ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಕಾ | ಸೈಬರ್‌ಕಾಂಡ್ರಿಯಾ ಇರಬಹುದು.

Last Updated 15 ಮೇ 2020, 19:45 IST
ಅಕ್ಷರ ಗಾತ್ರ

ಕೊರೊನಾ ಸೋಂಕು ತಗುಲುವ ಭೀತಿಯಿಂದ ಉಂಟಾಗಿರುವ ಖಿನ್ನತೆ, ದಿಗಿಲಿನ ಜೊತೆ ‘ಸೈಬರ್‌ ಕಾಂಡ್ರಿಯಾ’ ಎಂಬ ಸಮಸ್ಯೆಯೂ ಇತ್ತೀಚೆಗೆ ಹೆಚ್ಚಾಗಿದೆ. ಅಂದರೆ ಕೊರೊನಾ ಕುರಿತಂತೆ ಅಂತರ್ಜಾಲದಲ್ಲಿ ಹೆಚ್ಚು ಹೆಚ್ಚು ಮಾಹಿತಿಗೆ ತಡಕಾಡುವುದು, ತಮ್ಮಲ್ಲಿಯೂ ಅದರ ಲಕ್ಷಣ ಗೋಚರಿಸಿದಂತೆ ಭ್ರಮೆಯಾಗಿ ಭಯಗೊಳ್ಳುವುದು ಜಾಸ್ತಿಯಾಗಿದೆ.

ಅಕ್ಷರ 25 ವರ್ಷದ ಯುವಕ. ಕತ್ತು, ಹಣೆ ಬಿಸಿಯಾದಂತಾಗಿ ಪದೆ ಪದೆ ಮುಟ್ಟಿ ನೋಡಿಕೊಳ್ಳುತ್ತಾನೆ. ಒಮ್ಮೊಮ್ಮೆ ಚಳಿಯಾದಂತಹ ಅನುಭವವಾಗುತ್ತಿದೆ, ಊಟ ರುಚಿಸುತ್ತಿಲ್ಲ ಎಂದು ತನ್ನಷ್ಟಕ್ಕೇ ಅಂದುಕೊಂಡು ಅಂತರ್ಜಾಲದಲ್ಲಿ ಮಾಹಿತಿಯನ್ನು ಕಲೆಹಾಕಿ ತನಗೆ ಕೊರೊನಾ ಸೋಂಕು ತಗುಲಿದೆ ಎಂದು ಪೋಷಕರ ಬಳಿ ಹೇಳಿಕೊಂಡಾಗ ಅವರಿಗೂ ಗಾಬರಿ. ವೈದ್ಯರ ಬಳಿ ಒಯ್ದಾಗ ಅವರು ಪರೀಕ್ಷೆ ಮಾಡಿ ಅಂತಹದ್ದೇನೂ ಇಲ್ಲ ಎಂದು ಅಭಯ ಕೊಟ್ಟರೂ ಆತನಿಗೆ ಆತಂಕ ಕಡಿಮೆಯಾಗಿಲ್ಲ. ಅಂತರ್ಜಾಲದಲ್ಲಿ ಬೇರೆ ಬೇರೆ ತಾಣಗಳಲ್ಲಿ ಹುಡುಕುತ್ತಾ ಗಂಟೆಗಟ್ಟಲೆ ಸಮಯ ಕಳೆಯುತ್ತಾನೆ. ವಿಟಮಿನ್ ಮಾತ್ರೆಗಳು, ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಪದಾರ್ಥಗಳನ್ನು ಸೇವಿಸಲು ಆರಂಭಿಸಿದ್ದಾನೆ. ಮನೆಯವರು ಮತ್ತು ಸ್ನೇಹಿತರ ಜೊತೆ ಮಾತನಾಡುವುದನ್ನೂ ಕಡಿಮೆ ಮಾಡಿದ್ದಾನೆ.

ಅಂತರ್ಜಾಲದಲ್ಲಿ ಕೋವಿಡ್‌– 19 ಲಕ್ಷಣಗಳ ಕುರಿತು ಮಾಹಿತಿ ಪಡೆಯುವುದು, ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ನಿಗಾ ವಹಿಸುವುದು ಒಳ್ಳೆಯದೇ. ಆದರೆ ಈ ಸಂದರ್ಭದಲ್ಲಿ ಬಹಳಷ್ಟು ಮಂದಿ ತಮ್ಮ ಆರೋಗ್ಯದ ಬಗ್ಗೆ ವಿನಾಕಾರಣ ಆತಂಕಗೊಳ್ಳುವುದು, ಪದೇ ಪದೇ ಅಂತರ್ಜಾಲದಲ್ಲಿ ಆ ಕುರಿತು ಮಾಹಿತಿಗಾಗಿ ತಡಕಾಡುವುದು, ಮತ್ತಷ್ಟು ಭಯಗೊಳ್ಳುವುದು ಜಾಸ್ತಿಯಾಗಿದೆ. ಇದು ‘ಸೈಬರ್‌ಕಾಂಡ್ರಿಯಾ’ದ ಲಕ್ಷಣ.

ಸೈಬರ್‌ಕಾಂಡ್ರಿಯಾ ಎಂದರೇನು?

‘ಸೈಬರ್ ಕಾಂಡ್ರಿಯಾ’ ಎಂದರೆ ದೈಹಿಕ- ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿ ಹುಡುಕುವುದಕ್ಕೆ ಅಂತರ್ಜಾಲದಲ್ಲಿ ಅಗತ್ಯಕ್ಕಿಂತ ಹೆಚ್ಚು ಕಾಲವನ್ನು ಕಳೆಯುವುದು. ಅಷ್ಟು ಸಮಯ ವ್ಯಯ ಮಾಡಿದರೂ ಸಹ, ಸಮಾಧಾನವಾಗದೇ ಇರುವ ಮನಃಸ್ಥಿತಿ. ಜನಸಾಮಾನ್ಯರಿಗೆ ಆರೋಗ್ಯದ ಬಗ್ಗೆ ಸಿದ್ಧ ಮಾಹಿತಿ ಪಡೆಯಲು ಅಂತರ್ಜಾಲ ಮಾಧ್ಯಮ ಒಂದು ಒಳ್ಳೆಯ ಸಾಧನ. ಈ ಮಾಹಿತಿಯನ್ನು ಆಧರಿಸಿ ತಮ್ಮ ಅವಶ್ಯಕತೆಗಳು ಏನು, ಎಲ್ಲಿಗೆ, ಯಾವ ವೈದ್ಯರ ಬಳಿ ಹೋಗಬೇಕು ಎಂಬ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಹಕಾರಿ. ಆದರೆ, ಒಂದು ಅಂಶ ಗಮನದಲ್ಲಿ ಇಡಬೇಕು– ಅಂತರ್ಜಾಲದಲ್ಲಿ ಸಿಗುವ ಎಲ್ಲಾ ಮಾಹಿತಿ ಗುಣಮಟ್ಟ ಹೊಂದಿರುವುದಿಲ್ಲ ಹಾಗೂ ನಂಬಲರ್ಹವಲ್ಲ ಎಂಬುದು. ಎಷ್ಟೋ ಬಾರಿ ನಿಖರವಲ್ಲದ ಹಾಗೂ ವೈರುಧ್ಯಮಯ ಮಾಹಿತಿ ಇರುತ್ತದೆ.

ಎಷ್ಟೋ ಬಾರಿ ಮಾಹಿತಿ ಸರಿಯಾಗಿ ಪರಿಶೀಲಿಸಲ್ಪಡದ ವೆಬ್‌ಸೈಟ್‌ಗಳು ಅಥವಾ ಅನಧಿಕೃತ ಮೂಲಗಳಿಂದ ಬಂದಿರುತ್ತವೆ. ಅಲ್ಲದೆ, ಯಾವುದೇ ಆರೋಗ್ಯಕ್ಕೆ ಸಂಬಂಧಿಸಿದ ‘ಕೀ ವರ್ಡ್‌’ ಟೈಪ್ ಮಾಡಿದರೆ, ಮೊದಲಿಗೆ ಸಿಗುವ ಮಾಹಿತಿಗಳೆಂದರೆ ಅತ್ಯಂತ ಗಂಭೀರವಾದವು. ಉದಾ: ‘ಗಂಟಲಿನಲ್ಲಿ ಗಂಟು’ ಎಂದು ಟೈಪ್ ಮಾಡಿದರೆ ನಮಗೆ ಮೊದಲು ಕಾಣಿಸುವುದು ‘ಗಂಟಲ ಕ್ಯಾನ್ಸರ್’ ಕುರಿತ ಮಾಹಿತಿ. ಮೇಲೆ ಕಾಣಿಸಿದ ಲಕ್ಷಣಕ್ಕೆ ಬೇರೆ ಹತ್ತಾರು ಸಾಮಾನ್ಯ ಕಾರಣಗಳು ಇರಬಹುದು ಎಂಬ ಯೋಚನೆಯೂ ಬರುವುದಿಲ್ಲ. ಹಾಗಾಗಿ ಹೆಚ್ಚು ಸಮಯ ಅಂತರ್ಜಾಲವನ್ನು ಹುಡುಕುವುದರಲ್ಲೇ ಕಾಲ ವ್ಯಯ ಮಾಡುತ್ತಾರೆ.

ಆತಂಕದಿಂದ ಹೆಚ್ಚುವ ತೊಂದರೆ

ಮತ್ತೊಂದು ಸಮಸ್ಯೆಯೇನೆಂದರೆ ಇರುವ ಮಾಹಿತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಆತಂಕದ ವ್ಯಕ್ತಿತ್ವವುಳ್ಳವರು ಆರೋಗ್ಯದ ಮಾಹಿತಿಯನ್ನು ನಕಾರಾತ್ಮಕವಾಗಿ ಹೆಚ್ಚು ಗ್ರಹಿಸುತ್ತಾರೆ.

‘ಸೈಬರ್‌ಕಾಂಡ್ರಿಯಾ’ ಇರುವ ವ್ಯಕ್ತಿಗಳಲ್ಲಿ ಇವುಗಳು ಸಾಮಾನ್ಯ: ಹೆಚ್ಚು ಚಿಂತೆಮಾಡುವ ಗುಣ, ಸಾಮಾನ್ಯ ದೈಹಿಕ ನೋವುಗಳಿಗೂ ಹೆಚ್ಚು ಚಿಂತೆ, ಆರೋಗ್ಯದ ಸೇವೆಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸುವುದು ಇತ್ಯಾದಿ.

ಈಗಂತೂ ಬಹುತೇಕ ಮಂದಿ ಮಾತನಾಡುವುದು ಕೋವಿಡ್‌ –19 ಪಿಡುಗಿನ ಕುರಿತು. ಮಾಧ್ಯಮದಲ್ಲೂ ಈ ಕುರಿತ ಸುದ್ದಿಗಳೇ ತುಂಬಿರುತ್ತವೆ. ಇದು ಈಗಾಗಲೇ ದಿಗಿಲು ಇರುವವರಲ್ಲಿ ಇನ್ನಷ್ಟು ಭೀತಿಯನ್ನು ಹುಟ್ಟಿಸುತ್ತದೆ. ಇಂಥವರು ಅಂತರ್ಜಾಲದಲ್ಲಿ ಪದೇ ಪದೇ ಕೊರೊನಾ ಸೋಂಕಿನ ಕುರಿತು ಪರಿಶೀಲಿಸುವುದನ್ನು ಬಿಡುವುದು ಒಳಿತು.

ಪರಿಹಾರವೇನು?

ಅಧಿಕೃತ ಅಂತರ್ಜಾಲದ ವೆಬ್‌ಸೈಟ್‌ಗಳನ್ನೇ ಅವಲಂಬಿಸುವುದು.

ಮಾಹಿತಿಗಳನ್ನು ಕೊಟ್ಟಿರುವ ವ್ಯಕ್ತಿಗಳ ಪರಿಚಯ, ಅವರ ಅರ್ಹತೆ ಏನು ಎನ್ನುವುದರ ಜ್ಞಾನ ಇರಬೇಕು.

ವೈಜ್ಞಾನಿಕ, ಖ್ಯಾತಿ ಹೊಂದಿದ ಹಾಗೂ ಶೈಕ್ಷಣಿಕ ಸಂಸ್ಥೆಗಳ ವೆಬ್‌ಸೈಟ್‌ಗಳಿಂದ ಮಾಹಿತಿ ಪಡೆಯಬಹುದು. ಇಂತಹ ಸಂಸ್ಥೆಗಳು ವೈಜ್ಞಾನಿಕ ಮಾಹಿತಿ ನೀಡುವವಲ್ಲದೇ ಆಗಾಗ ಮಾಹಿತಿಯನ್ನು ನವೀಕರಿಸುತ್ತವೆ.

ಇತರ ದೈನಂದಿನ ಕೆಲಸಗಳನ್ನು ಕಡೆಗಣಿಸಬಾರದು. ಇದಕ್ಕಾಗಿ ಅಂತರ್ಜಾಲ ನೋಡುವುದನ್ನು ಆದಷ್ಟು ಕಡಿಮೆ ಮಾಡಿ. ಕುಟುಂಬ ಸದಸ್ಯರ ಮೇಲ್ವಿಚಾರಣೆಯಲ್ಲಿ ನೋಡಿದರೆ ಅಂತರ್ಜಾಲದ ಸಮಯವನ್ನು ಹದ್ದುಬಸ್ತಿನಲ್ಲಿಡಬಹುದು.

ಇವೆಲ್ಲದರಿಂದ ಸಾಧ್ಯವಾಗದೆ ಇದ್ದಲ್ಲಿ ಮಾನಸಿಕ ತಜ್ಞರ ಬಳಿ ತೆರಳಬೇಕು.

ಶಾಲಾ ಕಾಲೇಜು ಮಟ್ಟದಲ್ಲಿ ಆರೋಗ್ಯದ ಬಗ್ಗೆ ಅರಿವು/ ಮಾಹಿತಿಯನ್ನು ಹೆಚ್ಚು ಹೆಚ್ಚು ನೀಡಬೇಕು.

(ಲೇಖಕಿ ಸಹಾಯಕ ಪ್ರಾಧ್ಯಾಪಕರು, ಮನೋವೈದ್ಯಕೀಯ ವಿಭಾಗನಿಮ್ಹಾನ್ಸ್, ಬೆಂಗಳೂರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT