ಗುರುವಾರ , ಮೇ 13, 2021
18 °C

ಕೋವಿಡ್: ತುಟಿ ಕಚ್ಚಿ ಹಿಡಿಯದಿರು ದುಃಖ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌–19ನಿಂದಾಗಿ ಸಂಭವಿಸಿದ ಸಾವನ್ನು ಲೆಕ್ಕ ಹಾಕಬಹುದು; ಆದರೆ ನೋವನ್ನು? ಕುಟುಂಬದಲ್ಲಿ, ಬಂಧುಗಳಲ್ಲಿ ಅಥವಾ ಸ್ನೇಹಿತರ ವಲಯದಲ್ಲಿ ಒಬ್ಬರನ್ನು ಕಳೆದುಕೊಂಡರೆ ಅದರಿಂದ ಸೃಷ್ಟಿಯಾಗುವ ಶೂನ್ಯವಿದೆಯಲ್ಲ, ಅದನ್ನು ಭರ್ತಿ ಮಾಡುವುದಂತೂ ಕಷ್ಟಸಾಧ್ಯ. ಆದರೆ ಆ ದುಃಖದಿಂದ ಹೊರಬರುವ ಮಾರ್ಗವನ್ನು ಒಂದು ಹಂತದವರೆಗೆ ಕಂಡುಕೊಳ್ಳಬಹುದು ಎನ್ನುತ್ತಾರೆ ತಜ್ಞರು.

ನೋವನ್ನು ಮರೆಯುವ ವಿಧಾನಗಳು ಬಹಳಷ್ಟಿವೆ. ಇವುಗಳಲ್ಲಿ ಯಾವುದಾದರೊಂದು ವಿಧಾನ ನಿಮಗೆ ನೆರವಾಗಬಹುದು.

ಸಾವು ಸಂಭವಿಸಿದ ಆರಂಭದ ದಿನಗಳಲ್ಲಿ ಆ ವ್ಯಕ್ತಿಯ ಹತ್ತಿರದ ಬಂಧುಗಳು ಸಾಂತ್ವನಕ್ಕಾಗಿ ಬೇರೆಯವರ ಬಳಿ ದುಃಖ ತೋಡಿಕೊಳ್ಳುವುದು ಸಹಜ. ಸಾವಿನಿಂದ ಒಂಟಿತನದ ಭಾವನೆ ಉದ್ಭವಿಸುವುದು ಇದಕ್ಕೆ ಕಾರಣ. ಆದರೆ ಕೋವಿಡ್‌ ಪಿಡುಗಿರುವ ಈ ಸಂದರ್ಭದಲ್ಲಿ ಇಂತಹ ನೆರವನ್ನು ವೈಯಕ್ತಿಕವಾಗಿ ಪಡೆಯುವುದು ಕೂಡ ಸವಾಲೆನಿಸಿಬಿಟ್ಟಿದೆ. ಹೀಗಾಗಿ ವಿಡಿಯೊ ಮೂಲಕ ಸ್ನೇಹಿತರು ಅಥವಾ ಬಂಧುಗಳ ಜೊತೆ ಮಾತನಾಡಿ ಮನಸ್ಸನ್ನು ಹಗುರ ಮಾಡಿಕೊಳ್ಳಬಹುದು.

ದುಃಖ ಹಂಚಿಕೊಳ್ಳಿ

ಬಂಧುಗಳ ಬಳಿ ಏನು ಹೇಳಿಕೊಳ್ಳುವುದು ಎಂಬ ಭಾವನೆಯಿರುವವರು ಆನ್‌ಲೈನ್‌ನಲ್ಲಿ ಹುಟ್ಟಿಕೊಂಡಿರುವ ಕೆಲವು ವೆಬ್‌ಸೈಟ್‌ ತೆರೆದು ಅಲ್ಲಿರುವ ಅಪರಿಚಿತರು, ಆಪ್ತ ಸಮಾಲೋಚಕರ ಬಳಿ ಮಾತನಾಡಬಹುದು. ‘ಗ್ರೀವಿಂಗ್‌.ಕಾಂ.’, ‘ಗ್ರೀಫ್‌ ಹೀಲಿಂಗ್‌ ಗ್ರೂಪ್‌’ನಂತಹ ವೆಬ್‌ಸೈಟ್‌ಗಳು ನಿಮಗೆ ಸಹಾಯ ಮಾಡಬಹುದು. ನಿಮ್ಮ ಅನುಭವ ಹೇಳಿಕೊಂಡು ಮನಸ್ಸನ್ನು ಹಗುರ ಮಾಡಿಕೊಳ್ಳಬಹುದು.

ಈ ಕೋವಿಡ್‌ ಸಂದರ್ಭದಲ್ಲಿ ಪೂಜೆ, ಪ್ರಾರ್ಥನಾ ಮಂದಿರಗಳಿಗೆ, ಧಾರ್ಮಿಕ ಸ್ಥಳಗಳಿಗೆ ಹೋಗುವುದು ಕಷ್ಟವೇ. ಆದರೆ ಕೆಲವೊಂದು ಧಾರ್ಮಿಕ ಸಂಸ್ಥೆಗಳು ಪ್ರಾರ್ಥನೆಗಳನ್ನು ಫೇಸ್‌ಬುಕ್‌ ಲೈವ್‌ ಮಾಡುತ್ತಿವೆ. ಅಂಥವುಗಳ ಪಟ್ಟಿ ಮಾಡಿಕೊಂಡು ಆ ಸಮಯದಲ್ಲಿ ವೀಕ್ಷಿಸಿ ದುಃಖ ಮರೆಯುವ ಪ್ರಯತ್ನ ಮಾಡಬಹುದು. ಯೂಟ್ಯೂಬ್‌ನಲ್ಲಿ ಕೂಡ ವಿವಿಧ ಧರ್ಮಗಳ ಪ್ರಾರ್ಥನೆಗಳು ಲಭ್ಯ. ಅವುಗಳಿಂದ ಶಾಂತಿ, ಸಮಾಧಾನ ಲಭಿಸುವುದಿದ್ದರೆ ನಿತ್ಯ ಕೆಲವು ಸಮಯ ಅದಕ್ಕಾಗಿ ಮೀಸಲಿಡಬಹುದು.

ಹೊಸ ವಿಷಯ ಕಲಿಯಿರಿ

ದುಃಖವನ್ನು ಮರೆಯಲು ನೆರವು ನೀಡುವ ಇನ್ನೊಂದು ವಿಧಾನವೆಂದರೆ ಹೊಸ ವಿಷಯದ ಕಲಿಕೆ. ಇದರಿಂದ ನಮ್ಮ ಮಿದುಳಿಗೆ ಕೊಂಚ ಚೈತನ್ಯ ದೊರಕುವುದಲ್ಲದೇ, ನಮ್ಮ ಮನಸ್ಸನ್ನು ಬೇರೆಡೆ ತಿರುಗಿಸುತ್ತದೆ. ಹೊಸ ಹವ್ಯಾಸವನ್ನು ಆರಂಭಿಸಬಹುದು; ಮುದ್ದು ಪ್ರಾಣಿಯನ್ನು ಸಾಕಬಹುದು; ಯಾರಿಗಾದರೂ ನೆರವು ಬೇಕಿದ್ದರೆ ಸಹಾಯ ಹಸ್ತ ಚಾಚಿ ನಿಮ್ಮ ನೋವನ್ನು ಮರೆಯಬಹುದು.

ಇತ್ತೀಚೆಗೆ 70ರ ತಂದೆಯನ್ನು ಕೋವಿಡ್‌ನಿಂದಾಗಿ ಕಳೆದುಕೊಂಡ ಗೃಹಿಣಿ ನಂದಿನಿ ರಮೇಶ್‌ ಹೊಸ ರುಚಿಯ ಅಡುಗೆಯ ವಿಡಿಯೊಗಳನ್ನು ಮಾಡಿ ಆನ್‌ಲೈನ್‌ನಲ್ಲಿ ಬಿಡುತ್ತಿದ್ದಾಳೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಆಕೆ, ‘ದುಃಖ ಮರೆಯಲು ಈ ಹೊಸ ಹವ್ಯಾಸ ನೆರವಿಗೆ ಬಂದಿದ್ದಂತೂ ಹೌದು’ ಎನ್ನುತ್ತಾಳೆ.

ಯಾವುದಾದರೂ ಕೆಲಸವನ್ನು ಪದೇ ಪದೇ ಮಾಡುತ್ತಿದ್ದರೆ, ಕಾಡುವ ದುಃಖವನ್ನು ಮಾತ್ರವಲ್ಲ, ಕೋವಿಡ್‌ ಆತಂಕವನ್ನು ಕೂಡ ಮರೆಯಬಹುದು ಎನ್ನುತ್ತಾರೆ ತಜ್ಞರು.

ಇದೇ ರೀತಿ ನೋವನ್ನು ಮರೆಯಲು ಮಾಡಿದಂತಹ ಪಾಡ್‌ಕಾಸ್ಟ್‌ ಕೂಡ ಹಲವರಿಗೆ ನೆಮ್ಮದಿ ತಂದಿದೆ. ಹಾಗೆಯೇ ಈ ಬಗ್ಗೆ ತಜ್ಞರು ಬರೆದಿರುವ ಬೇಕಾದಷ್ಟು ಪುಸ್ತಕಗಳು ಆನ್‌ಲೈನ್‌ನಲ್ಲಿ ಲಭ್ಯ.

ನಿಮ್ಮಷ್ಟಕ್ಕೇ ನೀವು ದುಃಖ ಮರೆಯುವ ಪ್ರಯತ್ನ ಮಾಡಿದರೂ ಸಫಲರಾಗದಿದ್ದರೆ ಆಪ್ತ ಸಮಾಲೋಚಕರ ಜೊತೆ ಮಾತನಾಡಿ. ಧ್ಯಾನ ಮಾಡಿ. ಯೋಗವನ್ನು ಪ್ರಯತ್ನಿಸಿ.

ಆದರೆ ದುಃಖ ಮರೆಯಲು ಮದ್ಯ, ಮಾದಕದ್ರವ್ಯದಂತಹ ವ್ಯಸನಕ್ಕೆ ಮಾತ್ರ ಹೋಗಬೇಡಿ. ಅದು ತಾತ್ಕಾಲಿಕವಾಗಿ ಎಲ್ಲವನ್ನೂ ಮರೆಯುವಂತೆ ಮಾಡಬಹುದು. ಆದರೆ ಅದರ ನೆರವಿಲ್ಲದೇ ಇನ್ನಷ್ಟು ದುಃಖಕ್ಕೆ ಈಡಾಗುವುದರಿಂದ ಮತ್ತೆ ಮತ್ತೆ ವ್ಯಸನದ ಮೊರೆ ಹೋಗಿ ನಿಮ್ಮನ್ನೇ ನೀವು ಹಾಳು ಮಾಡಿಕೊಳ್ಳುತ್ತೀರಿ ಎಂದು ಎಚ್ಚರಿಸುತ್ತಾರೆ ತಜ್ಞರು.

(ಪೂರಕ ಮಾಹಿತಿ: ಪ್ರಮೀಳಾ ಎಸ್‌., ಆಪ್ತಸಮಾಲೋಚಕರು, ಬೆಂಗಳೂರು)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು