ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಹೇಗೆ?: ಇಲ್ಲಿವೆ ಸಲಹೆಗಳು

ಡಾ ಸುನೀತಾ ಶರ್ಮಾ
Published 12 ಜೂನ್ 2024, 7:07 IST
Last Updated 12 ಜೂನ್ 2024, 7:07 IST
ಅಕ್ಷರ ಗಾತ್ರ

ಪ್ರತಿಯೊಂದು ಹೆಣ್ಣು ಮುಟ್ಟಿನ ನೈಸರ್ಗಿಕ ಪ್ರಕ್ರಿಯೆಗೆ ಒಳಗಾಗಿಯೇ ಆಗುತ್ತಾಳೆ. ಇದು ಪ್ರಕೃತಿ ಸಹಜ ಕ್ರಿಯೆ. ಹೊಸದಾಗಿ ಋತುಮತಿಯಾಗುವ ಹೆಣ್ಣು ಮಕ್ಕಳಲ್ಲಿ ಮುಟ್ಟಿನ ನೈರ್ಮಲ್ಯದ ಬಗ್ಗೆ ಅಷ್ಟಾಗಿ ಅರಿವು ಇರುವುದಿಲ್ಲ. ಮುಟ್ಟಾದ ಸಂದರ್ಭದಲ್ಲಿ ಪ್ರತಿಯೊಂದು ಹೆಣ್ಣು ಯಾವ ರೀತಿಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು, ಇದರಿಂದಾಗುವ ಆರೋಗ್ಯದ ಪ್ರಯೋಜನಗಳ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.

ಸ್ಯಾನಿಟರಿ ಪ್ಯಾಡ್‌ ಅಥವಾ ಮೆನ್ಸ್ಟ್ರುವಲ್‌ ಕಪ್‌ ಯಾವುದು ಸುರಕ್ಷಿತ?

ಹಿಂದೆಲ್ಲಾ ಮುಟ್ಟಾದ ಸಂದರ್ಭದಲ್ಲಿ ಬಟ್ಟೆಗಳ ಬಳಕೆ ಇತ್ತು. ಆದರೆ, ಈ ಬಟ್ಟೆಗಳ ಮರುಬಳಕೆಯಿಂದ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಬಳಿಕ ಸ್ಯಾನಿಟರಿ ಪ್ಯಾಡ್‌ಗಳ ಬಳಕೆ ಚಾಲ್ತಿಗೆ ಬಂತು. ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಯಾನಿಟರಿ ಪ್ಯಾಡ್‌ಗಳು ಲಭ್ಯವಿದೆ. ಆದರೆ, ಸ್ಯಾನಿಟರಿ ಬಳಕೆಗಿಂತ ಮೆನ್ಸ್ಟ್ರುವಲ್‌ ಕಪ್‌ಗಳು ಹೆಚ್ಚು ಸುರಕ್ಷಿತ ಹಾಗೂ ಶುಚಿತ್ವ ಕಾಪಾಡಿಕೊಳ್ಳಲು ಇರುವ ಉತ್ತಮ ಮಾರ್ಗ ಎನ್ನುವುದು ಸಾಬೀತಾಗುತ್ತಿದೆ. ಸ್ಯಾನಿಟರಿ ಪ್ಯಾಡ್‌ಗಳನ್ನು ದಿನದಲ್ಲಿ ಕನಿಷ್ಠ 2–3 ಬಾರಿ ಬದಲಾಯಿಬೇಕು, ಒಂದು ವೇಳೆ ಒಂದೇ ಪ್ಯಾಡ್‌ನನ್ನು ಹೆಚ್ಚು ಸಮಯ ಬಳಸುವುದರಿಂದ ಮತ್ತದೇ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುವ ಸಾಧ್ಯತೆ ಇದೆ, ಜೊತೆಗೆ, ಪರಿಸರದ ದೃಷ್ಟಿಯಿಂದಲೂ ಸ್ಯಾನಿಟರಿ ಪ್ಯಾಡ್‌ ಸಂಸ್ಕರಣೆ ಕ್ಲಿಷ್ಟ. ಆದರೆ, ಮೆನ್ಸ್ಟ್ರುವಲ್‌ ಕಪ್‌ ಬಳಕೆ ಹೆಚ್ಚು ಸುರಕ್ಷಿತ. ಇದರ ಬಳಕೆಗೆ ಒಮ್ಮೆ ಒಗ್ಗಿಕೊಂಡರೆ ಸಾಕು, ಒಂದೇ ಮೆನ್ಸ್ಟ್ರುವಲ್‌ ಕಪ್‌ ಅನ್ನು ಹಲವು ವರ್ಷಗಳು ಬಳಕೆ ಮಾಡಬಹುದು, ಜೊತೆಗೆ ಬಳಕೆಯೂ ಸುಲಭ. ಆರೋಗ್ಯ ಸಮಸ್ಯೆ ಕಾಡಬಹುದು ಎಂಬ ಚಿಂತೆ ಇಲ್ಲ. ಆದರೆ, ಈಗಷ್ಟೇ ಋತುಮತಿಯಾದ ಸಣ್ಣ ವಯಸ್ಸಿನ ಹೆಣ್ಣುಮಕ್ಕಳಿಗೆ ಮೆನ್ಸ್ಟ್ರುವಲ್‌ ಕಪ್‌ ಬಳಕೆಗಿಂತ ಸ್ಯಾನಿಟರಿ ಪ್ಯಾಡ್‌ ಬಳಕೆ ಸೂಕ್ತ.

ನಿಯಮಿತವಾಗಿ ಪ್ಯಾಡ್‌ ಬದಲಾಯಿಸುತ್ತಿರಿ

ಯಾವುದೇ ಮುಟ್ಟಿನ ಉತ್ಪನ್ನವಾಗಲಿ ಅದನ್ನು ನಿಯಮಿತವಾಗಿ ಬದಲಾಯಿಸುವುದು ಸೂಕ್ತ. ಪ್ಯಾಡ್‌ಗಳಾದಲ್ಲಿ ದಿನದಲ್ಲಿ ಕನಿಷ್ಠ 2 – 3 ಪ್ಯಾಡ್‌ ಬಳಕೆ ಉತ್ತಮ. (ಮೊದಲ ಮೂರು ದಿನ) ಮೆನ್ಸ್ಟ್ರುವಲ್‌ ಕಪ್‌ ಆದಲ್ಲಿ, ಅದನ್ನು ಆಗಾಗ್ಗೇ ತೆಗೆದು ತೊಳೆಯುವುದು ಸೂಕ್ತ.

ಐದು ದಿನ ಸ್ವಚ್ಛತೆಗೆ ಆದ್ಯತೆ ನೀಡಿ

ರೋಗಾಣುಗಳ ಹರಡುವಿಕೆಯನ್ನು ತಡೆಗಟ್ಟಲು ಮುಟ್ಟಿನ ಉತ್ಪನ್ನಗಳನ್ನು ಬದಲಾಯಿಸುವ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ, ಇನ್ನು, ಪ್ಯಾಡ್‌ ಬದಲಿಸಿದ ಬಳಿಕ ನಿಮ್ಮ ಜನನಾಂಗವನ್ನು ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ, ಕೆಲವರು ಸೋಪ್‌ ಬಳಕೆ ಮಾಡುತ್ತಾರೆ, ಸೋಪ್‌ ಬಳಕೆ ಮಾಡುವ ಅಭ್ಯಾಸವಿದ್ದರೆ, ಹೆಚ್ಚು ಸುವಾಸನೆಯುಕ್ತ ಸೋಪ್‌ ಬಳಕೆ ಮಾಡದಿರಿ. ಬದಲಿಗೆ ಸೌಮ್ಯವಾದ ಸೋಪ್‌ ಅಥವಾ ಬಾಡಿವಾಶ್‌ ಬಳಸಿ. ಮುಟ್ಟಿನ ಸಮಯದಲ್ಲಿ ಹೆಚ್ಚು ಬಾರಿ ವಾಶ್‌ರೂಮ್‌ ಬಳಸಿ ಖಾಸಗಿ ಅಂಗವನ್ನು ಆಗಾಗ್ಗೇ ಸ್ವಚ್ಛಗೊಳಿಸಿಕೊಳ್ಳಿ.

ಆರಾಮದಾಯಕ ಒಳ ಉಡುಪು ಧರಿಸಿ

ಮುಟ್ಟಿನ ಸಂದರ್ಭದಲ್ಲಿ ದೇಹವನ್ನು ಹಗುರವಾಗಿ ಇಡುವುದು ಉತ್ತಮ. ಹೀಗಾಗಿ ಒಳುಡುಪಾಗಲಿ ಅಥವಾ ಹೊರಉಡುಪಾಗಲಿ ಆರಾಮಾದಯಾಕ ಕಾಟನ್‌ ಬಟ್ಟೆ ಧರಿಸುವುದು ಉತ್ತಮ. ಬಿಗಿಯಾದ ಉಡುಪು ಸೂಕ್ಷ್ಮಾಣು ಬೆಳವಣಿಗೆಗೆ ಕಾರಣವಾಗಬಹುದು.

ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಮುಟ್ಟಿನ ಅವಧಿಯಲ್ಲಿ ಹೆಚ್ಚು ನೀರು ಕುಡಿಯುವುದು ಹಾಗೂ ಉತ್ತಮ ಆಹಾರ ಸೇವನೆ ಒಳ್ಳೆಯದು. ಇದರಿಂದ ಹೊಟ್ಟೆ ನೋವು ಸಹ ಕಡಿಮೆಯಾಗಲಿದೆ. ಹೆಚ್ಚು ಜಂಕ್‌ಸೇವನೆ ಉತ್ತಮವಲ್ಲ. ನಿಮ್ಮ ಹೊಟ್ಟೆ ನೋವು, ಸುಸ್ತಿನ ಪ್ರಮಾಣ ನೋಡಿಕೊಂಡು ವಾಕಿಂಗ್‌ ಮಾಡುವುದು ಉತ್ತಮ. ವಾಕಿಂಗ್‌ನಿಂದಲೂ ನಿಮ್ಮ ದೇಹ ಹಾಗೂ ಮನಸ್ಸು ಹಗುರವಾಗಲಿದೆ.

ಮುಟ್ಟಿನ ಸಂದರ್ಭದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು, ಇಲ್ಲವಾದಲ್ಲಿ ಸಾಕಷ್ಟು ಆರೋಗ್ಯ ಸಮಸ್ಯಗೆ ಆಹ್ವಾನ ನೀಡಿದಂತೆ.

ಲೇಖಕರು: ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ, ಫೋರ್ಟಿಸ್ ಆಸ್ಪತ್ರೆ ನಾಗರಭಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT