ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವಿಗೆ ಮನೆ ಸುರಕ್ಷಿತವಾಗಿರಲಿ

Last Updated 1 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಕೈಗಾರಿಕೀಕರಣದಿಂದ, ಉದ್ಯೋಗಸ್ಥ ಮತ್ತು ನಿರ್ಲಕ್ಷ್ಯ ದಂಪತಿಗಳಿಂದ ಮನೆಯಲ್ಲಿ ಮಕ್ಕಳಿಗೆ ಆಪಘಾತಗಳು ಹೆಚ್ಚುತ್ತಿವೆ. ಬೆಂಕಿಯಿಂದ ಅನಾಹುತ, ಮೇಲಿನಿಂದ ಬಿದ್ದು ಗಾಯವಾಗುವುದು, ಸ್ನಾನದ ಮನೆಯಲ್ಲಿ ಅವಗಢಗಳು ಉಂಟಾದರೆ ತಕ್ಷಣಕ್ಕೆ ಏನು ಆರೈಕೆ ಮಾಡಬೇಕು, ಯಾವ ರೀತಿ ಮುನ್ನೆಚ್ಚರಿಕೆ ಕೈಗೊಳ್ಳಬೇಕು?

ಎಂಟು ತಿಂಗಳ ಮಗುವಿಗೆ ಅಮ್ಮ ಬಾತ್‌ಟಬ್‌ನಲ್ಲಿ ಸ್ನಾನ ಮಾಡಿಸುತ್ತಿದ್ದಾಗ, ಪಕ್ಕದ ಕೋಣೆಯಲ್ಲಿಟ್ಟಿದ್ದ ಮೊಬೈಲ್‌ನಿಂದ ಕರೆ ಬಂದು ಸ್ವೀಕರಿಸಲು ಅಮ್ಮ ಅಲ್ಲಿಗೆ ಹೋದಳು. ಐದು ನಿಮಿಷಗಳ ನಂತರ ಬಚ್ಚಲಿಗೆ ಹೋದಾಗ, ಮಗು ಟಬ್ ನೀರಿನಲ್ಲಿ ಮುಳುಗಿ ಅಸುನೀಗಿತ್ತು.

**

ಎರಡನೇ ಬಾಲ್ಕನಿಯಲ್ಲಿ ಮಗುವನ್ನು ಒಂಟಿಯಾಗಿ ಬಿಟ್ಟು, ತರಕಾರಿ ತರಲೆಂದು ನೆಲಮನೆಗೆ ತಾಯಿ ಹೋಗಿದ್ದಳು. ಈ ಅಮಾಯಕ ಒಂದೂವರೆ ವರ್ಷದ ಮಗು ತಾಯಿಯನ್ನು ನೋಡಲೆಂದು ಬಾಲ್ಕನಿ ಕಂಬಿ ಹತ್ತಿ ಕೆಳಗೆ ಬಿದ್ದು ಸಾವನ್ನಪ್ಪಿತ್ತು.

ಒಂದರಿಂದ ನಾಲ್ಕು ವರ್ಷದ ಮಕ್ಕಳಲ್ಲಿ ಸಾಮಾನ್ಯವಾದ, ಇಂತಹ ತಡೆಹಿಡಿಯಬಹುದಾದ ಮನೆ ಮತ್ತು ಮನೆಸುತ್ತಲಿನ ಪರಿಸರದಲ್ಲಿನ ಘಟನೆಗಳಿಗೆ ಮನೆಯಲ್ಲಿನ ಮಕ್ಕಳ ಅಪಘಾತಗಳು ಎನ್ನುತ್ತೇವೆ. ರಿಸರ್ಚ್‌ ಗೇಟ್ ಎಂಬ ಸಂಸ್ಥೆಯ 2014ರ ಸಮೀಕ್ಷೆ ಪ್ರಕಾರ ಒಟ್ಟು ಒಳರೋಗಿಗಳಲ್ಲಿ ಶೇ 10 ರಿಂದ 30ರಷ್ಟು ಮನೆ ಅಪಘಾತದ ರೋಗಿಗಳೇ ಆಗಿರುತ್ತಾರೆ. ‘ಮಗುವಿಗೆ ಮನೆಯೇ ಅತ್ಯಂತ ಸುರಕ್ಷಿತ’ ಎಂಬ ಮಾತಿದೆ. ಆದರೆ ಮನೆಯ ಪರಿಸರ, ವಸ್ತುಗಳು ಮಗುವಿಗೆ ಮಾರಕವಾಗಬಹುದು. ಕೆಲವು ಹೀಗಿವೆ.

ತರಚಿದ ಮತ್ತು ಸಣ್ಣ ಹರಿದ ಗಾಯಗಳು
ಕತ್ತರಿಗಳಂತಹ ತೀಕ್ಷ್ಣವಾದ ವಸ್ತುಗಳನ್ನು ಬಳಸುವಾಗ ಅಥವಾ ಹರಿತವಾದ ಅಂಚುಗಳ ಮೇಲೆ ಬಿದ್ದಾಗ ಇವು ಉಂಟಾಗಬಹುದು. ಸಣ್ಣ ಗಾಯವೆಂದು ಉದಾಸೀನತೆ ಬೇಡ. ಏಕೆಂದರೆ ಸೋಂಕು ಉಂಟಾಗಬಹುದು.

ಸುಟ್ಟುಕೊಳ್ಳುವುದು
ಬಿಸಿ ದ್ರವವನ್ನು ಮೈಮೇಲೆ ಬೀಳಿಸಿಕೊಂಡಾಗ ಮತ್ತು ಅಡುಗೆ ಮನೆಯ ಬಿಸಿ ಉಪಕರಣ, ಇಸ್ತ್ರಿಪೆಟ್ಟಿಗೆ, ಹೇರ್ ಸ್ಟ್ರೈಟ್ನರ್‌ ಸ್ಪರ್ಶಿಸಿದಾಗ ಸಾಧ್ಯ. ಮಕ್ಕಳ ಚರ್ಮ ಸೂಕ್ಷ್ಮ. ಹೀಗಾಗಿ ಸ್ಪಲ್ಪ ತಾಪದಿಂದ ಆಳದ ಗಾಯಗಳಾಗಿ, ಶಾಶ್ವತ ಕಲೆ ಆಗಬಹುದು.

ಉಳುಕು/ ಮೂಳೆ ಮುರಿತ
ಎತ್ತರದಿಂದ ಗಟ್ಟಿಯಾದ ನೆಲದ ಮೇಲೆ ಬಿದ್ದಾಗ ಮೂಳೆಯಲ್ಲಿ ಬಿರುಕು ಬರಬಹುದು ಅಥವಾ ಮೂಳೆ ಎರಡು ತುಂಡಾಗಬಹುದು. ಗಾಯದ ಜಾಗದಲ್ಲಿ ಅಸಹನೀಯ ನೋವು, ಗಾಯಗೊಂಡ ಜಾಗವನ್ನು ಬಳಸಲು ಆಗದಿರುವುದು ಇದರ ಲಕ್ಷಣಗಳು.

ಕೀಟ ಕಡಿತ
ಇರುವೆ, ಸೊಳ್ಳೆ, ಜೇನುನೊಣಗಳು, ತಿಗಣೆ ಕಡಿತದಲ್ಲಿ ಚರ್ಮದ ಮೇಲೆ ಸಣ್ಣ ಕೆಂಪು ಕಲೆ ಇರುತ್ತವೆ. ಕೀಟಗಳ ಲಾಲಾರಸವು ದೇಹದೊಂದಿಗೆ ಪ್ರವೇಶಿಸಿ ತುರಿಕೆ ಆಗಬಹುದು.

ಈ ರೋಗಲಕ್ಷಣ ಸುಮಾರು ಎರಡು ಗಂಟೆಗಳಿಂದ ಎರಡು ದಿನಗಳವರೆಗೆ ಇರುತ್ತದೆ. ಇಲಿಗಳು ಬೆರಳು, ಕಿವಿಗೆ ಗಾಯ ಮಾಡುತ್ತವೆ. ಸತತ ವಿಪರೀತ ಬೆವರು ಚೇಳು ಕಡಿತದ ಮುಖ್ಯ ಲಕ್ಷಣ.

ಸಾಕು ಪ್ರಾಣಿಗಳ ಕಡಿತ
ಸಾಕು ನಾಯಿ ಮತ್ತು ಬೆಕ್ಕು ಕಡಿದರೆ ಗಾಬರಿ ಬೇಡ. ಪ್ರೀತಿಯನ್ನು ತೋರಿಸುತ್ತಿದ್ದರೆ ಮತ್ತು ಅದಕ್ಕೆ ತುಂಬಾ ಹತ್ತಿರದಲ್ಲಿದ್ದರೆ ಪ್ರಾಣಿಗಳು ಕಚ್ಚುತ್ತವೆ.

ಉಸಿರುಗಟ್ಟುವಿಕೆ
ಒಂದು ಅಂಗುಲಕ್ಕಿಂತ ಕಡಿಮೆ ಗಾತ್ರದ ವಸ್ತುಗಳಿಂದಲೂ ಉಸಿರುಗಟ್ಟುವಿಕೆ ಸಾಧ್ಯ. ನಾಣ್ಯ, ಆಟಿಕೆ ತುಂಡು, ಪೆನ್ ಮುಚ್ಚಳ, ಬಳಪ ಗಂಟಲಲ್ಲಿ ಸಿಕ್ಕಿಕೊಂಡಾಗ ವಾಂತಿ, ಉಸಿರುಗಟ್ಟುವಿಕೆ, ಮಾತನಾಡಲು ಆಗದಿರುವುದು ಸಾಮಾನ್ಯ. ಮುಖ ನೀಲಿ ಆಗುತ್ತದೆ.

ಕಣ್ಣಿನ ಗಾಯ
ಧೂಳು ಅಥವಾ ಸಾಬೂನಿನಿಂದ ಸಣ್ಣ ಗಾಯಗಳು ಸಾಮಾನ್ಯ. ಇದರಿಂದ ಕಣ್ಣು ಹಾಗೂ ಸುತ್ತಲಿನ ತ್ವಚೆ ಕೆಂಪಗಾಗುವುದು. ಉರಿ, ಸತತ ನೀರು ಬರುವುದು, ದೃಷ್ಟಿಯಲ್ಲಿ ಅಸ್ಪಷ್ಟತೆ ಮುಖ್ಯ ಲಕ್ಷಣಗಳು.

ತಲೆಗೆ ಗಾಯ
ಆಡುವಾಗ, ಓಡುವಾಗ ಅಥವಾ ಜಿಗಿಯುವಾಗ ತಲೆ ಗಾಯ ಸಾಮಾನ್ಯ. ತಲೆಯ ತ್ವಚೆಯಲ್ಲಿ ಗಾಯ, ಊತ, ರಕ್ತಸ್ರಾವ ಉಂಟಾಗಬಹುದು. ಲಕ್ಷಣಗಳು ಒಂದು ಅಥವಾ ಎರಡು ದಿನಗಳಲ್ಲಿ ವಾಸಿ ಆಗುತ್ತವೆ. ಪೆಟ್ಟು ಪ್ರಬಲವಾಗಿದ್ದರೆ ತಲೆಬುರುಡೆಗೆ ಗಾಯ ಮತ್ತು ಮೆದುಳಿನಲ್ಲಿ ರಕ್ತಸ್ರಾವದ ಸಾಧ್ಯತೆಯಿದ್ದು, ಸತತ ವಾಂತಿ, ಪ್ರಜ್ಞಾಹೀನತೆ, ಅಪಸ್ಮಾರ ಕಾಣಿಸಬಹುದು. ತಲೆಗೆ ಗಾಯವಾದಾಗ ತಕ್ಷಣ ವೈದ್ಯರ ಸಲಹೆ ಪಡೆಯಿರಿ.

ಪಾಷಾಣ
ದೊಡ್ಡವರು ಮಾತ್ರೆ ಮತ್ತು ದ್ರವ ಔಷಧಿ ಸೇವಿಸುವುದನ್ನು ನೋಡಿದ ಮಗು ಅನುಕರಣೆ ಮಾಡಬಹುದು. ವಾಂತಿ, ಪ್ರಜ್ಞಾಹೀನತೆ, ಅಪಸ್ಮಾರ, ಬಣ್ಣದ ಮೂತ್ರ ಸಾಮಾನ್ಯ ಲಕ್ಷಣಗಳು.

ಬಾಲ್ಕನಿಯಿಂದ ಬೀಳುವುದು
ಮಹಾನಗರಗಳಲ್ಲಿ ಬಹುಮಹಡಿ ಕಟ್ಟಡ ಜಾಸ್ತಿಯಾದಂತೆ ಮಕ್ಕಳು ಬಾಲ್ಕನಿಯಿಂದ ಬೀಳುವುದೂ ಹೆಚ್ಚಾಗುತ್ತಿದೆ. ಶೇ 80ರಷ್ಟು ಮಕ್ಕಳು 10 ಅಡಿಗಿಂತ ಹೆಚ್ಚಿನ ಎತ್ತರದಿಂದ ಬೀಳುತ್ತಾರೆ ಮತ್ತು ಶೇ 80ರಷ್ಟು ಮಕ್ಕಳು ಮಾರಣಾಂತಿಕ ತಲೆಪೆಟ್ಟಿನಿಂದ ಸಾಯುತ್ತಾರೆ.

ಪ್ರಥಮ ಚಿಕಿತ್ಸೆ

*ನೀರಿನಲ್ಲಿ ಮುಳುಗಿದ ಮಗುವನ್ನು ನೀರಿನಿಂದ ತಕ್ಷಣ ಹೊರಗೆ ತೆಗೆದು ಚಪ್ಪಟೆ, ಗಟ್ಟಿಯಾದ ನೆಲದ ಮೇಲೆ ಬೆನ್ನು ಮೇಲೆ ಮಲಗಿಸಿರಿ. ಮೂಗು, ಬಾಯಿಯನ್ನು ಸ್ವಚ್ಛಗೊಳಿಸಿರಿ. ಮಗುವಿನ ಮೂಗನ್ನು ನಿಮ್ಮ ಕೈಯಿಂದ ಮೃದುವಾಗಿ ಮುಚ್ಚಿ, ಮಗುವಿನ ಬಾಯಿಗೆ ನಿಮ್ಮ ಬಾಯಿಯನ್ನು ಇರಿಸಿ ಉಸಿರಾಟ ಆರಂಭಿಸಿರಿ.

*ಸುಟ್ಟ ಗಾಯದ ಮೇಲೆ 15– 20 ನಿಮಿಷ ತಂಪಾದ ನೀರು ಸುರಿಯಿರಿ. ಉಜ್ಜಬೇಡಿ, ಏಕೆಂದರೆ ನೀರುಗುಳ್ಳೆ ಆಗುವ ಅಪಾಯವಿದೆ. ತಂಪಾದ ಸ್ವಚ್ಛ ಬಟ್ಟೆಯನ್ನು ಗಾಯದ ಮೇಲೆ ಇಡಿ. ಗಾಯದ ಮೇಲೆ ಮಂಜುಗಡ್ಡೆ, ಮುಲಾಮು, ಪೌಡರ್, ಬೆಣ್ಣೆ ಸವರಬೇಡಿ. ಏಕೆಂದರೆ ಸೋಂಕಿನ ಅಪಾಯವಿರುತ್ತದೆ.

*ಸಾಕು ಪ್ರಾಣಿಗಳು ಕಚ್ಚಿದ ಭಾಗವನ್ನು ಸ್ವಚ್ಛ ನೀರು, ಸಾಬೂನಿನಿಂದ ತೊಳೆದು ಸ್ವಚ್ಛ ಬಟ್ಟೆಯಿಂದ ಸುತ್ತಿರಿ. ಈ ಪ್ರಾಣಿಗಳಿಗೆ ಪೂರ್ಣ ಪ್ರಮಾಣದ ರೇಬಿಸ್ ರೋಗ ನಿರೋಧಕ ಕೊಡಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಿ. ಬೀದಿನಾಯಿ ಅಥವಾ ಬೆಕ್ಕು ಕಚ್ಚಿದರೆ ರೇಬಿಸ್ ನಿರೋಧಕ ಲಸಿಕೆ ಮಗುವಿಗೆ ಅವಶ್ಯ.

*ಗಾಯದಿಂದ ರಕ್ತಸ್ರಾವವಾಗುತ್ತಿದ್ದರೆ ಗಾಯದ ಮೇಲೆ ಹತ್ತಿ ಬಟ್ಟೆಯನ್ನು ಗಟ್ಟಿಯಾಗಿ ಹಿಡಿಯಿರಿ ಅಥವಾ ಸುತ್ತಿರಿ.15–20 ನಿಮಿಷಗಳಲ್ಲಿ ರಕ್ತಸ್ರಾವ ನಿಂತ ನಂತರ ಗಾಯದಲ್ಲಿ ಸಿಕ್ಕಿಗೊಂಡಿರುವ ಮರಳು, ಮಲಿನವನ್ನು ಸ್ವಚ್ಛ ನೀರು ಬಳಸಿ ತೆಗೆಯಿರಿ. ಒಣ ಬಟ್ಟೆಯಿಂದ ಒಣಗಿಸಿ, ರೋಗನಿರೋಧಕ ಮುಲಾಮು ಲೇಪಿಸಿರಿ.

*ಉಳುಕು/ಮೂಳೆಮುರಿತ: ರಕ್ತಸ್ರಾವವಿದ್ದಾಗ ಕೂಡಲೇ ನಿಲ್ಲಿಸಬೇಕು. ಆ ಭಾಗಕ್ಕೆ ಮಂಜುಗಡ್ಡೆ ಅಥವಾ ತಣ್ಣನೆಯ ಪಟ್ಟಿ ಇಡಿ. ಇದರಿಂದ ನೋವು, ಊತ ಕಡಿಮೆಯಾಗುತ್ತದೆ. ಭಾಗವನ್ನು ಎಳೆದಾಡಲು, ಮರು ಜೋಡಿಸಲು ಪ್ರಯತ್ನಿಸಬೇಡಿ. ಮಗು ಹಿತಕರವಾದ ಭಂಗಿಯಲ್ಲಿ ವಿರಮಿಸಲಿ. ತಕ್ಷಣ ವೈದ್ಯ ಸಲಹೆ ಪಡೆಯಿರಿ.

*ಕೀಟ ಕಡಿತದ ಭಾಗಕ್ಕೆ ಮಂಜುಗಡ್ಡೆ ಅಥವಾ ತಣ್ಣನೆಯ ಒದ್ದೆ ಬಟ್ಟೆ ಇಡಿ.

*ಕಣ್ಣಿಗೆ ಪೆಟ್ಟಾದಾಗ ಕೆಳ ರೆಪ್ಪೆಯನ್ನು ಮೃದುವಾಗಿ ಎಳೆದು ಗಾಯದ ಪ್ರಮಾಣ, ಗಂಭೀರತೆ ಮತ್ತು ಹೊಸ ವಸ್ತುಗಳಿದ್ದರೆ ಗಮನಿಸಿ. ಗಾಯವಿಲ್ಲದಿದ್ದರೆ, ಉಗುರು ಬೆಚ್ಚಗಿನ ನೀರು ಹಾಕಿ ಕಣ್ಣನ್ನು ತೊಳೆಯಿರಿ. ಕೂಡಲೆ ವೈದ್ಯರನ್ನು ಸಂಪರ್ಕಿಸಿರಿ.

*ವಸ್ತುಗಳನ್ನು ನುಂಗಿ ಉಸಿರಾಟಕ್ಕೆ ತೊಂದರೆ ಆದಾಗ ಆ ವಸ್ತುವನ್ನು ಬೆರಳಿನಿಂದ ತೆಗೆಯಲು ಪ್ರಯತ್ನಿಸಬೇಡಿ. ಏಕೆಂದರೆ ಮತ್ತಷ್ಟು ಗಂಟಲಿನ ಒಳಗೆ ಹೋಗುವ ಅಪಾಯವಿದೆ. ತಕ್ಷಣ ವೈದ್ಯ ಸಲಹೆ ಅವಶ್ಯ.

*ಅಪಾಯಕಾರಿ ವಸ್ತು ಅಥವಾ ಮಾತ್ರೆ, ಔಷಧಿ ಸೇವಿಸಿದಾಗ ವಾಂತಿ ಮಾಡಿಸಲು ಪ್ರಯತ್ನಿಸಬೇಡಿ. ಕುಡಿಯಲು ಹಾಲು ಅಥವಾ ದ್ರವ ಆಹಾರ ಬೇಡ. ಏಕೆಂದರೆ ಸೇವಿಸಿದ ವಸ್ತು ದ್ರವವಾಗಿ ರಕ್ತದಲ್ಲಿ ಬೇಗ ಸೇರುವ ಅಪಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT