ಮಂಗಳವಾರ, ಜನವರಿ 21, 2020
16 °C

ಬಳ್ಳಿಯಂತೆ ಬಳುಕುವ ಮೈಮಾಟದ ನಟಿ ದಿಶಾ ಪಟಾನಿ ಡಯಟ್ ಕಟ್ಟುನಿಟ್ಟು!

ಮಂಜುಶ್ರೀ ಕಡಕೋಳ Updated:

ಅಕ್ಷರ ಗಾತ್ರ : | |

ಬಳ್ಳಿಯಂತೆ ಬಳುಕುವ ಮೈಮಾಟದ ನಟಿ ದಿಶಾ ಪಟಾನಿ ಫಿಟ್‌ನೆಸ್‌ಗೆ ಆದ್ಯತೆ ಕೊಡುವ ಯುವಜನರ ಪಟ್ಟಿಯಲ್ಲಿ ಮುಂಚೂಣಿ ಯಲ್ಲಿರುವವರು. ದಿಶಾಳ ನಿತ್ಯದ ದಿನಚರಿಯಲ್ಲಿ ಮೊಟ್ಟಮೊದಲ ಚಟುವಟಿಕೆ ಆರಂಭವಾಗುವುದೇ ವರ್ಕೌಟ್‌ನಿಂದ. ಫಿಟ್‌ನೆಸ್‌ ಫ್ರೀಕ್‌ಗಳಿಗೆ ಸ್ಫೂರ್ತಿಯಾಗಿರುವ ದಿಶಾಳ ನಿತ್ಯದ ವರ್ಕೌಟ್, ಫಿಟ್‌ನೆಸ್ ರಹಸ್ಯದ ಗುಟ್ಟು ಅರಿಯಲು ಅಭಿಮಾನಿಗಳೂ ಉತ್ಸುಕರಾಗಿರುತ್ತಾರೆ. ಹಾಗಾಗಿಯೇ ದಿಶಾ ಕುರಿತ ಸುದ್ದಿಗಳೇನೇ ಹರಿದಾಡಿದರೂ ಅಭಿಮಾನಿಗಳು ಅತ್ತ ಕಣ್ಣು ಹಾಯಿಸದೇ ಇರಲಾರರು.  

ಸಮರ್ಪಣಾ ಮನೋಭಾವ ಅಗತ್ಯ
‘ಫಿಟ್‌ನೆಸ್ ಕಡೆಗೆ ಚಿತ್ತ ಹರಿಸುವವರು ನಿತ್ಯದ ದಿನಚರಿಯ ಬಗ್ಗೆ ಸಮಯ ಮತ್ತು ಅದಕ್ಕಾಗಿ ಸಮರ್ಪಣಾ ಮನೋಭಾವವನ್ನು ಹೊಂದಿರುವುದು ಅಗತ್ಯ. ಹಾಗಿದ್ದರೆ ಮಾತ್ರ ನಿಮ್ಮ ದೇಹಕ್ಕೆ ನೀವೇ ಶಿಲ್ಪಿಯಾಗಲು ಸಾಧ್ಯ ಅನ್ನುವುದು’ ಅವರ ಅನುಭವದ ಮಾತು. ವರ್ಕೌಟ್‌ ಜೊತೆಗೆ ನಿತ್ಯವೂ ಸೇವಿಸುವ ಆಹಾರದ ಕಡೆಗೂ ಗಮನ ಹರಿಸುವುದು ಅಗತ್ಯ. ಬೇಕಾಬಿಟ್ಟಿ ತಿನ್ನುವುದಕ್ಕಿಂತ ನಿಮ್ಮ ಡಯೆಟ್‌ಗೆ ಪೂರಕವಾಗಿ ಆಹಾರ ಕ್ರಮ ರೂಪಿಸಿಕೊಳ್ಳಬೇಕಾದದ್ದು ಕಡ್ಡಾಯ ಅನ್ನುವುದು ದಿಶಾಳ ಹಿತನುಡಿ. 

ಜಿಮ್ ತಪ್ಪಿಸಲ್ಲ
ಎಷ್ಟೇ ಬಿಡುವಿಲ್ಲದ ಕೆಲಸಗಳಿದ್ದರೂ ದಿಶಾ ನಿತ್ಯವೂ ಜಿಮ್‌ನಲ್ಲಿ ವರ್ಕೌಟ್ ಮಾಡುವುದನ್ನು ಮಾತ್ರ ತಪ್ಪಿಸಿಕೊಳ್ಳುವುದಿಲ್ಲ. ಸಬೂಬು ಹೇಳದೇ ಪ್ರತಿದಿನ ತನ್ನ ವ್ಯಾಯಾಮದ ದಿನಚರಿಯನ್ನು ಪೂರ್ಣಗೊಳಿಸುವುದು ಅವರ ಜಾಯಮಾನ. ‘ಮಳೆಯಿರಲಿ, ಬಿಸಿಲಿರಲಿ ಅಥವಾ ಎಂಥದ್ದೇ ಪ್ರತಿಕೂಲವಾದ ಹವಾಮಾನವೂ ಜಿಮ್‌ಗೆ ಹೋಗುವ ನನ್ನನ್ನು ತಡೆಯಲಾಗುದು’ ಎಂಬುದು ಅವರ ಆತ್ಮವಿಶ್ವಾಸ. ವರ್ಕೌಟ್ ಅನ್ನುವುದು ಜೀವನ ವಿಧಾನ, ಅದರಲ್ಲಿ ನಿರಂತರತೆ ಕಾಪಾಡಿಕೊಳ್ಳುವುದು ನಮ್ಮ ಆದ್ಯತೆಯಾಗಬೇಕು ಅನ್ನುತ್ತಾರೆ ಅವರು. 

ಹೇಗಿರುತ್ತೆ ವರ್ಕೌಟ್?
ದಿಶಾಳ ವ್ಯಾಯಾಮ ದಿನಚರಿಯಲ್ಲಿ ನೃತ್ಯ, ಕಿಕ್ ಬಾಕ್ಸಿಂಗ್ ಮತ್ತು ಜಿಮ್ನಾಸ್ಟಿಕ್ಸ್‌ ಮತ್ತು ಕಾರ್ಡಿಯೊ ವ್ಯಾಯಾಮಕ್ಕೆ ಕಾಯಂ ಸ್ಥಾನವಿದೆ. ದಿಶಾ ತಮ್ಮ ಫಿಟ್‌ನೆಸ್ ದಿನಚರಿಯನ್ನು ಕಾರ್ಡಿಯೊ ವ್ಯಾಯಾಮದ ಮೂಲಕ ಆರಂಭಿಸುತ್ತಾರೆ. ನಂತರ ನೃತ್ಯ, ಕಿಕ್ ಬಾಕ್ಸಿಂಗ್, ಜಿಮ್ನಾಸ್ಟಿಕ್ಸ್‌ನತ್ತ ಗಮನ ಹರಿಸುತ್ತಾರೆ. 

ವೇಟ್ ಲಿಫ್ಟಿಂಗ್‌ಗೆ ಹಿಂಜರಿಯಬೇಡಿ
‘ಇಂದಿನ ದಿನಗಳಲ್ಲಿ ಮಹಿಳೆಯರೂ ಪುರುಷರಷ್ಟೇ ಜಿಮ್‌ಗೆ ಆದ್ಯತೆ ನೀಡುತ್ತಾರೆ. ಅಂತೆಯೇ ಬಹುತೇಕರು ಜಿಮ್‌ನಲ್ಲಿ ಮಹಿಳೆಯರು ಬರೀ ವರ್ಕೌಟ್‌ಗೆ ಮಾತ್ರ ಗಮನ ಹರಿಸುತ್ತಾರೆ ಹೊರತು ವೇಟ್ ಟ್ರೈನಿಂಗ್‌ನತ್ತ ಗಮನ ಹರಿಸುವುದಿಲ್ಲ. ಆದರೆ, ಮಹಿಳೆಯರು ಕೂಡಾ ಇತ್ತೀಚೆಗೆ ಎಲ್ಲಾ ವರ್ಕೌಟ್‌ಗಳ ಜೊತೆಗೇ ಹೆವಿ ವೇಯ್ಟ್‌ ಅನ್ನೂ ಮಾಡುತ್ತೇವೆ. ನಾನು ಗಮನಿಸಿದಂತೆ ಬಹಳಷ್ಟು ಹುಡುಗಿಯರು ಜಿಮ್‌ನಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದಾರೆ. ನಿಜಕ್ಕೂ ಅವರು ತುಂಬಾ ಶ್ರಮದಾಯಕ ಮತ್ತು ಕಠಿಣ ವ್ಯಾಯಾಮ ಮಾಡುತ್ತಿದ್ದಾರೆ. ಲಿಂಗಭೇದ ಮರೆತು ಜಿಮ್‌ನಲ್ಲಿ ಈಗೀಗ ಎಲ್ಲರೂ ಒಂದೇ ರೀತಿಯ ತರಬೇತಿ ಪಡೆಯುತ್ತಿದ್ದಾರೆ. ನಿಮ್ಮ ಫಿಟ್‌ನೆಸ್‌ ಕಾಪಾಡಿಕೊಳ್ಳುವುದು ನಿಮ್ಮ ಕೈಯಿಂದ ಮಾತ್ರ ಸಾಧ್ಯ’ ಅನ್ನುವುದು ದಿಶಾಳ ನುಡಿ.  

ವ್ಯಾಯಾಮದ ಏಕತಾನತೆಯ ಕಟ್ಟುಪಾಡು ಮುರಿಯಲು ಇಷ್ಟಪಡುವ ದಿಶಾ, ಸದಾ ಹೊಸದನ್ನು ಪ್ರಯತ್ನಿಸಲು ಬಯಸುತ್ತಾರೆ. ‘ನಿಮ್ಮ ಟೋನ್ಡ್ ದೇಹದ ಹಿಂದಿರುವ ರಹಸ್ಯವೇನು’ ಎಂದು ಪ್ರಶ್ನಿಸಿದರೆ ಕಠಿಣ ಆ್ಯಬ್ ವರ್ಕೌಟ್ ಮತ್ತು ಕಟ್ಟುನಿಟ್ಟಾದ ಆಹಾರವೇ ಇದರ ಹಿಂದಿನ ರಹಸ್ಯ ಎಂದು ಮುಗುಳ್ನಗುತ್ತಾರೆ ಅವರು. ಹೊಟ್ಟೆಗೆ ಸಂಬಂಧಿಸಿದಂತೆ (ಆ್ಯಬ್‌) ನಿರಂತರವಾಗಿ ಒಂದೇ ಆಕಾರ ಕಾಪಾಡಿಕೊಳ್ಳುವುದು ಕಷ್ಟಕರ. ಕಠಿಣವಾದ ತಾಲೀಮು ಮತ್ತು ಆರೋಗ್ಯಕರ ಆಹಾರ ಸೇವನೆಯಿಂದ ಮಾತ್ರ ಹೊಟ್ಟೆಯ ಆಕಾರವನ್ನು ಸುಸ್ಥಿತಿಯಲ್ಲಿಡಲು ಸಾಧ್ಯ ಎಂಬುದು ಅವರ ನಂಬಿಕೆ. 

ಡಯೆಟ್ ಹೇಗಿರುತ್ತೆ?
ಕಟ್ಟುನಿಟ್ಟಾದ ಡಯೆಟ್ ಪಾಲಿಸುವ ದಿಶಾಳ ಆಹಾರದಲ್ಲಿ ಅಗತ್ಯ ಪೋಷಕಾಂಶಗಳಿಗೆ ಮಾತ್ರ ಆದ್ಯತೆ. ಮಧ್ಯಾಹ್ನದ ಊಟಕ್ಕೆ ಕಾರ್ಬೋಹೈಡ್ರೇಟ್ಸ್  ಮತ್ತು ಪ್ರೋಟಿನ್ ಇರುವಂತೆ ನೋಡಿಕೊಳ್ಳುತ್ತಾರೆ. ಮುಖ್ಯವಾಗಿ ಅನ್ನ ಮತ್ತು ಚಿಕನ್ ಇದ್ದೇ ಇರುತ್ತದೆ. ರಾತ್ರಿಯೂಟಕ್ಕೆ ಬರೀ ಪ್ರೋಟಿನ್‌ಯುಕ್ತ ಆಹಾರಕ್ಕೆ ಆದ್ಯತೆ. ವರ್ಕೌಟ್ ಮಾಡುವ ಮುನ್ನವೇ ಮೊಟ್ಟೆಯಂಥ ಪ್ರೋಟಿನ್‌ಯುಕ್ತ ಆಹಾರ ಸೇವನೆ ಒಳ್ಳೆಯದು. ವ್ಯಾಯಾಮ ಮುಗಿದ ಬಳಿಕ ಮತ್ತೆ ಪ್ರೋಟಿನ್ ಆಹಾರ ಸೇವನೆ ತಪ್ಪಿಸಬೇಡಿ ಅನ್ನುವುದು ಅವರ ಸಲಹೆ. ವಾರಕ್ಕೊಮ್ಮೆ ಮಾತ್ರ ಇಷ್ಟಬಂದ ಆಹಾರವನ್ನು ಎಗ್ಗಿಲ್ಲದೇ ಸೇವಿಸುವುದು ದಿಶಾಳ ಅಭ್ಯಾಸವಂತೆ. 

ನೀರು ಚೆನ್ನಾಗಿ ಕುಡಿಯಿರಿ. ಸಂಗೀತ ಕೇಳುತ್ತಾ ನಿಮ್ಮ ವರ್ಕೌಟ್ ಎಂಜಾಯ್ ಮಾಡಿ ಮತ್ತು ಮುಖ್ಯವಾಗಿ ನಿಮ್ಮ ಕಾಲಿನ ಅಳತೆಗೆ ತಕ್ಕ ಶೂ ಧರಿಸುವುದನ್ನು ಮರೆಯಬೇಡಿ ಅನ್ನುವುದು ದಿಶಾಳ ಸಲಹೆ.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು