಾಂಶ, ವಿಟಮಿನ್‌ಗಳು, ಪೋಷಕಾಂಶ ಇರುವಂತೆ ನೋಡಿಕೊಳ್ಳಬೇಕು. ಹಾಗೇ ಹಣ್ಣು, ಒಣಹಣ್ಣು, ಜ್ಯೂಸ್‌ಗಳನ್ನು ನಮ್ಮ ಆಹಾರದಲ್ಲಿ ಸೇರಿಸಬೇಕು.

‘ನಾವುಸೇವಿಸುವ ಆಹಾರ ನಮ್ಮ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸಬೇಕು. ಕಿವಿ, ಪಪ್ಪಾಯ, ಕಿತ್ತಳೆ, ಪೇರಳೆಯಂತಹ ಹಣ್ಣುಗಳನ್ನು ಸೇವಿಸಬೇಕು. ಕ್ಯಾರೆಟ್‌, ಬೀನ್ಸ್‌, ಪಾಲಕ್‌, ಬ್ರೊಕೊಲಿ, ನೆನೆಸಿಟ್ಟ ಬಾದಾಮಿಯಂತಹ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸಬೇಕು. ಹಾಗೆಯೇ ನಮ್ಮ ಆಹಾರದಲ್ಲಿ ಬೆಳ್ಳುಳ್ಳಿ, ಶುಂಠಿ, ಅರಿಸಿನ, ಕಾಳುಮೆಣಸನ್ನು ಕಡ್ಡಾಯವಾಗಿ ಬಳಸಬೇಕು ’ ಎಂಬುದು ಡಾ. ಲಲಿತಾ ಅವರ ಸಲಹೆ.

ವೇಳಾಪಟ್ಟಿ ಉಲ್ಲಂಘನೆ ಬೇಡ

ಈಗ ಮನೆಯಲ್ಲೇ ಇರುವುದರಿಂದ ಡಬ್ಬದಲ್ಲಿದ್ದ ಸಿಹಿತಿಂಡಿ, ಕುರುಕಲು ತಿಂಡಿಗಳತ್ತ ಮನಸ್ಸು ಸೆಳೆಯುತ್ತದೆ. ಸಿಹಿ ತಿನ್ನಬೇಕು ಎಂದು ಅನಿಸಿದಾಗ, ಖರ್ಜೂರ, ಬೆಲ್ಲವನ್ನು ತಿನ್ನಬಹುದು. ಜ್ಯೂಸ್‌ ತಯಾರಿಸುವಾಗ ಬೆಲ್ಲವನ್ನು ಅದಕ್ಕೆ ಸೇರಿಸಿದರೆ ರುಚಿಯೂ ಹೆಚ್ಚಾಗುತ್ತದೆ.

ಇನ್ನು ಹೊರಗಡೆ ಹೋಗಲು ಆಗುವುದಿಲ್ಲ. ಜಿಮ್‌, ವ್ಯಾಯಾಮಕ್ಕೆ 21 ದಿನ ಬಂದ್‌ ಎನ್ನುವಂತಿಲ್ಲ. ದಿನದಲ್ಲಿ ಕನಿಷ್ಟ 45 ನಿಮಿಷವಾದರೂ ದೇಹ ದಂಡಿಸಲೇಬೇಕು. ಹಾಗೇ ದೇಹಕ್ಕೆ ಅಗತ್ಯವಾದಷ್ಟು ನೀರನ್ನು ಕುಡಿಯಬೇಕು. ದಿನವಿಡೀ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು. ಮನೆಯಲ್ಲಿದ್ದರೂ ಕ್ರಮಬದ್ಧವಾಗಿ ಟೈಮ್‌ಟೇಬಲ್‌ ಪಾಲಿಸಬೇಕು. ಇದು ದೇಹವನ್ನೂ ಸಮಯಕ್ಕೆ ಹೊಂದಿಕೊಳ್ಳುವಂತೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT