ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ: ಜೀವನ ಶೈಲಿಯಲ್ಲಿರಲಿ ‘ಹೃದಯ’

Last Updated 2 ನವೆಂಬರ್ 2021, 4:29 IST
ಅಕ್ಷರ ಗಾತ್ರ

ಹೃದಯದ ಆರೋಗ್ಯಕ್ಕೂ ನಮ್ಮ ಜೀವನಶೈಲಿಗೂ ನೇರ ನಂಟಿದೆ. ಹಾಗಾದರೆ ನಮ್ಮ ಹೃದಯದ ಆರೋಗ್ಯಕ್ಕಾಗಿ ನಾವು ಏನು ಮಾಡಬೇಕು? ಏನು ಮಾಡಬಾರದು?

ಚಿಕಿತ್ಸೆಗಳ ಆದ್ಯತೆಯಲ್ಲಿ ಮೊದಲ ಸ್ಥಾನ ಹೃದಯದ್ದೇ. ಹೃದಯಸಂಬಂಧಿ ಕಾಯಿಲೆಗಳು ಪ್ರತಿಯೊಬ್ಬರಲ್ಲೂ ತೀವ್ರ ಆತಂಕ ಮೂಡಿಸುತ್ತವೆ. ಅಧಿಕ ರಕ್ತದೊತ್ತಡ, ಹೃದಯದ ಧಮನಿಗಳ ರಕ್ತಸಂಚಾರಕ್ಕೆ ಅಡ್ಡಿ, ಜನ್ಮಜಾತ ಹೃದಯಸಮಸ್ಯೆಗಳು, ಹೃದಯದ ಕವಾಟಗಳ ದೋಷ, ಹೃದಯದ ಮಾಂಸಖಂಡಗಳ ದೌರ್ಬಲ್ಯ, ಹೃದಯದ ಮಿಡಿತದಲ್ಲಿನ ಏರುಪೇರು – ಹೀಗೆ ಹಲವಾರು ಅನಾರೋಗ್ಯಗಳು ಯಾವುದೇ ವಯೋಮಾನದಲ್ಲೂ ಹೃದಯವನ್ನು ಕಾಡಬಹುದು. ಇವುಗಳ ಪೈಕಿ ಹಲವಾರು ಸಮಸ್ಯೆಗಳನ್ನು ಸಮರ್ಥವಾಗಿ ನಿಯಂತ್ರಿಸಬಹುದು ಹೃದಯದ ಆರೋಗ್ಯವನ್ನು ಜತನದಿಂದ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜೀವನಶೈಲಿಯ ಪಾತ್ರ ಮಹತ್ವದ್ದು.

ಯಾವುದೇ ಕಾಯಿಲೆಯ ನಿಗ್ರಹ ಮತ್ತು ನಿಯಂತ್ರಣದಲ್ಲಿ ಮೂರು ಹಂತಗಳಿವೆ. ಮೊದಲನೆಯ ಹಂತ ಕಾಯಿಲೆ ಬಾರದಂತೆ ತಡೆಯುವುದು. ಇದನ್ನು ಸಾಧಿಸಲು ಉತ್ತಮ ಆರೋಗ್ಯ ಪದ್ಧತಿಗಳನ್ನು ರೂಢಿಸಿಕೊಳ್ಳಬೇಕು. ಕಾಯಿಲೆ ಯಾವ ಕಾರಣದಿಂದ ಬರಬಹುದು ಎಂಬುದನ್ನು ಅಂದಾಜಿಸಿ, ಅದಕ್ಕೆ ವಿರುದ್ಧವಾಗಿ ನಿರ್ದಿಷ್ಟ ಪ್ರತಿರಕ್ಷಣೆ ಕಲ್ಪಿಸಬಹುದು. ಎರಡನೆಯ ಹಂತ ಕಾಯಿಲೆಯನ್ನು ಆರಂಭದಲ್ಲೇ ಪತ್ತೆ ಹಚ್ಚಿ, ಅದನ್ನು ಚಿಕಿತ್ಸೆ ಮಾಡುವುದು. ಇದಕ್ಕಾಗಿ ಕಾಯಿಲೆಯ ಆರಂಭಿಕ ಲಕ್ಷಣಗಳ ಪರಿಚಯ ಇರಬೇಕು. ಮೂರನೆಯ ಹಂತ ಕಾಯಿಲೆಯ ಪರಿಣಾಮಗಳನ್ನು ಕಡಿಮೆ ಮಾಡುವುದು ಮತ್ತು ಕಾಯಿಲೆಯಿಂದ ಈಗಾಗಲೇ ಆಗಿರುವ ಶಾರೀರಿಕ ಸಮಸ್ಯೆಗಳನ್ನು ನಿಧಾನವಾಗಿ ಸಹಜ ಸ್ಥಿತಿಗೆ ತರುವುದು. ಹೃದಯದ ಕಾಯಿಲೆಗಳಿಗೂ ಈ ಮೂರು ಹಂತಗಳು ಅನ್ವಯವಾಗುತ್ತವೆ. ಈ ಮೂರೂ ಹಂತಗಳಲ್ಲಿ ಜೀವನಶೈಲಿಯ ಸುಧಾರಣೆಗಳು ಸಹಾಯಕ.

ಹೃದಯದ ಹಲವಾರು ಕಾಯಿಲೆಗಳಿಗೆ ಅನುವಂಶೀಯ ಕಾರಣಗಳಿವೆ. ಹೀಗಾಗಿ, ಹತ್ತಿರದ ರಕ್ತಸಂಬಂಧಿಗಳ ಹೃದಯ ಆರೋಗ್ಯ ಪರಿಸ್ಥಿತಿಯ ಪರಿಚಯ ಇರುವುದು ಒಳ್ಳೆಯದು. ಈ ವಿವರಗಳನ್ನು ವೈದ್ಯರೊಡನೆ ಚರ್ಚಿಸಿ, ‘ಇವುಗಳಲ್ಲಿ ಯಾವ ಅನಾರೋಗ್ಯ ಅನುವಂಶಿಕವಾಗಿ ಬರಬಹುದು’ ಎಂಬುದನ್ನು ಅರಿತು, ‘ಆ ಸಮಸ್ಯೆ ಬಾರದಂತೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು’ ಎಂದೂ ತಿಳಿಯಬಹುದು.

ಹೃದಯದ ಆರೋಗ್ಯ ಮತ್ತು ಆಹಾರ ಜೊತೆಜೊತೆಯಾಗಿ ಸಾಗುತ್ತವೆ. ಸಾತ್ವಿಕ ಆಹಾರವನ್ನು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಳ್ಳಬೇಕು. ತಾಜಾ ಹಣ್ಣು, ತರಕಾರಿ, ಧಾನ್ಯಗಳು, ಪ್ರೋಟೀನ್ ಅಂಶ ಅಧಿಕವಾಗಿರುವ ಆಹಾರ, ಜಿಡ್ಡಿನ ಅಂಶ ಕಡಿಮೆ ಇರುವ ಹೈನು ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.

‘ಕೂರುವುದು ಆಧುನಿಕ ಧೂಮಪಾನ’ ಎನ್ನುವ ಮಾತಿದೆ! ಧೂಮಪಾನದಿಂದ ಆರೋಗ್ಯದ ಮೇಲೆ ಆಗುವ ವ್ಯತಿರಿಕ್ತ ಪರಿಣಾಮಗಳು, ಯಾವುದೇ ಚಟುವಟಿಕೆಯಿಲ್ಲದೆ ವಿನಾ ಕಾರಣ ಕೂರುವುದರಿಂದಲೂ ಆಗುತ್ತದೆ ಎನ್ನಲಾಗಿದೆ. ಆರೋಗ್ಯಕರ ಹೃದಯಕ್ಕೆ ವ್ಯಾಯಾಮ ಬಹಳ ಮುಖ್ಯ. ದಿನಕ್ಕೆ ಕನಿಷ್ಠ ಮೂವತ್ತು ನಿಮಿಷಗಳ ಕಾಲ ಉಸಿರಾಟದ ಗತಿಯನ್ನು ಏರಿಸುವ ಶಾರೀರಿಕ ವ್ಯಾಯಾಮ ಮಾಡಬೇಕು. ಇದರಲ್ಲಿ ವಾರಕ್ಕೆ ಎರಡು ದಿನ ಮಾಂಸಖಂಡಗಳ ಬಲವನ್ನು ಹೆಚ್ಚಿಸುವ ವ್ಯಾಯಾಮ ಇರಬೇಕು. ವಾರದಲ್ಲಿ ಇಂತಿಷ್ಟು ದಿನ ಎನ್ನುವುದಕ್ಕಿಂತ ಪ್ರತಿದಿನವೂ ತಪ್ಪದೆ ವ್ಯಾಯಾಮ ಮಾಡುವುದು ಸೂಕ್ತ.

ಧೂಮಪಾನ ಮತ್ತು ಮದ್ಯಪಾನಗಳು ಹೃದಯದ ಶತ್ರುಗಳು. ಉಪ್ಪು ಅಥವಾ ಸಕ್ಕರೆಯ ಅಂಶ ಅಧಿಕವಾಗಿರುವ ತಿನಿಸು ಮತ್ತು ಪಾನೀಯಗಳು, ಅಧಿಕ ಜಿಡ್ಡಿನ ಆಹಾರ ಹೃದಯದ ಅನಾರೋಗ್ಯಕ್ಕೆ ಕಾರಣವಾಗಬಹುದು. ಇಂತಹುವುಗಳ ಬಳಕೆಯನ್ನು ಕಡಿಮೆಗೊಳಿಸುವುದು ಹೃದ್ರೋಗವನ್ನು ದೂರವಿಡಲು ಸಹಾಯಕ. ಯಾವುದಾದರೂ ಆರೋಗ್ಯ ಸಂಬಂಧಿ ಔಷಧಗಳನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ, ಅವುಗಳನ್ನು ಅಕಾರಣವಾಗಿ ತಪ್ಪಿಸಬಾರದು. ಇದರ ಜೊತೆಗೆ ರಕ್ತದೊತ್ತಡ, ಮಧುಮೇಹ ಮುಂತಾದ ಸಮಸ್ಯೆಗಳನ್ನು ಸಾಧ್ಯವಾದಷ್ಟೂ ನಿಯಂತ್ರಣದಲ್ಲಿ ಇಡಬೇಕು.

ದೇಹದ ಬೊಜ್ಜು ಹೃದಯದ ಮೇಲೆ ವಿಪರೀತ ಒತ್ತಡ ಹೇರುತ್ತದೆ. ಶರೀರದ ತೂಕವನ್ನು ಅಂಕೆಯಲ್ಲಿ ಇಡುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ‘ನನ್ನ ದೇಹ; ನನ್ನ ಇಚ್ಛೆ’ ಎಂದು ಬೊಜ್ಜನ್ನು ಸಮರ್ಥಿಸಿದರೆ, ಅದರ ಪರಿಣಾಮ ಹೃದಯದ ಮೇಲೆ ತಟ್ಟುವುದನ್ನು ತಪ್ಪಿಸಲಾಗದು. ಹೀಗಾಗಿ, ಬೊಜ್ಜು ಉಳ್ಳವರಿಗೆ ಆರೋಗ್ಯದ ಜವಾಬ್ದಾರಿ ಹೆಚ್ಚಾಗಿ ಇರಬೇಕು. ಆಹಾರತಜ್ಞರ ಸಲಹೆಯ ಮೇರೆಗೆ ಅಗತ್ಯ ಪೋಷಕಾಂಶಗಳುಳ್ಳ ಸಮತೋಲಿತ ಆಹಾರವನ್ನು ಸೇವಿಸಬೇಕು. ಅಧಿಕ ಕ್ಯಾಲರಿ ಉಳ್ಳ ಪದಾರ್ಥಗಳಿಂದ ದೂರವಿರಬೇಕು. ಇದು ಯಾವುದೇ ಲಿಂಗಭೇದವಿಲ್ಲದೆ ಎಲ್ಲರಿಗೂ ಅನ್ವಯಿಸುತ್ತದೆ.

ದೈಹಿಕ ಮತ್ತು ಮಾನಸಿಕ ಒತ್ತಡದ ನಿಯಂತ್ರಣ ಹೃದಯದ ಮೇಲೆ ಬಹಳ ಉತ್ತಮ ಪರಿಣಾಮ ಬೀರಬಲ್ಲದು. ಕೋಪ, ತುಮುಲಗಳು ಹೃದಯದ ರಕ್ತನಾಳಗಳನ್ನು ಸಂಕೋಚಿಸಿ, ಆಘಾತ ಉಂಟುಮಾಡಬಲ್ಲವು. ಮಾನಸಿಕ ಅಶಾಂತಿ, ಕೆಲಸದ ಒತ್ತಡಗಳ ಕಾರಣದಿಂದ ಅಧಿಕ ರಕ್ತದೊತ್ತಡಕ್ಕೆ ತುತ್ತಾಗುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಉದ್ವೇಗಗಳಿಗೆ ಸಿಲುಕಿ ಧೂಮಪಾನ, ಮದ್ಯಪಾನಗಳ ಚಟ ಬೆಳೆಸಿಕೊಂಡವರು ಇಬ್ಬಗೆಯಿಂದ ಹೃದಯದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಒತ್ತಡದಿಂದ ಬಳಲುವವರು ಮಾನಸಿಕ ಆರೋಗ್ಯ ಸಲಹೆಗಾರರ ಸಹಾಯ ಪಡೆಯಬೇಕು. ನಿಗದಿತ ವ್ಯಾಯಾಮ, ಪ್ರಾಣಾಯಾಮ, ಧ್ಯಾನಗಳು ಮನಸ್ಸಿನ ಉದ್ವೇಗವನ್ನು ಕಡಿಮೆ ಮಾಡುವಲ್ಲಿ ಬಹಳ ಸಹಕಾರಿ. ಕುಟುಂಬದ ಸದಸ್ಯರ ಜೊತೆಗಿನ ಮಾತುಕತೆ, ಸಮಾನಮನಸ್ಕ ಸ್ನೇಹಿತರ ಜೊತೆಗಿನ ಒಡನಾಟ, ಧಾರ್ಮಿಕ ಸಭೆಗಳಲ್ಲಿ ಭಾಗವಹಿಸುವಿಕೆ, ಸಾಮಾಜಿಕ ಹಿತದ ಕಾರ್ಯಗಳಲ್ಲಿ ಕೈಜೋಡಿಸುವಿಕೆ ಮುಂತಾದುವು ಮಾನಸಿಕ ತುಮುಲವನ್ನು ಗೆಲ್ಲುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ.

ಹೃದಯದ ಆರೋಗ್ಯದ ಮೇಲೆ ನಿದ್ರೆಯ ಪರಿಣಾಮ ಗಾಢವಾದದ್ದು. ಪ್ರಸ್ತುತ ಜೀವನಶೈಲಿಯಲ್ಲಿ ನಿದ್ರೆಯ ಬಗ್ಗೆ ಹೆಚ್ಚಿನ ಮಂದಿ ಸರಿಯಾದ ಗಮನ ನೀಡುತ್ತಿಲ್ಲ. ಇದರ ಪರಿಣಾಮವಾಗಿ ಸಣ್ಣ ವಯಸ್ಸಿನಲ್ಲೇ ಹೃದ್ರೋಗಗಳಿಗೆ ತುತ್ತಾಗುವವರ ಸಂಖ್ಯೆ ಬೆಳೆಯುತ್ತಿದೆ. ಉತ್ತಮ ಗುಣಮಟ್ಟದ, ಸರಿಯಾದ ಕಾಲಾವಧಿಯ ನಿದ್ರೆ, ಹೃದಯ ಮತ್ತು ರಕ್ತನಾಳಗಳ ಸಮಸ್ಯೆಗಳನ್ನು ಗುಣಪಡಿಸುತ್ತದೆ; ಹೃದಯದ ಕೆಲಸಕ್ಕೆ ಅಗತ್ಯವಾದ ಚೋದಕಗಳನ್ನು ಸರಿದೂಗಿಸುತ್ತದೆ; ಶರೀರದ ರಕ್ಷಕ ವ್ಯವಸ್ಥೆಯನ್ನು ಚುರುಕಾಗಿ ಇಟ್ಟು, ಕಾಯಿಲೆಗಳನ್ನು ದೂರವಿಡುತ್ತದೆ. ನಿದ್ರಾಹೀನತೆಯಿಂದ ಹೃದ್ರೋಗಗಳ ಸಾಧ್ಯತೆ ಅಧಿಕವಾಗುತ್ತದೆ.

ಮನಸ್ಸು ಶಾಂತವಾಗಿರಲಿ

ಜೀವನದ ಉದ್ದಕ್ಕೂ ಬಿಡುವಿಲ್ಲದೆ ಕೆಲಸ ಮಾಡುವ ನಮ್ಮ ಹೃದಯವನ್ನು ಕ್ಷೇಮವಾಗಿ ಇಟ್ಟುಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಬಹಳ ಮುಖ್ಯ. ನಮ್ಮ ಜೀವನಶೈಲಿ ಮತ್ತು ಹೃದ್ರೋಗ ನಿಯಂತ್ರಣದ ನಡುವೆ ಬಲವಾದ ಸಂಬಂಧವಿದೆ. ನಮ್ಮ ದೈನಂದಿನ ಕಾರ್ಯಗಳಲ್ಲಿ ಇತಿಮಿತಿಯ ಶಿಸ್ತನ್ನು ರೂಢಿಸಿಕೊಳ್ಳುವುದು; ಧ್ಯಾನ ಮತ್ತು ಪ್ರಾಣಾಯಾಮಗಳ ಮೂಲಕ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳುವುದು ನಾವು ನಮ್ಮ ಹೃದಯಕ್ಕೆ ನೀಡಬಹುದಾದ ಅನುಪಮ ಕೊಡುಗೆಗಳಲ್ಲಿ ಒಂದು.

(ಲೇಖಕರು ವೈದ್ಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT