ಶುಕ್ರವಾರ, ಡಿಸೆಂಬರ್ 3, 2021
24 °C

ಆರೋಗ್ಯ: ಋತುಬಂಧದ ಚರ್ಮದ ಸಮಸ್ಯೆಯೇ? ಹಾರ್ಮೋನ್‌ ಕಾರಣ ಇರಬಹುದು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಯಾಕೋ ಇತ್ತೀಚೆಗೆ ನನ್ನ ಚರ್ಮದ ಆರೋಗ್ಯ ಕೆಡುತ್ತಿದೆ. ಸದಾ ಕಾಂತಿಯಿಂದ ಹೊಳೆಯುತ್ತಿದ್ದ ಚರ್ಮ ಇತ್ತೀಚೆಗೆ ಕಳೆಗುಂದುತ್ತಿದೆ. ವಯಸ್ಸಿನಲ್ಲೇ ಮೂಡದ ಮೊಡವೆಗಳು ಈಗ ಮುಖದಲ್ಲಿ ಕಾಣಿಸುತ್ತಿವೆ. ದಿನಕ್ಕೆ 6 ಲೀಟರ್‌ನಷ್ಟು ನೀರು ಕುಡಿಯುತ್ತೇನೆ, ಆದರೂ ಚರ್ಮದಲ್ಲಿ ನೆರಿಗೆ ಮೂಡುತ್ತಿದೆ. ತರಕಾರಿ, ಹಣ್ಣು–ಹಂಪಲು ಸೇವನೆಯಿಂದಲೂ ಚರ್ಮದ ಆರೋಗ್ಯ ಸುಧಾರಿಸುತ್ತಿಲ್ಲ. ತ್ವಚೆಯ ಅಂದ ಹೆಚ್ಚಿಸಿಕೊಳ್ಳುವ ಸಲುವಾಗಿ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಉತ್ಪನ್ನಗಳನ್ನು ಬಳಸಿ ನೋಡಿದ್ದೇನೆ. ಆದರೂ ಸರಿಯಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ 43 ವರ್ಷದ ಮಾಯಾ ಭಾರಧ್ವಜ್‌.

ಇದು ಕೇವಲ ಮಾಯಾರೊಬ್ಬರ ಸಮಸ್ಯೆ ಇಲ್ಲ. ಬಹುತೇಕ ಋತುಬಂಧದ ಸಮೀಪವಿರುವ ಹೆಂಗಸರ ನೋವಿದು. ತ್ವಚೆಯ ಆರೋಗ್ಯದ ಬಗ್ಗೆ ಅಪಾರ ಕಾಳಜಿ ವಹಿಸಿದರೂ ಕೂಡ ಸಮಸ್ಯೆಗಳು ಕಾಡುತ್ತವೆ. ಅದರ ನಿವಾರಣೆಗೆ ವೈದ್ಯರು, ಹಲವು ಸೌಂದರ್ಯವರ್ಧಕಗಳ ಮೊರೆ ಹೋಗುತ್ತಾರೆ. ಆದರೂ ಸಮಸ್ಯೆ ನೀಗುವುದಿಲ್ಲ. ಋತುಬಂಧ ಸಮಯದಲ್ಲಿನ ಚರ್ಮದ ಸಮಸ್ಯೆಗೆ ಬೇರೆ ಬೇರೆ ದೈಹಿಕ ಅಂಶಗಳು ಕಾರಣವಿರಬಹುದು. ಆ ಕಾರಣಕ್ಕೆ ‘ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ’ ಉತ್ತಮ ವಿಧಾನ. ಇದರಿಂದ ಕೇವಲ ಋತುಬಂಧದ ಸಮಯದಲ್ಲಿ ಕಾಣಿಸುವ ಚರ್ಮದ ಸಮಸ್ಯೆ ಮಾತ್ರವಲ್ಲ ಇನ್ನಿತರ ಅನೇಕ ದೈಹಿಕ ಸಮಸ್ಯೆಗಳ ನಿವಾರಣೆಗೂ ಇದು ಸಹಕಾರಿ. 

ಹಾರ್ಮೋನ್‌ಗಳಲ್ಲಿನ ವ್ಯತ್ಯಾಸ
‘ಮಹಿಳೆಯರಲ್ಲಿ ಋತುಬಂಧ ಸಮೀಪಿಸಿದಾಗ ಹಾರ್ಮೋನ್ ಏರಿಳಿತವಾಗುವ ಕಾರಣ ಹದಿಹರೆಯದವರಲ್ಲಿ ಕಾಣಿಸುವಂತೆ ಮೊಡವೆಗಳು ಕಾಣಿಸಬಹುದು. ಅಲ್ಲದೇ ಈಸ್ಟ್ರೋಜನ್‌ ಅಂಶ ಕಡಿಮೆಯಾಗುವುದರಿಂದ ದೇಹದಲ್ಲಿ ತೇವಾಂಶ ಕಡಿಮೆಯಾಗಿ ಚರ್ಮ ಒಣಗಿದಂತೆ ಕಾಣಬಹುದು. ಇದರಿಂದ ತುರಿಕೆಯೂ ಉಂಟಾಗಬಹುದು. ಇದರ ನಿವಾರಣೆಗೆ ಮಾಯಿಶ್ಚರೈಸರ್‌ ಹಾಗೂ ಸೀರಮ್‌ಗಳನ್ನು ಬಳಸಬಹುದು. ಇದಕ್ಕೆ ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ ಉತ್ತಮ ಎನ್ನುತ್ತದೆ ಅಧ್ಯಯನವೊಂದರ ವರದಿ. ಆ ಮೂಲಕ ಹಾರ್ಮೋನ್‌ ಅಸಮತೋಲನವನ್ನು ನಿಭಾಯಿಸಬಹುದು ಎಂಬುದು ಆ ಅಧ್ಯಯನದ ಪ್ರಮುಖ ಅಂಶ. ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿಯಿಂದ ಆಸ್ಟಿಯೊಪೊರೋಸಿಸ್‌ನಂತಹ ಅಪಾಯವನ್ನೂ ಕೂಡ ಕಡಿಮೆ ಮಾಡಬಹುದು’ ಎನ್ನುತ್ತಾರೆ ವೈದ್ಯೆ ಡಾ. ಆರ್‌. ಮೋಹಿನಿ ಗೋವಿಂದನ್‌.

ಕೊಲೊಜೆನ್‌ ಮಟ್ಟ ಕಡಿಮೆಯಾಗುವುದು
ಋತುಬಂಧದ ಸಮಯದಲ್ಲಿ ಈಸ್ಟ್ರೋಜನ್ ಮಟ್ಟ ಕಡಿಮೆಯಾದಾಗ ಕೊಲೊಜೆನ್ ಉತ್ಪಾದನೆಯೂ ಕಡಿಮೆಯಾಗುತ್ತದೆ. ಕೊಲೊಜೆನ್ ದೇಹದಲ್ಲಿನ ಗಾಯಗಳನ್ನು ಗುಣಪಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ಇದು ಚರ್ಮದ ಸೌಂದರ್ಯದೊಂದಿಗೆ ಚರ್ಮದ ಆರೋಗ್ಯ ಕಾಪಾಡಿಕೊಳ್ಳುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಈಸ್ಟ್ರೋಜನ್‌ ಹೃದಯ, ಮೆದುಳಿನ ಆರೋಗ್ಯ ಕಾಪಾಡುವಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಈಸ್ಟ್ರೋಜನ್ ಮಟ್ಟ ಹೆಚ್ಚಿಸಿ ಕೊಲೊಜೆನ್ ಮಟ್ಟ ಕಡಿಮೆಯಾಗುವುದನ್ನು ತಡೆಯಲು ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿ ಮಾಡಿಸಿಕೊಳ್ಳಬಹುದು.

ಒಣ ಚರ್ಮ ನಿವಾರಣೆ
ಹಾರ್ಮೋನ್ ರಿಪ್ಲೇಸ್‌ಮೆಂಟ್‌ ಥೆರಪಿಯಿಂದಾಗಿ ಒಣ ಚರ್ಮದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಒಣ ಚರ್ಮದ ನಿವಾರಣೆಗೆ ಈಸ್ಟ್ರೋಜನ್ ಮಟ್ಟದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ. ಹಾರ್ಮೋನ್ ರಿಪ್ಲೇಸ್‌ಮೆಂಟ್ ಥೆರಪಿಯಿಂದ ಋತುಬಂಧದ ಸಮಯದಲ್ಲಿನ ಒಣ ಚರ್ಮ ನಿವಾರಣೆಯಾಗುವುದಲ್ಲದೇ ಚರ್ಮವು ಮಗುವಿನ ಚರ್ಮದಂತೆ ಮೃದುವಾಗಿರುತ್ತದೆ. ಇದರಿಂದ ಚರ್ಮಕ್ಕೆ ಸಂಬಂಧಿಸಿದ ಇನ್ನಿತರ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು