ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಪರ್–ಟಿ’ಯಿಂದ ರಕ್ತಸ್ರಾವ ಹೆಚ್ಚುತ್ತದೆಯೇ?

Last Updated 8 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

1. ನನಗೆ 29 ವರ್ಷ, ಒಂದು ವರ್ಷ ಒಂಬತ್ತು ತಿಂಗಳ ಮಗು ಇದೆ. ಗರ್ಭಿಣಿ ಆಗುವ ಮೊದಲು ಮುಟ್ಟಿನ ಸಮಸ್ಯೆ ಇರಲಿಲ್ಲ. ಹೆರಿಗೆ ಆದ ಬಳಿಕ ಮುಟ್ಟು 15 ದಿನಗಳವರೆಗೆ ಆಗುತ್ತದೆ. ನನಗೆ ಸಿಜೇರಿಯನ್ ಆಗಿದೆ. ಆ ವೇಳೆಯಲ್ಲೆ ಕಾಪರ್ ಟಿ ಹಾಕಿಸಿದ್ದೆ. ಆಗಿನಿಂದ ಮುಟ್ಟಾದ ಮೊದಲನೇ ದಿನ ಸ್ವಲ್ಪ ಸ್ರಾವ ಆನಂತರ ಎರಡು ದಿನ ಆಗೋದಿಲ್ಲ. ಮತ್ತೆ ಪುನಃ ಸ್ವಲ್ಪ ಸ್ವಲ್ಪ 3 ದಿನದವರೆಗೂ ಆಗುತ್ತೆ. ನಾಲ್ಕನೇ ದಿನ ಅತಿಯಾದ ರಕ್ತಸ್ರಾವ ಆಗುತ್ತದೆ. ನಂತರ 5-6 ದಿನ ತನಕ ಸ್ವಲ್ಪ ಸ್ವಲ್ಪವೇ ಆಗುತ್ತಿರುತ್ತದೆ. ಒಟ್ಟಾರೆ ಪೂರ್ತಿ ಸ್ರಾವ ನಿಲ್ಲುವುದಕ್ಕೆ 15 ದಿನಕ್ಕಿಂತಲೂ ಹೆಚ್ಚು ಸಮಯ ತಗೊಳುತ್ತೆ. ಇದಕ್ಕೆ ಏನು ತೊಂದರೆ ಇರಬಹುದು? ಕಾಪರ್‌–ಟಿ ಹಾಕಿಸಿದರೆ ಈ ತರಹ ಆಗುತ್ತಾ?

ಹೆಸರು, ಊರು ತಿಳಿಸಿಲ್ಲ

ಮೇಡಂ ನೀವು ಅಳವಡಿಸಿಕೊಂಡಿರುವ ಕಾಪರ್–ಟಿ ಗರ್ಭಕೋಶದೊಳಗೆ ಅತಿಕಡಿಮೆ ಪ್ರಮಾಣದಲ್ಲಿ ತಾಮ್ರದ ಅಂಶವನ್ನು ಬಿಡುಗಡೆ ಮಾಡುವ ಸಾಧನ. ಈ ಮೂಲಕ ಫಲಿತ ಭ್ರೂಣವು ಗರ್ಭಕೋಶದಲ್ಲಿ ನೆಲೆ ನಿಲ್ಲದ ಹಾಗೆ ಮಾಡುವುದು, ಇದರ ಉದ್ದೇಶ. ಇದರ ಜೊತೆ ಜೊತೆಗೆ ವೀರ್ಯಾಣುಗಳು ಗರ್ಭನಾಳಕ್ಕೆ ಹಾದುಹೋಗದಂತೆ ಮಾಡುವ ಶಕ್ತಿಯು ಇದಕ್ಕಿದೆ. ಹೆಚ್ಚಿನ ಮಹಿಳೆಯರಿಗೆ ಕಾಪರ್–ಟಿ ಅಳವಡಿಕೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಅತ್ಯಂತ ಕಡಿಮೆ ಖರ್ಚಿನ ಹಾಗೂ ಕಡಿಮೆ ತೊಂದರೆ ಉಂಟುಮಾಡುವ ಸಂತಾನ ನಿರೋಧಕ ವಿಧಾನ ಈ ಕಾಪರ್–ಟಿ. ಆದರೂ ಹೆಚ್ಚಿನ ಜನಸಾಮಾನ್ಯರು ಇದರ ಬಗ್ಗೆ ತುಂಬಾ ತಪ್ಪು ಕಲ್ಪನೆಗಳನ್ನು (ಎದೆಗೇರುತ್ತೆ, ಗರ್ಭಕೋಶ ತೂತ ಆಗುತ್ತದೆ, ಇತ್ಯಾದಿ) ಹೊಂದಿರುತ್ತಾರೆ. ಆದರೆ ಇದು ಸತ್ಯಕ್ಕೆ ದೂರವಾದದ್ದು. ಅಪರೂಪಕ್ಕೆ ಕೆಲವರಲ್ಲಿ ತೀವ್ರ ರಕ್ತಸ್ರಾವ, ಹೊಟ್ಟೆ ಹಿಂಡಿದ ಹಾಗಾಗುವುದು, ಬೇಗ ಬೇಗ ಮುಟ್ಟು ಕಾಣಿಸುವುದು, ಗರ್ಭಕೋಶಕ್ಕೆ ಸೋಂಕಾಗುವುದು, ಬೆನ್ನು ನೋವು, ಬಿಳಿಮುಟ್ಟು, ಇತ್ಯಾದಿ ಸಣ್ಣ ಪುಟ್ಟ ತೊಂದರೆಗಳಾಗಬಹುದು. ಶೇ 2 ರಿಂದ ಶೇ 6 ರಷ್ಟು ಜನರಲ್ಲಿ ವಿಫಲ ಕೂಡ ಆಗಬಹುದು. ನೀವು ಯಾವುದಕ್ಕೂ ತಜ್ಞವೈದ್ಯರ ಹತ್ತಿರ ತಪಾಸಣೆ ಮಾಡಿಸಿಕೊಳ್ಳಿ. ಕಾಪರ್–ಟಿ ಹಾಕಿಸಿದ್ದರಿಂದಲೇ ತೊಂದರೆಯಾಗಿದ್ದರೆ ಅದನ್ನು ತೆಗೆಸಿ, ಕಾಂಡೊಮ್ ಬಳಕೆ ಅಥವಾ ಸಂತಾನ ನಿಯಂತ್ರಣ ಮಾತ್ರೆಗಳನ್ನು ನುಂಗುವಂತಹ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಇನ್ನೊಂದು ಮಗು ಪಡೆಯಲು ಕನಿಷ್ಠ 3 ವರ್ಷಗಳ ಅಂತರವಿರಲಿ.

2. ನನಗೆ 32 ವರ್ಷ, 10 ವರ್ಷದ ಮಗ ಇದ್ದಾನೆ. ಎಂಟು ವರ್ಷದಿಂದ ಥೈರಾಯಿಡ್ ಸಮಸ್ಯೆ ಇದೆ. 100 ಮಿ.ಗ್ರಾಂ ಮಾತ್ರೆ ಸೇವಿಸುತ್ತಾ ಬಂದಿದ್ದೇನೆ. ನನಗೆ ತಿಂಗಳ ಮುಟ್ಟು ಕೂಡ ಸರಿಯಾಗಿ ಆಗೋದಿಲ್ಲ. ಒಮ್ಮೊಮ್ಮೆ ಐದು ತಿಂಗಳವರೆಗೂ ಮುಟ್ಟಾಗೋದಿಲ್ಲ. ಈಗ ನನಗೆ ಇನ್ನೊಂದು ಮಗು ಬೇಕು. ಯಾವ ಆಪರೇಷನ್ ಕೂಡ ಆಗಿಲ್ಲ. ಆದರೂ ನಮಗೆ ಮಕ್ಕಳು ಆಗ್ತಿಲ್ಲ. ನನ್ನ ಪತಿಗೆ ಯಾವುದೇ ಸಮಸ್ಯೆ ಇಲ್ಲ. ವೈದ್ಯರನ್ನು ಕೇಳಿದೆ, ಅವರು ಥೈರಾಯಿಡ್ ಸಮಸ್ಯೆ ಕಡೆಗೆ ಬೊಟ್ಟು ಮಾಡ್ತಾರೆ. ಹಾಗಿದ್ರೆ ಮುಂದೆ ಮಕ್ಕಳು ಆಗುವ ಸಾಧ್ಯತೆ ಇಲ್ಲವೇ?

ಹೆಸರು, ಊರು ತಿಳಿಸಿಲ್ಲ

ಥೈರಾಯಿಡ್ ಸಮಸ್ಯೆ ಮಹಿಳೆಯರಲ್ಲಿ ಅತಿ ಸಾಮಾನ್ಯವಾಗಿ ಕಂಡುಬರುವಂತಹದ್ದು. ನೀವು ಈಗಾಗಲೇ 100 ಮೈಕ್ರೋ ಗ್ರಾಂ (ಮಿಲಿಗ್ರಾಂ ಅಲ್ಲ) ಮಾತ್ರೆ ಸೇವಿಸುತ್ತಿದ್ದೀರಿ. ಅದನ್ನೇ ಮುಂದುವರೆಸಿ ಮತ್ತು ವರ್ಷಕ್ಕೆ ಒಂದೆರಡು ಬಾರಿಯಾದರೂ ಟಿ.ಎಸ್.ಎಚ್ ಮಟ್ಟವನ್ನು ಪರೀಕ್ಷಿಸಿಕೊಳ್ಳಿ. ಅದರ ವರದಿಯ ಆಧಾರದ ಮೇಲೆ ಎಷ್ಟು ಡೋಸ್‌ನ ಮಾತ್ರೆ ಸೇವಿಸಬೇಕೆಂದು ವೈದ್ಯರು ನಿರ್ಧರಿಸುತ್ತಾರೆ. ಮಾತ್ರೆಯಿಂದ ಥೈರಾಯಿಡ್ ಹಾರ್ಮೋನಿನ ಮಟ್ಟ ನಿಯಂತ್ರಣದಲ್ಲಿದ್ದರೆ ಮಕ್ಕಳಾಗುವುದಕ್ಕೆ ಯಾವ ಅಡ್ಡಿಯೂ ಇಲ್ಲ. ನಿಮಗೇನಾದರೂ ಗರ್ಭನಾಳದಲ್ಲಿ ಅಡೆ–ತಡೆ (ಟ್ಯೂಬಲ್ ಬ್ಲಾಕ್) ಇದೆಯೇ ಅನ್ನುವುದನ್ನು ಪರೀಕ್ಷಿಸಿಕೊಳ್ಳಿ. ಮಕ್ಕಳಾಗದೇ ಇರಲು ಕಾರಣವನ್ನು ತಜ್ಞವೈದ್ಯರಿಂದ ನಿಖರವಾಗಿ ಕಂಡುಹಿಡಿಯಲು ಪ್ರಯತ್ನಿಸಿ. ಅವರ ಸಲಹೆಯ ಮೇರೆಗೆ ಚಿಕಿತ್ಸೆ ಪಡೆದರೆ ಖಂಡಿತವಾಗಿಯೂ ಇನ್ನೊಂದು ಮಗುವಾಗುವ ಸಾಧ್ಯತೆ ಇದೆ. ಕೇವಲ ಥೈರಾಯಿಡ್ ಸಮಸ್ಯೆಯಿಂದ ಬಂಜೆತನ ಉಂಟಾಗುವುದಿಲ್ಲ. ಈಗಂತೂ ಬಂಜೆತನ ಚಿಕಿತ್ಸಾ ಕೇಂದ್ರಗಳು ಎಲ್ಲೆಡೆ ಲಭ್ಯವಿವೆ. ನೀವು ಇನ್ನೊಂದು ಮಗು ಪಡೆಯುವ ಪ್ರಯತ್ನ ಮುಂದುವರೆಸಿ. ಖಂಡಿತವಾಗಿಯೂ ಮಕ್ಕಳಾಗುತ್ತವೆ.

3. ನನಗೆ 24 ವರ್ಷ. ತುಂಬಾ ತಿಂಗಳಿನಿಂದ ಮುಟ್ಟಾಗಿಲ್ಲ. ಡಾಕ್ಟರ್‌ಗೆ ತೋರಿಸಿದ್ರೆ ಪಿಸಿಓಡಿ ಅಂತ ಹೇಳಿದ್ರು. ನನಗೆ ಮುಂದೆ ಮಕ್ಕಳು ಆಗುತ್ತಾ, ಇಲ್ಲವಾ? ಈ ತೊಂದರೆಯಿಂದ ನನಗೆ ತುಂಬಾ ಟೆನ್ಷನ್ ಆಗ್ತಿದೆ. ದಯವಿಟ್ಟು ಸಲಹೆ ನೀಡಿ.

ಹೆಸರು, ಊರು ತಿಳಿಸಿಲ್ಲ

ಪಿಸಿಓಡಿ – ಇದು ಹಾರ್ಮೋನು ಅಸಮತೋಲನದಿಂದ ಉಂಟಾಗುವ ಸಂಕೀರ್ಣವಾದ ಸಮಸ್ಯೆ. ಇಲ್ಲಿ ಅಂಡಾಶಯದಿಂದ ಅಂಡೋತ್ಪತ್ತಿಯಾಗದೇ ತಿಂಗಳ ಮುಟ್ಟು ಕೂಡ ಆಗುವುದಿಲ್ಲ. ನೀವು ತಜ್ಞವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಿ. ಚಿಕಿತ್ಸೆಯ ಜೊತೆಗೆ ನಿಮ್ಮ ಜೀವನಶೈಲಿಯನ್ನೂ ಬದಲಿಸಿಕೊಳ್ಳಬೇಕು. ಈ ಬಗ್ಗೆ ಹಿಂದಿನ ಸಂಚಿಕೆಗಳಲ್ಲಿ ಹಲವು ಬಾರಿ ತಿಳಿಸಿದೆ. ತಜ್ಞವೈದ್ಯರ ಸಲಹೆ ಹಾಗೂ ಚಿಕಿತ್ಸೆ, ಮೇಲ್ವಿಚಾರಣೆ ಅಗತ್ಯ. ಈಗಿನ ಆಧುನಿಕ ಜೀವನಶೈಲಿಯನ್ನು ಅನುಸರಿಸುವವರಲ್ಲಂತೂ 10 ರಲ್ಲಿ 4 ರಿಂದ 5 ಹೆಣ್ಣು ಮಕ್ಕಳಿಗೆ ಪಿಸಿಓಡಿ ಸಮಸ್ಯೆ ಇದೆ. ಆದ್ದರಿಂದ ಒತ್ತಡ ಮಾಡಿಕೊಳ್ಳದೇ ಬೇಗನೆ ಮಗು ಪಡೆಯಲು ಪ್ರಯತ್ನಿಸಿ.

4.ನನಗೆ ಮುಟ್ಟಿನ ಸಮಸ್ಯೆ ಇದೆ. ಮಾತ್ರೆ (ಗುಳಿಗೆ) ತೆಗೆದುಕೊಂಡರೆ ಮಾತ್ರ ಮುಟ್ಟಾಗುತ್ತದೆ. ನೈಸರ್ಗಿಕವಾಗಿ ಮುಟ್ಟು ಆಗುವುದಿಲ್ಲ. ಮದುವೆ ಆಗಿ ಐದು ವರ್ಷಗಳಾಯ್ತು ಇನ್ನು ಮಕ್ಕಳಾಗಿಲ್ಲ. ಆಸ್ಪತ್ರೆಗಳಿಗೆಲ್ಲಾ ತೋರಿಸಿದ್ದೀವಿ, ಏನು ಪ್ರಯೋಜನವಾಗುತ್ತಿಲ್ಲ. ನನ್ನ ಗಂಡನ ಆರೋಗ್ಯ ವರದಿ ಎಲ್ಲಾ ಸರಿ ಇದೆ ಎಂದು ಬಂದಿದೆ. ಆದರೆ ನನಗೆ ಮುಟ್ಟಿನ ತೊಂದರೆಯಿದೆಯಲ್ಲಾ. ಅದಕ್ಕೆ ಏನು ಮಾಡಬೇಕೆಂದು ಸಲಹೆ ಕೊಡಿ.

ಗೀತಾ ಬಿರಾದಾರ್‌, ವಿಜಯಪುರ

ಕೇವಲ ಮಾತ್ರೆ ತೆಗೆದುಕೊಂಡರೆ ಮಾತ್ರ ಮುಟ್ಟಾಗುತ್ತದೆ ಎಂದರೆ ನಿಮಗೆ ಗರ್ಭಕೋಶ ಚಿಕ್ಕದಿರಬಹುದು ಅಥವಾ ಹಾರ್ಮೋನುಗಳ ಸಮಸ್ಯೆ ಇರಬಹುದು. ಆದ್ದರಿಂದ ನೀವು ತಜ್ಞವೈದ್ಯರ ಸಲಹೆಯಮೇರೆಗೆ ಚಿಕಿತ್ಸೆಯನ್ನು ಮುಂದುವರಿಸಿ. ಕೆಲವು ಬಾರಿ ಚಿಕಿತ್ಸೆ ಫಲಕಾರಿಯಾಗದೇ, ಸಮಸ್ಯೆ ಬಗೆಹರಿಯಲು ಕೆಲವು ವರ್ಷಗಳೇ ಬೇಕಾಗುತ್ತದೆ.

ಡಾ. ವೀಣಾ ಎಸ್‌. ಭಟ್‌
ಡಾ. ವೀಣಾ ಎಸ್‌. ಭಟ್‌

5. ನಾನು ಇತ್ತೀಚೆಗೆ 3 ತಿಂಗಳಿನಿಂದ ಬೇಗ ಬೇಗ ಮುಟ್ಟಾಗುತ್ತಾ ಇದ್ದೀನಿ. 20 ದಿನಕ್ಕೆಲ್ಲಾ ಆಗ್ತಾ ಇದೀನಿ. ಮೊದಲು ಈ ರೀತಿ ಯಾವಾಗಲೂ ಆಗ್ತಿರಲಿಲ್ಲ. ಇದರಿಂದ ಏನಾದರು ತೊಂದರೆಯಾಗುತ್ತಾ ? ಪರಿಹಾರ ತಿಳಿಸಿ.

ದಿವ್ಯಾ, ಊರು ತಿಳಿಸಿಲ್ಲ

ದಿವ್ಯಾರವರೇ ನೀವು ನಿಮ್ಮ ವಯಸ್ಸು ಎಷ್ಟೆಂದು ತಿಳಿಸಿಲ್ಲ. ನಿಮ್ಮ ವಯಸ್ಸು 45 ರಿಂದ 50 ವರ್ಷದ ಆಸು ಪಾಸಿನಲ್ಲಿದ್ದರೆ ನಿಮಗೆ ಮುಟ್ಟು ನಿಲ್ಲುವ ಸಮಯದಲ್ಲೂ ಹೀಗಾಗಬಹುದು ಅಥವಾ ನಿಮಗೆ ವಯಸ್ಸಾಗಿದ್ದಲ್ಲಿ ಗರ್ಭಕೋಶದ ಸೋಂಕಾಗಿದ್ದಲ್ಲಿ ಪದೇ ಪದೇ ಮುಟ್ಟು ಬರಬಹುದು. ಕೆಲವೊಮ್ಮೆ ಅಂಡಾಶಯದಲ್ಲಿ ನೀರು ಗುಳ್ಳೆಗಳಾದರೂ ಕೂಡ (ಸಿಸ್ಟ್) ಪದೇ ಪದೇ ಮುಟ್ಟು ಬರಬಹುದು. ಯಾವುದಕ್ಕೂ ನೀವು ತಜ್ಞವೈದ್ಯರ ಸಲಹೆಯನ್ನು ಪಡೆದು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.

ಸ್ಪಂದನ... ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳಿದ್ದರೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್‌. ಭಟ್‌ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನುbhoomika@prajavani.co.inಗೆ ಕಳಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT