ಶನಿವಾರ, ಆಗಸ್ಟ್ 13, 2022
23 °C

PV Web Exclusive: ಕಿವಿ ನೋವಿನ ಚಿಕಿತ್ಸೆಗೆ ಮಂಡಿ ನೋವು ಉಚಿತ!

ರೂಪಾ ಕೆ.ಎಂ. Updated:

ಅಕ್ಷರ ಗಾತ್ರ : | |

Prajavani

ಸಣ್ಣದೊಂದು ಕಿವಿ ನೋವು ಎಂದು ಶ್ರೇಯಾ ಡಾಕ್ಟರ್‌ ಬಳಿ ಹೋದರೆ, ಅವರು ಕೊಟ್ಟಿದ್ದು 5 ದಿನಕ್ಕೆ ಆಗುವಷ್ಟು  30 ನೋವು ನಿವಾರಕ ಮಾತ್ರೆಗಳು. ದಿನವೊಂದಕ್ಕೆ ಆರು ಮಾತ್ರೆಗಳು. ಶೀತದಿಂದ ಕಿವಿಯೊಳಗೆ ಉಂಟಾದ ಅಲರ್ಜಿ ಮತ್ತು ನೋವಿಗೆ, ಇಷ್ಟು ಪ್ರಮಾಣದ ಮಾತ್ರೆ ತಿಂದ ಮೇಲೂ , ಅಲರ್ಜಿಯೇನೋ ಕಡಿಮೆಯಾಯಿತು. ಆದರೆ, ಕಿವಿಯೊಳಗೆ ಸಣ್ಣಗೆ ಶಬ್ದವೊಂದು ಶುರುವಾಯಿತು. ಈ ಶಬ್ದ ನಿಲ್ಲಲು ಸ್ಟಿರಾಯ್ಡ್‌  ತುಂಬಿದ ಮಾತ್ರೆಯೊಂದನ್ನು ನುಂಗುವಂತೆ ವೈದ್ಯರು ಪೋನಿನಲ್ಲಿಯೇ  ಸಲಹೆ ನೀಡಿದ್ದರು. ಶಬ್ಧ ಮಾತ್ರ ನಿಂತಿಲ್ಲ ಆದರೆ,  ಒಂದು ಸ್ಟೆರಾಯ್ಡ್‌ ಮಾತ್ರೆ ದೇಹ ಸೇರಿದಂತೆ ಎಂದೂ ಇಲ್ಲದ ಮಂಡಿನೋವು, ಸಂಧಿವಾತ ಶುರುವಾಯಿತು. 

ಕಿವಿ ನೋವಿನ ಚಿಕಿತ್ಸೆಗೆ  ತೆರಳಿದ್ದ ಅದೇ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮಂಡಿನೋವಿನ ಚಿಕಿತ್ಸಾ ತಜ್ಞರ ಅಪಾಯಿಂಟ್‌ಮೆಂಟ್‌ಗಾಗಿ ಶ್ರೇಯಾ ಕಾಯಬೇಕಾಯಿತು. ಕಿವಿನೋವಿಗೆಂದು ಚಿಕಿತ್ಸೆಗೆ ಹೋದರೆ ಮಂಡಿನೋವು ಉಚಿತವಾಗಿ ದೊರೆಯಿತು. 

ಎಂದೂ ಮಂಡಿನೋವು ಇರದ 28ರ ಹರೆಯದ ಶ್ರೇಯಾ, ಈ ಸ್ಟೆರಾಯ್ಡ್‌ ಮಾತ್ರೆ ತಿಂದ ಮೇಲೆ ಹೀಗಾಯಿತು ಎಂದು ಅರ್ಥ ಮಾಡಿಕೊಳ್ಳಲು ಹಲವು ದಿನಗಳೇ ಬೇಕಾಯಿತು. ಈ ಮಧ್ಯೆ ಸಂಧಿನೋವಿಗಾಗಿ ವೈದ್ಯರು ಕೊಟ್ಟ ಗುಳಿಗೆಗಳನ್ನು ನುಂಗಿಯಾಗಿತ್ತು. 

ಇದೊಂದು ಉದಾಹರಣೆಯಷ್ಟೆ.

’ಸಕ್ಕರೆ ಕಾಯಿಲೆಗೆ ದೀರ್ಘಾವಧಿಯಲ್ಲಿ ತೆಗೆದುಕೊಂಡ ಔಷಧಿಯೇ ನಿಮ್ಮ ಪಿತ್ತಜನಕಾಂಗವನ್ನು ಘಾಸಿಗೊಳಿಸಿದೆ. ಆಸ್ತಮಾಕ್ಕೆಂದು ತೆಗೆದುಕೊಳ್ಳುತ್ತಿದ್ದ ಮಾತ್ರೆಗಳು ದೇಹದಲ್ಲಿನ ಮೂಳೆಗಳು ಸವೆಯುವಂತೆ ಮಾಡಿವೆ. ಶಸ್ತ್ರಚಿಕಿತ್ಸೆ ವೇಳೆ ನೀಡಿದ್ದ ಅರವಳಿಕೆ ಚುಚ್ಚುಮದ್ದಿನ ಅಡ್ಡಪರಿಣಾಮದಿಂದಾಗಿ ನಿಮಗೆ ಬೆನ್ನುನೋವು ಬರುತ್ತಿದೆ‘ 

ಹೀಗೆ ಔಷಧಿಯ ಅಡ್ಡಪರಿಣಾಮದಿಂದ ಉಂಟಾದ ಕಾಯಿಲೆಗೆ ಉತ್ತರ ಕಂಡುಹಿಡಿಯಲು ಮತ್ತೊಂದು ವೈದ್ಯರೇ ಬರಬೇಕಾಗುತ್ತದೆ. ಇಷ್ಟು ಹೊತ್ತಿಗಾಗಲೇ ಒಂದಷ್ಟು ವರ್ಷ ಕಳೆದು ಹೋಗಿರುತ್ತದೆ. ಜತೆಗೆ ದೇಹದ ಮೇಲೆ ವಿವಿಧ ಔಷಧಿಗಳ ಪ್ರಯೋಗವಾಗಿರುತ್ತದೆ.

ನೋವು, ನೋವಿಗಾಗಿ ತೆಗೆದುಕೊಂಡ ಔಷಧಿ, ಅದರಿಂದ ಉಂಟಾಗುವ ಅಡ್ಡಪರಿಣಾಮದ ನೋವು, ಅದಕ್ಕಾಗಿ ತೆಗೆದುಕೊಳ್ಳುವ ಮಾತ್ರೆ ಹೀಗೆ.... ಬದುಕು ಬರೀ ಮಾತ್ರೆ ಹಾಗೂ ಔಷಧಿಗಳ ವಿಷ ವರ್ತುಲದಲ್ಲಿ ಉಳಿದುಬಿಡುತ್ತದೆ. ಹಾಗೇ ಉಳಿಯುವಂತೆ ಮಾಡುವ ವ್ಯವಸ್ಥೆಯೊಂದು ಬಹಳ ನಾಜೂಕಾಗಿ ಕೆಲಸ ಮಾಡುತ್ತಿದೆ.  ಅಂತಿಮವಾಗಿ ದೈಹಿಕ, ಮಾನಸಿಕ ಹಾಗೂ ಆರ್ಥಿಕವಾಗಿ ತೊಂದರೆ ಅನುಭವಿಸುವುದು ಮಾತ್ರ ರೋಗಿಯೇ. 

ಇದು ಕೇವಲ ವೈದ್ಯಕೀಯ ವ್ಯವಸ್ಥೆ ವ್ಯಾಪಾರೀಕರಣಗೊಂಡಿರುವುದರ ಪರಿಣಾಮವಷ್ಟೆ ಅಲ್ಲ. ರೋಗ ಮತ್ತು ಔಷಧದೆಡೆಗೆ, ದೇಹವಿಜ್ಞಾನದ ಬಗ್ಗೆ ನಮಗೆ ಅರಿವೇ ಇಲ್ಲದೇ ಇರುವುದು ಮತ್ತೊಂದು ಕಾರಣ. ಈ ಅಜ್ಞಾನ ಕೆಲವು ಆಸೆಬುರುಕ ಆಸ್ಪತ್ರೆಗಳ ಹಾಗೂ ವೈದ್ಯರ ಬಂಡವಾಳ ಅನ್ನೊದನ್ನು ನೆನಪಿಟ್ಟುಕೊಳ್ಳಲೇಬೇಕು. ಜತೆಗೆ ಈ ಅಜ್ಞಾನ ನಕಲಿ ವೈದ್ಯರನ್ನು ಉತ್ತೇಜಿಸುತ್ತದೆ. 

ವೈದ್ಯರ ಸಲಹೆ ಮೇರೆಗೆ ನಾವು ಸೇವಿಸುವ ವಿವಿಧ ಔಷಧಿಗಳ ಬಗ್ಗೆ  ನಮಗೆ ಅರಿವಿದೆಯಾ?. ಅದು ದೀರ್ಘಾವಧಿಯಲ್ಲಿ ತಂದೊಡ್ಡುವ ಅಡ್ಡಪರಿಣಾಮಗಳ ಬಗ್ಗೆ ಎಂದಾದರೂ ಯೋಚಿಸಿದ್ದೇವಾ. ಇಂತಿಂಥಾ ಮಾತ್ರೆಯಿಂದ ಇಂಥ ಅಡ್ಡಪರಿಣಾಮವೂ ಉಂಟು ಎಂದು ಹೇಳುವ ವೈದ್ಯರನ್ನು ಎಲ್ಲಾದರೂ ನೋಡಬಹುದೇ. ಸಣ್ಣ ಶೀತ, ಜ್ವರ, ಮೈಕೈನೋವು  ಅಂದಾಕ್ಷಣ ಪೆನ್ನು ಪೇಪರ್‌ ಹಿಡಿದು,  ಒಂದೇ ಉಸಿರಿಗೆ ರಾಶಿ ಔಷಧ ಮತ್ತು ಮಾತ್ರೆಗಳನ್ನು  ಬರೆಯುವ  ವೈದ್ಯರು, ಅದನ್ನು ವಿವರಿಸುವ ಸಾವಧಾನವನ್ನಂತೂ ತೋರಿಸುವುದಿಲ್ಲ. 

 ‘ವೈದ್ಯೋ ನಾರಾಯಣೋ ಹರಿಃ‘ ಎಂದು ತುಂಬು ನಂಬುಗೆಯಲ್ಲಿ ಆಸ್ಪತ್ರೆಗೆ ಹೋಗುವ  ರೋಗಿಗಳು ವೈದ್ಯರು ನೀಡುವ ಔಷಧ ನಮ್ಮ ಕಾಯಿಲೆಯನ್ನು ಗುಣ ಮಾಡೇ ಮಾಡುತ್ತದೆ ಎಂದು ಅಚಲವಾಗಿ ನಂಬುತ್ತಾರೆ. ಆ ನಂಬಿಕೆ ಮೇಲೆ, ವೈದ್ಯರು ಯಾವ ರೀತಿಯ ಗುಳಿಗೆಗಳನ್ನು ನೀಡುತ್ತಿದ್ದಾರೆ,  ಇದರ ಹಿಂದೆ ಮುಂದೆ, ಅಳ –ಅಗಲ ಯಾವುದನ್ನು ಕೆದುಕಲು ಹೋಗುವುದಿಲ್ಲ. ಅವರು ಹಾಗೇ ಬರೆದುಕೊಟ್ಟಿದ್ದನ್ನು, ಅವರೇ ಸೂಚಿಸುವ ಔಷಧದ ಅಂಗಡಿಯಲ್ಲಿ ಅದನ್ನು ತಂದು, ತೋರಿಸುತ್ತೇವೆ ವಿನಃ ಆ ಔಷಧದಲ್ಲಿ ಏನೇನಿದೆ? ಎಂಬುದನ್ನು ತಿಳಿಯಲು ಹೋಗುವುದಿಲ್ಲ. 

ವೈದ್ಯರ ಯಡವಟ್ಟಿನಿಂದ, ತಪ್ಪು ಚಿಕಿತ್ಸಾ ಪದ್ಧತಿಯಿಂದ ಪ್ರಾಣ ಕಳೆದುಕೊಳ್ಳುತ್ತಿರುವವ ಸಂಖ್ಯೆ ಕಡಿಮೆಯಿಲ್ಲ. ಹಾಗೆಯೇ ಒಂದು ಔಷಧಿಯ ಅಡ್ಡಪರಿಣಾಮದಿಂದ ದೇಹದ ಮತ್ತೊಂದು ಅಂಗ ಊನವಾಗುವುದೊ, ತೊಂದರೆಗೀಡಾಗುವುದು ಆಗುತ್ತಿದ್ದು, ಇಂಥ ಪ್ರಕರಣಗಳು ಈಗೀಗ ಅಪರೂಪವಲ್ಲ. ಇದಕ್ಕೆಲ್ಲ ಪರಿಹಾರ ‌ಒಂದೇ. ವೈದ್ಯಕೀಯ ವಿಜ್ಞಾನ ಹಾಗೂ  ಔಷಧ ವಿಜ್ಞಾನದ ಬಗ್ಗೆ ಶ್ರೀಸಾಮಾನ್ಯರಾಗಿ ತಿಳಿದುಕೊಳ್ಳಲೇಬೇಕು ಎಂದು ಪಣ ತೊಡುವುದು.

ಇನ್ನು ಕೆಲವರು ಇರುತ್ತಾರೆ; ಎಂತಹುದೇ ಕಾಯಿಲೆ ಬಂದರೂ, ಮೆಡಿಕಲ್‌ ಶಾಪ್‌ನವರ ಸಲಹೆಯ ಮೇರೆಗೆ ಮಾತ್ರೆ, ಔಷಧಿ ತಂದು ನುಂಗುವುದು. ಎಂದೋ ವೈದ್ಯರು ಬರೆದುಕೊಟ್ಟ ಔಷಧಿಯ ಚೀಟಿಯಲ್ಲಿದ್ದ ಔಷಧಿಯನ್ನೇ ತಂದು ಕಣ್ಮುಚ್ಚಿ ಸೇವಿಸುವುದು. ಇವೆಲ್ಲ ಎಷ್ಟರ ಮಟ್ಟಿಗೆ ಅಪಾಯವೆಂಬ ಸಣ್ಣ ಸುಳಿವು ಇಲ್ಲದೇ ಇರುವ ಮುಗ್ಧರು ನಮ್ಮ ನಡುವೆ ಇದ್ದಾರೆ. ಬಹುತೇಕ ಈ ಮುಗ್ಧರು ಅಕ್ಷರ ಕಲಿತವರೇ ಆಗಿರುತ್ತಾರೆ ಎನ್ನುವುದು ಮತ್ತೊಂದು ಸೋಜಿಗ. 

ಔಷಧದ  ಬಾಟಲಿ ಅಥವಾ ಮಾತ್ರೆಯ ಕವರ್‌ ಹಿಂದೆ  ಅಡಕಗೊಂಡಿರುವ ಅಂಶಗಳ ಮಾಹಿತಿಯನ್ನು ತಪ್ಪದೇ ಗಮನಿಸುವುದು. ಎಂತಹುದೇ ಕಾಯಿಲೆ ಇರಲಿ, ಅದಕ್ಕಾಗಿ ನಾವು ತೆಗೆದುಕೊಳ್ಳುವ ಮದ್ದಿನ ಹಿನ್ನೆಲೆಯ ಬಗ್ಗೆ ಸ್ಪಷ್ಟವಾದ ಜ್ಞಾನವನ್ನು ಬೆಳೆಸಿಕೊಳ್ಳುವುದು ನಮ್ಮ ಹಕ್ಕು ಎಂಬ ಜಾಗೃತಿ ಬಾರದ ಹೊರತು ಈ ಔಷಧ ಮಾಫಿಯಾಗೆ ಮದ್ದಿಲ್ಲ. 

ಮದ್ಯ, ಬೀಡಿ, ಸಿಗರೇಟು, ಡ್ರಗ್ಸ್ ಅಷ್ಟೆ ಅಲ್ಲ, ಸರಿಯಾದ ಸಮಯಕ್ಕೆ ಊಟ ಮಾಡದೇ ಇರುವುದು, ಸರಿಯಾದ ಸಮಯಕ್ಕೆ ನಿದ್ದೆ ಮಾಡದೇ ಇರುವುದು ಮತ್ತು ಸರಿಯಾದ ಮಾಹಿತಿ ಇಲ್ಲದೇ ಬೇಕಾಬಿಟ್ಟಿ ಮಾತ್ರೆ ಹಾಗೂ ಔಷಧಿಗಳನ್ನು ಸೇವಿಸುವುದರಿಂದಲೂ ಅನಾರೋಗ್ಯ ಕಟ್ಟಿಟ್ಟ ಬುತ್ತಿ.  ಬೇರೆ ಯಾವುದೇ ದುಶ್ಚಟಗಳಿಲ್ಲದಿದ್ದರೂ ಈ ಮೂರು ಬದುಕನ್ನು ಹೈರಾಣಾಗಿಸಲು ಸಾಕು. 

ವೈದ್ಯರು, ವಕೀಲರ ಹತ್ತಿರ ಏನನ್ನು ಮುಚ್ಚಿಡಬಾರದು ಎಂಬ ಮಾತಿದೆ. ಆದರೆ, ಬದಲಾದ ಕಾಲಘಟ್ಟದಲ್ಲಿ ವೈದ್ಯರು ಮಾತ್ರೆ, ಔಷಧಿ ಹಾಗೂ ಅವುಗಳ ಅಡ್ಡ ಪರಿಣಾಮದ ಬಗ್ಗೆ ರೋಗಿ ಬಳಿ ಏನನ್ನೂ ಮುಚ್ಚಿಡಬಾರದು ಎಂಬ ಮಾತನ್ನು ಗಟ್ಟಿಯಾಗಿ ಹೇಳಬೇಕಿದೆ.

ಅಕ್ಷರ ಕಲಿತವರಾಗಿ ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ, ಔಷಧ ಮಾಫಿಯಾದ ಪ್ರಯೋಗಕ್ಕೆ ಮನುಷ್ಯನ ದೇಹ ಎಷ್ಟು ಅಗ್ಗವಾಗಿ ಬಿಕರಿಯಾಗುತ್ತಿದೆ ಎಂಬುದರತ್ತಲೂ ಯೋಚಿಸಬೇಕಿದೆ. 

ಮತ್ತೊಂದು ವಿಶ್ವ ಸಾಕ್ಷರತಾ ದಿನ (ಸೆಪ್ಟೆಂಬರ್‌ 8) ಬಂದು ಹೋಗಿದೆ. ಸಾಕ್ಷರತೆ ಎನ್ನುವುದು ಕೇವಲ ಅಂಕ ಹಾಗೂ  ಅಂಕಿ ಅಂಶಗಳಿಗೆ ಸೀಮಿತವಲ್ಲ  ಅಲ್ವಾ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು