ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರ್ಛೆ ಸಮಸ್ಯೆಯೆ? ಅಲಕ್ಷ್ಯ ಬೇಡ

Last Updated 19 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ತಾತ್ಕಾಲಿಕವಾಗಿ ಪ್ರಜ್ಞೆ ತಪ್ಪುವುದಕ್ಕೆ (ಟಿಎಲ್‌ಒಸಿ) ಅಥವಾ ಮೂರ್ಛೆಗೆ ವೈದ್ಯಕೀಯ ಪರಿಭಾಷೆಯಲ್ಲಿ ‘ಸೈಂಕೋಪ್’ ಎನ್ನಲಾಗುತ್ತದೆ. ಈ ಮೂರ್ಛೆ ದಿಢೀರ್ ಉಂಟಾಗುತ್ತದೆ. ಇದು ಮುನ್ನೆಚ್ಚರಿಕೆ ಸೂಚನೆಗಳನ್ನು ನೀಡಬಹುದು ಅಥವಾ ನೀಡದೇ ಇರಬಹುದು, ಮೂರ್ಛೆಯ ಅವಧಿ ಬಹಳ ಅಲ್ಪಕಾಲ ಅಂದರೆ ಕೆಲವು ಸೆಕೆಂಡುಗಳಿಂದ ಕೆಲವು ನಿಮಿಷಗಳಿರಬಹುದು, ಪಾರ್ಶ್ವವಾಯುವಿನಂತೆ ಇದು ದೀರ್ಘ ಅವಧಿ ಇರುವುದಿಲ್ಲ ಹಾಗೂ ತಕ್ಷಣವೇ ಪೂರ್ಣವಾಗಿ ಪ್ರಜ್ಞೆ ಮರಳುತ್ತದೆ.

ಮುನ್ಸೂಚನೆಗಳು

ಬೆವರುವುದು, ದೌರ್ಬಲ್ಯದ ಭಾವನೆ, ಕಣ್ಣುಗಳ ಬಳಿ ಕಪ್ಪಾಗುವುದು, ಹೊಟ್ಟೆಯಲ್ಲಿ ಏನೋ ಓಡಾಡಿದಂತೆ, ಎದೆಬಡಿತ ಹೆಚ್ಚಾಗುವುದು ಮುಖ್ಯ ಲಕ್ಷಣಗಳು. ಕೆಲವೊಮ್ಮೆ ಯಾವುದೇ ಮುನ್ಸೂಚನೆ ನೀಡದೇ ಇರಬಹುದು. ಮೆದುಳಿಗೆ ಸಾಕಷ್ಟು ರಕ್ತ ಪೂರೈಕೆಯಾಗದೇ ಇರುವುದರಿಂದ ಮತ್ತು ಹೃದಯ ಸ್ತಂಭನದಿಂದಲೂ ಪ್ರಜ್ಞೆ ತಪ್ಪಬಹುದು. ಸಾಮಾನ್ಯವಾಗಿ ಶೇ.15– 25ರಷ್ಟು ಜನರಲ್ಲಿ ಮೂರ್ಛೆಯ ಸಮಸ್ಯೆ ತಲೆದೋರುತ್ತದೆ.

ಈ ರೀತಿ ಪದೇ ಪದೇ ಉಂಟಾದರೆ ಜನರ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ, ಗಾಯಗಳಿಗೆ ಕಾರಣವಾಗುತ್ತದೆ ಮತ್ತು ಕೆಲವು ರೋಗಿಗಳಲ್ಲಿ ಗಂಭೀರ ಹೃದಯರೋಗಕ್ಕೆ ಕಾರಣವಾಗುತ್ತದೆ. ಅದರಲ್ಲೂ ದುರ್ಬಲ ಹೃದಯವುಳ್ಳವರಲ್ಲಿ ಈ ತೊಂದರೆ ಹೆಚ್ಚಾಗಿರುತ್ತದೆ. ಮೂರ್ಛೆಯು ಅಸಮರ್ಪಕ ಹೃದಯ ಬಡಿತ(ಅರಿತ್ಮಿಯ)ದ ಮುನ್ಸೂಚನೆಯೂ ಆಗಿರಬಹುದು. ವೆಂಟ್ರಿಕ್ಯುಲರ್ ಟ್ಯಾಕಿಕಾರ್ಡಿಯಾ ಅಥವಾ ವೆಂಟ್ರಿಕ್ಯುಲರ್ ಫೈಬ್ರಿಲೇಷನ್‌ನ ತೀವ್ರ ಹೃದಯಬಡಿತ ಅಥವಾ ನಿಧಾನ ಹೃದಯಬಡಿತವು ಕೆಲವು ಸೆಕೆಂಡುಗಳ ಕಾಲ ಹೃದಯವನ್ನು ಸ್ಥಗಿತಗೊಳಿಸುತ್ತದೆ. ಇದರಿಂದ ಮೆದುಳಿಗೆ ರಕ್ತ ಪೂರೈಕೆ ತಾತ್ಕಾಲಿಕವಾಗಿ ತಡೆಯಾಗಿ ಮೂರ್ಛೆ ಉಂಟಾಗುತ್ತದೆ.

ರಕ್ತದೊತ್ತಡ ಕುಸಿತದ ಸಾಧ್ಯತೆ

ಮೂರ್ಛೆ/ಸೈಂಕೋಪ್‌ನ ಮತ್ತೊಂದು ಸಾಮಾನ್ಯ ಕಾರಣವೆಂದರೆ ದಿಢೀರ್ ರಕ್ತದ ಒತ್ತಡ ಕುಸಿಯುವುದು. ಇದರಿಂದಲೂ ಮೆದುಳಿಗೆ ರಕ್ತಪೂರೈಕೆ ನಿಲ್ಲುತ್ತದೆ. ಮೂರ್ಛೆಯನ್ನು ಸಾಮಾನ್ಯವಾಗಿ ಅಪಸ್ಮಾರ/ಫಿಟ್ ಎಂದು ಗುರುತಿಸಲಾಗುತ್ತದೆ. ಮೂರ್ಛೆಗೆ ಒಳಗಾದ ವ್ಯಕ್ತಿಯನ್ನು ಸಿಟಿ ಸ್ಕ್ಯಾನ್, ಎಂಆರ್‌ಐ ಮತ್ತು ನ್ಯೂರಾಲಜಿಕಲ್ ಎವ್ಯಾಲ್ಯುಯೇಷನ್ ಮೊದಲಾದ ಪರೀಕ್ಷೆಗೆ ಒಳಪಡಿಸುವುದು ಸಾಮಾನ್ಯ. ಆದರೆ ಅದಕ್ಕಿಂತ ಪೂರ್ವದಲ್ಲಿ ಸಮಸ್ಯೆಗೆ ನಿರ್ದಿಷ್ಟ ಕಾರಣಗಳನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಿದರೆ ರೋಗಿ ಗುಣಮುಖನಾಗಬಹುದು. ನಿರ್ಲಕ್ಷಿಸಿದರೆ ಗಂಭೀರ ಪರಿಣಾಮ ಉಂಟಾಗಬಹುದು.

ಮೂರ್ಛೆ ಹೋಗುವ ಸಮಸ್ಯೆ ಎಲ್ಲ ವಯೋಮಾನದವರಲ್ಲೂ ಉಂಟಾಗಬಹುದು, ಆದರೆ ಕಾರಣಗಳು ವ್ಯಕ್ತಿಯ ವಯಸ್ಸನ್ನು ಆಧರಿಸಿ ಬದಲಾಗಬಹುದು. ಕೆಲವು ಸಂದರ್ಭಗಳಲ್ಲಿ ಮುಖ್ಯವಾಗಿ ಹೃದಯರೋಗಗಳಿದ್ದಾಗ ಗಂಭೀರ ಸಮಸ್ಯೆಯಾಗಬಹುದು. ಆದ್ದರಿಂದ ಮೂರ್ಛೆಯ ಹಿಂದಿನ ಕಾರಣಗಳನ್ನು ಕಂಡುಕೊಳ್ಳುವುದು ಬಹಳ ಮುಖ್ಯ. ಕುಟುಂಬದಲ್ಲಿ ಯಾರಾದರೂ ದಿಢೀರ್ ಮರಣ ಹೊಂದಿದವರಿದ್ದರೆ, ದುರ್ಬಲ ರಕ್ತಪೂರೈಕೆ ಹೊಂದಿರುವ ಕೊರೊನರಿ ಆರ್ಟರಿ ಡಿಸೀಸ್ ಮತ್ತು ಹಾರ್ಟ್ ಮಸಲ್ ಡಿಸೀಸ್ (ಕಾರ್ಡಿಯೊಮೈಯೊಪತೀಸ್) ಆಂತರಿಕ ಹೃದಯರೋಗ, ಜನ್ಮಜಾತ ಹೃದಯ ಸಮಸ್ಯೆಗಳು ಮತ್ತು ಹೃದಯದಲ್ಲಿ ಎಲೆಕ್ಟ್ರಿಕಲ್ ಕಂಡಕ್ಷನ್ ಸಿಸ್ಟಂ ಇತ್ಯಾದಿ ಮರಣದ ಸಂಭವನೀಯತೆ ಹೆಚ್ಚಿಸುತ್ತವೆ.

ಚಿಕಿತ್ಸೆ ವಿಭಿನ್ನ

ಮೂರ್ಛೆಗೆ ವಿವಿಧ ಕಾರಣಗಳು ಇರುವುದರಿಂದ ಚಿಕಿತ್ಸೆಯೂ ಭಿನ್ನವಾಗಿರುತ್ತದೆ. ಈ ಸಮಸ್ಯೆಯನ್ನು ಜೀವನಶೈಲಿ ಬದಲಾವಣೆಗಳು, ಔಷಧಗಳು ಮತ್ತು ಎಲೆಕ್ಟ್ರಿಕಲ್ ಥೆರಪಿಗಳಿಂದ ನಿರ್ವಹಿಸಬಹುದು.

ದೈಹಿಕ ಪರೀಕ್ಷೆ, ಎಲೆಕ್ಟ್ರೋಕಾರ್ಡಿಯೋಗ್ರಾಂ (ಇಸಿಜಿ), ಲಾಂಗ್ ಟರ್ಮ್ ರಿದಂ ಮಾನಿಟರಿಂಗ್‌, ಇಸಿಜಿ ಅಸಹಜತೆ ಮತ್ತು ಎಲೆಕ್ಟ್ರಿಕಲ್ ಕಂಡಕ್ಷನ್ ಸಿಸ್ಟಂ ಮೌಲ್ಯಮಾಪನಕ್ಕೆ ನಿರ್ದಿಷ್ಟ ಪರೀಕ್ಷೆ ನಡೆಸಿದರೆ ಮುನ್ಸೂಚನೆಗಳನ್ನು ಕಂಡುಕೊಳ್ಳಬಹುದು. ಮೂರ್ಛೆಯ ಭಾವನೆ ಮೂಡಿದರೆ ಕೆಳಗೆ ಮಲಗಿಕೊಳ್ಳಿ, ಇದರಿಂದ ಮೆದುಳಿಗೆ ರಕ್ತಪೂರೈಕೆ ಸುಧಾರಿಸುತ್ತದೆ.
ಈ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ. ಮೂರ್ಛೆಗೆ ನರಸಂಬಂಧಿ ಕಾರಣಗಳು ಎಂಬ ಸಾಮಾನ್ಯ ನಂಬಿಕೆ ಇದ್ದರೂ ನಿಜವಾದ ಕಾರಣ ಹೃದಯಕ್ಕೆ ಸಂಬಂಧಿಸಿರುತ್ತದೆ. ಆದ್ದರಿಂದ ತಜ್ಞ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯುವುದು ಸೂಕ್ತ.

(ಲೇಖಕರು ಬೆಂಗಳೂರಿನಲ್ಲಿ ಎಲೆಕ್ಟ್ರೋಫಿಸಿಯಾಲಜಿಸ್ಟ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT