ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಖ ಬದುಕಿನ ಎಚ್ಚರ

Last Updated 22 ನವೆಂಬರ್ 2019, 19:31 IST
ಅಕ್ಷರ ಗಾತ್ರ

ಸುಖ–ದುಃಖ ಅಡುಗೆಯಂತೆ; ಒಮ್ಮೆಮ್ಮೆ ತಿಳಿದೋ ತಿಳಿಯದೆಯೋ ಹದವಾದ ಪಾಕ, ಒಮ್ಮೊಮ್ಮೆ ಎಲ್ಲ ಇದ್ದರೂ ಏನೋ ಇಲ್ಲದ ಶೋಕ! ಇಹದ ಎಲ್ಲ ಸುಖಗಳೂ ಲೊಳಲೊಟ್ಟೆಯೇ?

ಎಲ್ಲ ನೋವನ್ನೂ ಮರೆಸಬಲ್ಲ ಸಂತಸ ಮನದ ಎಚ್ಚರವೇ ಸುಖ.

ಸುಖ ವೈಯಕ್ತಿಕ ಮೌಲ್ಯವೂ ಹೌದು, ಸಾಮಾಜಿಕ ಮೌಲ್ಯವೂ ಹೌದು.

ಜೀವನದ ಪುರುಷಾರ್ಥಗಳಲ್ಲಿ ಸುಖಕ್ಕೆ ಯಾವ ಸ್ಥಾನವಿದೆ? ಜೀವಕ್ಕೆ ಎಷ್ಟು ಸುಖ ಅವಶ್ಯಕ ಎಂಬ ಪ್ರಶ್ನೆಗಳೆಲ್ಲ ಕಂಡೂ ಕಾಣದಂತೆ ದಿನನಿತ್ಯವೂ (ಮುಖ್ಯವಾಗಿ ಬೆಳಗಿನ ಸಿಹಿ ನಿದ್ರೆಯನ್ನು ತೊರೆದು ಏಳಬೇಕಾದಾಗಲೆಲ್ಲ) ಮನದ ಪರದೆಯ ಮೇಲೆ ಹಾದು ಹೋಗುತ್ತಲೇ ಇರುತ್ತದೆ. ನಮ್ಮ ಸುಖದ ಕಲ್ಪನೆಯ ಮೂಲವೆಲ್ಲಿ ಎಂದು ಕೇಳಿದರೆ ನಿಸ್ಸಂಶಯವಾಗಿಯೂ ಸುಖದ ನಿದ್ರೆಯಲ್ಲಿ ಎಂದೇ ಹೇಳಬೇಕಾಗುತ್ತದೆ; ‘ಸುಖವಾಗಿದ್ದೀನಿ’ ಎಂಬ ಪರಿವೆಯೂ ಮೂಡದಷ್ಟು ಸುಖಸಾಗರದ ಒಳಗೆ ಕಳೆದು ಹೋಗುವುದು, ಎಚ್ಚರಾದ ಮೇಲೂ ಮೈ ಮನಗಳಲ್ಲಿ ಸುಳಿಯುತ್ತಲೇ ಇರುವ ಸುಖದ ನೆನಪು.

‘ಇಷ್ಟು ಸಾಕು ಇನ್ನೇನು ಬೇಡ’ ಎನ್ನಿಸುವಂತಹ, ಬೇರಾವುದರ ಪರಿವೆಯೂ ಇಲ್ಲದ ಮಗ್ನತೆ, ತಾದಾತ್ಮ್ಯ, ಭವದ ಎಲ್ಲ ಬವಣೆಗಳನ್ನು ಕ್ಷಣಕಾಲವಾದರೂ ಮರೆಸಿಬಿಡುವ ಅನುಭವವನ್ನು ನಾವು ‘ಸುಖ’ ಎಂದು ಕರೆಯುತ್ತೇವೆ. ಸುಖಕ್ಕೆ ಇಂದ್ರಿಯಗಳೇ ಉಪಕರಣ, ಬುದ್ಧಿ, ಮನಸ್ಸು ಕೂಡ ಇಂದ್ರಿಯಗಳೇ ಹೌದು ಎಂದು ನೋಡಿದಾಗ ಸುಖದ ಪರಿಧಿ ವಿಸ್ತಾರವಾಗುತ್ತ ಹೋಗುತ್ತದೆ. ಮೋಕ್ಷದ ಸ್ಥಿತಿಯಲ್ಲಿ ಇದೆ ಎನ್ನಲಾಗುವ ಆನಂದದಲ್ಲಿ ಸುಖದ ಅನುಭವ ಇದೆಯೇ, ಅದು ಯಾವ ರೀತಿಯದ್ದು ಎನ್ನುವ ಜಿಜ್ಞಾಸೆ ದಾರ್ಶನಿಕರದ್ದಾದರೆ; ಸುಖಕ್ಕೂ ಜೀವನ ಮೌಲ್ಯಗಳಿಗೂ ಏನಾದರೂ ಸಂಬಂಧ ಉಂಟೆ ಎಂಬುದು ಸುಖದ ಕ್ಷಣಿಕತೆಯನ್ನು, ಸುಖದೊಟ್ಟಿಗೆ ಬರುವ ವಿಷಯ ಲೋಲುಪತೆಯನ್ನು ಸದಾ ಅನುಮಾನದಿಂದ ನೋಡುವ ಸಂತರ ನಿರಂತರ ಪ್ರಶ್ನೆ.

ಸುಖ–ಅಸುಖ ಅಡುಗೆಯಂತೆ; ಒಮ್ಮೆಮ್ಮೆ ತಿಳಿದೋ ತಿಳಿಯದೆಯೋ ಹದವಾದ ಪಾಕ, ಒಮ್ಮೊಮ್ಮೆ ಎಲ್ಲ ಇದ್ದರೂ ಏನೋ ಇಲ್ಲದ ಶೋಕ. ಇಹದ ಎಲ್ಲ ಸುಖಗಳೂ ಲೊಳಲೊಟ್ಟೆಯೇ? ಕ್ಷಣ ಭಂಗುರತೆಯೇ ಸುಖದ ಇನ್ನೊಂದು ಹೆಸರೇ? ಸುಖವೇನೋ ಕ್ಷಣಿಕ ಆದರೆ ಸುಖದ ನೆನಪು ಶಾಶ್ವತವಲ್ಲವೇ?, ಹೀಗಿದ್ದರೂ ಸುಖವು ಹಕ್ಕಿಯೊಂದು ಹಾರಿ ಬಂದು ಅರೆಘಳಿಗೆ ಕೊಂಬೆಯ ಮೇಲೆ ಕೂತು ಹಾರಿಹೋಗುವಂತಹ ಯಾದೃಚ್ಛಿಕ ಅನುಭವ ಎಂಬ ವಿಷಾದವೇತಕ್ಕೆ? ಬೆಳಗ್ಗೆ ಅರಳಿದ ಹೂವು ಸಂಜೆಗೆ ಬಾಡಿದರೂ ಅದರ ಘಮ, ಚೆಲುವು ಕಾಲದ ಪುಟಗಳಲ್ಲಿ ಅನಂತ ಕಾಲವೂ ಇರುವಂತಹದ್ದಲವೆ?

ನೋವು ಮಿತಿಮೀರಿದಾಗ ಏನಾಗುತ್ತದೆ? ಪ್ರಜ್ಞೆ ತಪ್ಪುತ್ತದೆ. ವಿಷವನ್ನು ಒಂದೇ ಗುಟುಕಿಗೆ ಕುಡಿದರೆ? ಪ್ರಾಣ ಹೋಗುತ್ತದೆ. ದುಃಖ ಅತಿಯಾದರೆ? ಸಂವೇದನೆ ಸಾಯುತ್ತದೆ. ಸುಖವು ದುಃಖದ ವಿರುದ್ಧಪದ ಅಂತ ನಾವು ಸಾಮಾನ್ಯವಾಗಿ ತಿಳಿಯುವುದಾದರೂ ಸುಖದ ಅನುಭವವೇ ಇಲ್ಲದೆ ದುಃಖದ ಅರಿವಾಗುವುದು ಕಷ್ಟ. ನಮ್ಮನ್ನು ಯಾವುದೋ ಶೋಧನೆಯ ಕಡೆಗೆ, ಸೃಜನಾತ್ಮಕ ಜೀವನದ ಕಡೆಗೆ ಕರೆದುಕೊಂಡು ಹೋಗುವ ಶಕ್ತಿ ಅಸಮಾಧಾನ, ನೋವು, ದುಃಖಕ್ಕೆ ಇದೆಯಾದರೂ ಸುಖದ ಅನುಭವವಿಲ್ಲದೆ ರಚನಾತ್ಮಕವಾದ ದುಃಖದ ಪ್ರೇರಣೆಗೆ ನಾವು ಸಂವೇದನಾಶೀಲರಾಗಿರುವುದು ಸಾಧ್ಯವಿಲ್ಲ. ದುಃಖವನ್ನು, ಬದುಕಿನ ಕಹಿಯನ್ನು ಒಂದು ಮಿತಿಯವರೆಗೆ ಸಹಿಸಬಹುದಷ್ಟೇ, ಮೀರಿದಾಗ ಮನುಷ್ಯ ಮನುಷ್ಯನಾಗಿರುವುದಿಲ್ಲ – ಮರದ ಕೊರಡಾಗಿರುತ್ತಾನೆ, ಜಡತ್ವ ಆವರಿಸಿ ಬದುಕಿನ ಶ್ರೇಷ್ಠತೆಗೆ ವಿಮುಖಳಾಗಿ ಸದಾ ಕಹಿಯನ್ನೇ ಕಾರುವ ವಿಚಿತ್ರ ಜಂತುವಾಗಿಬಿಡುತ್ತಾಳೆ. ಸುತ್ತಲಿನ ಪ್ರಪಂಚಕ್ಕೆ, ಸಹ ಜೀವಿಗಳಿಗೆ ಭಾರವಾಗುತ್ತಾನೆ, ಅರ್ಥವಾಗದ ಅಸಂಬದ್ಧತೆಯಾಗುತ್ತಾಳೆ.

ಬದುಕಿನ ಎಚ್ಚರವನ್ನು ಕಾಪಾಡುವುದಕ್ಕೆ, ಬದುಕಿನಲ್ಲಿ ನಡೆಯುತ್ತಿರುವುದೇನು ಎಂಬ ಪರಿಜ್ಞಾನ ಉಂಟಾಗುವುದಕ್ಕೆ ಸುಖದ ಅನುಭವ ಬೇಕೇಬೇಕು. ರಾಕ್ಷಸನೆಂದರೆ ಬೇರಾರೂ ಅಲ್ಲ ಸುಖದ ಲವಲೇಶವೂ ಕಾಣದೆ ವಿರೂಪಗೊಂಡು ವಿಕೃತಿ ತಳೆದ ಮನುಷ್ಯರೇ. ಶೈಶವದಲ್ಲಿ ಬಹು ಮಹತ್ವದ್ದಾದ ಸುಖನಿದ್ರೆ, ಸ್ಪರ್ಶಸುಖ, ಸಮೃದ್ಧ ಆಹಾರ ಕಾಣದವರು ಮುಂದೆ ಅನ್ಯಾಯದ ಹಾದಿ ಹಿಡಿಯುವುದು ಅಪರೂಪವೇನಲ್ಲ. ಸುಖಕ್ಕೆ ಮನುಷ್ಯ ಜೀವನದ ಇತರ ಮೌಲ್ಯಗಳೊಟ್ಟಿಗಿನ ಸಂಬಂಧವೇನು ಎಂದು ಅರಿಯುವುದಕ್ಕೆ ಮುನ್ನ ಸುಖವೇ ಒಂದು ಮೌಲ್ಯ ಎಂಬುದನ್ನು ಮನಗಾಣಬೇಕು. ಸುಖದ ಅನುಭವ ವೈಯುಕ್ತಿಕವಾದರೂ ಒಂದು ಮೌಲ್ಯವಾಗಿ ಅದರ ಅರಸುವಿಕೆ ಸಾಮಾಜಿಕವೇ. ಹೀಗಾಗಿ ಸುಖದ ಕಲ್ಪನೆಯಲ್ಲಿ ಹಿಂಸೆಗೆ ಜಾಗವಿಲ್ಲ. ಸುಖಕ್ಕೆ ಸುಖವೇ ಗುರಿಯಲ್ಲದಿರಬಹುದು, ಅದು ನೋವನ್ನು ಮರೆಸುವ ಅರಿವಳಿಕೆಯಾಗಿಯೂ, ಜೀವನವನ್ನು ಸಂಭ್ರಮಿಸಲು ಬೇಕಾದ ಚೈತನ್ಯಕ್ಕೆ ಟಾನಿಕ್‌ನಂತೆ ಒದಗುತ್ತದೆ, ಬದುಕನ್ನು ಹಿಂತಿರುಗಿ ನೋಡುವ ಧೈರ್ಯಕ್ಕೆ ಆಸರೆಯಾಗುತ್ತದೆ.

ಬದುಕಿನ ಜಾಡನ್ನು ಸುಖದ ಹೆಜ್ಜೆ ಗುರುತುಗಳಿಂದಲ್ಲದೆ ತಿಳಿಯುವ ಬೇರೆ ಬಗೆಯುಂಟೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT