ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Food And Health| ಅಜೀರ್ಣವಾಗದಿರಲಿ ಆಹಾರ

Published 24 ಏಪ್ರಿಲ್ 2023, 19:52 IST
Last Updated 24 ಏಪ್ರಿಲ್ 2023, 19:52 IST
ಅಕ್ಷರ ಗಾತ್ರ

ಡಾ. ವಿಜಯಲಕ್ಷ್ಮಿ ಪಿ.

‘ಮಗೂ ಯಾಕೋ ಊಟಾನೇ ಮಾಡ್ತಾ ಇಲ್ಲ’; ‘ನನಗ್ಯಾಕೋ ಊಟಾನೇ ಸೇರ್ತಾ ಇಲ್ಲ’; ‘ಹೊಟ್ಟೆ ತೊಳೆಸುತ್ತಾ ಇದೆ’ – ಹೀಗೆಲ್ಲ ಯಾರಾದರೂ ಹೇಳಿದರೆ, ಅದಕ್ಕೆ ತಕ್ಷಣ ಬರುವ ಉತ್ತರ ‘ತಿಂದದ್ದು ಹೆಚ್ಚು ಕಡಿಮೆ ಆಗಿ ಅಜೀರ್ಣ ಅಗಿರಬೇಕು’ ಅಂತ. ಹಾಗಾದರೆ ಅಜೀರ್ಣ ಎಂದರೇನು – ಎಂಬ ಪ್ರಶ್ನೆ ಕಾಡುತ್ತದೆ. ‘ಬೇಸಿಗೆ, ಬಿಸಿಲು, ಸೆಖೆ, ತಡೆಯಕ್ಕೆ ಆಗದೆ ನೀರು ಕುಡಿದರೆ ಅಜೀರ್ಣ ಆಗತ್ತೆ, ಹಾಗಂತ ನೀರು ಕುಡಿಯದೇ ಇದ್ರೆ ಮೈ ಒಣಗುತ್ತೆ’ ಎನ್ನುವ ಭೀತಿ ಇನ್ನು ಕೆಲವರದ್ದು. ನೀರಿನಿಂದ ಆಜೀರ್ಣ ಆದೀತೆ – ಎಂಬ ಸಂಶಯ ಹಲವರದ್ದು.

ಸರಳವಾಗಿ ಹೇಳುವುದಾದರೆ ಸೇವಿಸಿದ ಪದಾರ್ಥವು ದೇಹದ ಭಾಗವಾಗಿ ಪರಿಣಾಮ ಆಗದೆ ಇರುವುದೇ ಆಜೀರ್ಣ. ಪರಿಣಮನ ಪ್ರಕ್ರಿಯೆ ವಿವಿಧ ಹಂತದಲ್ಲಿ ನಡೆಯುತ್ತದೆ. ಸೇವಿಸಿದ ಪದಾರ್ಥ ಹೊಟ್ಟೆಯಲ್ಲಿ ಜೀರ್ಣ ಆಗದೆ ಇದ್ದರೆ ವಾಂತಿ, ಹೊಟ್ಟೆಭಾರ, ಹೊಟ್ಟೆನೋವು, ಊಟ ರುಚಿಸದಿರುವುದು – ಹೀಗೆ ಕೆಲವು ಲಕ್ಷಣಗಳು ಬರುತ್ತವೆ; ಕರುಳಿನಲ್ಲಿ ಪಚನಕ್ರಿಯೆ ಸರಿಯಾಗಿ ನಡೆಯದೇ ಹೋದರೆ, ಅತಿಸಾರ, ಹೊಟ್ಟೆನೋವು, ಹೊಟ್ಟೆಯುಬ್ಬರ, ಅತಿಯಾಗಿ ದುರ್ಗಂಧಯುಕ್ತ ಅಪಾನ ಪ್ರವೃತ್ತಿ ಆಗುವುದು – ಹೀಗೆ ಹಲವು ಲಕ್ಷಣಗಳು ಕಂಡುಬರುತ್ತವೆ. ಇನ್ನು ಯಕೃತ್ತಿನಲ್ಲಿ ಆಗುವ ಪರಿಣಮನ ವ್ಯತ್ಯಾಸದಿಂದ ಕಾಮಾಲೆ, ಕರುಳಿನ ಉರಿಯೂತ, ಯಕೃತ್ತು ಮತ್ತು ಪಿತ್ತಕೋಶದಲ್ಲಿ ಕಲ್ಲು, ಮೂತ್ರಕೋಶದಲ್ಲಿ ಕಲ್ಲು, ಮೂತ್ರಕೋಶ ಸಂಬಂಧಿ ರೋಗಗಳು, ದಮ್ಮು ಕಟ್ಟುವುದು, ಕೆಲವೊಮ್ಮೆ ಹೃದಯಸಂಬಂಧಿ ರೋಗಗಳಿಗೂ ಕಾರಣವಾಗಬಹುದು; ರಕ್ತಾದಿ ಧಾತುಗಳ ಉತ್ಪತ್ತಿಗೂ ತೊಡಕಾಗುತ್ತದೆ.

ನಾವು ಸೇವಿಸುವ ಆಹಾರದಲ್ಲಿರುವ ಪೋಷಕಾಂಶಗಳ ವ್ಯತ್ಯಾಸದಿಂದ, ಅವುಗಳನ್ನು ಪರಿಣಮಿಸುವ ಅಂಶಗಳ ಏರುಪೇರಿನಿಂದ, ಶಿಸ್ತಿಲ್ಲದ ಆಹಾರಸೇವನಾ ಕ್ರಮಗಳಿಂದ, ಪರಿಣಮನಕ್ರಿಯೆಯಲ್ಲಿ ವ್ಯತ್ಯಾಸವಾಗಿ ಅಜೀರ್ಣವಾಗುತ್ತದೆ.

ಪರಿಣಮನ ಕ್ರಿಯೆಯ ವ್ಯತ್ಯಾಸಗಳು ನಾಲ್ಕು ಕಾರಣದಿಂದ ಆಗಬಹುದು

1. ಹಿಂದೆ ಸೇವಿಸಿದ ಆಹಾರ ಜೀರ್ಣವಾಗುವ ಮೊದಲೇ ಮತ್ತೆ ಮತ್ತೆ ಆಹಾರ ಸೇವಿಸುವುದು. ಉದಾಹರಣೆಗೆ, ಮಗುವಿಗೆ ಎರಡು ಗಂಟೆಗೊಮ್ಮೆ ಆಹಾರ ಕೊಡಿ ಎಂದು ವೈದ್ಯರು ಹೇಳಿದ್ದಾರೆ. ಆದ್ದರಿಂದ ಮಗುವಿಗೆ ಹಸಿವಿರಲಿ ಇಲ್ಲದಿರಲಿ ಎರಡು ಗಂಟೆಗೊಮ್ಮೆ ಹಣ್ಣು, ಬಿಸ್ಕತ್ತು – ಹೀಗೆ ಏನಾದರೊಂದನ್ನು ಕೊಡುತ್ತಲೇ ಇದ್ದು, ‘ಇದೆಲ್ಲಾ ಆರೋಗ್ಯಕರ ಆಹಾರವೇ ಅಲ್ಲವೇ? ಆದರೂ ನನ್ನ ಮಗುವಿಗೆ ಹೀಗೇಕಾಯಿತು’ ಎಂದು ಚಿಂತಿಸುವುದು. ಬೆಳೆದವರಿಗಾದರೂ ಈ ರೀತಿ ಪದೇ ಪದೇ ಆಹಾರವನ್ನು ಸೇವಿಸುವುದು ಅನಾರೋಗ್ಯಕರವೇ.

2. ಒಂದೊಂದು ದಿನ ಒಂದೊಂದು ರೀತಿಯ ದಿನಚರಿ ಅನುಸರಿಸುತ್ತಾ ಬೆಳಗ್ಗೆ ಏಳುವುದರಿಂದ ರಾತ್ರಿ ಮಲಗುವವರೆಗೂ ನಿತ್ಯವೂ ವ್ಯತ್ಯಾಸವಾದ ದಿನಚರಿ, ವ್ಯತ್ಯಾಸವಾದ ಆಹಾರ ಕಾಲ, ವ್ಯತ್ಯಾಸವಾದ ಆಹಾರಪದಾರ್ಥ (ಬೇರೆ ಬೇರೆ ಬೇಕರಿ ಅಥವಾ ಹೊಟಿಲಿನಲ್ಲಿ ಸೇವಿಸುವುದು) ಕರುಳು ಅಥವಾ ಯಕೃತ್ತಿನಲ್ಲಿ ಆಹಾರಪರಿಣಮನವನ್ನು ವ್ಯತ್ಯಾಸಗೊಳಿಸುತ್ತದೆ.

3. ವಿರುದ್ಧವಾದ ಆಹಾರಪದಾರ್ಥಗಳ ಸೇವನೆ. ಉದಾಹರಣೇಗೆ: ಬೇಸಿಗೆಗೆ ಹಿತಕರವೆಂದು ಹಣ್ಣು–ಹಾಲನ್ನು ಬೆರೆಸಿ ಮಿಲ್ಕ ಶೇಕ್ ಮಾಡಿ ಸೇವಿಸುವುದು, ಹಾಲಿನ ಐಸ್ ಕ್ರೀಂ ಒಟ್ಟಿಗೆ ವಿಧವಿಧವಾದ ಹಣ್ಣು ಮತ್ತು ಉಪ್ಪು ಬೆರೆಸಿರುವ ಅನೇಕ ಖಾದ್ಯಗಳನ್ನು ಬೆರೆಸಿ ಸೇವಿಸುವುದು, ತಂಪಾಗಲೆಂದು ಹಾಲು ಮತ್ತು ಮೊಸರು ಅಥವಾ ಮಜ್ಜಿಗೆ ಬೆರೆಸಿ ಸೇವಿಸುವುದು, ಬಿಸಿಲಿನಿಂದ ದಣಿದು ಬಂದು ಅತಿ ತಂಪಾದ ನೀರು ಅಥವಾ ಇತರೆ ಪಾನೀಯಗಳನ್ನು ಸೇವಿಸುವುದು, ಅಥವಾ ಅತಿ ತಂಪಾದ ನೀರಿನಿಂದ ಸ್ನಾನ ಮಾಡುವುದು, ಆಹಾರದೊಡನೆ ತಂಪುಪಾನೀಯಗಳ ಸೇವನೆ, ಅತಿಯಾದ ಮದ್ಯ, ಅಥವಾ ಮಾಂಸಾಹಾರ ಸೇವನೆ, ಹಾಲು ಬೆರೆಸಿ ತಯಾರಿಸಿರುವ ಚಹ ಅಥವಾ ಕಾಪಿಗೆ ಉಪ್ಪು ಹಾಕುವುದು, ಹುಳಿಹಣ್ಣುಗಳ ಪಾನಕಕ್ಕೆ ಉಪ್ಪು ಸೇರಿಸುವುದು. ಎಲ್ಲಾ ಆಹಾರಪದಾರ್ಥಗಳೂ ಸ್ವತಃ ಗುಣಯುಕ್ತವಾದದ್ದೇ ಆಗಿದ್ದರೂ ಒಂದರೊಡನೆ ಒಂದು ಬೆರೆತಾಗ ಅವು ರಕ್ತಾದಿ ಧಾತುಗಳ ಉತ್ಪತ್ತಿಯನ್ನು ವ್ಯತ್ಯಾಸಗೊಳಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

4. ದೇಶಕಾಲಕ್ಕನುಗುಣವಾಗಿ ಆಹಾರದ ಬಗೆಯೂ ಬದಲಾದರೆ ಆರೋಗ್ಯಕರ. ಬೇಸಿಗೆಯಲ್ಲಿ ಅತಿಯಾದ ಖಾರ ಅಥವಾ ಜಿಡ್ಡಿನ ಪದಾರ್ಥಗಳ ಸೇವನೆ ಆಜೀರ್ಣ, ಅಮ್ಲಪಿತ್ತ, ಒಣಕೆಮ್ಮು, ಮೈ ತುರಿಕೆ, ಗಂಧೆ ಏಳುವುದು, ಮುಂತಾದ ಅನೇಕ ರೋಗಗಳಿಗೆ ಕಾರಣವಾಗುತ್ತದೆ.

ಬೇಸಿಗೆಯಲ್ಲಿ ಲಾವಂಚ, ಶ್ರೀಗಂಧ ಹಾಕಿ ಕುದಿಸಿದ ನೀರು, ಎಳೆನೀರು, ಬಾರ್ಲಿ ಗಂಜಿ ಅಥವಾ ಬಾರ್ಲಿನೀರು, ಮಜ್ಜಿಗೆ, ತಾಜಾ ಹಣ್ಣುಗಳ ಸೇವನೆ, ಅರಳಿನ ಗಂಜಿ ಅಥವಾ ಪಾನಕ, ಹೆಸರುಕಾಳಿನ ಪಾನಕ – ಹೀಗೆ ಜೀರ್ಣಶಕ್ತಿಯನ್ನು ಉದ್ದೀಪನಗೊಳಿಸುವ, ಆದರೆ ದೇಹಕ್ಕೆ ತಂಪನ್ನೀಯುವ ಪಾನೀಯಗಳು, ಮತ್ತು ತಂಬುಳಿ, ಪಳದ್ಯ, ತೊವ್ವೆ, ಇತ್ಯಾಗಿ ತಂಪಾದ ಆಹಾರಗಳ ಸೇವನೆ ಆರೋಗ್ಯಕರ.

ಆಯಾ ಪ್ರದೇಶದಲ್ಲಿ, ಆಯಾ ಕಾಲದಲ್ಲಿ ಬೆಳೆಯುವ ಆಹಾರ ಪದಾರ್ಥಗಳ ಸೇವನೆ ಒಳ್ಳೆಯದು. ಆಹಾರವನ್ನು ತಯಾರಿಸುವ, ಸೇವಿಸುವ ಕ್ರಮಗಳನ್ನೂ ಸಾಧ್ಯವಾದಷ್ಟೂ ಆಯಾ ಪ್ರದೇಶದ ವಾತಾವರಣಕ್ಕೆ ಸರಿಹೊಂದುವಂತೆ ತಯಾರಿಸಿ ಸೇವಿಸುವುದು ಆರೋಗ್ಯಕರ. ಸೇವಿಸುವ ಆಹಾರದ ಪ್ರಮಾಣ, ಆಹಾರಕಾಲ – ಇವು ಕೂಡ ಅಜೀರ್ಣ ಆಗದಂತೆ ತಡೆಗಟ್ಟಲು ಪೂರಕವಾದ ಅಂಶಗಳೇ ಆಗಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT