ಗುರುವಾರ , ಜನವರಿ 28, 2021
27 °C

ಆರೋಗ್ಯಕ್ಕೂ ಉಳಿತಾಯಕ್ಕೂ ಕೈ ತೋಟ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಅನೇಕರು ಮನೆಯಲ್ಲಿಯೇ ತರಕಾರಿ, ಸೊಪ್ಪುಗಳನ್ನು ಬೆಳೆಸುವ ಅಭ್ಯಾಸ ಮಾಡಿಕೊಂಡಿದ್ದಾರೆ. ಈ ಅಭ್ಯಾಸವನ್ನು ಮುಂದುವರಿಸಿದರೆ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು, ಉಳಿತಾಯವನ್ನೂ ಮಾಡಬಹುದು.

ಕೊರೊನಾ ಕಾರಣದಿಂದ ತತ್ತರಿಸಿದ್ದ ಬದುಕು ಈಗ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಲಾಕ್‌ಡೌನ್ ಎನ್ನುವುದು ಜನರ ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಿಸಿ ಬಿಟ್ಟಿದೆ. ಈಗಲೂ ಅನೇಕ ಪಟ್ಟಣಗಳಲ್ಲಿ ನಾಲ್ಕು ಗೋಡೆಗಳ ಮಧ್ಯೆಯೇ ಇರುವುದು ಅನಿವಾರ್ಯವಾಗಿದೆ. ಮನೆಯಿಂದಲೇ ಕೆಲಸ ಇರುವ ಕಾರಣಕ್ಕೆ ಹೊರಗಡೆ ಹೋಗುವ ಅವಶ್ಯಕತೆಯೂ ಕಡಿಮೆ. ಆ ಕಾರಣಕ್ಕೆ ಈ ಲಾಕ್‌ಡೌನ್ ಅವಧಿಯಲ್ಲಿ ಹಲವರು ರೂಢಿಸಿಕೊಂಡ ನೆಚ್ಚಿನ ಹವ್ಯಾಸ ಗಾರ್ಡನಿಂಗ್‌ ಅಥವಾ ಕೈ ತೋಟ ಬೆಳೆಸುವುದು. ಅದರಲ್ಲೂ ಮನೆಗೆ ಬೇಕಾಗುವ ತರಕಾರಿ, ಸೊಪ್ಪುಗಳನ್ನು ಮನೆಯಲ್ಲೇ ಬೆಳೆಸುವುದನ್ನು ಹಲವರು ಅಭ್ಯಾಸ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಇರುವ ಪಾಟ್‌ಗಳು, ಹಳೆಯ ಬಾಟಲಿ ಹಾಗೂ ಕಂಟೈನರ್‌ಗಳಲ್ಲಿ ಗಿಡಗಳನ್ನು ನೆಡಲು ಆರಂಭಿಸಿದ್ದಾರೆ. ಆದರೆ ಈ ಅಭ್ಯಾಸ ಪರಿಸ್ಥಿತಿ ಸಂಪೂರ್ಣ ಸಹಜ ಸ್ಥಿತಿಗೆ ಬಂದ ಮೇಲೂ ಮುಂದುವರಿದರೆ ಉತ್ತಮ. ಇದರಿಂದ ಆರೋಗ್ಯವೂ ಉತ್ತಮವಾಗಿರುತ್ತದೆ ಹಾಗೂ ಸೊಪ್ಪು ಮತ್ತು ತರಕಾರಿಗೆ ಕೊಡುವ ಹಣವನ್ನೂ ಉಳಿಸಬಹುದು.

ಸಾವಯವ ಆಹಾರದತ್ತ ಒಲವು
ಮನೆಯಲ್ಲೇ ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆಯುವುದರಿಂದ ಸಾವಯವ ಕೃಷಿ ಪದ್ಧತಿಯನ್ನು ರೂಢಿಸಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಸಿಗುವ ಆಹಾರ ಪದಾರ್ಥಗಳಿಗಿಂತ ಇವು ಉತ್ತಮ ಹಾಗೂ ಆರೋಗ್ಯಕರವಾಗಿರುತ್ತವೆ. ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚಿನ ಹಣ್ಣು, ತರಕಾರಿಗಳಿಗೆ ಕೀಟನಾಟಕಗಳನ್ನು ಸಿಂಪಡಿಸಿರುತ್ತಾರೆ. ಹೆಚ್ಚಿನ ಫಸಲು ಪಡೆಯುವ ಸಲುವಾಗಿ ರಸಗೊಬ್ಬರಗಳನ್ನು ಬಳಸಿರುತ್ತಾರೆ. ಹೀಗಾಗಿ ಮನೆಯಲ್ಲೇ ಕೀಟನಾಶಕ ಹಾಗೂ ರಸಗೊಬ್ಬರಗಳನ್ನು ಬಳಸದೇ ತರಕಾರಿ ಹಾಗೂ ಸೊಪ್ಪುಗಳನ್ನು ಬೆಳೆಸಿ ತಿನ್ನುವುದು ಉತ್ತಮ.

ಹಸಿರು ಸಿರಿಗೆ...
ಶೇ 50ಕ್ಕಿಂತ ಹೆಚ್ಚು ಮಂದಿ ಉದ್ಯೋಗ, ವ್ಯವಹಾರದ ಕಾರಣದಿಂದ ನಗರಗಳಲ್ಲಿ ಬದುಕುತ್ತಿದ್ದಾರೆ. ಮನೆಯಲ್ಲಿ ಇರುವ ಜಾಗದಲ್ಲೇ ಅವಶ್ಯಕತೆ ಇರುವ ಆಹಾರ ಪದಾರ್ಥಗಳನ್ನು ಬೆಳೆಸಿಕೊಳ್ಳುವುದರಿಂದ ಪರಿಸರವನ್ನು ಹಸಿರಾಗಿಸಬಹುದು, ಜೊತೆಗೆ ಪ್ರಾಣಿ–ಪಕ್ಷಿಗಳು ಕೂಡ ನಗರದಲ್ಲಿ ಬದುಕುವಂತೆ ಮಾಡಬಹುದು. ಕಟ್ಟಡಗಳ ಮೇಲ್ಛಾವಣಿಗಳಲ್ಲಿ, ಗೋಡೆಗಳಲ್ಲಿ ಹಾಗೂ ನೆಲಮಹಡಿಗಳಲ್ಲಿರುವ ಖಾಲಿ ಜಾಗದಲ್ಲಿ ಗಿಡಗಳನ್ನು ಬಳಸಬಹುದು. ಇದರಿಂದ ಕಟ್ಟಡಕ್ಕೂ ತಂಪು ಸಿಗುತ್ತದೆ, ಅಲ್ಲದೇ ವಾಯಮಾಲಿನ್ಯವನ್ನು ಕೂಡ ಕಡಿಮೆ ಮಾಡಬಹುದು.

ಹಣ ಉಳಿತಾಯ
ಮನೆಯಲ್ಲೇ ತರಕಾರಿ ಬೆಳೆಯುವುದರಿಂದ ಕೊರೊನಾದಂತಹ ಪರಿಸ್ಥಿತಿ ಆಕಸ್ಮಿಕವಾಗಿ ಎದುರಾದಾಗ ಪರದಾಡುವುದನ್ನು ತಪ್ಪಿಸಬಹುದು. ಮನೆಯಲ್ಲೇ ತರಕಾರಿಗಳನ್ನು ಬೆಳೆದುಕೊಳ್ಳುವುದರಿಂದ ಹೊರ ರಾಜ್ಯ ಅಥವಾ ದೇಶದಿಂದ ಬರುವ ತರಕಾರಿಗಳನ್ನು ಕೊಂಡು ತಿನ್ನುವುದು ತಪ್ಪುತ್ತದೆ. ಜೊತೆಗೆ ಹಣದ ಉಳಿತಾಯವೂ ಆಗುತ್ತದೆ. ಹಣದುಬ್ಬರದಂತಹ ಸಂದರ್ಭದಲ್ಲಿ ಹಣದ ಉಳಿತಾಯ ಅತೀ ಅಗತ್ಯ.

ದೈಹಿಕ, ಮಾನಸಿಕ ಆರೋಗ್ಯ
ಮನೆಯಲ್ಲಿ ಗಾರ್ಡ್‌ನಿಂಗ್ ಮಾಡುವುದರಿಂದ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಅಲ್ಲದೇ ದೈಹಿಕವಾಗಿಯೂ ವ್ಯಾಯಾಮ ಸಿಕ್ಕಂತಾಗುತ್ತದೆ. ನಗರದಲ್ಲಿ ಕೈತೋಟ ಬೆಳೆಸುವುದು ಅಥವಾ ನಮ್ಮ ದೈನಂದಿನ ಜೀವನದಲ್ಲಿ ಅದಕ್ಕೆ ಒಡ್ಡಿಕೊಳ್ಳುವುದರಿಂದ ಆರೋಗ್ಯಕರ ಆಹಾರಕ್ರಮವನ್ನೂ ಪಾಲಿಸಬಹುದು. ಅಲ್ಲದೇ ಇದರಿಂದ ಆಹಾರದ ಬಗ್ಗೆ ಜನರ ಪರಿಕಲ್ಪನೆಯೂ ಬದಲಾಗುತ್ತದೆ. ಜೊತೆಗೆ ಸುಸ್ಥಿರ, ಆರೋಗ್ಯಕರ ಆಹಾರ ಪದ್ಧತಿಯನ್ನು ಪಾಲಿಸಲು ಸಾಧ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು