ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ | ನಿಮ್ಮ ಯಕೃತ್ತಿಗೆ ನೀವೇ ಜವಾಬ್ದಾರಿ

Published 28 ಆಗಸ್ಟ್ 2023, 23:30 IST
Last Updated 28 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಪಿತ್ತಜನಕಾಂಗ ಅಥವಾ ಯಕೃತ್ತು (ಲಿವರ್‌) ನಮ್ಮ ಶರೀರದ ಎರಡನೆಯ ದೊಡ್ಡ ಅಂಗಾಂಗ. ಹಲವಾರು ಕೆಲಸಗಳನ್ನು ನಿರ್ವಹಿಸುವ ಈ ಅಂಗಾಂಗವನ್ನು ದೇಹದ ಕಾರ್ಖಾನೆ, ಉಗ್ರಾಣ, ಶೋಧಕ, ಆರಕ್ಷಕ ಮತ್ತು ಬಹುತೇಕ ಎಲ್ಲಾ ಪ್ರಮುಖ ಚಯಾಪಚಯ ಕ್ರಿಯೆಗಳ ತಾಣ ಎಂದರೆ ಸರಿಹೋಗಬಹುದು.

ಅಷ್ಟೇ ಅಲ್ಲ, ಒಂದು ಅಂತಃಸ್ರವ ಗ್ರಂಥಿಯಂತೆ, ವಿಸರ್ಜನಾ ಅಂಗದಂತೆ, ಕೆಲವೊಮ್ಮೆ ರಕ್ತದ ಉತ್ಪಾದಕನಂತೆ ಮತ್ತು ರೋಗನಿರೋಧಕ ವ್ಯವಸ್ಥೆಯ ಭಾಗವಾಗಿಯೂ ಇದು ಕಾರ್ಯೋನ್ಮುಖವಾಗುವುದಿದೆ. ಕರುಳುಗಳಿಂದ ಹೀರಲ್ಪಟ್ಟ ಅನೇಕ ರಾಸಾಯನಿಕಗಳನ್ನು ವಿವಿಧ ಪ್ರಕ್ರಿಯೆಗೆ ಒಳಪಡಿಸಿ ಅಲ್ಲಿ ಉತ್ಪತ್ತಿಯಾಗುವ ಹಾನಿಕಾರಕ ವಸ್ತುಗಳನ್ನು ಶರೀರದಿಂದ ಹೊರಹಾಕುವ ಕಾರ್ಯವೂ ಯಕೃತ್ತಿನದೇ. ತನ್ನ ಶೇ. ತೊಂಬತ್ತರಷ್ಟು ಭಾಗಕ್ಕೆ ಹಾನಿಯಾದರೂ ಪುನಃ ಬೆಳೆದು ಮೊದಲಿನ ಕಾರ್ಯಕ್ಷಮತೆಯನ್ನು ಪಡೆಯುವ ವಿಶೇಷ ಶಕ್ತಿ ಯಕೃತ್ತಿಗೆ ಇದೆ.

ಮುಖ್ಯ ಕಾರ್ಯಗಳು

• ವ್ಯಕ್ತಿ ಹಲವು ಗಂಟೆಗಳ ಕಾಲ ಆಹಾರ ಸೇವಿಸದಿದ್ದಾಗ ಮತ್ತು ಒತ್ತಡಕ್ಕೆ ಒಳಗಾದಾಗ ತನ್ನಲ್ಲಿ ಸಂಗ್ರಹವಾಗಿದ್ದ ಪಿಷ್ಟಾಂಶವನ್ನು ಬಿಡುಗಡೆ ಮಾಡಿ ಶರೀರಕ್ಕೆ ಶಕ್ತಿಯನ್ನು ಪೂರೈಸುವುದು.

• ವಿವಿಧ ಕೊಬ್ಬಿನಾಂಶಗಳ ಚಯಾಪಚಯ ಕ್ರಿಯೆ.

• ಪ್ರಮುಖ ಪ್ರೊಟೀನ್ ಘಟಕಗಳ ಉತ್ಪಾದನೆ.

• ಶರೀರದ ಚಯಾಪಚಯ ಕ್ರಿಯೆಯಲ್ಲಿನ ಉಪ ಉತ್ಪನ್ನಗಳನ್ನು ಮತ್ತು ಹೊರಗಿನಿಂದ ಶರೀರವನ್ನು ಸೇರಿದ ಇತರ ವಿಷಕಾರಕ ವಸ್ತುಗಳನ್ನು ಮೂತ್ರಪಿಂಡ ಮತ್ತು ಕರುಳುಗಳ ಮೂಲಕ ಹೊರಹಾಕುವುದು

• ದೇಹಕ್ಕೆ ಅಧಿಕವಾದ ಪಿಷ್ಟಾಂಶ, ಕೊಬ್ಬಿನಾಂಶ ಮತ್ತು ‘ಎ’ ಜೀವಸತ್ವವನ್ನು ಸಂಗ್ರಹಿಸಿಡುವುದು.

• ರಕ್ತಹೆಪ್ಪುಗಟ್ಟುವಿಕೆಯಲ್ಲಿ ನೆರವಾಗುವ ಮತ್ತು ರೋಗನಿರೋಧಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುವ ಅನೇಕ ಪ್ರೊಟೀನ್‍ಗಳನ್ನು ಉತ್ಪಾದಿಸುವುದು.

ಬಾಧಿಸುವ ಕಾಯಿಲೆಗಳು

• ‘ಹೆಪಟೈಟಿಸ್ ವೈರಾಣು’ ಎಂದೇ ಕರೆಯಲ್ಪಡುವ ಒಟ್ಟು ಆರು ಬಗೆಯ ವೈರಾಣುಗಳ ಜೊತೆ ಇತರ ವೈರಾಣುಗಳೂ ಯಕೃತ್ತಿನಲ್ಲಿ ಉರಿಯೂತವನ್ನು ಉಂಟುಮಾಡಬಹುದು. ಹೆಪಟೈಟಿಸ್ ‘ಎ’ ಮತ್ತು ‘ಈ’ ವೈರಾಣುಗಳು ಕಲುಷಿತ ಆಹಾರ ಮತ್ತು ನೀರಿನ ಮೂಲಕ ವ್ಯಕ್ತಿಯನ್ನು ತಲುಪಿದರೆ ಹೆಪಟೈಟಿಸ್ ‘ಬಿ’, ‘ಡಿ’ ಮತ್ತು ‘ಸಿ’ ವೈರಾಣುಗಳು ಸೋಂಕಿತ ರಕ್ತ ಮತ್ತು ರಕ್ತದ ಉತ್ಪನ್ನಗಳ ಮೂಲಕ, ರೋಗಿಯೊಡನೆಯ ಲೈಂಗಿಕ ಸಂಪರ್ಕದ ಮೂಲಕ ಹಾಗೂ ಸೋಂಕಿತ ತಾಯಿಯಿಂದ ಗರ್ಭಾಶಯದಲ್ಲಿರುವ ಮಗುವಿಗೆ ತಲುಪುತ್ತವೆ.

• ಅತಿಯಾದ ಮದ್ಯಪಾನ ಮತ್ತು ಅಪೌಷ್ಟಿಕತೆಯೂ ಯಕೃತ್ತಿನಲ್ಲಿ ಒಂದು ಬಗೆಯ ಉರಿಯೂತಕ್ಕೆ ಕಾರಣವಾಗುತ್ತದೆ.

• ಚಯಾಪಚಯಾ ಕ್ರಿಯೆಗಳಲ್ಲಿ ಪ್ರಮುಖ ಪಾತ್ರವಹಿಸುವ ಕೆಲವು ಕಿಣ್ವಗಳ ಕೊರತೆ ಜನ್ಮಜಾತವಾಗಿ ಇದ್ದಾಗಲೂ ಯಕೃತ್ತು ಅನಾರೋಗ್ಯಕ್ಕೆ ತುತ್ತಾಗಬಹುದು.

• ಕೆಲವು ಔಷಧಗಳ ದೀರ್ಘಕಾಲದ ಬಳಕೆ ಮತ್ತು ಕೆಲವು ಬಗೆಯ ವಿಷಕಾರಕ ಅಣಬೆಗಳು ಯಕೃತ್ತಿಗೆ ಹಾನಿಕಾರಕವಾಗಬಹುದು.

• ಪಿತ್ತಕೋಶದ ನಾಳಗಳಲ್ಲಿ ತೊಡಕು ಉಂಟಾದಾಗಲೂ ಯಕೃತ್ತು ಒತ್ತಡಕ್ಕೆ ಸಿಲುಕಬಹುದು.

• ಇಲಿ ಜ್ವರದ (ಲೆಪ್ಟೋಸ್ಪೈರೋಸಿಸ್) ಸೂಕ್ಷ್ಮಾಣು ಹಾಗೂ ಅಪರೂಪಕ್ಕೆ ಕೆಲವು ಪರಾವಲಂಬಿ ಸೂಕ್ಷ್ಮಾಣುಗಳೂ ಉರಿಯೂತವನ್ನು ಉಂಟುಮಾಡಬಹುದು.

ಗುಣಲಕ್ಷಣಗಳೇನು?
• ಆಯಾಸ
• ಕಾಮಾಲೆ (ಜಾಂಡೀಸ್): ದೇಹವು ಹಳದಿಬಣ್ಣಕ್ಕೆ ತಿರುಗುವುದು.
• ವಾಕರಿಕೆ, ವಾಂತಿ ಮತ್ತು ಹಸಿವಾಗದಿರುವುದು
• ಹೊಟ್ಟೆಯ ಬಲ ಮತ್ತು ಮೇಲ್ಭಾಗದಲ್ಲಿ ನೋವು.

ನೆನಪಿಡಿ, ಯಕೃತ್ತಿನ ಕಾರ್ಯಕ್ಷಮತೆಯಲ್ಲಿ ಸ್ವಲ್ಪ ಮಟ್ಟಿನ ಏರುಪೇರಾದಾಗ ವ್ಯಕ್ತಿಯಲ್ಲಿ ಯಾವುದೇ ಲಕ್ಷಣಗಳು ಕಾಣಿಸವು. ಏಕೆಂದರೆ ಕೇವಲ ಶೇ. ಹತ್ತರಷ್ಟು ಸಹಜತೆ ಇದ್ದರೂ ತನ್ನ ಸಂಪೂರ್ಣ ಕಾರ್ಯಕ್ಷಮತೆಯನ್ನು ಕಾಯ್ದಿರಿಸಿಕೊಳ್ಳುವ ವಿಭಿನ್ನ ಅಂಗಾಂಗ ಇದಾಗಿದೆ.

ಆರೋಗ್ಯವಾಗಿದೆಯೇ?

ಯಕೃತ್ತಿನ ಕಾರ್ಯಕ್ಷಮತೆಯನ್ನು ಅಳೆಯಲು ಒಂದಿಷ್ಟು ರಕ್ತಪರೀಕ್ಷೆಗಳಿವೆ. ಅವನ್ನು ಒಟ್ಟಾರೆ ಯಕೃತ್ತಿನ ಕಾರ್ಯಕ್ಷಮತೆಯ ಪರೀಕ್ಷೆಗಳು ಎನ್ನುತ್ತೇವೆ. ರಕ್ತದಲ್ಲಿನ ಕೆಲವು ಪ್ರೊಟೀನ್‍ಗಳು, ಕಿಣ್ವಗಳು ಮತ್ತು ಉಪ ಉತ್ಪನ್ನಗಳಾದ ಬಿಲಿರುಬಿನ್ ಅಂಶಗಳ ಪ್ರಮಾಣ ಯಕೃತ್ತಿನ ಆರೋಗ್ಯದ ಸೂಚನೆಯನ್ನು ಕೊಡಬಲ್ಲದು.
ಇದರೊಂದಿಗೆ ಹೊಟ್ಟೆಯ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಪರೀಕ್ಷೆ ಯಕೃತ್ತಿನ ಆಕಾರ ಮತ್ತು ರಚನೆಯಲ್ಲಿನ ದೋಷಗಳನ್ನು ಪತ್ತೆ ಹಚ್ಚುತ್ತದೆ.

ನಿಮ್ಮ ಯಕೃತ್ತು ನಿಮ್ಮ ಜವಾಬ್ದಾರಿ!

• ಅತಿಯಾದ ಮದ್ಯಪಾನ ಯಕೃತ್ತನ್ನು ವಿವಿಧ ಹಂತಗಳಲ್ಲಿ ತೊಂದರೆಗೆ ಸಿಲುಕಿಸಬಹುದು. ಮೊದಲಿನ ಹಂತದಲ್ಲಿ ಯಕೃತ್ತಿನ ಜೀವಕೋಶಗಳಲ್ಲಿ ಕೊಬ್ಬಿನಾಂಶ ತುಂಬಿಕೊಳ್ಳುತ್ತದೆ. ಎರಡನೆಯ ಹಂತದಲ್ಲಿ ಆ ಜೀವಕೋಶಗಳು ಉರಿಯೂತಕ್ಕೊಳಗಾಗಿ ಹಾನಿಗೊಳಗಾಗುತ್ತವೆ. ಈ ಎರಡೂ ಹಂತಗಳಿಂದ ಯಕೃತ್ತು ಮೊದಲಿನ ಸಹಜಸ್ಥಿತಿಗೆ ಮರಳಬಹುದು. ಆದರೆ, ಮೂರನೆಯ ಹಂತದಲ್ಲಿ ಜೀವಕೋಶಗಳು ಸಂಪೂರ್ಣ ನಶಿಸಿ ಆ ಭಾಗದಲ್ಲಿ ನಾರಿನಂತಹ (ಫೈಬ್ರೋಸಿಸ್) ಅಂಶವು ತುಂಬಿಕೊಳ್ಳುತ್ತದೆ. ಒಮ್ಮೆ ಯಕೃತ್ತು ಈ ಹಂತವನ್ನು ತಲುಪಿದರೆ ಮತ್ತೆ ಮೊದಲಿನ ಸಹಜ ಸ್ಥಿತಿ ತಲುಪುವುದು ಅಸಾಧ್ಯ. ಆದ್ದರಿಂದಲೇ ಮದ್ಯಪಾನಿಗಳು ಆರಂಭದಲ್ಲಿಯೇ ಎಚ್ಚರ ವಹಿಸುವುದು ಮುಖ್ಯ.

• ಅತಿಯಾದ ದೇಹ ತೂಕ ಅಥವಾ ಬೊಜ್ಜು ಸಹ ಯಕೃತ್ತಿನ ಮೇಲೆ ಒತ್ತಡವನ್ನು ಹೇರುತ್ತದೆ. ನಿಯಮಿತ ವ್ಯಾಯಾಮ ಮತ್ತು ಪೌಷ್ಟಿಕ ಆಹಾರ ಸೇವನೆಯಂತಹ ಸದಾಭ್ಯಾಸಗಳ ಮೂಲಕ ಸರಿಯಾದ ದೇಹದ ತೂಕವನ್ನು ಕಾಯ್ದಿರಿಸಿಕೊಳ್ಳುವುದು ಬಹಳ ಮುಖ್ಯ.

• ವೈರಾಣುಗಳಿಂದ ಉಂಟಾಗುವ ಉರಿಯೂತಗಳಿಗೆ ಇದೀಗ ಲಸಿಕೆಗಳು ಲಭ್ಯವಿವೆ. ಹೆಪಟೈಟಿಸ್ ‘ಎ’ ಮತ್ತು ‘ಬಿ’ ವೈರಾಣುಗಳ ವಿರುದ್ಧ ಲಭ್ಯವಿರುವ ಲಸಿಕೆಗಳನ್ನು ವೈದ್ಯರ ಸಲಹೆಯ ಮೇರೆಗೆ ಹಾಕಿಸಿಕೊಳ್ಳಬಹುದು.

• ವೈದ್ಯರ ಸಲಹೆಯಿಲ್ಲದೆ ಸೇವಿಸುವ ಔಷಧಗಳು ನಿಮ್ಮ ಯಕೃತ್ತು ಮತ್ತು ಮೂತ್ರಪಿಂಡಗಳ ಮೇಲೆ ಅಪಾಯಕರ ಪರಿಣಾಮಗಳನ್ನು ಬೀರಬಹುದು. ಆದ್ದರಿಂದ ಸ್ವಯಂವೈದ್ಯರಾಗಬೇಡಿ. ಯಾವುದೇ ಔಷಧಗಳ ಸೇವನೆಗೂ ಮೊದಲು ವೈದ್ಯರಲ್ಲಿ ಸಮಾಲೋಚಿಸಿ.

• ವೈಯಕ್ತಿಕ ಸ್ವಚ್ಛತೆಗೆ ಗಮನ ಕೊಡಿ. ರಸ್ತೆ ಬದಿಯಲ್ಲಿ ತೆರೆದಿಟ್ಟು ಮಾರುವ ಆಹಾರ ಪದಾರ್ಥಗಳ ಸೇವನೆ ಬೇಡ. ಕಲುಷಿತ ಆಹಾರ ಮತ್ತು ನೀರು ಹೆಪಟೈಟಿಸ್ ‘ಎ’ ಮತ್ತು ‘ಈ’ ವೈರಾಣುಗಳನ್ನು ಹರಡಬಹುದು.

• ಸೋಂಕಿತರೊಡನೆ ಮತ್ತು ರೋಗವಾಹಕರೊಡನೆ ಅಸುರಕ್ಷಿತ ಲೈಂಗಿಕ ಸಂಪರ್ಕ ಹೆಪಟೈಟಿಸ್ ‘ಬಿ’ ಮತ್ತು ‘ಸಿ’ ವೈರಾಣುಗಳ ಹರಡುವಿಕೆಗೆ ಕಾರಣವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT