ಸೋಮವಾರ, ಆಗಸ್ಟ್ 2, 2021
20 °C
ಸ್ವಾಭಾವಿಕವಾಗಿ ಶರೀರದಲ್ಲಿ ಆಮ್ಲಜನಕವನ್ನು ಹೆಚ್ಚಿಸಿಕೊಳ್ಳಿ..

ಶರೀರಕ್ಕೆ ಆಮ್ಲಜನಕ ಕೊರತೆಯೇ? ಮನೆಯಲ್ಲಿದ್ದೇ ಸುಲಭವಾಗಿ ಪಡೆಯುವ ಬಗೆ ಹೀಗೆ...

ಡಾ. ಸ್ಮಿತಾ ಜೆ ಡಿ Updated:

ಅಕ್ಷರ ಗಾತ್ರ : | |

DH Stock Image

ಕೋವಿಡ್-19 ರೂಪಾಂತರ ಸೋಂಕಿನಲ್ಲಿ ಆಮ್ಲಜನಕವನ್ನು ಜೀವಾಮೃತ ಎಂದೇ ಪರಿಗಣಿಸಬಹುದಾಗಿದೆ. ಸೋಂಕಿತರ ರಕ್ತದಲ್ಲಿನ ಆಮ್ಲಜನಕದ ಪ್ರಮಾಣವು ಶೇ 94 ಕ್ಕಿಂತ ಕಡಿಮೆ ಇದ್ದಲ್ಲಿ ಅವರಿಗೆ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ರಕ್ತದಲ್ಲಿ ಶೇ 95-100 ಆಮ್ಲಜನಕದ ಅಂಶವು ಇರಬಹುದಾಗಿದೆ.

ಶರೀರದಲ್ಲಿ ಆಮ್ಲಜನಕದ ಪ್ರಾಮುಖ್ಯತೆ ಏನು ?

ಆಮ್ಲಜನಕವು ರಕ್ತದ ಮೂಲಕ ಶರೀರದ ಪ್ರತಿಯೊಂದು ಜೀವಕೋಶಕ್ಕೆ ತಲುಪಿ ಜೀವಕೋಶಗಳಿಗೆ ಬೇಕಾದಂತಹ ಆಂತರಿಕ ಶಕ್ತಿಯನ್ನು ನೀಡುವಲ್ಲಿ, ಹಾನಿಗೊಳಗಾದ ಜೀವಕೋಶಗಳ ರಿಪೇರಿಯಾಗಲು, ಜೀವಕೋಶದ ಬೆಳವಣಿಗೆಗೆ ಸಹಾಯಕವಾಗುತ್ತದೆ. ಶ್ವಾಸಕೋಶದ ಜೀವಕೋಶಗಳಲ್ಲಿನ ಇಂಗಾಲ ಡೈ ಆಕ್ಸೈಡ್ ಅನ್ನು ಹೊರಹಾಕಿ ಆಮ್ಲಜನಕವನ್ನು ಜೀವಕೋಶಗಳಿಗೆ ಶಕ್ತಿ ನೀಡಲು ಸಹಾಯಕ. ಶರೀರದಲ್ಲಿನ ಆಮ್ಲಜನಕದ ಕೊರತೆಯುಂಟಾದಾಗ ಉಸಿರಾಟದ ಸಮಸ್ಯೆಗೆ ಎಡೆಮಾಡಿಕೊಡುತ್ತದೆ.

ಸ್ವಾಭಾವಿಕವಾಗಿ ಶರೀರದಲ್ಲಿನ ಆಮ್ಲಜನಕವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ?

ದೈಹಿಕ ವ್ಯಾಯಾಮ :   

ದೈನಂದಿನ ದಿನಚರಿಯಲ್ಲಿ ದೈಹಿಕ ವ್ಯಾಯಾಮವನ್ನು ಅಳವಡಿಸಿಕೊಳ್ಳುವುದು ಅತ್ಯವಶ್ಯಕ. ವ್ಯಾಯಾಮದಿಂದ ಶರೀರದಲ್ಲಿ ಶೇಖರವಾಗುವ ಇಂಗಾಲ ಡೈ ಆಕ್ಸೈಡ್ ಅನ್ನು ಹೊರಹಾಕಿ ಆಮ್ಲಜನಕವನ್ನು ಏರಿದ ಉಸಿರಾಟದ ಮೂಲಕ ತೆಗೆದುಕೊಳ್ಳಲು ಸಹಾಯವಾಗುತ್ತದೆ.  ದೀರ್ಘಕಾಲ ಶ್ವಾಸಕೋಶದ ಸಮಸ್ಯೆಯಿಂದ ಬಳಲುವವರು ನಿಯಮಿತ ವ್ಯಾಯಾಮದಿಂದ ಶರೀರದಲ್ಲಿನ ಆಮ್ಲಜನಕದ ಅಂಶವನ್ನು ಹೆಚ್ಚಿಸಿಕೊಳ್ಳಬಹುದು.

ಉತ್ಕರ್ಷಣಾನಿರೋಧಕಗಳು ( ANTIOXIDANTS ) :

ಆಹಾರದಲ್ಲಿ ಹೆಚ್ಚು ಉತ್ಕರ್ಷಣಾನಿರೋಧಕ ಅಂಶವಿರುವ ಆಹಾರಗಳಾದ ಹಸಿರು ತರಕಾರಿಗಳು, ಹಣ್ಣುಗಳು, ಸಮುದ್ರಾಹಾರ, ಗ್ರೀನ್ ಟೀ, ಬ್ರಾಕಲಿ, ಕಿವಿ ಹಣ್ಣು ಮುಂತಾದ ವೈಟಮಿನ್ ‘E’ ಹಾಗೂ ವೈಟಮಿನ್ ‘C’ ಯುಕ್ತ ಆಹಾರ ಪದಾರ್ಥಗಳ ಸೇವನೆಯಿಂದ ಶರೀರದಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ.

ಭಂಗಿ :

ನಡೆಯುವಾಗ, ನಿಲ್ಲುವಾಗ, ಕುಳಿತುಕೊಳ್ಳುವಾಗ ಸರಿಯಾದ ಭಂಗಿಯನ್ನು ಅನುಸರಿಸುವುದರಿಂದ ಉಸಿರಾಟವು ಸರಾಗವಾಗಿ, ಶ್ವಾಸಕೋಶದ ಜೀವಕೋಶಗಳಿಗೆ ಆಮ್ಲಜನಕವು ತಲುಪಲು ಸಹಾಯವಾಗುತ್ತದೆ. ಕೋವಿಡ್-19 ಸೋಂಕಿತರು ಹಾಗೂ ಉಸಿರಾಟದ ಸಮಸ್ಯೆಯಿರುವವರು ಬೋರಲು ಮಲಗುವುದು/ ಮುಖಕೆಳಗೆ ಮಾಡಿ ಕತ್ತನ್ನು ಒಂದು ಬದಿಗೆ ತಿರುಗಿಸಿ ಮಲಗಿ ಎದೆಯ ಭಾಗಕ್ಕೆ, ತೊಡೆಯ ಭಾಗಕ್ಕೆ ಹಾಗೂ ಪಾದಗಳ ಭಾಗಕ್ಕೆ ದಿಂಬನ್ನು ಇಟ್ಟು ಮಲಗುವುದರಿಂದ ಶ್ವಾಸಕೋಶಕ್ಕೆ ಆಮ್ಲಜನಕವು ಸರಾಗವಾಗಿ ತಲುಪಲು ಸಹಾಯವಾಗುತ್ತದೆ.

ವಾತಾವರಣ :

ವಾತಾವರಣವು ಕಲುಷಿತವಾಗಿರುವಂತಹ ಅಂದರೆ ವಾಹನಗಳ ದಟ್ಟ ಸಂದಣಿ ಇರುವ ಸ್ಥಳಗಳನ್ನು, ಧೂಳು ಮುಂತಾದ ಕಲುಷಿತ ವಾತಾವರಣದಿಂದ ದೂರವಿರುವುದು ಉತ್ತಮ.

ಹಸಿರು/ ತೋಟಗಳು :

ಮನೆಗಳಲ್ಲಿ , ಹಿತ್ತಲುಗಳಲ್ಲಿ ಚಿಕ್ಕದಾದ ಹಸಿರು ತೋಟಗಳನ್ನು ಬೆಳೆಸುವುದರಿಂದ ವಾತಾವರಣದಲ್ಲಿ ಸ್ವಾಭಾವಿಕವಾಗಿ ಆಮ್ಲಜನಕವು ಹೆಚ್ಚಿಸಬಹುದಾಗಿದೆ.

ಫ್ಯಾಟಿ ಆಸಿಡ್ಸ್ ( FATTY ACIDS ) :

ಆಹಾರದಲ್ಲಿ ಫ್ಯಾಟಿ ಆಸಿಡ್ಸ್ ಹೆಚ್ಚಿರುವ ಅಂದರೆ L- ಲಿನೋಲಿಯಿಕ್ ಆಸಿಡ್, ಲಿನೋಲಿಯಿಕ್ ಆಸಿಡ್ ( LINOLEIC ACID )  ಹೆಚ್ಚಿರುವ ಸೋಯಾಕಾಳು, ಹುರುಳಿ, ವಾಲ್ನಟ್ ಶರೀರದಲ್ಲಿ ಸ್ವಾಭಾವಿಕವಾಗಿ ಆಮ್ಲಜನಕವನ್ನು ಹೆಚ್ಚಿಸಲು ಸಹಾಯಕ.

ಧೀರ್ಘ ಉಸಿರಾಟ :

ಪ್ರಾಣಾಯಾಮ, ಉಸಿರಾಟದ ವ್ಯಾಯಾಮಗಳು ಇವುಗಳಿಂದ ಧೀರ್ಘವಾಗಿ ಉಸಿರಾಡುವುದರಿಂದ ಸ್ವಾಭಾವಿಕವಾಗಿ ಶರೀರದಲ್ಲಿ ಆಮ್ಲಜನಕವನ್ನು ಹೆಚ್ಚಿಸಬಹುದಾಗಿದೆ.

ಧೂಮಪಾನ / ಮದ್ಯಪಾನ :

ಧೀರ್ಘಕಾಲ ಧೂಮಪಾನದ ಅಭ್ಯಾಸದಿಂದ ಶ‍್ವಾಸಕೋಶದ ಜೀವಕೋಶಗಳಿಗೆ ಹಾನಿಯುಂಟಾಗಿ ಶರೀರದ ಆಮ್ಲಜನಕ ಪ್ರಮಾಣವನ್ನು ಕುಗ್ಗಿಸುತ್ತದೆ. ಆದುದರಿಂದ ಧೂಮಪಾನ ಹಾಗೂ ಮದ್ಯಪಾನದಿಂದ ದೂರ ಉಳಿಯುವುದು ಶರೀರದಲ್ಲಿನ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಲು ಅವಶ್ಯಕ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು