ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇಮ ಕುಶಲ | ಮಕ್ಕಳ ಆಟ-ಪಾಠ ನಮಗೂ ಜೀವನ ಪಾಠ

Last Updated 3 ಜನವರಿ 2022, 20:30 IST
ಅಕ್ಷರ ಗಾತ್ರ

ಮನೆಯಂಗಳದ ಮಣ್ಣಿನಲ್ಲಿ ನೆಟ್ಟು ನೀರೆರೆದ ಬೀಜ ಮೊಳಕೆಯೊಡೆದು ಚಿಗುರಿ ಸಸಿಯಾಗುವುದನ್ನು ನೋಡುವ ಸುಖಕ್ಕಿಂತ ಮಿಗಿಲಾದ ಸುಖ ಬೇರೆ ಏನುಂಟು? ಸಸಿಯು ಬೆಳೆದು ಹಸಿರೆಲೆಗಳಿಂದ ಮೈತುಂಬಿ ನಳನಳಿಸುವುದನ್ನು ಕಣ್ತುಂಬಿಕೊಳ್ಳುವ ಆನಂದಕ್ಕೆ ಸರಿಸಾಟಿಯಾದುದು ಮತ್ತೇನಿದೆ? ಸುಮ್ಮನೆ ಹೂದೋಟದಲ್ಲಿ ಅರಳಿನಿಂತ ಹೂಗಳನ್ನು, ಹರಿಯುವ ನೀರನ್ನು, ನೀರೊಳಗೆ ಸರಿದಾಡುವ ಮೀನನ್ನು, ಸಾಕುಪ್ರಾಣಿ, ಪಕ್ಷಿಗಳನ್ನು ನೋಡುತ್ತಾ ಕುಳಿತಿದ್ದರೆ ಮನಸ್ಸು ಒಂದು ಧ್ಯಾನಸ್ಥ ಸ್ಥಿತಿಯನ್ನು ತಲುಪಿದೆಯೇನೋ ಎನಿಸುತ್ತದೆ. ಇಂಥದ್ದೇ ಶಾಂತಿ, ಸುಖ, ಆನಂದ ಎಳೆಯ ಮಕ್ಕಳನ್ನು ಕಂಡಾಗಲೂ ಆಗುವುದುಂಟು.

ಈಗಷ್ಟೇ ಪ್ರಪಂಚಕ್ಕೆ ಕಣ್ತೆರೆಯುತ್ತಿರುವ ಶುಭ್ರತೆಯ ಮೂರ್ತರೂಪವಾದ ಎಳೆಮಗುವನ್ನು ಕೈಯಲ್ಲಿ ಹಿಡಿದುಕೊಂಡು ಎದೆಗಾನಿಸಿಕೊಳ್ಳುವ ಅನುಭವವನ್ನು ಮಾತಿನಲ್ಲಿ ಹೇಳಿದರೆ ಉಪಯೋಗವಿಲ್ಲ. ಎಂಥ ಗಹನವಾದ ಭಾವಶೂನ್ಯತೆಯನ್ನೂ ಸ್ವಲ್ಪವಾದರೂ ಕದಲಿಸಿ ಮನದಲ್ಲಿ ಸಣ್ಣ ಆಸೆಯ, ಭರವಸೆಯ ಬೆಳ್ಳಿಕಿರಣವನ್ನು ಮೂಡಿಸುವ ಚೈತನ್ಯ ಮಗುವಿನ ಮೃದು ಮೈಗೆ, ಅದರ ಹೂವಿನಂಥ ನಗುವಿಗೆ ಇದೆ.

ಚಿಕ್ಕ ಮಕ್ಕಳು ಪ್ರಕೃತಿಗೆ ತುಂಬಾ ಹತ್ತಿರವಾಗಿರುತ್ತಾರೆ. ಅವುಗಳ ಹಸಿವು, ನಿದ್ದೆ, ಆಟ, ಅಳು, ನಗು – ಯಾವುದೂ ದೊಡ್ಡವರ ದಿನಚರಿಗೆ, ನೀತಿ–ನಿಯಮಗಳಿಗೆ ಹೊಂದಿಕೊಳ್ಳುವುದಿಲ್ಲ. ಬದುಕನ್ನು ಅದು ಬಂದ ಹಾಗೇ ಸ್ವೀಕರಿಸಬೇಕು – ಎನ್ನುವುದರ ನಿಜಾರ್ಥವನ್ನು ಹೊಸದಾಗಿ ತಾಯಿ/ತಂದೆ ಆದವರನ್ನು ಕೇಳಿ ನೋಡಬೇಕು. ಹಗಲೆಲ್ಲ ಮಲಗಿ, ರಾತ್ರಿಯೆಲ್ಲಾ ಪಿಳಿಪಿಳಿ ಕಣ್ಣು ಬಿಟ್ಟುಕೊಂಡು ಆಟವಾಡುತ್ತಿರುವ ಮಗುವನ್ನು ಕಂಡಾಗ ಬದುಕು ಸಂಪೂರ್ಣವಾಗಿ ನಮ್ಮ ನಿಯಂತ್ರಣದಲ್ಲಿರುವುದು ಸುಳ್ಳು ಎನಿಸದಿರದು. ನಮ್ಮ ನಿರೀಕ್ಷೆ, ನಮ್ಮ ಲೆಕ್ಕಾಚಾರಗಳನ್ನೆಲ್ಲ ತಲೆಕೆಳಗು ಮಾಡುವ ಮಕ್ಕಳ ನಡವಳಿಕೆ ಕೆಲವೊಮ್ಮೆ ಸಿಟ್ಟು, ಕೋಪ, ನಿರಾಸೆಯನ್ನು ಹುಟ್ಟಿಸಿದರೂ, ಮಗುವಿನ ಬೆಳವಣಿಗೆಗಾಗಿ ಈ ಅಸೌಖ್ಯವನ್ನು ಸಹಿಸಿಕೊಳ್ಳಬೇಕೆಂಬ ವಿವೇಕವೂ ಜೊತೆಜೊತೆಗೇ ಹುಟ್ಟಿಕೊಳ್ಳುತ್ತದೆ.

ಯಾವುದೇ ರೀತಿಯ ಬೆಳವಣಿಗೆಯಾದರೂ ಅಷ್ಟೇ, ನೇರವಾಗಿ ಒಂದು ಗೆರೆ ಎಳೆದಷ್ಟು ಸರಳವಾಗಿರುವುದಿಲ್ಲ. ಬೆಳವಣಿಗೆಯೆನ್ನುವ ಸಂಕೀರ್ಣ ಪ್ರಕ್ರಿಯೆಯನ್ನು ಕೈಕೆಸರಾಗದಂತೆ ನಾಜೂಕಾಗಿ ಮಾಡಿ ಮುಗಿಸಲಾಗುವುದಿಲ್ಲ, ತಾಳ್ಮೆಯಿಲ್ಲದೆ, ಕಾಯುವ ವ್ಯವಧಾನವಿಲ್ಲದೆ ಅದು ಘಟಿಸುವಂಥದ್ದಲ್ಲ. ಹಾಗೆಯೇ ಬೆಳವಣಿಗೆಗಾಗಿ ನಾವು ಅನೇಕ ಕಷ್ಟಗಳನ್ನು ಸಹಿಸಬೇಕಾಗುತ್ತದೆ. ಇಷ್ಟೆಲ್ಲಾ ತೊಂದರೆಗಳ ನಡುವೆಯೂ ಬೆಳೆಸುವ, ಕಾಪಾಡುವ, ಕೈ ಹಿಡಿದು ನಡೆಸುವ ಸಾಮರ್ಥ್ಯ ನಮ್ಮಲ್ಲಿರುವುದನ್ನು ಕಂಡು ಅಪಾರ ಆತ್ಮವಿಶ್ವಾಸವೂ ಮೂಡುತ್ತದೆ.

ಮಕ್ಕಳನ್ನು ಬೆಳೆಸುವ, ಅವರೊಂದಿಗೆ ಕಾಲ ಕಳೆಯುವ ಸಂದರ್ಭದಲ್ಲಿ ಮತ್ತೊಮ್ಮೆ ಬಾಲ್ಯಕ್ಕೆ ಹೋಗಿಬರಬಹುದಲ್ಲ? ಮಕ್ಕಳೊಂದಿಗೆ ಮಕ್ಕಳಾಗಿ ಬೆರೆಯುವ ಅನುಭೂತಿ, ‘ಕಳೆದ ಕಾಲ ಕಳೆದೇ ಹೋಯಿತು ಎನ್ನುವುದೆಲ್ಲ ಸುಳ್ಳಿರಬೇಕು’, ‘ಕಾಲದಲ್ಲಿ ಹಿಂದೆ ಹಿಂದೆ ಹೋಗುವುದು ಸಾಧ್ಯವಿದೆಯೇನೋ’ ಎನ್ನುವ ಅನುಮಾನ ಹುಟ್ಟಿಸುತ್ತದೆ. ನಾವು ಚಿಕ್ಕ ಮಕ್ಕಳಾಗಿದ್ದಾಗ ಹೇಗಿದ್ದೇವೋ ನೆನಪಿರುವುದಿಲ್ಲ. ನಮ್ಮ ತಾಯ್ತಂದೆ/ಪೋಷಕರು ನಮ್ಮ ಬಾಲ್ಯದ ಬಗ್ಗೆ ಹೇಳುವ ಕಥೆಗಳಷ್ಟೇ ಗೊತ್ತಿರುತ್ತದೆ. ನಮ್ಮ ಬಾಲ್ಯದ ನೆನಪುಗಳನ್ನು ನಮಗೆ ನಮ್ಮ ಪೋಷಕರು ಕಟ್ಟಿಕೊಟ್ಟಂತೆ ನಾವೂ ನಮ್ಮ ಮುಂದಿನ ಪೀಳಿಗೆಯ ಬಾಲ್ಯದ ನೆನಪುಗಳನ್ನು ಜೋಪಾನವಾಗಿಟ್ಟುಕೊಳ್ಳುವ ಸಂಭ್ರಮ ಬದುಕಿನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಕೇವಲ ಮಗುವಿನ ತಾಯಿ, ತಂದೆಯಷ್ಟೇ ಮಗುವಿನ ಬೆಳವಣಿಗೆ, ಆಟ–ಪಾಠಗಳನ್ನು ಸಂಭ್ರಮಿಸಬೇಕೆಂಬುದಿಲ್ಲ. ಕೂಡು ಕುಟುಂಬದ ಸದಸ್ಯರು, ನೆರೆಹೊರೆಯವರು, ಪೋಷಕರ ಸ್ನೇಹಿತರು, ಶಾಲಾಶಿಕ್ಷಕರು ಯಾರು ಬೇಕಾದರೂ ಆಗಿರಬಹುದು. ಒಟ್ಟಿನಲ್ಲಿ ಮಕ್ಕಳನ್ನು ಗಮನಿಸುವ, ಅವರೊಂದಿಗೆ ಮಕ್ಕಳಾಗೇ ಮಾತಿಗಿಳಿಯುವ, ಅವರ ಆಟ-ಪಾಠಗಳಲ್ಲಿ ಆಸಕ್ತಿ ತೋರಿಸುವ ಮುಕ್ತ ಮನಸ್ಸು, ಸಹೃದಯತೆ ಇದ್ದರೆ ಸಾಕು.

ಮಕ್ಕಳ ಬಣ್ಣಬಣ್ಣದ ಆಟಿಕೆಗಳು, ಅದನ್ನು ಕಂಡಾಗ ಅವರ ಕಣ್ಣಲ್ಲಿ ಕಾಣುವ ಖುಷಿ-ಬೆರಗು, ಸಿಕ್ಕ ಯಾವುದೇ ವಸ್ತುವನ್ನೂ ಅವರ ಆಟದಲ್ಲಿ ಸೂಕ್ತವಾಗಿ ಉಪಯೋಗಿಸಿಕೊಳ್ಳುವ ಸೃಜನಶೀಲತೆ, ತೊದಲು ನುಡಿಯಲ್ಲಿ ತಪ್ಪುತಪ್ಪಾಗಿ ಪದಗಳನ್ನು ಉಚ್ಚರಿಸುವ ರೀತಿ, ಕುತೂಹಲ ತುಂಬಿದ ಅವುಗಳ ಪ್ರಶ್ನೆಗಳು ಮತ್ತು ಅದಕ್ಕೆ ಉತ್ತರಿಸಲು ಸಾಧ್ಯವಾಗದೆ ದೊಡ್ಡವರು ತಡವರಿಸಿ ಪೇಚಿಗೆ ಸಿಕ್ಕಿಕೊಳ್ಳುವ ಪ್ರಸಂಗಗಳು, ಎಷ್ಟೇ ಸ್ವಚ್ಛಗೊಳಿಸಿದರೂ ಮತ್ತೆ ಮನೆ ತುಂಬಾ ಕಸ ಹಾಕುವ ಮಕ್ಕಳ ಪ್ರವೃತ್ತಿ, ಎಲ್ಲವೂ ಜೀವನವನ್ನು ಎಷ್ಟು ಸಾಧ್ಯವೋ ಅಷ್ಟು ಹಗುರಾಗಿ ತೆಗೆದುಕೊಳ್ಳುವಂತೆ ಪ್ರೇರೇಪಿಸುತ್ತದೆ. ಬೆಳೆಯುವ ಮಕ್ಕಳ ಆಸಕ್ತಿಗಳ ಜೊತೆ ಪೋಷಕರ ಆಸಕ್ತಿಗಳೂ ಬೆಳೆಯುತ್ತವೆ. ಮಕ್ಕಳೊಂದಿಗೆ ಆಡುವ ಆಟ, ಓದುವ ಪುಸ್ತಕಗಳು, ಅವರೊಂದಿಗೆ ಕೂಡಿ ಮಾಡುವ ಕಲೆ, ನೃತ್ಯ, ಹಾಡುಗಾರಿಕೆ – ಎಲ್ಲವೂ ನಮ್ಮಲ್ಲಿ ಹೊಸತನದ ಅಲೆಯೆಬ್ಬಿಸುತ್ತದೆ, ಹೊಸ ಕಲಿಕೆಗೂ ದಾರಿ ಮಾಡಿಕೊಡುತ್ತದೆ.

ಹಿಂದೆಲ್ಲಾ ಒಂದು ಮಗುವನ್ನು ಒಂದು ಇಡೀ ಗ್ರಾಮವೇ ಸೇರಿ ಬೆಳೆಸುತ್ತಿದ್ದಿರಬೇಕು. ಆದರೆ ಈಗಿನ ಸ್ಪರ್ಧಾತ್ಮಕ ವಾತಾವರಣದಲ್ಲಿ, ಅದರಲ್ಲೂ ನಗರದ ವಿಭಕ್ತ ಕುಟುಂಬಗಳಲ್ಲಿ ಮಕ್ಕಳನ್ನು ಬೆಳೆಸುವ, ಅದಕ್ಕೆ ತಗಲುವ ಅಪಾರ ಆರ್ಥಿಕ ವೆಚ್ಚವನ್ನು ನಿಭಾಯಿಸುವ ಸಂಪೂರ್ಣ ಜವಾಬ್ದಾರಿ ಕೇವಲ ಮಗುವಿನ ತಾಯಿ ಮತ್ತು ತಂದೆಯದ್ದಾಗಿರುತ್ತದೆ. ಹೀಗಾಗಿ ಮಕ್ಕಳೆಂದರೆ ರೇಜಿಗೆ, ಅನವಶ್ಯಕ ಜವಾಬ್ದಾರಿಯ ಭಾರ, ಸ್ವಾತಂತ್ರ್ಯಹರಣ ಎನಿಸುವುದು ಸಹಜವೇ.

ಮಕ್ಕಳನ್ನು ಸಾಕಲು ಸೂಕ್ತ ವಾತಾವರಣ ಮತ್ತು ಸಮುದಾಯದ ಬೆಂಬಲ ಇಲ್ಲದಿರುವ ಸಂದರ್ಭದಲ್ಲಿ ಮಕ್ಕಳ ಆಟ, ಮುದ್ದುಮಾತು, ನಗು, ತುಂಟಾಟ – ಇವೆಲ್ಲ ನೀಡುವ ಸುಖವನ್ನು ಕಡೆಗಣಿಸಿ ಕೇವಲ ಅವರ ಭವಿಷ್ಯದ ಕಡೆಗೆ ಹೆಚ್ಚಿನ ಒತ್ತು ನೀಡುವ ಅಸಹಜ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಮಕ್ಕಳನ್ನು ಅನಾವಶ್ಯಕವಾಗಿ ಶಿಕ್ಷಿಸಿ, ಅವರನ್ನು ‘ನಮ್ಮ ದಾರಿಗೆ’ ಬಲವಂತವಾಗಿ ಸರಿಹೊಂದಿಸುವ ಪ್ರಯತ್ನಗಳಿಗಾಗಿ ಕೇವಲ ಪೋಷಕರನ್ನು ದೂರುವಂತಿಲ್ಲ. ಮಕ್ಕಳ ಕುರಿತಾದ ಈ ರೀತಿಯ ನಡವಳಿಕೆ ನಮ್ಮ ಸಮಾಜಕ್ಕೆ ಹಿಡಿದ ಕೈಗನ್ನಡಿ. ಇಂತಹ ವಿಷಮಸ್ಥಿತಿ ಮಕ್ಕಳ ಸಹಜ ಆತ್ಮವಿಕಾಸಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಮೂಲಕ ನಾವು ನಮ್ಮ ಆತ್ಮವಿಕಾಸಕ್ಕೆ ಕೂಡ ದಾರಿ ಮಾಡಿಕೊಳ್ಳುತ್ತಿರುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT