ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಥಮ ಚಿಕಿತ್ಸೆಯ ಮೊದಲ ಪಾಠ: ಆ ಐದು ಅಂಶಗಳು ಏನು?

ಮನೆಯಲ್ಲಿ ಏನಾದರೂ ಅಪಘಾತ, ಅವಘಡಗಳಾದಾಗ ಮೊದಲು ಗಾಬರಿಯಾಗುತ್ತದೆ; ದಿಕ್ಕು ತೋಚದಂತಾಗುತ್ತದೆ.
Published 20 ಮೇ 2024, 20:53 IST
Last Updated 20 ಮೇ 2024, 20:53 IST
ಅಕ್ಷರ ಗಾತ್ರ

ಮನೆಯಲ್ಲಿ ಏನಾದರೂ ಅಪಘಾತ, ಅವಘಡಗಳಾದಾಗ ಮೊದಲು ಗಾಬರಿಯಾಗುತ್ತದೆ; ದಿಕ್ಕು ತೋಚದಂತಾಗುತ್ತದೆ. ಆ ಸಮಯದಲ್ಲಿ ಪ್ರತಿಯೊಂದು ನಿಮಿಷವೂ ಅಮೂಲ್ಯ. ಕಣ್ಮುಂದೆ ಸಂಭವಿಸುವ ಅಪಘಾತಗಳನ್ನು ನಿಭಾಯಿಸಲು ಪೂರ್ವಸಿದ್ಧತೆ ಇಲ್ಲದಿದ್ದರೆ ಕೆಲವೊಮ್ಮೆ ಪರಿಣಾಮ ತೀವ್ರವಾಗಬಹುದು. ಆಪತ್ತಿನ ಸಮಯದಲ್ಲಿ ಮೊದಲು ಏನು ಮಾಡಬೇಕು ಎಂಬ ವಿವೇಚನೆಯನ್ನು ನೀಡುವುದು ಪ್ರಥಮ ಚಿಕಿತ್ಸೆ. ಕಾಯಿಲೆಯಾಗಲಿ, ಪೆಟ್ಟಾಗಲಿ – ಸಣ್ಣದೋ ಅಥವಾ ಗಂಭೀರವೋ, ನಿರ್ದಿಷ್ಟ ಚಿಕಿತ್ಸೆ ದೊರೆಯುವ ಮುನ್ನ ಪ್ರಥಮ ಚಿಕಿತ್ಸೆ ಎಂಬುದನ್ನು ಜೀವರಕ್ಷಕವಾಗಿ, ಸಮಸ್ಯೆಯ ಪ್ರಮಾಣವನ್ನು ಮಿತಗೊಳಿಸುವುದಕ್ಕಾಗಿ, ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುವುದನ್ನು ತಡೆಯುವುದಕ್ಕಾಗಿ, ಕಾಯಿಲೆಯನ್ನು ಸುಧಾರಿಸುವ ಆರಂಭದ ಮಜಲುಗಳಾಗಿ ಬಳಸಬಹುದು.

ಪ್ರಥಮ ಚಿಕಿತ್ಸೆಯಲ್ಲಿ ಐದು ಅಂಶಗಳಿವೆ


1. ಅವಘಡ ನಡೆದ ಸುತ್ತಮುತ್ತಲ ಸ್ಥಳವನ್ನು ಪರಿಶೀಲಿಸಬೇಕು. ಪ್ರಥಮ ಚಿಕಿತ್ಸೆ ನೀಡುವವರು ಮೊದಲು ತಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು. ಅಪಘಾತ ನಡೆದ ಸ್ಥಳದಲ್ಲಿ ಬೆಂಕಿ, ಅಪಾಯಕಾರಿ ರಾಸಾಯನಿಕಗಳು, ತುಂಡಾದ ವಿದ್ಯುತ್ ತಂತಿಗಳು, ಜಾರಿ ಬೀಳುವ ಸಾಧ್ಯತೆ ಇರುವ ನೆಲ ಮೊದಲಾದುವುಗಳು ಇವೆಯೇ ಎಂದು ಗಮನಿಸಬೇಕು. ಅಂತಹ ಯಾವುದೇ ಅಪಾಯಗಳು ಇದ್ದರೆ ಮೊದಲು ತಮ್ಮನ್ನು ಮತ್ತು ಅಪಾಯಕ್ಕೆ ಒಳಗಾದವರನ್ನು ಹೇಗೆ ಸುರಕ್ಷಿತವಾಗಿ ಇರಿಸಬಹುದು ಎಂದು ಆಲೋಚಿಸಬೇಕು. ಇತರರ ಸಹಾಯ ದೊರೆಯುವಂತಿದ್ದರೆ ಮೊದಲು ಅದನ್ನು ಪಡೆಯುವ ಕೆಲಸ ಮಾಡಬೇಕು.

2. ಗಾಯಗೊಂಡ ವ್ಯಕ್ತಿಯನ್ನು ಗಮನಿಸಬೇಕು. ಪ್ರಜ್ಞೆ ತಪ್ಪಿದೆಯೇ, ಉಸಿರಾಡುತ್ತಿದ್ದಾರೆಯೇ, ಶರೀರದ ಯಾವುದಾದರೂ ಭಾಗ ಅಲುಗಾಡದೆ ನಿಶ್ಚೇಷ್ಟಿತವಾಗಿದೆಯೇ, ರಕ್ತಸ್ರಾವ ಆಗುತ್ತಿದೆಯೇ ಎಂದು ಅಂದಾಜಿಸಬೇಕು. ರಕ್ತಸ್ರಾವವನ್ನು ಸಾಧ್ಯವಾದಷ್ಟೂ ಮಿತಗೊಳಿಸಬೇಕು. ಉಸಿರು ನಿಂತಿದ್ದರೆ ಶ್ವಾಸ-ಹೃದಯಗಳ ಪುನಶ್ಚೇತನವನ್ನು ನೀಡಬೇಕು. ಪ್ರಥಮ ಚಿಕಿತ್ಸೆಯ ತರಬೇತಿಯಲ್ಲಿ ಇದನ್ನು ಕಲಿಸಲಾಗುತ್ತದೆ. ಗಾಯಗೊಂಡವರ ಸುತ್ತಮುತ್ತಲ ಪ್ರದೇಶ ಸುರಕ್ಷಿತವಾಗಿದ್ದರೆ ಅವರನ್ನು ಅನಗತ್ಯವಾಗಿ ಕದಲಿಸಬಾರದು. ಮೂಳೆಮುರಿತದಂತಹ ಸಂದರ್ಭಗಳಲ್ಲಿ ಒಂದು ಸ್ಥಳದಿಂದ ಮತ್ತೊಂದೆಡೆಗೆ ವ್ಯಕ್ತಿಯನ್ನು ವರ್ಗಾಯಿಸುವುದು ಅಪಾಯಕಾರಿಯಾಗಬಹುದು. ಇದನ್ನು ಚೆನ್ನಾಗಿ ತರಬೇತಿ ಉಳ್ಳವರು ಸೂಕ್ತ ಸಲಕರಣೆಗಳ ನೆರವಿನಿಂದ ಮಾತ್ರ ಮಾಡಬೇಕು.

3. ಸಹಾಯ ಪಡೆಯಬೇಕು. ಮನೆಯ ಇತರ ಸದಸ್ಯರು, ನೆರೆಹೊರೆಯ ಮಂದಿ, ಶೀಘ್ರವಾಗಿ ಅವಘಡದ ಸ್ಥಳ ತಲುಪಬಲ್ಲ ಪರಿಚಿತರು, ಹತ್ತಿರದ ಆಸ್ಪತ್ರೆಯ ಸಿಬ್ಬಂದಿ – ಹೀಗೆ ಯಾರದ್ದೇ ಸಹಾಯ ದೊರೆತರೂ ಅನುಕೂಲ. ಆದರೆ, ಪ್ರಥಮ ಚಿಕಿತ್ಸೆಯ ಮೂಲತತ್ತ್ವಗಳನ್ನು ಅರಿಯದ ಜನರಿಗೆ ಪರಿಸ್ಥಿತಿ ನಿಭಾಯಿಸುವ ಹೊಣೆಗಾರಿಕೆಯನ್ನು ನೀಡಬಾರದು. ಅಂತಹವರು ಸಹಾಯಕರ ಮಟ್ಟದಲ್ಲಿ ಹೇಳಿದ ಕೆಲಸ ಸರಿಯಾಗಿ ಮಾಡಬಲ್ಲಂತೆ ಇರಬೇಕೇ ಹೊರತು, ನಿರ್ಧಾರವನ್ನು ಕೈಗೊಳ್ಳುವ ವ್ಯಕ್ತಿಯಾಗಿ ಅಲ್ಲ. ಪರಿಸ್ಥಿತಿ ಸಾಮಾನ್ಯ ನಿರ್ವಹಣೆಯ ಕೈಮೀರಿದೆ ಎಂದು ಅನಿಸಿದರೆ ಆದಷ್ಟು ಬೇಗ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಬೇಕು.

4. ನಮ್ಮಲ್ಲಿ ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ಬಲವಂತವಾಗಿ ನೀರು ಕುಡಿಸುವ ಜನರಿದ್ದಾರೆ. ಯಾವ ಕಾರಣಕ್ಕೂ ತೀವ್ರವಾಗಿ ಗಾಯಗೊಂಡ, ಉಸಿರಾಡಲು ಕಷ್ಟ ಪಡುತ್ತಿರುವ, ವಾಂತಿ ಮಾಡುತ್ತಿರುವ, ಅಥವಾ ಪ್ರಜ್ಞೆ ಇಲ್ಲದ ವ್ಯಕ್ತಿಗಳಿಗೆ ನೀರು ಕುಡಿಸುವ ಪ್ರಯತ್ನವನ್ನು ಮಾಡಬಾರದು. ಗಾಯಗೊಂಡ ವ್ಯಕ್ತಿಗೆ ಪ್ರಜ್ಞೆ ಇದ್ದರೆ, ಅವರಿಗೆ ಧೈರ್ಯ ತುಂಬುವ ಮಾತುಗಳನ್ನು ಹೇಳಬೇಕು; ಏನಾಗಿದೆ ಎಂದು ಸ್ಥೂಲವಾಗಿ ವಿವರಿಸಬೇಕು.

5. ಗಾಯಗೊಂಡ ವ್ಯಕ್ತಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಷ್ಟು ಕಾಲ ಪ್ರಥಮ ಚಿಕಿತ್ಸೆಯನ್ನು ನೀಡಬಹುದು. ಚಿಕಿತ್ಸೆಯಲ್ಲಿ ಹೆಚ್ಚು ಪರಿಣತರು ದೊರಕಿದಾಗ ಸಂದರ್ಭದ ನಿರ್ವಹಣೆಯನ್ನು ಅಂತಹವರಿಗೆ ವರ್ಗಾಯಿಸಬಹುದು. ಅಪಘಾತಕ್ಕೆ ಒಳಗಾದ ವ್ಯಕ್ತಿಯ ಸುರಕ್ಷತೆಯಷ್ಟೇ ಪ್ರಥಮ ಚಿಕಿತ್ಸೆ ನೀಡುವವರ ಕ್ಷೇಮವೂ ಮುಖ್ಯ ಎಂಬುದು ಗಮನದಲ್ಲಿರಬೇಕು.

ಪ್ರಥಮ ಚಿಕಿತ್ಸೆ ನೀಡುವುದು ಯಾವುದೋ ನಿರ್ದಿಷ್ಟ ಸಂದರ್ಭಕ್ಕಷ್ಟೇ ಸೀಮಿತ ಎಂಬುದಿಲ್ಲ. ಅವಘಡಗಳಿಗೆ ಒಳಗಾದ ಯಾರದ್ದೇ ಸುರಕ್ಷತೆ ಅಪಾಯದಲ್ಲಿದೆ ಎಂದಾಗ ಪ್ರಥಮ ಚಿಕಿತ್ಸೆಯನ್ನು ನೀಡಬಹುದು. ಗಂಟಲಿನಲ್ಲಿ ಬಾಹ್ಯವಸ್ತು ಸಿಕ್ಕಿಹಾಕಿಕೊಂಡವರು, ಜಂತುಗಳ ಕಡಿತ, ರಕ್ತಸ್ರಾವ, ಮೂಳೆಮುರಿತ, ಬೆಂಕಿ ಅಪಘಾತ, ವಿದ್ಯುತ್ ಶಾಕ್, ವಿಷಪ್ರಾಶನ, ಅಪಸ್ಮಾರ – ಹೀಗೆ ಯಾವುದೇ ಪರಿಸ್ಥಿತಿಯಲ್ಲೂ ಪ್ರಥಮ ಚಿಕಿತ್ಸೆ ಸೂಕ್ತ.

ಪ್ರತಿಯೊಂದು ಮನೆಯಲ್ಲೂ ಪ್ರಥಮ ಚಿಕಿತ್ಸೆಗೆ ಅಗತ್ಯವಾದ ವಸ್ತುಗಳ ಪೆಟ್ಟಿಗೆಯೊಂದು ಎಲ್ಲರಿಗೂ ಕಾಣುವ, ಸುಲಭವಾಗಿ ದೊರೆಯುವ ಸ್ಥಳದಲ್ಲಿ ಇರಬೇಕು. ಅದರ ಮೇಲೆ ಎದ್ದು ಕಾಣುವಂತೆ ‘ಪ್ರಥಮ ಚಿಕಿತ್ಸೆಯ ಪೆಟ್ಟಿಗೆ’ ಎಂದು ನಮೂದಾಗಿರಬೇಕು. ಪ್ರಥಮ ಚಿಕಿತ್ಸೆಯ ಮೂಲತತ್ತ್ವಗಳನ್ನು ವಿವರಿಸುವ ಕಿರುಮಾಹಿತಿ, ಗಾಯಗಳ ಮೇಲೆ ಲೇಪಿಸುವ ಮುಲಾಮು, ಗಾಯವನ್ನು ಮುಚ್ಚಬಲ್ಲ ಡ್ರೆಸ್ಸಿಂಗ್ ಪರಿಕರಗಳು, ಚರ್ಮಸ್ನೇಹಿ ಅಂಟಿನ ಪಟ್ಟಿ, ಕೈಗವಸು, ಮುಖಗವಸು, ಸೇಫ್ಟಿಪಿನ್ನುಗಳು, ಹೀರುಗುಣವಿರುವ ಹತ್ತಿ, ಕತ್ತರಿ, ಸಣ್ಣ ಮುಳ್ಳುಗಳನ್ನು ಕೀಳಬಲ್ಲ ಟ್ವೀಜರ್ ಸಲಕರಣೆ, ಬ್ಯಾಂಡ್-ಐಡ್ ಅಂಟಿನ ಪಟ್ಟಿಗಳು, ಮರದ ಐಸ್-ಕ್ರೀಮ್ ಚಮಚೆಗಳು, ನೋವುನಿವಾರಕ ಪ್ಯಾರಾಸಿಟಮಾಲ್ ಗುಳಿಗೆಗಳು, ಓ.ಆರ್.ಎಸ್. ಪುಡಿಯ ಸ್ಯಾಷೆ, ಶುಭ್ರವಾದ ಬಟ್ಟೆಯ ತುಂಡುಗಳು, ಪೆನ್ನು-ಕಾಗದ ಇತ್ಯಾದಿಗಳು ಈ ಪೆಟ್ಟಿಗೆಯಲ್ಲಿ ಇರಬೇಕು. ಇದನ್ನು ಕಾಲಕಾಲಕ್ಕೆ ಪರಿಶೀಲಿಸಿ, ಔಷಧಗಳ ಪ್ರಸ್ತುತತೆಯನ್ನು ಖಚಿತಪಡಿಸಬೇಕು. ಯಾವುದೇ ಅವಘಡದ ನಿರ್ವಹಣೆಗೆ ಸದಾ ಸನ್ನದ್ಧರಾಗಿರುವುದು ಪ್ರಥಮ ಚಿಕಿತ್ಸೆಯ ಮೂಲ ಆಶಯ.

ಪ್ರಥಮ ಚಿಕಿತ್ಸೆಯ ಮೂಲತತ್ತ್ವಗಳನ್ನು ಯಾರು ಬೇಕಾದರೂ ಕಲಿಯಬಹುದು. ಇದಕ್ಕೆ ಇಂತಿಷ್ಟು ಶಾಲಾ ಶಿಕ್ಷಣ ಇರಬೇಕೆಂದೇನೂ ಇಲ್ಲ. ವಾಸ್ತವದಲ್ಲಿ, ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸೆಯ ತರಬೇತಿಯನ್ನು ಪಡೆಯುವುದು ಒಳಿತು. ಶಾಲೆಯ ಪಠ್ಯಕ್ರಮದಲ್ಲಿ ಪ್ರಥಮ ಚಿಕಿತ್ಸೆಯ ಪಾಠಗಳು ಮತ್ತು ತರಬೇತಿ ಕಡ್ಡಾಯವಾಗಿರುವ ದೇಶಗಳಿವೆ. ಆರೋಗ್ಯ ವ್ಯವಸ್ಥೆ ಅಸಮರ್ಪಕ ಮಟ್ಟದಲ್ಲಿರುವ ಅಭಿವೃದ್ಧಿಶೀಲ ಮತ್ತು ಹಿಂದುಳಿದ ದೇಶಗಳು ಈ ನಿಟ್ಟಿನಲ್ಲಿ ಹೆಚ್ಚು ಆಸ್ಥೆ ವಹಿಸುವ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT