ಮಂಗಳವಾರ, ಮಾರ್ಚ್ 21, 2023
20 °C

ಮನೆಯಂಗಳದಲ್ಲಿದೆ ಆರೋಗ್ಯದ ಗುಟ್ಟು

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಬಂದಾಗಿನಿಂದ ಜನರು ತಮ್ಮ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದರೊಂದಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಮನೆಯಂಗಳದಲ್ಲಿ ಬೆಳೆಯುವ ಹಲವು ಸಸ್ಯ ಹಾಗೂ ಗಿಡಮೂಲಿಕೆಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ, ಹಲವು ಆರೋಗ್ಯ ಸಮಸ್ಯೆಯನ್ನು ನಿವಾರಿಸುತ್ತವೆ. ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇದರ ವತಿಯಿಂದ ನಡೆದ ವಿಡಿಯೊ ಸಂವಾದ ಕಾರ್ಯಕ್ರಮದಲ್ಲಿ ದಿನನಿತ್ಯದ ಆಹಾರದಲ್ಲಿ ಮನೆಯಂಗಳದ ಸಸ್ಯಗಳ ಉಪಯೋಗದ ಕುರಿತು ತಿಳಿಸಿದ್ದಾರೆ ಪ್ರಗತಿಪರ ಕೃಷಿಕರಾದ ಆರೂರು ಮಂಜುನಾಥ ರಾವ್‌.

ದಿನಕ್ಕೊಂದು ತಂಬುಳಿ: ಪ್ರತಿನಿತ್ಯ ಸಸ್ಯಗಳ ಚಿಗುರು, ಹೂವು, ಕಾಯಿ, ಬೀಜ, ಕಾಂಡ ಮುಂತಾದ ಸೇವನೆಗೆ ಯೋಗ್ಯವಾದ ಸಸ್ಯದ ಭಾಗದಿಂದ ತಯಾರಿಸಿದ ತಂಬುಳಿ ರೋಗ ನಿರೋಧಕ ಹಾಗೂ ವ್ಯಾಧಿ ನಿವಾರಕವೂ ಹೌದು. ತಂಬುಳಿಗೆ ಬಳಸುವ ಶುಂಠಿ, ಜೀರಿಗೆ, ಕಾಳುಮೆಣಸು, ಕರಿಬೇವು, ಮಜ್ಜಿಗೆ ಜೀರ್ಣಕಾರಿ ಹಾಗೂ ಇದರಲ್ಲಿ ಶೇ 100 ರಷ್ಟು ಪೌಷ್ಟಿಕಾಂಶವಿದೆ.

ಅಮೃತಬಳ್ಳಿ: ಮನೆಯಂಗಳದಲ್ಲಿ ಸುಲಭವಾಗಿ ಬೆಳೆಯಲು ಸಾಧ್ಯವಿರುವ ಅಮೃತಬಳ್ಳಿ ಹೃದ್ರೋಗ, ಮೂಲವ್ಯಾಧಿ, ಮಧುಮೇಹ, ಚರ್ಮರೋಗ, ಜ್ವರ, ಕೆಮ್ಮು, ರಕ್ತದೊತ್ತಡ, ಕಾಮಾಲೆ, ಹಾಲಿನ ಕೊರತೆ, ನರ ದೌರ್ಬಲ್ಯ, ರಕ್ತಹೀನತೆ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದರಿಂದ ಕಷಾಯ ತಯಾರಿಸಿಕೊಂಡು ಕುಡಿಯಬಹುದು.

ಜಲಬ್ರಾಹ್ಮಿ: ಮೆದುಳು, ನರದೌರ್ಬಲ್ಯ, ತಲೆನೋವು, ನಿದ್ರಾಹೀನತೆ, ತಲೆಕೂದಲ ಬೆಳವಣಿಗೆ, ತೊದಲು, ಮೂರ್ಛೆ ಸಮಸ್ಯೆ ಇರುವವರು ಜಲಬ್ರಾಹ್ಮಿ ಸೊಪ್ಪನ್ನು ಸೇವಿಸಬಹುದು.

ನೆಲನೆಲ್ಲಿ: ಕಾಮಾಲೆ, ಮೂತ್ರಕೋಶದಲ್ಲಿ ಕಲ್ಲು, ಋತುಶೂಲೆ, ಚರ್ಮರೋಗ, ಅಜೀರ್ಣದಂತಹ ಸಮಸ್ಯೆ ಇರುವವರು ನೆಲನೆಲ್ಲಿಯನ್ನು ಸೇವಿಸಬಹುದು.

ಹಾಲುಕುಡಿ ಅಥವಾ ನಾಗಾರ್ಜುನಿ: ಇದರ ಸೇವನೆಯಿಂದ ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶವನ್ನು ಹೆಚ್ಚಿಸಿಕೊಳ್ಳಬಹುದು. ಅಜೀರ್ಣಕ್ಕೆ ಸಂಬಂಧಿಸಿದ ತೊಂದರೆ, ಚರ್ಮರೋಗ, ಕಣ್ಣಿನ ತೊಂದರೆ, ಹೊಟ್ಟೆನೋವು ಬೇಧಿ, ಕೆಮ್ಮು, ಉಬ್ಬಸ, ಗಜಕರ್ಣ, ಮೈಕೈನೋವು, ಡೆಂಗಿ ಮುಂತಾದ ಸಮಸ್ಯೆ ಹಾಗೂ ಕಾಯಿಲೆಗಳಿಗೆ ಇದರಿಂದ ಪರಿಹಾರ ಕಂಡುಕೊಳ್ಳಬಹುದು.

ಹರಿತ ಮಂಜರಿ: ಹರಿತ ಮಂಜರಿ ಸೇವನೆಯಿಂದ ಅರೆ ತಲೆನೋವು ಅಥವಾ ಮೈಗ್ರೇನ್ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೂ ಇದು ಸಹಕಾರಿ.


ಹರಿತ ಮಂಜರಿ

ನುಗ್ಗೆಸೊಪ್ಪು: ನುಗ್ಗೆಕಾಯಿ ಸೇವನೆ ದೇಹಾರೋಗ್ಯಕ್ಕೆ ಉತ್ತಮ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ನುಗ್ಗೆಸೊಪ್ಪಿನ ಸೇವನೆಯಿಂದಲೂ ಹಲವು ರೀತಿಯ ಉಪಯೋಗಗಳಿವೆ. ಇದು ಮೂಲವ್ಯಾಧಿ, ಇರುಳುಗಣ್ಣು, ನರದೌರ್ಬಲ್ಯ, ಕೆಮ್ಮು ಮುಂತಾದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಇದರೊಂದಿಗೆ ನುಗ್ಗೆಸೊಪ್ಪಿನ ಸೇವನೆಯಿಂದ ಶಕ್ತಿ ವರ್ಧಿಸಿಕೊಳ್ಳಬಹುದು, ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದರಲ್ಲಿ ಹೇರಳ ಕಬ್ಬಿಣಾಂಶ ಇರುವುದರಿಂದ ಸ್ತ್ರೀಯರಿಗೆ ಉತ್ತಮ.

ಚಕ್ರಮುನಿ: ಇದರ ಸೇವನೆಯಿಂದ ದೇಹದಲ್ಲಿ ವಿವಿಧ ಜೀವಸತ್ವಗಳ ಪ್ರಮಾಣ ಹೆಚ್ಚುತ್ತದೆ, ಕಬ್ಬಿಣಾಂಶದ ಪ್ರಮಾಣ ಹೆಚ್ಚುತ್ತದೆ ಹಾಗೂ ಮಲಬದ್ಧತೆಯಂತಹ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

ನಾಚಿಕೆಮುಳ್ಳು ಅಥವಾ ಮುಟ್ಟಿದರೆ ಮುನಿ ಸಸ್ಯ: ಇದರ ಕಷಾಯದ ಸೇವನೆಯಿಂದ ಮಲಬದ್ಧತೆ ಹಾಗೂ ಮೂಲವ್ಯಾಧಿ ನಿವಾರಣೆಯಾಗುತ್ತದೆ. ಇದರ ರಸದ ಲೇಪನದಿಂದ ಗಾಯ ಬೇಗನೆ ವಾಸಿಯಾಗುತ್ತದೆ.

ಹೀರೆಕಾಯಿ: ಹೀರೆಕಾಯಿ ಸೇವನೆಯು ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಮೂಗಿನಿಂದ ಮತ್ತು ಆಸನದಿಂದ ಬರುವ ರಕ್ತಶಮನ, ಕೆಮ್ಮು, ಮೂಲವ್ಯಾಧಿ ನಿವಾರಕ, ಪಿತ್ತ–ಜ್ವರಕ್ಕೆ ಪರಿಹಾರ ನೀಡುತ್ತದೆ.

ದಾಸವಾಳ: ದಾಸವಾಳ ಸೊಪ್ಪು ಕೂದಲಿನ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ನು ರುಬ್ಬಿ ಕೂದಲಿಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ, ಕೂದಲು ಸೊಂಪಾಗಿ ಬೆಳೆಯಲು ನೆರವಾಗುತ್ತದೆ. ಅಲ್ಲದೇ ಇದು ಮುಟ್ಟಿನ ಸಮಸ್ಯೆ ನಿವಾರಕವೂ ಹೌದು. ದಾಸವಾಳದ ಹೂವು ಮೂತ್ರದ ಸೋಂಕಿನ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಇಲಿಕಿವಿ: ಮನೆಯ ಪರಿಸರದಲ್ಲಿ ಕಸದಂತೆ ಬೆಳೆಯುವ ಇಲಿಕಿವಿ ಸಸ್ಯದ ಎಲೆಯ ಸೇವನೆಯಿಂದ ಜೀರ್ಣಕ್ರಿಯೆಯನ್ನು ಹೆಚ್ಚಿಸಿಕೊಳ್ಳಬಹುದು. ಇದು ರಕ್ತಹೀನತೆಯನ್ನು ಕಡಿಮೆ ಮಾಡಲು ಸಹಕಾರಿ.


ಇಲಿಕಿವಿ

ಕವಳೆಕಾಯಿ: ಕವಳೆಕಾಯಿಯಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಇದು ಜೀರ್ಣಕಾರಿ. ಅದರೊಂದಿಗೆ ಅತಿತೂಕ ಹಾಗೂ ಬೊಜ್ಜು ನಿವಾರಕವೂ ಹೌದು.

ಶತಾವರಿ: ಶತಾವರಿ ಸೇವನೆಯಿಂದ ಎದೆಹಾಲಿನ ಕೊರತೆಯನ್ನು ನೀಗಿಸಿಕೊಳ್ಳಬಹುದು. ವೃದ್ಧಾಪ್ಯದ ಸಮಸ್ಯೆ, ಹೃದಯ ದೌರ್ಬಲ್ಯ, ಅಪಸ್ಮಾರ, ಜ್ವರದಂತಹ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು.

ಹುಣಸೆ: ಹುಣಸೆಹಣ್ಣಿನ ಅತಿಯಾದ ಸೇವನೆ ಒಳ್ಳೆಯದಲ್ಲ ಎನ್ನುತ್ತಾರೆ. ಆದರೆ ಹುಣಸೆಯ ಚಿಗುರು ಸೇವನೆ ಮಾಡುವುದರಿಂದ ಹಲವು ದೈಹಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ತಲೆನೋವು, ಮೂಲವ್ಯಾಧಿ, ಅಜೀರ್ಣ, ಹುಳ್ಳುಕಡ್ಡಿ ನಿವಾರಣೆಗೆ ಇದು ಸಹಕಾರಿ.

ಪಾಠಾ ಅಥವಾ ಅಗಳು ಶುಂಠಿ: ಇದು ಕಣ್ಣಿನ ಸಮಸ್ಯೆ, ತಲೆಹೊಟ್ಟು, ಹೇನು, ಹೊಟ್ಟೆ ಉರಿ, ಉರಿ ಮೂತ್ರ, ಮೂಲವ್ಯಾಧಿ ಮುಂತಾದವುಗಳಿಗೆ ಪರಿಹಾರ ನೀಡುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು