ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Health Tips: ಹೃದಯದ ಆರೋಗ್ಯಕ್ಕೆ ಬೇಕು ಬಾಯಿಯ ಸ್ವಚ್ಛತೆ

Last Updated 1 ಅಕ್ಟೋಬರ್ 2022, 8:49 IST
ಅಕ್ಷರ ಗಾತ್ರ

ಬಾಯಿ ಅಥವಾ ಹಲ್ಲುಗಳಿಗೂ ದೇಹದ ಇತರೆ ಅಂಗಗಳಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಸಾಮಾನ್ಯ ಜನರಲ್ಲಿ ನಂಬಿಕೆಯಾಗಿದೆ. ಆದರೆ, ಬಾಯಿ ಅನೇಕ ದೈಹಿಕ ಸಮಸ್ಯೆಗಳ ಕೈಗನ್ನಡಿ. ಹಾಗೆಯೇ ದಂತ ಸಮಸ್ಯೆಗಳು ಅಥವಾ ಬಾಯಿಯ ಸ್ವಚ್ಛತೆಯ ಕೊರತೆ ಇತರೆ ದೈಹಿಕ ಸಮಸ್ಯೆಗಳಾದ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿರಬಹುದು ಅಥವಾ ಹೃದಯ ಸಂಬಂಧಿ ಕಾಯಿಲೆಗಳ ಸಂಕೀರ್ಣತೆಗಳನ್ನು ಉಲ್ಭಣಿಸಬಹುದಾಗಿದೆ.

ಬಾಯಿಯ ಸ್ವಚ್ಛತೆಯ ಕೊರತೆಯಿಂದ ಗರ್ಭಿಣಿಯರಲ್ಲಿ ಕಡಿಮೆ ತೂಕದ ಮಗುವಿನ ಜನನ, ಅವಧಿಗೆ ಮುನ್ನ ಪ್ರಸವ ಮುಂತಾದ ಸಂಕೀರ್ಣತೆಗಳನ್ನು ಎದುರಿಸಬೇಕಾಗುತ್ತದೆ. ಹಾಗೆಯೇ ಹೃದಯ ಹಾಗೂ ಬಾಯಿಯ ಸ್ವಚ್ಛತೆಗೂ ಸಂಬಂಧವಿರುವುದು ಅಧ್ಯಯನಗಳಿಂದ ತಿಳಿದುಬಂದಿದೆ.

ಹಲ್ಲುಗಳ ಸ್ವಚ್ಛತೆಯ ಕೊರತೆಯಿಂದ ಹಲ್ಲಿನ ಮೇಲೆ ನೆಲೆಸಿರುವ ಆಹಾರದ ಮೇಲೆ ಲಾಲಾರಸದಲ್ಲಿನ ಕ್ಯಾಲ್ಸಿಯಂ ಹಾಗೂ ಇತರೆ ಖನಿಜಾಂಶಗಳು ಸೇರಿಕೊಂಡು ಗಟ್ಟಿಯಾಗಿ ಕೀಚು ಅಥವಾ ಕ್ಯಾಲ್ ಕುಲಸ್‌ಗೆ (CALCULUS) ಕಾರಣವಾಗುತ್ತದೆ. ಧೀರ್ಘಕಾಲ ಈ ಪ್ರಕ್ರಿಯೆ ಮುಂದುವರಿದಲ್ಲಿ ವಸಡಿನ ಉರಿಯೂತ, ರಕ್ತಸ್ರಾವ, ಕೀವು ತುಂಬಿಕೊಂಡು ವಸಡಿನ ಆರೋಗ್ಯದಲ್ಲಿ ವ್ಯತ್ಯಯವಾಗುತ್ತದೆ. ಹೃದಯ ಕಾಯಿಲೆಗಳಲ್ಲಿ ಒಂದಾದ ಅಥೆರೋ ಸ್ಕ್ಲೀರೋಟಿಕ್ ಕಾರ್ಡಿಯೋ ವ್ಯಾಸ್ಕುಲರ್ ಕಾಯಿಲೆಯಲ್ಲಿ ಹೃದಯದ ರಕ್ತನಾಳಗಳ ಒಳಭಾಗದಲ್ಲಿ ಅಥೆರೋಮಅಥವಾಫ್ಲಾಕ್ ಶೇಖರಣೆಯಾಗಿ ಸರಾಗವಾದ ರಕ್ತ ಸಂಚಲನೆಗೆ ಅಡ್ಡಿಯುಂಟು ಮಾಡುತ್ತದೆ. ವಸಡಿನ ತೀವ್ರತರವಾದ ಸೋಂಕಿನ ಸಮಯದಲ್ಲಿ ಸೂಕ್ಷ್ಮ ಜೀವಿಗಳು ನೇರವಾಗಿ ರಕ್ತದ ಮೂಲಕ ಹೃದಯದ ರಕ್ತನಾಳಗಳ ಒಳಭಾಗದಲ್ಲಿ ಅಥೆರೋಮ ಸೃಷ್ಠಿಯಾಗಲು ಕಾರಣವಾಗಬಹುದು.

ಇದಲ್ಲದೆ ವಸಡಿನ ಉರಿಯೂತದ ಸಮಯದಲ್ಲಿ ಉರಿಊತಕ್ಕೆ ಕಾರಣವಾದ ಇನ್ಫ್ಲಾಮೇಟರಿ ಮಿಡಿಯೇಟರ್‌ಗಳು ಸಹ ಈ ಹೃದಯ ಖಾಯಿಲೆಗಳಿಗೆ ಕಾರಣವಾಗಬಹುದಾಗಿದೆ. ಪ್ರಪಂಚದಾದ್ಯಂತ 740 ಮಿಲಿಯನ್‌ಗೂ ಹೆಚ್ಚು ಜನ ವಸಡಿನ ಸಮಸ್ಯೆಗಳಿಂದ ಬಳಲುತ್ತಿರುವುದರಿಂದ ಬಾಯಿಯ ಸ್ವಚ್ಚತೆಯ ಕಡೆಗೆ ಗಮನ ಹರಿಸುವುದು ಒಳಿತು.

ಮಧುಮೇಹಿಗಳ ರಕ್ತದಲ್ಲಿ ಅಧಿಕ ಸಕ್ಕರೆ ಅಂಶವಿರುವ ಕಾರಣ ಸೋಂಕಿನ ಪ್ರಮಾಣ ಹೆಚ್ಚಾಗಿ ವಸಡಿನ ಸಮಸ್ಯೆಗೆ ದಾರಿ ಮಾಡಿಕೊಡಬಹುದಾಗಿದೆ. 65 ವರ್ಷ ಮೇಲ್ಪಟ್ಟ ಮಧುಮೇಹಿಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಿದ್ದು, ವಸಡಿನ ಉರಿಯೂತ ಅಥವಾ ಕೀವು ತುಂಬುವುದು ಹೆಚ್ಚಿದಲ್ಲಿ ಹೃದಯ ಸಂಬಂಧಿ ಕಾಯಿಲೆಯ ಸಂಕೀರ್ಣತೆ ಹೆಚ್ಚಾಗಬಹುದಾಗಿದೆ.

ಇದಲ್ಲದೆ ಸಬ್ ಅಕ್ಯೂಟ್ ಬ್ಯಾಕ್ಟೀರಿಯಲ್ ಎಂಡೋಕಾರ್ಡೈಟಿಸ್ (SUB ACUTE BACTERIAL ENDOCARDITIS) ಎಂಬ ಹೃದಯದ ಕಾಯಿಲೆಯು ಬಾಯಿಯ ಸ್ವಚ್ಚತೆಯ ಕೊರತೆಯಿಂದ ಉದ್ಬವಿಸುವ ಬಾಯಿಯ ಕಾಯಿಲೆಗಳಲ್ಲಿನ ಸೂಕ್ಷ್ಮ ಜೀವಿಗಳಾದ ಬ್ಯಾಕ್ಟೀರಿಯಾದಿಂದ ಉದ್ಬವಿಸುತ್ತದೆ. ಈ ಬ್ಯಾಕ್ಟೀರಿಯಾಗಳು ರಕ್ತದ ಮೂಲಕ ಹಾದು ಹೃದಯದ ಕವಟೆಗಳ ಮೇಲೆ ಶೇಖರಣೆಯಾಗಿ ಹೃದಯದ ಕವಟೆಯ ಕಾರ್ಯ ವೈಖರಿಯಲ್ಲಿ ವ್ಯತ್ಯಯ ಉಂಟುಮಾಡುತ್ತದೆ.

ಹೃದಯ ಸಂಬಂಧಿ ಕಾಯಿಲೆಗಳಿಗೆ ತೆಗೆದುಕೊಳ್ಳುವ ಔಷಧಿಗಳು ಕೂಡ ಕೆಲವೊಮ್ಮೆ ಬಾಯಿಯ ಆರೋಗ್ಯದ ಮೇಲೆ ಪ್ರಭಾವ ಬೀರಬಹುದಾಗಿದೆ. ಅಧಿಕ ರಕ್ತದ ಒತ್ತಡಕ್ಕೆ ರೋಗಿಯು ತೆಗೆದುಕೊಳ್ಳುವ ಕೆಲವು ಔಷಧಿಗಳಿಂದ ವಸಡಿನ ಊತ ಹೆಚ್ಚಾಗಬಹುದು. ಅಲ್ಲದೆ ಕೆಲವು ಔಷಧಿಗಳು ಬಾಯಿಯು ಲಾಲಾರಸದ ಉತ್ಪತ್ತಿಯನ್ನು ಕಡಿಮೆ ಮಾಡಬಹುದಾಗಿದ್ದು, ಬಾಯಿಯ ಸ್ವಚ್ಚತೆಯನ್ನು ಕುಂದಿಸಬಹುದಾಗಿದೆ. ಬಾಯಿಯಲ್ಲಿ ಲಾಲಾರಸದ ಉತ್ಪತ್ತಿ ಕಡಿಮೆ ಆದಾಗ ರೋಗಿಯು ಬಾಯಿ ಒಣಗುವಿಕೆ, ಬಾಯಿಯ ದುರ್ವಾಸನೆ , ದಂತ ಕುಳಿ ಮುಂತಾದ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ.

ಹೃದಯ ಸಂಬಂಧ ಕಾಯಿಲೆಗಳಿಂದ ಬಳಲುವವರು ದಂತ ಚಿಕಿತ್ಸೆಗಳನ್ನು ಪಡೆಯುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳಿತು.

* ದಂತ ಚಿಕಿತ್ಸೆಗಳನ್ನು ಪಡೆಯುವಾಗ ಬೆಳಗಿನ ಸಮಾಲೋಚನೆಯನ್ನು ಪಡೆಯುವುದು ಉತ್ತಮ.

* ದಂತ ಚಿಕಿತ್ಸೆಗೂ ಮುನ್ನ ಅತಿಯಾಗಿ ಆಹಾರ ಸೇವನೆಗಿಂತ ಲಘು ಆಹಾರ ಸೇವನೆ ಉತ್ತಮ.

* ಅಧಿಕ ರಕ್ತದ ಒತ್ತಡವಿರುವ ರೋಗಿಗಳು ರಕ್ತದ ಒತ್ತಡವನ್ನು ಪರೀಕ್ಷಿಸಿಕೊಂಡು ದಂತ ಚಿಕಿತ್ಸೆಯನ್ನು ಪಡೆಯುವುದು ಉತ್ತಮ.

* ದಂತ ಕುರ್ಚಿಯ ಮೇಲೆ ಕುಳಿತಾಗ ಸರಕ್ಕನೆ / ಜರ್ಕಿ ಚಲನೆಗಳನ್ನು ಮಾಡದೇ ಇರುವುದು ಉತ್ತಮ ಇದರಿಂದ ರಕ್ತದ ಒತ್ತಡವನ್ನು ಹತೋಟಿಯಲ್ಲಿಡಲು ಸಾಧ್ಯ.

* ಹೃದಯಾಘಾತ ಅಥವಾ ಹೃದಯ ಶಸ್ತ್ರ ಚಿಕಿತ್ಸೆ ನಂತರ ಕನಿಷ್ಠ ಆರು ತಿಂಗಳು ಯಾವುದೇ ರೀತಿಯ ದಂತ ಚಿಕಿತ್ಸೆಗಳನ್ನು ಪಡೆಯುವುದು ಸೂಕ್ತವಲ್ಲ.

* ಹೃದಯ ಸಂಬಂಧಿ ಕಾಯಿಲೆಗಳಲ್ಲಿ ಸೇವಿಸುವ ಆಸ್ಪರಿನ್ (ರಕ್ತವನ್ನು ಗಟ್ಟಿಯಾಗದಂತೆ ನಿರ್ವಹಿಸುವ ಔಷಧಿ) ಅನ್ನು ಸೇವಿಸುತ್ತಿದ್ದರೆ ದಂತ ಚಿಕಿತ್ಸೆಗಳನ್ನು ಕನಿಷ್ಠ ಮೂರು ದಿನಗಳ ಮುನ್ನ ನಿಲ್ಲಿಸಬೇಕಾಗುತ್ತದೆ. ಇದರಿಂದ ಶಸ್ತ್ರ ಚಿಕಿತ್ಸೆಗಳ ಸಮಯದಲ್ಲಿ ಅಧಿಕ ರಕ್ತ ಸ್ರಾವವನ್ನು ತಡೆಯಬಹುದು.

* ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುವ ರೋಗಿಗಳಿಗೆ ಅರೆವಳಿಕೆ ಕೊಡುವಾಗ ಅದರಲ್ಲಿ ರಕ್ತನಾಳಗಳನ್ನು ಸಂಕುಚಿತಗೊಳಿಸಿ ಅರಿವಳಿಕೆಯನ್ನು ದಕ್ಷವಾಗಿ ಕಾರ್ಯ ನಿರ್ವಹಿಸಲು ಹಾಗೂ ರಕ್ತಸ್ರಾವವನ್ನು ಕಡಿಮೆ ಮಾಡಲು ಬಳಸುವ ಅಡ್ರಿನಲಿನ್ ಎಂಬ ಔಷದಿಯನ್ನು ಬಳಸದಿರುವುದು ಒಳಿತು.

* ಅಧಿಕ ಆಂತರಿಕ ಆತಂಕವಿರುವ ರೋಗಿಗಳಿಗೆ ಆತಂಕವನ್ನು ಕಡಿಮೆ ಮಾಡುವ ಔಷಧಿಗಳ ಬಳಕೆ ಚಿಕಿತ್ಸೆಗೂ ಮುನ್ನ ಅವಶ್ಯಕ.

* ದಂತ ವೈದ್ಯರು ಹೃದಯ ಸಮಸ್ಯೆ ಇರುವ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವಾಗ ತುರ್ತು ಚಿಕಿತ್ಸೆಗೆ ಅವಶ್ಯಕವಿರುವ ಆಮ್ಲಜನಕ, ಹಾಗೂ ಅಗತ್ಯ ಔಷಧಿಗಳ ಲಭ್ಯತೆಗಳನ್ನು ಖಾತ್ರಿ ಮಾಡಿಕೊಳ್ಳಬೇಕಾಗುತ್ತದೆ.

*ದಂತ ಶಸ್ತ್ರ ಚಿಕಿತ್ಸೆ ಅಥವಾ ದಂತ ಶುಚಿಗೊಳಿಸುವ ಕ್ರಮದ ಮುನ್ನ ಆಂಟಿಬಯೋಟಿಕ್‌ಗಳನ್ನು ರೋಗ ಪ್ರತಿರಕ್ಷಕವಾಗಿ ಬಳಸುವುದು ಸೂಕ್ತ.

* ಹೃದಯ ಸಮಸ್ಯೆಗಳ ಸಂಕೀರ್ಣತೆಗಳನ್ನು ತಡೆಯಲು ಬಾಯಿಯ ಸ್ವಚ್ಚತೆಯ ಕಡೆಗೆ ಗಮನ ಹರಿಸುವುದು ಅವಶ್ಯಕ.

*ಬಾಯಿಯನ್ನು ದಿನಕ್ಕೆ ಎರಡು ಭಾರಿ ಮೃದುವಾದ ಬ್ರಷ್ ಹಾಗೂ ಕಡೆಲೆಕಾಯಿ ಬೀಜದ ಗಾತ್ರದ ಪೇಸ್ಟ್ ಉಪಯೋಗಿಸಿ ಮೇಲಿಂದ ಕೆಳಗೆ ಹಾಗೂ ಕೆಳಗಿನಿಂದ ಮೇಲಕ್ಕೆ ಉದ್ದಲಾಗಿ ಉಜ್ಜುವುದರಿಂದ ವಸಡಿನ ಹಾಗೂ ಹಲ್ಲುಗಳ ನಡುವಿನ ಸಂದುಗಳಲ್ಲಿರುವ ಆಹಾರ ಪದಾರ್ಥವನ್ನು ಶುಚಿಗೊಳಿಸಿ ಹಲ್ಲುಗಳ ಸವೆಯದಂತೆ ಕಾಪಾಡಬಹುದಾಗಿದೆ.

* ಬ್ರಷ್‌ಗಳನ್ನು ಮೂರು ತಿಂಗಳಿಗೊಮ್ಮೆ ಬದಲಾಯಿಸುವುದು ಉತ್ತಮ.

* ನಾಲಿಗೆಯನ್ನು ಸ್ವಚ್ಛಗೊಳಿಸಿ, ಬಾಯಿಯನ್ನು ನೀರಿನಿಂದ ಮುಕ್ಕಳಿಸುವುದು ಅವಶ್ಯಕ.

* ಆರು ತಿಂಗಳಿಗೊಮ್ಮೆ ದಂತ ವೈದ್ಯರ ಸಮಾಲೋಚನೆ ಅವಶ್ಯಕ.

* ಹಲ್ಲುಗಳ ಸಂದುಗಳಲ್ಲಿನ ಆಹಾರ ಪದಾರ್ಥಗಳನ್ನು ದಂತ ಪ್ಲಾಸ್ (ಒಂದು ವಿಧವಾದ ದಾರ)ನ್ನು ಬಳಸಿ ಶುಚಿಗೊಳಿಸುವುದು ಅವಶ್ಯಕ.

* ಅವಶ್ಯಕವಿದ್ದರೆ ಬಾಯಿ ಮುಕ್ಕಳಿಸುವ ದ್ರವಗಳನ್ನು ಬಳಸಬಹುದು.

-ಲೇಖಕರು:ಓರಲ್ ಮೆಡಿಸನ್ ಹಾಗೂ ರೇಡಿಯಾಲಜಿತಜ್ಞರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT