ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ: ಕೇಶ ಅನಾರೋಗ್ಯಕ್ಕೂ ಪಾಶ

Last Updated 1 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿ ವ್ಯಕ್ತಿಯ ಕೂದಲಿನ ಗುಣಸ್ವಭಾವಗಳು ಬೇರೆ ಬೇರೆ. ಹೀಗಾಗಿಯೇ ಅಪರಾಧಿಗಳನ್ನು ಪತ್ತೆಮಾಡಲು, ಕೂದಲಿನ ಅನನ್ಯತೆಯನ್ನು ಆಧರಿಸಿ, ವಿಧಿವಿಜ್ಞಾನವನ್ನು ಬಳಸಲಾಗುತ್ತದೆ. ಕೂದಲು ಚರ್ಮದ ಮೇಲೆ ನೆಲೆನಿಂತು, ಶರೀರಕ್ಕೆ ವಾತಾವರಣದ ತಾಪಮಾನ, ದೂಳು, ತೇವದಿಂದ ರಕ್ಷಣೆ ಒದಗಿಸುತ್ತದೆ. ಮುಖ್ಯವಾಗಿ ಚರ್ಮ ಮತ್ತು ಆಂತರಿಕ ಅಂಗಾಂಶಗಳನ್ನು ಕಾಪಾಡಲು ಕೂದಲಿರಲೇ ಬೇಕು. ಕೇಶವು ಸೌಂದರ್ಯದ ಮೂಲವೂ ಹೌದು. ಆದ್ದರಿಂದ, ಕೂದಲು ವ್ಯಕ್ತಿತ್ವದ ದ್ಯೋತಕವೆನ್ನಬಹುದು. ನಮ್ಮ ಆರೋಗ್ಯ, ಅನಾರೋಗ್ಯವನ್ನು ಸಹ ನಮ್ಮ ಕೂದಲು ಸೂಚಿಸುತ್ತದೆ, ಗೊತ್ತೆ?

ಚರ್ಮದಲ್ಲಿ ಹುದುಗಿದ್ದರೂ ಕೂದಲು ಹೋಲುವುದು ಮೂಳೆಗಳಿಗೆ. ಆಯುರ್ವೇದವು ಕೂದಲನ್ನು ಅಸ್ಥಿಧಾತುವಿನ ಮಲ ಎಂದು ಗುರುತಿಸುತ್ತದೆ. ಅಂದರೆ ಮೂಳೆಗಳು ಉತ್ಪತ್ತಿಯಾಗುವ ಕ್ರಿಯೆಯಲ್ಲಿ ಕೂದಲಿನ ಮೂಲಭೂತ-ಅಂಶಗಳು ಉತ್ಪತ್ತಿಯಾಗುವುದು. ಚರ್ಮದ ಮೂಲಕ, ಶರೀರದಾಚೆ ವಿಸರ್ಜಿಸಲ್ಪಡುವ ಅಂಶವಾದ್ದರಿಂದ ಕೂದಲು ‘ಮಲ’. ವಾಸ್ತವವಾಗಿ ಕೂದಲಿನ ಬುಡವು ಚರ್ಮದಲ್ಲಿ ನೆಟ್ಟಿದ್ದಾಗ ಮಾತ್ರ ಸೂಕ್ಷ್ಮರಕ್ತನಾಳಗಳ ಮೂಲಕ ಪೋಷಣೆ ಹೊಂದುವುದು. ಬುಡದ ಹೊರತಾಗಿ ಕೂದಲಿನ ಉಳಿದೆಲ್ಲಾ ಭಾಗವು ನಿರ್ಜೀವ. ಕೂದಲಿನ ಪೋಷಣೆಯಾಗುವುದು ಚರ್ಮಕ್ಕೆ ಪೋಷಣೆಯನ್ನು ಒದಗಿಸುವ ‘ರಸ-ರಕ್ತಧಾತು’ವಿನಿಂದ. ಕೂದಲಿನ ರಾಸಾಯನಿಕ ಸಂಘಟನೆ, ಜೈವಿಕಾಂಶಗಳೆಲ್ಲಾ ಚರ್ಮ-ಮಾಂಸದ ಮೂಲಕ ಆಚೆ ನೂಕಲ್ಪಟ್ಟಂಥವು. ಕೂದಲಿನ ರಚನೆಯು ‘ಕೆರಟಿನ್’ ಎಂಬ ನಾರು-ಪ್ರೊಟೀನಿನಿಂದ ಆಗಿರುವುದು. ಕೆರಾಟಿನ್ ಎಂಬುದು ಜೀವಿಗಳಲ್ಲಿ ಕೂದಲು, ಹೊಪ್ಪಳಿಕೆ, ರೆಕ್ಕೆ, ಕೊಂಬು, ಉಗುರು ಮೊದಲಾದ ಭಾಗಗಳಲ್ಲಿ ಕಂಡುಬರುವ ನಾರಿನಂಥ ಗಟ್ಟಿ ಅಂಶ. ಕಾರ್ಬನ್, ಆಕ್ಸಿಜನ್, ಹೈಡ್ರೋಜನ್, ನೈಟ್ರೋಜನ್, ಸಲ್ಫರ್, ಅಮಿನೋ ಆಸಿಡ್ಸ್ – ಇವು ಕೂದಲಿನ ಸ್ವಭಾವವನ್ನು ನಿರ್ಧರಿಸುತ್ತವೆ. ಕೂದಲು ಕೂಡ ಮೂಳೆಯಂತೆ ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಒಟ್ಟಿನಲ್ಲಿ ಕೂದಲನ್ನು ಗಮನಿಸಿ ದೇಹದ ಆಂತರಿಕ ಸ್ಥಿತಿಯನ್ನು ಗುರುತಿಸಬಹುದು.

ಪ್ರಭಾವಗಳು

ವ್ಯಕ್ತಿಯ ದೇಹಸ್ವಭಾವ ಹುಟ್ಟಿನಿಂದ ಬಂದಿರುತ್ತದೆ; ಬಹುತೇಕ ಅದನ್ನು ಬದಲಿಸಲು ಸಾಧ್ಯವಿಲ್ಲ. ಹುಟ್ಟುವಾಗ ಎಷ್ಟು ಕೇಶ-ರೋಮಕೂಪಗಳಿರುತ್ತವೆಯೋ ಅಷ್ಟೇ ಸಂಖ್ಯೆಯಲ್ಲಿ ಕೊನೆಯವರೆಗೂ ಇರುತ್ತವೆ. ಕೂದಲಿನ ಬಣ್ಣ, ರಚನೆ, ಉದುರುವಿಕೆ, ಬೆಳೆಯುವಿಕೆ, ಒರಟುತನ, ಜಿಗುಟುತನ ಮುಂತಾದ ಸ್ವಭಾವಗಳು ಕೂಡ ಹುಟ್ಟಿನಿಂದ ಬರುವ ಬಳುವಳಿ. ದೇಹ ಬೆಳೆದಂತೆ ವಯಸ್ಸಿಗೆ ತಕ್ಕ ಬದಲಾವಣೆ ಅನಿವಾರ್ಯ. ನಲವತ್ತು ದಾಟಿದ ನಂತರ ಎಲ್ಲಾ ಅಂಗಾಂಶಗಳಂತೆ ಕೂದಲಿನ ಪೋಷಣೆ, ಬೆಳವಣಿಗೆ, ರಿಪೇರಿಗಳು ಕಡಿಮೆಯಾಗತೊಡಗುತ್ತವೆ. ವಯಸ್ಕರಲ್ಲಿ ದಿನಕ್ಕೆ ಸುಮಾರು ಐವತ್ತರಿಂದ ನೂರು ಕೂದಲುಗಳು ಉದುರುವುದು ಸಹಜವೆಂದು ಒಂದು ಅಂಕಿ–ಅಂಶ. ಈ ಸಂಖ್ಯೆ ಕೂಡ ವಾತಾವರಣ, ಆಹಾರ, ನಿದ್ರೆ, ದೈನಂದಿನ ಚಟುವಟಿಕೆ, ತಲೆಸ್ನಾನ, ಮಾರ್ಜಕಗಳನ್ನೆಲ್ಲಾ ಆಧರಿಸಿರುತ್ತದೆ.

ದಿನವೂ ಉದುರಿದಂತೆ ಕೂದಲಿಗೆ ಸಿಗುವ ಪೋಷಣೆಯನ್ನು ಆಧರಿಸಿ ತಿಂಗಳಲ್ಲಿ ಸುಮಾರು ಏಳು ಮಿಲಿಮೀಟರ್‌ನಿಂದ ಒಂದೂವರೆ ಸೆಂಟಿಮೀಟರಿನಷ್ಟು ಉದ್ದವೂ ಬೆಳೆಯುತ್ತದೆ. ವಯಸ್ಸು ಮೀರಿದಂತೆ ಇದು ಕಡಿಮೆಯಾಗುತ್ತದೆ. ಕೇಶ-ರೋಮಕೂಪಗಳು ಯಾವುದೋ ಕಾರಣಕ್ಕೆ ಮುಚ್ಚಿ ಹೋದರೆ ಚರ್ಮದಾಚೆ ಕೂದಲು ಇಣುಕುವುದೇ ಇಲ್ಲ. ಬಿಸಿಲು, ಉಷ್ಣವಾತಾವರಣದಲ್ಲಿ ಕೆಲಸ, ಬಿಸಿಬಿಸಿ ನೀರಿನಿಂದ ತಲೆಸ್ನಾನ, ಬಿಸಿಲಿನಲ್ಲಿ ತಲೆ ಒಣಗಿಸುವುದು, ಹೇರ್ ಡ್ರೈಯರ್ ಬಳಕೆ, ಚಿಂತೆ-ಒತ್ತಡದ ದಿನಚರಿಯಲ್ಲಿ ಕೂದಲಬುಡಕ್ಕೆ ರಕ್ತದ ಒತ್ತಡ, ಉಷ್ಣತೆ ತಗುಲಿ ಉದುರುವ ತೀವ್ರತೆ ಹೆಚ್ಚಬಹುದು. ನಿದ್ದೆಗೆಡುವುದರಿಂದ ಜೈವಿಕಗಡಿಯಾರದ ಏರುಪೇರಿನಿಂದ ಪೋಷಣೆಯ ಕೊರತೆಯಾಗಿ ಬೆಳವಣಿಗೆ ಕುಂಠಿತವಾಗಬಹುದು. ಉಪ್ಪು, ಖಾರ, ಹುಳಿ, ಕ್ಷಾರೀಯ ಪದಾರ್ಥಗಳ ಸತತ ಸೇವನೆಯಿಂದ ಕೂದಲಿನ ಪೋಷಣೆಯಲ್ಲಿ ಏರುಪೇರಾಗುವುದರಿಂದ, ಬುಡಸಮೇತ ಉದುರುವುದನ್ನು ಗಮನಿಸಬಹುದು.

ಬಹಳ ದಿನಗಳು ಜ್ವರವನ್ನು ಅನುಭವಿಸುವುದು, ಸತತವಾಗಿ ರೋಗವೊಂದರಿಂದ ಬಳಲುವುದು, ತೀಕ್ಷ್ಣೌಷಧಗಳ ಸೇವನೆ, ಕೆಲವು ಚಿಕಿತ್ಸೆಗಳ ದುಷ್ಪರಿಣಾಮ - ಇವು ಕೂಡ ತಾತ್ಕಾಲಿಕವಾಗಿಯೂ ಅಥವಾ ಸ್ಥಿರವಾಗಿಯೂ ಕೂದಲಿನಲ್ಲಿ ಬದಲಾವಣೆಗಳನ್ನು ತರಬಹುದು. ಚಟುವಟಿಕೆರಹಿತ, ಸದಾ ಕುಳಿತು, ಮಲಗಿಯೇ ಇರುವ ದಿನಚರಿಯವರು, ಹವಾನಿಯಂತ್ರಿತ ವಾತಾವರಣದಲ್ಲಿಯೇ ಇರುವವರಿಗೆ, ರಾತ್ರಿ ಮಲಗುವಾಗ ವಿನಾ ಕಾರಣ ಎಣ್ಣೆ ಹಾಕಿಕೊಳ್ಳುವ ಅಭ್ಯಾಸದಿಂದ, ಸದಾ ಶೀತಲೀಕೃತ/ ಶೀತಲಾಹಾರ, ಜೀರ್ಣಕ್ಕೆ ಜಡವಾಗುವ ಮೈದಾಪದಾರ್ಥಗಳ ಸೇವನೆ, ಬೇಕರಿ ತಿನಿಸು, ಕರಿದ ಪದಾರ್ಥಗಳ ಸೇವನೆ, ಹಸಿವೆ-ಬಾಯಾರಿಕೆಯನ್ನು ಗಮನಿಸದೆ ಕುಡಿಯುತ್ತಾ-ತಿನ್ನುತ್ತಾ ಇರುವವರಿಗೆ, ತಡರಾತ್ರಿಯ ಆಹಾರಸೇವನೆಯ ಅಭ್ಯಾಸದಿಂದ ಕೂದಲಿನ ಬುಡದ ಸೂಕ್ಷ್ಮರಕ್ತನಾಳಗಳು ಮುಚ್ಚಿ, ಪೋಷಣೆಯೇ ತಲುಪದಂತೆ ತಡೆಯಾದರೂ ಕೂದಲಿನ ಬೆಳವಣಿಗೆ ಮಂದಗೊಳ್ಳುತ್ತದೆ.

ದೇಹದ ಇತರ ಅಂಗಾಂಶಗಳಂತೆ ಕೂದಲು ಕೂಡ ನಮ್ಮ ಆಹಾರ, ನಿದ್ರೆ, ಚಟುವಟಿಕೆಗಳ ಫಲಿತಾಂಶ ಎಂಬುದನ್ನು ಮರೆಯಬಾರದು.

ರಕ್ಷಣೆಗೆ ಸುಲಭೋಪಾಯಗಳು

ಸಿಹಿ, ಹುಳಿ, ಉಪ್ಪು, ಖಾರ, ಕಹಿ, ಒಗರುರುಚಿಯ ಆಹಾರಗಳೆಲ್ಲವೂ ಸೇವನೆಯಲ್ಲಿರಲಿ. ಆದರೆ, ದಿನವೂ ಉಪ್ಪು, ಹುಳಿ, ಖಾರಪ್ರಧಾನವಾದ ಆಹಾರಾಭ್ಯಾಸ ಬೇಡ. ಸಕಾಲದಲ್ಲಿ ಜೀರ್ಣವಾಗುವಂತೆ ಸೇವಿಸುವುದು ಆರೋಗ್ಯಕರ. ಕೂದಲಿನ ಸಹಜ ಹೊಳಪು, ಮೃದುತ್ವ, ಗಾಢತ್ವಕ್ಕೆ ಅಡುಗೆಯಲ್ಲಿ ಏಕದಳ, ದ್ವಿದಳ, ಮಾಂಸ, ಸೊಪ್ಪು-ತರಕಾರಿಗಳು, ಗಡ್ಡೆ-ಗೆಣಸು, ಹಾಲು, ಬೆಣ್ಣೆ-ತುಪ್ಪ, ಎಣ್ಣೆ-ಎಣ್ಣೆಕಾಳುಗಳು, ದಾಳಿಂಬೆ, ನೆಲ್ಲಿಕಾಯಿ, ಒಣದ್ರಾಕ್ಷಿ, ಅಂಜೂರ, ಖರ್ಜೂರ – ಇವುಗಳು ಬೇಕು. ಹೀರೆ, ಹಾಲುಗುಂಬಳ, ಬೂದುಗುಂಬಳ, ಪಡವಲ, ಪಾಲಕ್, ಹರಿವೆ, ದಂಟು, ಮೆಂತೆ, ಅಮೃತಬಳ್ಳಿಯ ಚಿಗುರು, ಒಂದೆಲಗ, ಕರಿಬೇವಿನ ಎಲೆಗಳ ಒಗ್ಗರಣೆಯೂ ಸಹಾಯಕ. ನಿತ್ಯವೂ ಮಜ್ಜಿಗೆ ಕುಡಿಯುವುದು, ಮೊಸರಿನ ನಿತ್ಯ ಸೇವನೆ, ರಾತ್ರಿ ಮೊಸರಿನ ಅಭ್ಯಾಸ, ಮಲಗುವಾಗ ಹಾಲು, ಹಣ್ಣು ಸೇವಿಸುವುದು ತಲೆಹೊಟ್ಟಿಗೆ ಕಾರಣವಾಗಿ ಕೂದಲನ್ನು ಬೆಳೆಯಗೊಡದಂತೆ ತಡೆಯಬಹುದು. ಆದ್ದರಿಂದ ರಾತ್ರಿಯ ಆಹಾರದಲ್ಲಿ ಇವು ಬೇಡ. ಉಪ್ಪಿನಕಾಯಿ, ಹುಳಿಬಂದ, ಫ್ರಿಜ್‌ನಲ್ಲಿಟ್ಟ ದೋಸೆ-ಇಡ್ಲಿಹಿಟ್ಟು, ಟೊಮೆಟೊ ಅತಿಬಳಕೆ, ಲಿಂಬೆಹುಳಿ, ಸೋಡಾ ಇವುಗಳ ಸತತ ಬಳಕೆ ಸಲ್ಲದು. ಮೇಲುಪ್ಪು, ಖಾರ, ಮಸಾಲೆ ಒಳಿತಲ್ಲ. ಬೇಗನೆ ಕೂದಲು ನೆರೆಯುವುದಕ್ಕೆ ಇವುಗಳೂ ಕಾರಣ.

ರಾತ್ರಿ ಬೇಗನೆ ನಿದ್ರೆ, ಮುಂಜಾನೆ ಬೇಗ ಎದ್ದು ಚಟುವಟಿಕೆ ಆರಂಭಿಸುವುದು, ಹಗಲಲ್ಲಿ ಮಲಗದೆ ದಿನಚರಿಯಲ್ಲಿ ವ್ಯವಸ್ಥಿತವಾಗಿರುವುದು ಒತ್ತಡ, ಚಿಂತೆ, ಗಡಿಬಿಡಿಯಿಂದ ದೂರವಿರಿಸಿ ಕೂದಲಿನ ಚೈತನ್ಯಕ್ಕೂ ಸಹಾಯಕ.

ಬಿಸಿಲು, ಗಾಳಿ, ಹಿಮ, ದೂಳು ಮೊದಲಾದ ಅತಿಯಾದ ವಾತಾವರಣದ ಏರುಪೇರಿನಿಂದ ಕೂದಲನ್ನು ರಕ್ಷಿಸಿಕೊಳ್ಳುವುದು. ಟೋಪಿ, ಪೇಟ, ಹಾಟ್, ಪಗಡಿ ಮೊದಲಾದ ತಲೆಯನ್ನು ಬಿಸಿಯಾಗಿಸದ ರಕ್ಷಕಗಳು. ಸತತವಾಗಿ ಹೆಲ್ಮೆಟ್ ಧಾರಣೆ ಕೂಡ ಕೂದಲಿಗೆ ಹಾನಿ. ತಲೆಸ್ನಾನಕ್ಕೆ ಹೂಬಿಸಿ ಅಥವಾ ತಣ್ಣೀರು ಉತ್ತಮ. ಸ್ನಾನಕ್ಕೂ ಮುನ್ನ ಕೊಬ್ಬರಿ ಎಣ್ಣೆಯಿಂದ ಕೂದಲಿನ ಬುಡಗಳಿಗೆ ಪೋಷಣೆ ನೀಡಬಹುದು.

ನಿತ್ಯವೂ ತಲೆಯ ಚರ್ಮಕ್ಕೆ ಎಣ್ಣೆ ಹಚ್ಚುವುದು ಕೇಶಗಳ ಬುಡವನ್ನು ಗಟ್ಟಿಯಾಗಿಸಿ, ಸಹಜವರ್ಣವನ್ನು ಕಾದಿಡುತ್ತದೆ. ತಲೆಗೆ ಏಣ್ಣೆಹಾಕುವುದು ಹಗಲಿನಲ್ಲಿ ಕ್ಷೇಮ. ಎರಡು-ಮೂರು ದಿನಗಳಿಗೊಮ್ಮೆ ತಲೆಸ್ನಾನವನ್ನೂ ಮಾಡುವುದು. ಬಹಳ ಬೆವರುವ ಮೈಯವರು, ಬೇಸಿಗೆಯಲ್ಲಿ, ಕರಾವಳಿಯ ಜನರಿಗೆ ನಿತ್ಯವೂ ತಲೆಸ್ನಾನ ಹಿತಕರ. ಕಡಿಮೆ ನೊರೆಬರುವ ಮೃದುಮಾರ್ಜಕಗಳ ಬಳಕೆಯಿರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT