ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾವಳಿ ಸಿಡಿಮದ್ದು ಆರೋಗ್ಯ, ಜೀವಕ್ಕೇ ಕುತ್ತಾದೀತು ಜೋಪಾನ

Last Updated 23 ಅಕ್ಟೋಬರ್ 2019, 10:38 IST
ಅಕ್ಷರ ಗಾತ್ರ

ಮನೆ, ಮನಗಳನ್ನು ಬೆಳಗಬೇಕಾದದೀಪಾವಳಿಹಲವರ ಪಾಲಿಗೆ ಕತ್ತಲೆಯಾಗಿ ಪರಿಣಮಿಸುತ್ತದೆ. ಅದಕ್ಕೆ ಅವಕಾಶ ಮಾಡಿಕೊಡುತ್ತಿರುವವರೂ ನಾವೇ ಎಂಬ ಅರಿವಿನ ಕೊರತೆಯೂ ಕಾರಣ.

ಢಂ..ಢಂ... ಢಮಾರ್‌.... ಠುಸ್‌–ಪುಸ್‌–ಸುಯ್ಯ್‌.... ಸದ್ದು ಮಾಡುವ ಪಟಾಕಿ ಹಚ್ಚದಿದ್ದರೆ ಹಬ್ಬದ ಆಚರಣೆ ಅಪೂರ್ಣ ಎಂಬ ಭಾವನೆ ಜನರಲ್ಲಿ ನೆಲೆಯೂರಿದೆ. ಎಂಥದ್ದೇ ಹಣಕಾಸಿನ ಕೊರತೆ ಇದ್ದರೂ ಸಹಿತ ಒಂದಷ್ಟು ಪಟಾಕಿ ಹಚ್ಚಿಯೇ ತೀರುತ್ತಾರೆ. ಹಣವಂತರು ಹಚ್ಚುವ ಪಟಾಕಿಗಳಿಗೆ ಲೆಕ್ಕವೇ ಇಲ್ಲ. ಈ ಪಟಾಕಿಗೂ ದೀಪಾವಳಿಗೂ ಇರುವ ಸಂಬಂಧ ಅಂತಹದ್ದು.

ಮನೆ, ಹಟ್ಟಿಯನ್ನು ಒಪ್ಪವಾಗಿಸಿ,ಹೊಸ ಬಟ್ಟೆ ತೊಟ್ಟು, ಹಣತೆ ಹಚ್ಚಿ, ಪೂಜೆ ಮಾಡಿ, ಸಿಹಿ ಉಂಡರೆದೀಪಾವಳಿಹಬ್ಬದ ಸಂಪ್ರದಾಯದ ಕೆಲಸಗಳು ಮುಗಿದಂತೆ. ಇನ್ನು ಬಾಕಿ ಉಳಿಯುವುದು ಪಟಾಕಿ ಹಚ್ಚುವ, ಬೆಳಕಿನ ಚಿತ್ತಾರ ಮೂಡಿಸುವ ಸಿಡಿಮದ್ದುಗಳನ್ನು ಹಚ್ಚಿ ಸಂಭ್ರಮಿಸುವ ಕಾರ್ಯ.

ನಾವು ಹಚ್ಚುವ ಪಟಾಕಿ, ಚಿತ್ತಾರ ಮೂಡಿಸುವ ಸಿಡಿಮದ್ದುಗಳು ಆ ಕ್ಷಣಕ್ಕೆ ನಮಗೆ ಸಂತಸ ನೀಡುತ್ತವೆ. ಇನ್ನೂ ಕೆಲವರ ಪಾಲಿಗೆ ಪಟಾಕಿ ಹಚ್ಚುವ ವೇಳೆಯೇ ಕತ್ತಲೆಯಾಗಿ ಪರಿಣಮಿಸುತ್ತದೆ. ಜತೆಗೆ, ಭವಿಷ್ಯದ ನಮ್ಮ ದಿನಗಳನ್ನೂ ಅನಾರೋಗ್ಯಕ್ಕೂ ದೂಡುತ್ತದೆ. ನಮ್ಮ ಮುಂದಿನ ದಿನಗಳು ಆರೋಗ್ಯಯುತ ಹಾಗೂ ಅಪಾಯ ಮುಕ್ತವಾಗಿರಬೇಕಾದರೆ ಒಂದಷ್ಟು ಎಚ್ಚರಿಕೆ ಅತ್ಯವಶ್ಯ.

ಈ ದೀಪಾವಳಿಗೆ ಪಟಾಕಿ ಸಿಡಿಸಬೇಡಿ ಎಂದು ವಿದ್ಯಾರ್ಥಿಗಳ ಅಭಿಯಾನ
ಈ ದೀಪಾವಳಿಗೆ ಪಟಾಕಿ ಸಿಡಿಸಬೇಡಿ ಎಂದು ವಿದ್ಯಾರ್ಥಿಗಳ ಅಭಿಯಾನ
ಪಟಾಕಿ ಸಿಡಿಸುವುದರಿಂದ ಏನೆಲ್ಲಾ ಸಮಸ್ಯೆ?

*ವಾಯು, ಶಬ್ದಮಾಲಿನ್ಯಉಂಟಾಗುತ್ತದೆ.

* ಎಚ್ಚರಿಕೆ ಇಲ್ಲದೆ ಹಚ್ಚುವಾಗ ಕೈಗಳಿಗೆ ಗಾಯ ಆಗಬಹುದು.

* ಬಗ್ಗಿ ಹಚ್ಚಿದಾಗ ಪಟಾಕಿ ಸಿಡಿದು ಕಣ್ಣಿಗೆ ಹಾನಿಯಾಗಿ ಕಣ್ಣುಗಳೇ ಕುರುಡಾಗಬಹುದು.

* ವಿಷಯಯುಕ್ತ ಗಾಳಿ ದೇಹವನ್ನ ಸೇರಿಕೊಳ್ಳುತ್ತದೆ.

* ವಿಷಯುಕ್ತ ಗಾಳಿ ಸೇವನೆಯಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ(ದಮ್ಮು, ಕೆಮ್ಮು, ಆಸ್ತಮಾ) ಮುನ್ನುಡಿ ಆಗಬಹುದು.

ಮಳಿಗೆಯೊಂದರಲ್ಲಿ ಮಾರಾಟಕಿಟ್ಟ ಪಟಾಕಿ
ಮಳಿಗೆಯೊಂದರಲ್ಲಿ ಮಾರಾಟಕಿಟ್ಟ ಪಟಾಕಿ

* ಭಾರೀ ಸದ್ದುಗಳ ಪಟಾಕಿ ಹಚ್ಚುವುದು ಕಿವಿಗೆ ಹಾನಿಯಾಗುತ್ತದೆ. ಶಾಶ್ವತ ಕಿವುಡುತವೂ ಉಂಟಾಗಬಹುದು.

* ವಾಯು ಮಾಲಿನ್ಯ ಉಂಟಾಗಿ, ಭವಿಷ್ಯದ ಶುದ್ಧಗಾಳಿಯೂ ಅಶುದ್ಧವಾಗುತ್ತದೆ.

* ಪಟಾಕಿಗೆ ಬಳಸಿದ ತ್ಯಾಜ್ಯದಲ್ಲಿನ ವಿಷಕಾರಕ ವಸ್ತುಗಳು ಭೂಮಿಗೆ ಸೇರಿ, ಭೂಮಿಯೂ ವಿಷಮಯವಾಗುತ್ತದೆ.

* ಭೂಮಿ ಸೇರಿದ ವಿಷ ವಸ್ತುಗಳು ನೀರು, ಆಹಾರದ ಮೂಲಕ ಮತ್ತೆ ನಮ್ಮ ದೇಹವನ್ನೇ ಸೇರುತ್ತವೆ. ಈ ಮೂಲಕ ‘ಸ್ಲೋ ಪಾಯ್ಸನ್‌’ನಂತೆ ನಿಧಾನವಾಗಿ ನಮ್ಮಆರೋಗ್ಯ ಕ್ಷೀಣಿಸಲು ಕಾರಣವಾಗುತ್ತವೆ.

* ಮಕ್ಕಳು ಪಟಾಕಿ ಹಚ್ಚಿ ಸರಿಯಾಗಿ ಕೈ ತೊಳೆಯದೆ ಆಹಾರ ಇತ್ಯಾದಿ ಸೇವಿಸಿದರೆ ವಿಷ ವಸ್ತು ನೇರವಾಗಿ ದೇಹವನ್ನು ಸೇರುತ್ತದೆ.

* ಸದ್ದು ಮಾಡುವ ಪಟಾಕಿ ಬೇಡ ಎಂದು ಬೇರೆ ಪಟಾಕಿಗಳನ್ನು ಆಯ್ಕೆ ಮಾಡಿಕೊಂಡರೂ ಅವುಗಳಿಂದ ಹೊರ ಬರುವ ವಿಷಯುಕ್ತ ಹೊಗೆ ಇನ್ನೂ ಅಪಾಯಕಾರಿ. ಈ ಬಗ್ಗೆ ಎಚ್ಚರ ಅಗತ್ಯ.

ಹಣತೆ
ಹಣತೆ
ಆರೋಗ್ಯ, ಪರಿಸರದ ಮೇಲಾಗುವ ಹಾನಿ ತಡೆ ಹೇಗೆ?

ಪಟಾಕಿ ಹಚ್ಚುವುದರಿಂದ ಆರೋಗ್ಯ ಹಾಗೂ ಪರಿಸರದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ತಡೆಯಲು ಒಂದಿಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ.

* ಪಟಾಕಿಗಳನ್ನು ಹಚ್ಚುವ ಬದಲಿಗೆ ದೀಪಗಳನ್ನು ಹಚ್ಚಿ. ಸಾಲು ಸಾಲಾಗಿ, ರಂಗೋಲಿ ಮಧ್ಯೆ ಹಾಗೂ ಸುತ್ತ ಒಪ್ಪ, ಚಂದವಾಗಿ ಜೋಡಿಸಿ. ಇದು ಮನಸ್ಸಿಗೆ ಮುದ, ಆನಂದ ನೀಡುತ್ತದೆ.

* ಮನಕ್ಕೆ ಮುದ ನೀಡುವ ಹಣತೆಗಳ ಮುಂದೆ ನಿಮ್ಮದೊಂದು‌ ಸೆಲ್ಫಿಯನ್ನೂ ಕ್ಲಿಕ್ಕಿಸಿಕೊಳ್ಳಿ. ಅದು ನಿಮಗೆ ಮತ್ತಷ್ಟೂ ಸಂತಸ ನೀಡಬಹುದು.

* ಪಟಾಕಿ ಹಚ್ಚುವುದನ್ನು ಪೂರ್ಣ ಕೈಬಿಟ್ಟರೆ ಹೆಚ್ಚು ಹೆಚ್ಚು ಒಳಿತು.

* ಪಟಾಕಿ ಖರೀದಿಸದಿದ್ದರೆ ಜೇಬಿಗೆ ಕತ್ತರಿಯೂ (ಆರ್ಥಿಕ ಹೊರೆ) ಬೀಳುವುದಿಲ್ಲ.

* ಪಟಾಕಿ ಖರೀದಿಸಿದ್ದೇ ಆದರೆ, ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಖರೀದಿಸಿ. ಕಡಿಮೆ ಪ್ರಮಾಣದಲ್ಲಿ ಹಚ್ಚಿ.

* ಮಕ್ಕಳ ಕೈಗೆ ದೊಡ್ಡದಾದ, ಅಪಾಯಕಾರಿ ಪಟಾಕಿಗಳನ್ನು ಹಚ್ಚಲು ಕೊಡಬೇಡಿ.

* ಮಕ್ಕಳ ಜತೆಗೆ ದೊಡ್ಡವರು ಇದ್ದು ಪಟಾಕಿ ಹಚ್ಚಿಸಿ.

ಪಟಾಕಿ ಕಾರ್ಖಾನೆಯೊಂದಲ್ಲಿ ‘ಹೂಕುಂಡ’ ತಯಾರಿ
ಪಟಾಕಿ ಕಾರ್ಖಾನೆಯೊಂದಲ್ಲಿ ‘ಹೂಕುಂಡ’ ತಯಾರಿ

* ಪಟಾಕಿಗಳನ್ನು ಬೆಂಕಿ ಕಡ್ಡಿ ಗೀಜಿ ನೇರವಾಗಿ ಬೆಂಕಿ ಇಟ್ಟು ಹಚ್ಚಬೇಡಿ. ಆಗ ಅದು ತಕ್ಷಣಕ್ಕೆ ಸಿಡಿಯುತ್ತದೆ. ಬೆಂಕಿ ಹಚ್ಚಿ ಹಿಂದೆ ಸರಿಯಲೂ ಆಗುವುದಿಲ್ಲ ಅಷ್ಟು ಬೇಗ ಸಿಡಿಯುತ್ತದೆ. ಆಗ ಅಪಾಯ ಹೆಚ್ಚಾಗಿರುತ್ತದೆ.

* ಉದ್ದನೆಯ ಊದು ಬತ್ತಿಯ ಕಡ್ಡಿ ಅಥವಾ ಉದ್ದದ ಕೋಲಿಗೆ ಊದು ಬತ್ತಿಯನ್ನು ಕಟ್ಟಿ ಅದರ ನೆರವಿನಿಂದ ಪಟಾಕಿ ಹಚ್ಚಿ.

* ಪಟಾಕಿ ಹಚ್ಚುವಾಗಿ ಮಕ್ಕಳು ಮಾತ್ರವಲ್ಲ ದೊಡ್ಡವರೂ ಹೆಚ್ಚರದಿಂದಿರಬೇಕು.

* ಮರಳುಮಣ್ಣು, ಸಣ್ಣ ಸಣ್ಣ ಕಲ್ಲುಗಳ ಮಧ್ಯೆ ಪಟಾಕಿ ಇಟ್ಟು ಹಚ್ಚಬೇಡಿ. ಪಟಾಕಿ ಸಿಡಿದಾಗ ಕಲ್ಲು ಮತ್ತು ಮರಳು ಸಿಡಿದು ನಮಗೂ ಹಾನಿ ಮಾಡುತ್ತವೆ.

* ಪಟಾಕಿ ಮೇಲೆ ಡಬ್ಬ, ಗಾಜಿನ ಸೀಸೆಗಳನ್ನು ಮೊಗಚಿಟ್ಟು ಹಚ್ಚಬೇಡಿ. ಪಟಾಕಿ ಸಿಡಿದಾಗ ಅವುಗಳೂ ಸಿಡಿದು ಸೀಸೆ, ಡಬ್ಬದ ಚೂರುಗಳು ದೇಹಕ್ಕೆ ಹಾನಿ ಮಾಡುತ್ತವೆ.

* ನಾಯಿ ಬಾಲಕ್ಕೆ ಡಬ್ಬಿ ಕಟ್ಟಿ ಪಟಾಕಿ ಹಚ್ಚುವ ಮಕ್ಕಳ ಮೋಜಿನ ‘ಕಿಡಿಗೇಡಿ‘ ಕೃತ್ಯಗಳ ಮೇಲೂ ನಿಗಾ ಇಡಿ. ಅನ್ಯತಾ ಮೂಕ ಪ್ರಾಣಿಗಳಿಗೆ ತೊಂದರೆ ಕೊಡಬೇಡಿ.

* ಹೆಚ್ಚಿನ ಪಟಾಕಿ ಹಚ್ಚುವ ನಗರ ಪ್ರದೇಶಗಳಲ್ಲಿ ಶಬ್ಧ ಮತ್ತು ವಾಯು ಮಾಲಿನ್ಯ ಪ್ರಮಾಣ ಹೆಚ್ಚುತ್ತಿದ್ದು ಅದರ ನಿಯಂತ್ರಣಕ್ಕೆ ಎಲ್ಲರೂ ಕೈ ಜೋಡಿಸಬೇಕು.

* ರಾತ್ರಿ ಗೊತ್ತು ಮಾಡಿದ ಸಮಯ ಮೀರಿದ ಬಳಿಕ, ಬೆಳಿಗ್ಗೆ 6ರ ವರೆಗೆ ಪಟಾಕಿ ಹಚ್ಚಬೇಡಿ.

* ಐಎಸ್‌ಐ ಪ್ರಮಾಣ ಪತ್ರ ಹೊಂದಿರುವ ಗುಣಮಟ್ಟದ ಪಟಾಕಿ ಖರೀದಿಸಿ.

* ವೃದ್ಧರು, ಹೃದ್ರೋಗಿಗಳು ಇರುವ ಕಡೆ, ಆಸ್ಪತ್ರೆಗಳ ಬಳಿ ಭಾರಿ ಸದ್ದು ಮಾಡುವ ಪಟಾಕಿ ಹಚ್ಚದಿರಿ.

ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬಾಳಲ್ಲಿ ಬೆಳಕಾಗಬೇಕು. ಬದಲಿಗೆ, ಕತ್ತಲೆಯಾಗಿ ಪರಿಣಮಿಸಬಾರದು. ಇಂದು ನಾವು ಕೈಗೊಳ್ಳುವ ಮುನ್ನೆಚ್ಚರಿಕೆಗಳು ನಮ್ಮ ಭವಿಷ್ಯದ ಬದುಕು ಹಾಗೂ ನಾವು ವಾಸಿಸುವ ಪರಿಸರದ ಉಳಿವಿಗೂ ನೆರವಾಗಬಲ್ಲದು ಎಂಬುದನ್ನು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT