ಮಂಗಳವಾರ, ಸೆಪ್ಟೆಂಬರ್ 22, 2020
25 °C

ಮಹಿಳೆಯರ ಫಲವಂತಿಕೆ ಟ್ರ್ಯಾಕರ್‌ ಆ್ಯಪ್‌ ಎಷ್ಟು ಉಪಯುಕ್ತ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸ್ಮಾರ್ಟ್‌ಫೋನ್‌ ಒಂದು ಕೈಯಲ್ಲಿದ್ದರೆ ಸಾಕು, ಪ್ರಪಂಚವೇ ನಿಮ್ಮ ಅಂಗೈಯಲ್ಲಿ ಬಂದು ಕೂರುತ್ತದೆ; ಅದರೊಳಗಿರುವ ಆ್ಯಪ್‌ಗಳು ಅಲ್ಲಿಂದಲೇ ನಿಮಗೆ ನೆರವು ನೀಡುತ್ತವೆ, ಕೆಲವೊಮ್ಮೆ ನಿಮ್ಮ ನಡವಳಿಕೆಯ ಮೇಲೆ ನಿಯಂತ್ರಣ ಸಾಧಿಸಲೂ ಆರಂಭಿಸುತ್ತವೆ. ಕೆಲವೊಮ್ಮೆ ನಿರೀಕ್ಷೆಗೆ ವಿರುದ್ಧವಾದ ಫಲಿತಾಂಶವನ್ನೂ ನೀಡಬಹುದು.

ಉದಾಹರಣೆಗೆ ಯುವತಿಯರು ಗರ್ಭಧಾರಣೆಯನ್ನು ನಿಯಂತ್ರಿಸಲು ಬಳಸುವ ನ್ಯಾಚುರಲ್‌ ಸೈಕಲ್‌ನಂತಹ ಆ್ಯಪ್‌. ಈ ಆ್ಯಪ್‌ ಆಧಾರಿತ ಫಲವಂತಿಕೆ ಟ್ರ್ಯಾಕರ್‌ ಋತುಚಕ್ರ ಹಾಗೂ ದಿನನಿತ್ಯದ ದೈಹಿಕ ತಾಪಮಾನದ ಅಂಕಿ–ಅಂಶ ಬಳಸಿಕೊಂಡು ಅಂಡಾಣು ಯಾವಾಗ ಬಿಡುಗಡೆಯಾಗುತ್ತದೆ ಎಂಬುದನ್ನು ಲೆಕ್ಕ ಹಾಕುತ್ತದೆ. ಅದರ ಆಧಾರದ ಮೇಲೆ ಗರ್ಭ ಧಾರಣೆ ಅಥವಾ ಗರ್ಭ ನಿರೋಧಕ ಬಳಕೆಯ ಬಗ್ಗೆ ಯೋಜನೆ ರೂಪಿಸಬಹುದು ಎಂಬುದು ಎರಡು ವರ್ಷಗಳ ಹಿಂದೆ ಈ ಆ್ಯಪ್ ಬಿಡುಗಡೆಯಾದಾಗ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಇದರ ಬದಲು ಗರ್ಭ ನಿರೋಧಕಗಳೇ ಉಪಯುಕ್ತ ಎಂಬುದು ಬಳಕೆ ಮಾಡಿದವರು ಹಾಗೂ ತಜ್ಞರ ಅಭಿಪ್ರಾಯ.

‘ಈ ಆ್ಯಪ್‌ ಅನ್ನು ಡೌನ್‌ಲೋಡ್ ಮಾಡಿಕೊಂಡು ಬಳಸಿದ ಬಹಳಷ್ಟು ಮಂದಿ ಯುವತಿಯರು ದೇಹದ ಉಷ್ಣಾಂಶ ನಿತ್ಯ ನೋಡಿಕೊಳ್ಳುವುದು ತಲೆನೋವಿನ ಕೆಲಸ ಎಂದು ದೂರುತ್ತಾರೆ. ಋತುಚಕ್ರ ಏರುಪೇರಾದರೆ ಲೆಕ್ಕಾಚಾರ ಹೆಚ್ಚು ಕಡಿಮೆಯಾಗುತ್ತದೆ’ ಎನ್ನುತ್ತಾರೆ ಡಾ.ವೈಶಾಲಿ ರಾಯ್ಕರ್‌.

ಆ್ಯಪ್‌ ಬರುವುದಕ್ಕೂ ಮುನ್ನ ದೇಹದ ಪ್ರಕೃತಿಯ ಮೇಲೆ ಲೆಕ್ಕ ಹಾಕುತ್ತಿದ್ದ ಸುರಕ್ಷಿತ ದಿನಗಳೇ ನಿಖರ ಎನ್ನುತ್ತಾರೆ ವೈದ್ಯರು. ಅಂದರೆ ಜನನಾಂಗದ ಲೋಳೆಯಂತಹ ಸ್ರಾವದಿಂದ ಅಂಡಾಣು ಬಿಡುಗಡೆಯಾಗುವ ದಿನ ತಿಳಿದುಕೊಳ್ಳಬಹುದು ಎಂಬುದು ಅವರ ಅಭಿಪ್ರಾಯ. ಋತುಸ್ರಾವ ಯಾವಾಗಲೂ 28 ಅಥವಾ 30 ದಿನಗಳಿಗೆ ಆಗುವ ಯುವತಿಯರಿಗೂ ಸುರಕ್ಷಿತ ದಿನ ಲೆಕ್ಕ ಹಾಕುವುದು ಕಷ್ಟವೇನಲ್ಲ.

ಆ್ಯಪ್‌ ಬದಲು ಕಾಪರ್‌ ಐಯುಡಿ (ಇಂಟ್ರಾ ಯುಟೆರೈನ್‌ ಡಿವೈಸ್‌)ಯಂತಹ ಗರ್ಭ ನಿರೋಧಕ ಸಾಧನಗಳು ಈಗಲೂ ಜನಪ್ರಿಯ. ಅದರಲ್ಲೂ ವೈದ್ಯಕೀಯ ಸಮಸ್ಯೆಗಳಿರುವವರು ಇಂತಹ ಆ್ಯಪ್‌ ಬಳಸಬೇಡಿ ಎಂದು ಸಲಹೆ ನೀಡಲಾಗಿದೆ. ಗರ್ಭ ನಿರೋಧಕ ಮಾತ್ರೆ ಅಥವಾ ಹಾರ್ಮೋನ್‌ ಚಿಕಿತ್ಸೆ ಬಳಸುವವರಿಗೂ ಇದು ಅಷ್ಟು ಸೂಕ್ತವಲ್ಲ.

ಆದರೆ ಗರ್ಭಧಾರಣೆ ಕುರಿತು ತಿಳಿವಳಿಕೆ ಪಡೆಯುವವರಿಗೆ ಈ ಆ್ಯಪ್‌ ವರದಾನ ಎನ್ನುತ್ತಾರೆ ತಜ್ಞರು.

ಗರ್ಭ ನಿರೋಧಕ ಮಾತ್ರೆಗಳು, ಐಯುಡಿ, ಇಪ್ಲಾಂಟ್‌, ಶಸ್ತ್ರಚಿಕಿತ್ಸೆ, ಕಾಂಡೋಮ್‌ ಬಳಕೆಯೇ ಬೇಡದ ಗರ್ಭ ಧಾರಣೆ ತಡೆಯಲು ಸೂಕ್ತ ಎಂಬುದು ತಜ್ಞರ ಅಭಿಪ್ರಾಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು