ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂಟಿತನದ ಭಾವವೇಕೆ? ಇಡೀ ಜಗವೇ ಇರಲು ನಿನ್ನ ಜೊತೆಗೆ..

Last Updated 11 ಡಿಸೆಂಬರ್ 2020, 19:45 IST
ಅಕ್ಷರ ಗಾತ್ರ

ಪುಣೆ ಮೂಲದ ರೂಪಾ ಮದುವೆಯಾಗಿದ್ದು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಹುಡುಗನನ್ನು. ಕಳೆದ ಫೆಬ್ರುವರಿಯಲ್ಲಿ ಮದುವೆಯಾಗಿ ಬೆಂಗಳೂರಿಗೆ ಬಂದ ಆಕೆ ಅಕ್ಕಪಕ್ಕದ ಮನೆಯವರನ್ನು ಪರಿಚಯ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್ ಶುರುವಾಯಿತು. ಈಗಂತೂ ಮನೆಯೊಳಗೇ ಇರಬೇಕಾದ ಅನಿವಾರ್ಯ ಪರಿಸ್ಥಿತಿ. ಶುರುವಿನಲ್ಲಿ ಒಂದೇ ಸಮನೆ ಮೊಬೈಲ್‌ನಲ್ಲಿ ಸ್ನೇಹಿತೆಯರ ಜೊತೆಗೆ ಮಾತನಾಡುತ್ತಿದ್ದ ಆಕೆಗೆ ಈಗ ಮೊಬೈಲ್‌ ಮುಟ್ಟಲೂ ಉದಾಸೀನತೆ. ಮನೆಯಿಂದಲೇ ಕೆಲಸ ಮಾಡುತ್ತಿದ್ದ ಪತಿ ಕಚೇರಿಗೆ ಹೋಗಲು ಶುರು ಮಾಡಿದ ಮೇಲಂತೂ ಕಾಡುವ ಒಂಟಿತನ. ಒಮ್ಮೊಮ್ಮೆ ಈ ಒಂಟಿತನದ ಭಾವ ಶಾಶ್ವತವಾಗಿ ಮನಸ್ಸಿನಲ್ಲೇ ಕೂತುಬಿಟ್ಟರೆ ಎಂಬ ಭಯವೂ ಕಾಡದಿರದು. ಸಾಮಾಜಿಕವಾಗಿ ಬೆರೆಯುವ ಅವಕಾಶಗಳು ಕಮ್ಮಿಯಾಗಿರುವುದೇ ಇದಕ್ಕೆ ಕಾರಣವೇ?

ತಂತ್ರಜ್ಞಾನದ ಕಾರಣದಿಂದ ಇಡೀ ಜಗತ್ತಿನ ಜೊತೆ ನಾವು ಸಂಪರ್ಕ ಸಾಧಿಸಲು ಸಾಧ್ಯವಾಗಿದೆ. ಆದರೆ ಸದ್ಯಕ್ಕೆ ಬಹುತೇಕರಲ್ಲಿ ಮಾನಸಿಕವಾಗಿ ಒಂದು ಬಗೆಯ ಒಂಟಿತನದ ಭಾವನೆ ವಕ್ಕರಿಸಿದ್ದು, ಈ ಕೊರೊನಾ ತಂದಿರುವ ವಿಚಿತ್ರ ಪರಿಸ್ಥಿತಿಯಿಂದಾಗಿ. ಮಾನಸಿಕ ಆರೋಗ್ಯ ಕುರಿತ ಪ್ರತಿಷ್ಠಾನವೊಂದು ನಡೆಸಿದ ಸಮೀಕ್ಷೆಯಲ್ಲಿ 10 ಮಂದಿಯಲ್ಲಿ ಒಬ್ಬರಿಗೆ ದಿನಕ್ಕೆ ಒಂದು ಬಾರಿಯಾದರೂ ಈ ಏಕಾಂಗಿತನದ ಭಾವನೆ ಮನಸ್ಸಿನಲ್ಲಿ ಸುಳಿಯುತ್ತದಂತೆ.

ಝೂಮ್‌ನಲ್ಲಿ, ಸ್ಕೈಪ್‌ನಲ್ಲಿ ಮುಖ ನೋಡಿಕೊಂಡು ಮಾತನಾಡಿದರೂ ದೈಹಿಕವಾಗಿ ಪರಸ್ಪರ ನೋಡಿಕೊಂಡು ಮಾತನಾಡುವ ಸುಖ ಸಿಗಲಾರದು. ಫೋನ್‌ನಲ್ಲಿ ಮಾತನಾಡಿದ್ದಷ್ಟೇ ಹೊತ್ತು, ಮತ್ತದೇ ಮೌನದ ಹೊದಿಕೆ. ನಗು, ಅಳು, ಖುಷಿ, ಸಿಟ್ಟು ಎಲ್ಲವನ್ನೂ ಬೇರೆಯವರ ಮುಂದೆ ವ್ಯಕ್ತಪಡಿಸುತ್ತಿದ್ದ ಜನ ಈಗ ಝೂಮ್‌ನಲ್ಲಿ ಕೃತಕ ನಗುವನ್ನು ಹೊಮ್ಮಿಸಿ ಚಿತ್ರೀಕರಣದಲ್ಲಿ ನಿರ್ದೇಶಕ ಕಟ್‌ ಹೇಳಿದಂತೆ ಮತ್ತೆ ಯಥಾ ಪ್ರಕಾರ ಜೋಲು ಮುಖ ಹಾಕಿಕೊಳ್ಳುವುದೇಕೆ?

ಇದು ‘ಸಾಮಾಜಿಕ ಮೌನ’ ಎಂದೇ ತಜ್ಞರು ವಿಶ್ಲೇಷಿಸುತ್ತಾರೆ. ಅಮೆರಿಕದ ಬ್ರಿಗ್ಹಾಮ್‌ ಯಂಗ್‌ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ ಸುದೀರ್ಘ ಒಂಟಿತನ ಅನುಭವಿಸುವವರು ಸ್ಮರಣಶಕ್ತಿಯನ್ನು ಬೇಗ ಕಳೆದುಕೊಳ್ಳುತ್ತಾರಂತೆ; ಒತ್ತಡ, ಖಿನ್ನತೆ, ಹೃದ್ರೋಗ ಅಮರಿಕೊಳ್ಳುವ ಸಾಧ್ಯತೆ ಜಾಸ್ತಿಯಂತೆ. ಒಂಟಿತನ ಎಂಬುದು ಆರೋಗ್ಯ ಸಮಸ್ಯೆಯಲ್ಲದಿದ್ದರೂ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಅಧ್ಯಯನ ಎಚ್ಚರಿಸಿದೆ. ಹೀಗಾಗಿ ಗುಣಮಟ್ಟದ ಜೀವನ ಸಾಗಿಸಬೇಕಾದರೆ ಇದನ್ನು ನಿವಾರಿಸಿಕೊಳ್ಳಬೇಕಾಗುತ್ತದೆ.

ಒಂಟಿತನದ ನಿವಾರಣೆ ಹೇಗೆ?

ಒಂಟಿತನ ನಿವಾರಣೆಗೆ ಕನಿಷ್ಠ 3–4 ಮಂದಿ ಸ್ನೇಹಿತರ ಜೊತೆ ಸಂಪರ್ಕ ಇಟ್ಟುಕೊಳ್ಳಬೇಕು. ಆದರೆ ಈ ಕೋವಿಡ್‌ ಸಂದರ್ಭದಲ್ಲಿ ಫೋನ್‌ನಲ್ಲಿ ಮಾತ್ರ ಸಂಪರ್ಕ ಸಾಧ್ಯ ಎನ್ನುವಂತಾಗಿದೆ. ಒಟ್ಟಾಗಿ ಸೇರಿ ಹರಟೆ, ಪಾರ್ಕ್‌, ಷಾಪಿಂಗ್‌, ಸಿನಿಮಾ, ಹೋಟೆಲ್‌ ಎಂಬುದು ಕನಸಿನ ಮಾತು. ಹೀಗಾಗಿ ನಿಮ್ಮದೇ ಆದ ಚಿಪ್ಪಿನೊಳಗೆ ಸೇರಿಕೊಳ್ಳುವ ಬದಲು ಅದರಿಂದ ಹೊರಬರಬೇಕಾಗುತ್ತದೆ. ಮನೆಯ ಬಳಿಯ ಪಾರ್ಕ್‌ನಲ್ಲಿ ಒಂಟಿಯಾದರೂ ಸರಿ, ಸುರಕ್ಷಿತ ಕ್ರಮ ಅನುಸರಿಸಿ ಒಂದಿಷ್ಟು ಹೊತ್ತು ತಿರುಗಾಡಿ ಅಥವಾ ಬೆಂಚ್‌ ಮೇಲೆ ಕುಳಿತು ಆಟವಾಡುವ ಮಕ್ಕಳನ್ನು ವೀಕ್ಷಿಸಿದರೂ ಸಾಕು, ಮುದುಡಿದ ಮನ ಅರಳುತ್ತದೆ. ಅಲ್ಲೊಂದು ಇಲ್ಲೊಂದು ಪರಿಚಿತ ಮುಖದೊಂದಿಗೆ ‘ಹಾಯ್‌’ ಎಂದು ಕೈ ಬೀಸಿದರೂ ಆ ಕ್ಷಣಕ್ಕೆ ನಾನು ಒಂಟಿ ಎಂಬ ಭಾವ ದೂರವಾಗಬಹುದು.

ಒಂಟಿತನ ಕಾಡಿದಾಗ ಟಿವಿ ವೀಕ್ಷಣೆಗೆ ತೊಡಗಬೇಡಿ. ಅದು ಇನ್ನೊಂದಿಷ್ಟು ಕಿರಿಕಿರಿ ಹುಟ್ಟಿಸುತ್ತದೆ. ಹಾಗೆಯೇ ಅತಿಯಾದ ಸಿಹಿ ಅಥವಾ ಕರಿದ ತಿಂಡಿ ಸೇವನೆ, ಧೂಮಪಾನ ಇಂತಹದ್ದನ್ನೆಲ್ಲ ದೂರವಿಡಿ. ಬದಲಾಗಿ ಸಮಯಕ್ಕೆ ಸರಿಯಾಗಿ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ. 15– 20 ನಿಮಿಷ ವಾಕ್‌ ಮಾಡಿ. ಇದನ್ನು ನಿತ್ಯ ಮಾಡುವುದರಿಂದ ಮನಸ್ಸು ಅರಳುತ್ತ ಹೋಗುತ್ತದೆ.

ಸ್ನೇಹಿತರು, ಬಂಧುಗಳ ಜೊತೆ ಝೂಮ್‌ನಲ್ಲಿ ಆಗಾಗ ಮಾತನಾಡಿ. ಆದರೆ ಇದು ಅತಿಯಾಗಬಾರದು ಎಂದು ಎಚ್ಚರಿಸುತ್ತಾರೆ ತಜ್ಞರು. ವಾಟ್ಸ್‌ಆ್ಯಪ್‌ ಗುಂಪಿನಲ್ಲಿ ಸಮಾನ ಮನಸ್ಕರ ಜೊತೆ ಸೇರಿ ಆಗುಹೋಗುಗಳ ಬಗ್ಗೆ ಆರೋಗ್ಯಕರವಾಗಿ ಚರ್ಚಿಸಿ. ಒಂಟಿತನ ಖಿನ್ನತೆಗೆ, ದುಗುಡಕ್ಕೆ ತಿರುಗುವ ಲಕ್ಷಣಗಳಿದ್ದರೆ ವೈದ್ಯರನ್ನು ಭೇಟಿಯಾಗುವುದು ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT