ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರೋಗ್ಯ: ರಕ್ತಹೀನತೆಗೆ ಪೌಷ್ಟಿಕ ಆಹಾರವೇ ಮದ್ದು

Published : 9 ಆಗಸ್ಟ್ 2024, 23:30 IST
Last Updated : 9 ಆಗಸ್ಟ್ 2024, 23:30 IST
ಫಾಲೋ ಮಾಡಿ
Comments

ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾದರೆ ಅದುವೇ ರಕ್ತಹೀನತೆ. ಇದನ್ನೇ ಅನಿಮೀಯಾ ಎಂದು ಕರೆಯಲಾಗುತ್ತದೆ. ರಕ್ತಹೀನತೆ ಸಾಮಾನ್ಯವಾಗಿ ಮಹಿಳೆಯರು, ಮಕ್ಕಳು, ಗರ್ಭಿಣಿಯರು, ವೃದ್ಧರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ಪ್ರಕಾರ ರಕ್ತಹೀನತೆಯಿಂದ ಮೂರು ವರ್ಷದೊಳಗಿನ ಶೇ 59ರಷ್ಟು ಮಕ್ಕಳು ಬಳಲುತ್ತಿದ್ದರೆ, ಶೇ 53ರಷ್ಟು ಮಹಿಳೆಯರಲ್ಲಿ ಕಂಡುಬಂದಿದೆ.

 ಕೆಂಪು ರಕ್ತಕಣಗಳ ಪ್ರಾಮುಖ್ಯತೆ: ದೇಹದ ನಾನಾ ಭಾಗಗಳಿಗೆ ಅಗತ್ಯವಿರುವ ಆಮ್ಲಜನಕ ಪೂರೈಸುವುದು ಕೆಂಪು ರಕ್ತಕಣಗಳು. ಇದು ಕೊರೆತೆಯಾದರೆ ದೇಹದಲ್ಲಿ ವಿಪರೀತ ಸುಸ್ತು, ನಿಶ್ಯಕ್ತಿ ಸಮಸ್ಯೆ ಉಂಟಾಗಬಹುದು. ಇದು ತೀವ್ರಗೊಂಡರೆ ಉಸಿರಾಟಕ್ಕೂ ತೊಂದರೆಯಾಗುವ ಸಾಧ್ಯತೆ ಇರುತ್ತದೆ.

 ದೇಹದ ರಕ್ತದಲ್ಲಿ ಉತ್ಪತ್ತಿಯಾಗುವ ಬಿಳಿ ರಕ್ತಕಣಗಳು (ಸೋಂಕಿನ ವಿರುದ್ಧ ಹೋರಾಡುತ್ತವೆ), ಪ್ಲೇಟ್ಲೆಟ್‌ (ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ), ಕೆಂಪು ರಕ್ತಕಣ (ಆಮ್ಲಜನಕವನ್ನು ದೇಹಕ್ಕೆ ಪೂರೈಸುವ ಕೆಲಸ ಮಾಡುತ್ತದೆ).

ದೇಹದ ಮೂಳೆಯಲ್ಲಿರುವ ಮಜ್ಜೆಯ ಅಂಶವು ಕಬ್ಬಿಣ, ವಿಟಮಿನ್‌, ಬಿ–12 ಮತ್ತು ಫೋಲೇಟ್‌ನಂಥ ಪೋಷಕಾಂಶಗಳನ್ನು ಬಳಸಿಕೊಂಡು ಕೆಂಪು ರಕ್ತಕಣಗಳನ್ನು ಸೃಷ್ಟಿಸುತ್ತದೆ. ಈ ಜೀವಕೋಶಗಳಲ್ಲಿ ಹಿಮೋಗ್ಲೋಬಿನ್‌ ಹೆಚ್ಚಾಗಿರುತ್ತದೆ. 

ಎಷ್ಟಿರಬೇಕು?

ಪುರುಷರ ಸಾಮಾನ್ಯ ಹಿಮೊಗ್ಲೋಬಿನ್ ಮಟ್ಟ ಪ್ರತಿ ಡೆಸಿಲೀಟರ್‌ಗೆ (gm/dL) 14.0 ರಿಂದ 17.5 ಗ್ರಾಂವರೆಗೆ ಇರುತ್ತದೆ. ಆದರೆ ಮಹಿಳೆಯರ ಸಾಮಾನ್ಯ ಹಿಮೋಗ್ಲೋಬಿನ್ ಮಟ್ಟಗಳು 12.3 ರಿಂದ 15.3 gm/dLವರೆಗೆ ಇರುತ್ತದೆ.

ಮಹಿಳೆಯರಿಗೆ 12 ಗ್ರಾಂ/ಡಿಎಲ್ ಅಥವಾ ಅದಕ್ಕಿಂತ ಕಡಿಮೆ ಮತ್ತು ಪುರುಷರಲ್ಲಿ 13 ಗ್ರಾಂ/ಡಿಎಲ್ ಅಥವಾ ಅದಕ್ಕಿಂತ ಕಡಿಮೆ ಪ್ರಮಾಣದ ಹಿಮೊಗ್ಲೋಬಿನ್‌ ಇದ್ದರೆ ಅದನ್ನು ರಕ್ತಹೀನತೆ ಎನ್ನಬಹುದು.

ಕಾರಣಗಳೇನು?

ರಕ್ತಹೀನತೆಗೆ ಹಲವು ಕಾರಣಗಳಿವೆ. ಕಬ್ಬಿಣದ ಕೊರತೆಯೂ ರಕ್ತಹೀನತೆಯನ್ನು ತಂದೊಡ್ಡಬಲ್ಲದು. ಹಿಮೊಗ್ಲೋಬಿನ್‌ ಉತ್ಪಾದನೆಗೆ ಕಬ್ಬಿಣದಂಶ ಬಹುಮುಖ್ಯ. ಇದರ ಕೊರತೆ ಉಂಟಾದರೆ ಕೆಂಪುರಕ್ತ ಕಣಗಳ ಸಂಖ್ಯೆ ಕಡಿಮೆಯಾಗುತ್ತದೆ.

ವಿಟಮಿನ್‌ಗಳ ಕೊರತೆ, ಬಿ–12 ಕೊರತೆ, ಫೋಲೆಟ್‌ಗಳ ಕೊರತೆಯಿಂದಾಗಿ ರಕ್ತಹೀನತೆ ಉಂಟಾಗಬಹುದು. ದೀರ್ಘಕಾಲದ ಕಾಯಿಲೆಗಳಿಂದಾಗಿ ಮೂಳೆ ಮಜ್ಜೆಯು ರಕ್ತಕಣಗಳನ್ನು ಉತ್ಪಾದಿಸುವಲ್ಲಿ ಅಸಮರ್ಥಗೊಳ್ಳಬಹುದು. ಮೂಳೆ ಮಜ್ಜೆಗೆ ಸಂಬಂಧಿಸಿದ ಕಾಯಿಲೆಗಳೂ ರಕ್ತಹೀನತೆಯನ್ನು ಉಂಟು ಮಾಡುತ್ತವೆ ಮತ್ತು ರಕ್ತಕಣಗಳ ಉತ್ಪಾದನೆಗೆ ಅಡ್ಡಿ ಉಂಟು ಮಾಡುತ್ತವೆ.

ತೀವ್ರತರದ ರಕ್ತಹೀನತೆಗಳು ಪ್ರಾಣಕ್ಕೆ ಆಪತ್ತು ತರಬಹುದು. ಹಿಮೋಲಿಟಿಕ್‌ ಅನಿಮಿಯಾ ಕಾಡುತ್ತಿರುವ ವ್ಯಕ್ತಿಯಲ್ಲಿ ಕೆಂಪುರಕ್ತಕಣಗಳು ತ್ವರಿತವಾಗಿ ನಾಶಗೊಳ್ಳುತ್ತ ಹೋಗುತ್ತದೆ. ಸಿಕಲ್‌ ಸೆಲ್‌ ಅನಿಮಿಯಾ. ಇದು ಆನುವಂಶೀಯವಾಗಿ ಕಾಡುವ ರೋಗವಾಗಿದ್ದು, ರಕ್ತ ಕಣಗಳು ಕುಡುಗೋಲು ಆಕಾರ ಪಡೆದು, ಆಮ್ಲಜನಕವನ್ನು ಸಾಗಿಸುವ ಕಾರ್ಯದಲ್ಲಿ ಅಸಮರ್ಥಗೊಳ್ಳುತ್ತವೆ.

ಅಪೌಷ್ಟಿಕ ಆಹಾರ ಸೇವನೆ, ವಿಟಮಿನ್‌ ಹೀರಿಕೊಳ್ಳುವ ಸಮಸ್ಯೆ, ಮುಟ್ಟು ಮತ್ತು ಗರ್ಭಾವಸ್ಥೆಯಲ್ಲಿ ಉಂಟಾಗುವ ರಕ್ತದ ಪೋಲು, ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳು ರಕ್ತಹೀನತೆಯನ್ನು ತರಬಹುದು. ತೆಳು ಚರ್ಮ, ದೌರ್ಬಲ್ಯ, ನಿಶ್ಯಕ್ತಿ ಮತ್ತು ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳಬಹುದು.

ಹೀಗೆ ತಡೆಗಟ್ಟಬಹುದು: ನಿಯಮಿತವಾಗಿ ರಕ್ತಪರೀಕ್ಷೆ ಮಾಡಿಸಿ, ರಕ್ತಹೀನತೆ ಇದೆಯೇ? ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ರಕ್ತಹೀನತೆ ಇದ್ದರೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವನ್ನು ಹೆಚ್ಚು ಸೇವನೆ ಮಾಡಿ. ಕಬ್ಬಿಣದ ಅಂಶಕ್ಕಾಗಿ ಕೋಳಿ, ಮೀನು, ಉದ್ದಿನಬೇಳೆ, ಕಡಲೆ, ಪಾಲಕ್‌, ಬೆಲ್ಲವನ್ನು ಸೇವಿಸಿ. ಫೋಲೇಟ್‌ ಅಂಶಕ್ಕಾಗಿ ಹಸಿರು ಎಲೆಗಳಿರುವ ತರಕಾರಿ, ಬಾಳೆಹಣ್ಣುಗಳು, ಕಿತ್ತಳೆ ಹಾಗೂ ದ್ವಿದಳ ಧಾನ್ಯಗಳನ್ನು ಸೇವಿಸಬೇಕು. ಬಿ–12 ಪೋಷಕಾಂಶಕ್ಕಾಗಿ ಹಾಲು ಮತ್ತು ಪನೀರ್‌ನಂಥ ಡೇರಿ ಉತ್ಪನ್ನಗಳ ಸೇವನೆ ಇರಲಿ. ವಿಟಮಿನ್‌ ಸಿ ಅಂಶ ಹೇರಳವಾಗಿರುವ ಹಣ್ಣುಗಳು ಹಾಗೂ ತರಕಾರಿಯನ್ನು ಹೆಚ್ಚು ಸೇವಿಸಬೇಕು. ಇದು ಕಬ್ಬಿಣದ ಅಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಡಾ. ರಾಜೀವ್‌ ಪ್ರೇಮನಾಥ್‌, ಶಸ್ತ್ರಚಿಕಿತ್ಸಕ, ರಾಮಕೃಷ್ಣ ಆಸ್ಪತ್ರೆ, ಜಯನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT