ಮಂಗಳವಾರ, ಅಕ್ಟೋಬರ್ 27, 2020
27 °C

ಮನೋಮಯ | ಭಾವಕೋಶದ ಮೇಲೆ ಪದಕೋಶದ ದಾಳಿ

ರಶ್ಮಿ ಎಸ್‌ Updated:

ಅಕ್ಷರ ಗಾತ್ರ : | |

Prajavani

‘ಅಮ್ಮಾ, ನಾನು ಅನ್ಶೂಲ್‌ ಬರ್ತ್‌ ಡೇಗೆ ಹೋಗ್ತೀನಿ.., ಆದ್ರ ಮಕ್ಕಳ ಪಾರ್ಟಿಯೊಳಗ ಡಿಂಗಡಾಂಗ್‌ ಮಾಡೂದಿಲ್ಲ ಅಲ್ಲೇನಮ್ಮ? ಡಿಂಗಡಾಂಗ್ ಅಂದ್ರೇನಮ್ಮ?’ 

ನನ್ನ ಮಗಳು ಹಿಂಗಂದಾಗ ಗಾಬರಿ ಆಗಿತ್ತು. ‘ಡಿಂಗಡಾಂಗ್‌ ಅಂದ್ರ.. ಡಾನ್ಸ್‌ ಮಾಡೂದಿರಬಹುದು. ನೀವೂ ಡಾನ್ಸ್‌ ಮಾಡ್ತೀರಲ್ಲ.. ಅಷ್ಟೆ ಅದು’ 

‘ಅದೇ ಅಮ್ಮಾ, ಡಾನ್ಸ್‌ ಮಾಡೂದು, ಹಿಂಗ ಕೂದಲು ಬಿಟ್ಕೊಂಡು, ಮೈ ಹೊಳ್ಸೂದು.. ಆ ನನ್ನ ಫ್ರಾಕಿಗೆ ಒಂದು ಸೈಡಿಗೆ ಸ್ಲಿಟ್‌ ಇರಬೇಕಿತ್ತು...’ 

‘ಸ್ಲಿಟ್ ಯಾಕ್ಬೇಕು?’

‘ಇರಬೇಕಮ್ಮ... ಹಂಗಿದ್ದಾಗ ಡಾನ್ಸ್‌ ಮಾಡಿದ್ರ... ಡಿಂಗ್‌ಡಾಂಗ್‌ ಅನ್ನೂದು...‘

ಈ ಒಂದೆರಡು ವಾರಗಳಲ್ಲಿ ಮಕ್ಕಳಲ್ಲಿ ಪಾರ್ಟಿಯ ಪರಿಕಲ್ಪನೆಯೇ ಬದಲಾಗಿದೆ. ಅಷ್ಟೇ ಅಲ್ಲ, ಮಕ್ಕಳು ಪರಸ್ಪರ ನೋಡುವ ನೋಟವೇ ಬದಲಾಗಿದೆ.

ಏನಾಯಿತು ಅಂಥದ್ದು ಈ ಕೆಲದಿನಗಳಲ್ಲಿ? ಎಲ್ಲಿಂದ ಮತ್ತು ಯಾವ ಮೂಲಗಳಿಂದ ಇಂಥ ಪದಗಳು ಅವರ ಕಿವಿಗೆ ಬೀಳುತ್ತಿವೆ? ಪದಗಳ ಅರ್ಥಗ್ರಹಿಕೆಗೆ ಈ ಚೌಕಟ್ಟು ಬಂದಿದ್ದು ಹೇಗೆ? ಉತ್ತರ ಸರಳ. ಮಾಧ್ಯಮಗಳಿಂದ!

ಹೇಗೆ ಬದಲಾಗಿದೆ ಮಾಧ್ಯಮದ ಭಾಷೆ?

* ಲಿಂಗ ಸಂವೇದನೆ ಇಲ್ಲ

* ಆಕೆ, ಸುಪನಾತಿ, ಮಾಟಗಾತಿ, ಮೋಸಗಾತಿ

* ಮೈಬಣ್ಣ, ಕಣ್ಣು, ಮೈಮಾಟಗಳೊಂದಿಗೆ ವಿಶೇಷಣಗಳು (ಕೆನ್ನೆ ಕೆಂಪಾಯಿತು)

* ಹೆಣ್ಣುಮಕ್ಕಳನ್ನು ಭೋಗದ ವಸ್ತುಗಳಾಗಿ ಅಥವಾ ತೀರ ಮಾರುಕಟ್ಟೆಯ ಉತ್ಪನ್ನಗಳಂತೆ (ಪೌಷ್ಟಿಕ ಆಹಾರ ಪರರ ಪಾಲಾಯಿತು, ತುಪ್ಪದ ಹುಡುಗಿ)

*  ತೀರ ಅಪ್ರಸ್ತುತವೆನಿಸುವ ಪದಪ್ರಯೋಗಗಳು, ಅಪಾರ್ಥ ಕೊಡುವ ನುಡಿಗಟ್ಟುಗಳು 
ಯಾವ ದಂದೆಯಲ್ಲಿದ್ದಳು, ಮೊದಲ ರಾತ್ರಿ ಹೇಗಿತ್ತು? ಮೊದಲ ರಾತ್ರಿ ಅನುಭವ, ಮಲಗಿದಳೇ ನಟಿ?

* ಟಾಂಗ್‌ ಕೊಟ್ಟಳು, ಚಮಕ್‌ ತೋರಿದಳು

ಈ ಥರದ ಭಾಷೆ ನಮ್ಮ, ನಿಮ್ಮ ಮನೆಯಲ್ಲಿರುವ ಕಿಶೋರಾವಸ್ಥೆಯ ಮಕ್ಕಳು, ಹದಿಹರೆಯದ ಮಕ್ಕಳ ಮೇಲೆ ಎಂಥ ಪರಿಣಾಮ ಬೀರಬಹುದು?
ನಮಗೆ ಮುಜುಗರ ಮೂಡಿಸುವ, ಅಂದ್ರೆ ಮಡಿವಂತಿಕೆಯ ಮನಃಸ್ಥಿತಿ ಅಂತಲ್ಲ. ಆದರೆ ಪದಸಂಸ್ಕಾರವೇ ಇಲ್ಲದಂತಹ ಭಾಷೆ, ಮಾತು, ಸಲೀಸಾಗಿ ಸಹಜವೆಂಬಂತೆ ಮಾತನಾಡುತ್ತಿರುವುದು ಹೇಗೆ?

ಅಸಹ್ಯವಾಗಿರುವುದೂ ಸಹಜವೆನಿಸುವಂತೆ ಜೋರು ಧ್ವನಿಯಲ್ಲಿ ಮಾತನಾಡಿದರೆ ಕಾಲಕ್ರಮೇಣ ಅದು ಸಹ್ಯವಾಗಿ ಬದಲಾಗುತ್ತದೆ. ಸಾಮಾಜಿಕ ನಡಾವಳಿಯಲ್ಲಿ ಇವೆಲ್ಲವೂ ಸ್ವೀಕೃತ ಮನೋಸ್ಥಿತಿಗೆ ಬರುತ್ತವೆ. ಒಂದು ಕಾಲದಲ್ಲಿ ಟಾಂಗ್‌ ನೀಡಿದರು ಎಂಬ ಪದಪ್ರಯೋಗಕ್ಕಾಗಿ ಚರ್ಚೆಗಳಾಗಿದ್ದವು. ಈಗ ಇದು ಸಹಜವಾಗಿಯೇ ಟೀಕಿಸಿದರು, ವ್ಯಂಗ್ಯವಾಡಿದರು ಎಂಬ ಅರ್ಥದಲ್ಲಿ ಬಳಕೆಯಾಗುತ್ತಿವೆ.  ಈ ಪದಗಳ ಬಳಕೆ ಮಕ್ಕಳ ಮೇಲೆ ಮತ್ತು ಬಳಸುವವರ ಬಗ್ಗೆಯೂ ಅವರ ತರ್ಕ ಬದಲಾಗುತ್ತ ಹೋಗುತ್ತದೆ. 

ವಿಜಯಪುರದ ಮಕ್ಕಳ ಮನಃಶಾಸ್ತ್ರಜ್ಞೆ ಪಲ್ಲವಿ ಅಡಿಗ ಈ ಬಗ್ಗೆ ವಿವರಿಸ್ತಾ ಹೋಗ್ತಾರೆ. ‘ಸಾಮಾನ್ಯವಾಗಿ ಮಕ್ಕಳ ಮೊದಲ ಆರು ವರ್ಷಗಳು ಭಾಷಾ ಕಲಿಕೆಯಲ್ಲಿ ಚುರುಕಾಗಿರುತ್ತವೆ. ಈ ವಯಸ್ಸಿನಲ್ಲಿ ಸಾಧ್ಯವಿದ್ದಷ್ಟು ಭಾಷೆಗಳನ್ನು ಅವರು ಕಲಿಯಬಹುದು. ಕಿವಿಗೆ ಬಿದ್ದ ಪದಗಳೆಲ್ಲವೂ ಹೃದಯದ ನೆಲದಲ್ಲಿ ಬಿದ್ದ ಬೀಜಗಳಾಗಿಯೇ ಇರುತ್ತವೆ’

ಮುಂದೆ ಈ ಪದದ ಬಳಕೆ, ಅರ್ಥ, ಹಿನ್ನೆಲೆ, ಸಂದರ್ಭ ಹೀಗೆ ಬೇರೂರುತ್ತ, ಟಿಸಿಲೊಡೆಯುತ್ತ, ಭಾಷೆಯ ಮರ ಅವರ ನರನಾಡಿಗಳಲ್ಲಿಯೂ ಹರಿದಾಡಲಾರಂಭಿಸುತ್ತದೆ. ಯಾವ ಸಂದರ್ಭದಲ್ಲಿ ಯಾವ ಪದವನ್ನು ಹೇಗೆ ಬಳಸಬೇಕು? ಅದರ ಪರಿಣಾಮ ಏನಾಗಬಹುದು, ಬಳಸುವುದರ ಪ್ರಭಾವ ಏನಾಗಬಹುದು ಹೀಗೆ ತಮ್ಮದೇ ಆದ ವಿಶೇಷ, ವಿಶಿಷ್ಟ ಪದಕೋಶವೊಂದು ರೂಪುತಾಳುತ್ತ ಹೋಗುತ್ತದೆ. ಆರು ವರ್ಷಗಳವರೆಗೂ ಹೀಗೆ ಪದಕೋಶ ಹಿಗ್ಗುವ ಪ್ರಕ್ರಿಯೆಯೊಂದು ಮಕ್ಕಳಲ್ಲಿ ಆಗುತ್ತಲೇ ಇರುತ್ತದೆ.

ನಂತರದ ಹಂತ ಪದಗಳಿಗೆ ಕೋಡಿಂಗ್‌ ಮಾಡ್ತಾ ಹೋಗುವುದು. ಇದು ತೀರ ಮಹತ್ವದ ಹಂತ.ಇಲ್ಲಿ ಪ್ರತಿ ಪದಕ್ಕೂ ಅದರದ್ದೇ ಆದ ಭಾವಾಭಿವ್ಯಕ್ತಿ ಹುಟ್ಟುತ್ತ ಹೋಗುತ್ತದೆ. ಪ್ರತಿ ಶಬ್ದಕ್ಕೂ ಒಂದು ಧ್ವನಿ, ಧಾಟಿ, ಅಗತ್ಯ, ಅನಗತ್ಯ, ಬಯಕೆ, ಬೇಡಿಕೆ ಹೀಗೆ ಈ ಭಾವಕೋಶವೊಂದು ಪದಬೆಂಬಲಕ್ಕೆ ನಿಲ್ಲುವಂತಾಗುತ್ತದೆ.

ನಂತರದ ಹಂತವೇ ಅವುಗಳನ್ನು ಬಳಸಬೇಕೆ? ತನ್ನ ಅನುಕೂಲಕ್ಕಾಗಿ ಹೇಗೆ ಬಳಸಬಹುದು? ತನ್ನ ವ್ಯಕ್ತಿತ್ವದೊಳಗದು ಹೇಗೆ ಎರಕ ಹೊಯ್ಯಬಹುದು... ಈ ಹಂತಕ್ಕೆ ಬರುವಾಗಲೇ ಅವರು ಹದಿಹರೆಯಕ್ಕೆ ಬಂದಿರುತ್ತಾರೆ. ಇಂಥ ಕೋಡೆಡ್‌ ಪದಗಳು ಅವರ ಭಾವಲೋಕವನ್ನು ವಿಸ್ತರಿಸುತ್ತ ಹೋಗುತ್ತದೆ. 

ನಮ್ಮ ಮನೆಯಲ್ಲಿ ಹೆಣ್ಣುಮಕ್ಕಳಿದ್ದರೆ ಅವರಿಗೆಲ್ಲ ತಾವೇನೋ ಉತ್ಪನ್ನಗಳಂತೆ ಎಂಬ ಮನಃಸ್ಥಿತಿಯೇ ಮೂಡುತ್ತದೆ. ಮೈಬಣ್ಣ ಬೆಳ್ಳಗಿರಬೇಕು. ತಾಜಾ ಹಣ್ಣಿನಂಥ ಹುಡುಗಿ, ತುಪ್ಪದ ಬೆಡಗಿ.. ಏನಿದು.. ಹೆಣ್ಮಗು ಹೋಗಿ ಹೈನು ಹಣ್ಣುಗಳ ಬುಟ್ಟಿಯಂಥ ಚಿತ್ರವನ್ನು ನೀಡುತ್ತಿರುವೆವು. ನಾಜೂಕಿನ ವಯಸ್ಸಿನಲ್ಲಿ ಹೆಣ್ಮಕ್ಕಳು ಇಂಥ ಪ್ರದರ್ಶನದಿಂದ ತಮಗೆ ಮನ್ನಣೆ ಸಿಗಲಿದೆ. ಮಾನ್ಯತೆ ಸಿಗಲಿದೆ ಎಂಬ ತೀರ್ಮಾನಕ್ಕೆ ಬರಬಹುದು. ಇಲ್ಲವೇ, ಚಂದಗಾಣುವುದರಿಂದಲೇ ಇಂಥ ಟ್ರೋಲ್‌ಗೆ ಒಳಗಾಗಬಹುದು ಎಂಬ ತೀರ್ಮಾನಕ್ಕೂ ಬರಬಹುದು. ಇವೆರಡರ ನಡುವೆ ತಮ್ಮ ದೇಹ, ಬಣ್ಣ, ಗಾತ್ರ, ಆಕಾರಗಳ ಬಗೆಗೆ ಕೀಳರಿಮೆ ಅಥವಾ ಮೇಲರಿಮೆಯನ್ನೂ ಬೆಳೆಸಿಕೊಳ್ಳಬಹುದು.

ಮನೆಯಲ್ಲಿ ಗಂಡುಮಕ್ಕಳಿದ್ದರೆ ಅವರಲ್ಲಿ ಹೆಣ್ಣುಮಕ್ಕಳು ಇರುವುದೇ ಆಳಲು, ಅನುಭವಿಸಲು ಎಂಬ ಭಾವನೆ ಬರುತ್ತದೆ. ಪ್ರತಿಯೊಂದನ್ನೂ ಕೀಳುನೋಟದಿಂದ ನೋಡಲಾರಂಭಿಸುತ್ತಾರೆ. ಆಕ್ರಮಣಕಾರಿ ಮನೋಭಾವ ಹೆಚ್ಚಾಗುತ್ತ ಹೋಗುತ್ತದೆ. ಇನ್ನೊಬ್ಬರನ್ನು ಅಲ್ಲಗಳೆಯುವುದು ಸಲೀಸಾಗುತ್ತದೆ. ಇನ್ನೂ ಕೆಲವು ಪದಗಳಂತೂ ಅವರ ಭಾವಕೋಶ ಪ್ರವೇಶಿಸಿ, ಸುಪ್ತ ಮನಸಿನಲ್ಲಿ ಮನೆ ಮಾಡುತ್ತವೆ. ಮತ್ತೆ ಯಾವಾಗಲೋ ಅವೆಲ್ಲ ವ್ಯಕ್ತವಾಗಬಹುದು. ಅವರ ಆಕ್ರೋಶದಲ್ಲಿ, ಅವಜ್ಞೆಯಲ್ಲಿ, ಇನ್ನೊಂದು ಜೀವವನ್ನು ಹಿಂಸಿಸುವಲ್ಲಿ, ಅಲಕ್ಷಿಸುವಲ್ಲಿ. 

 ಇಂಥ ಪರಿಸರದಿಂದ ಅವರನ್ನು ದೂರವಿಡಲು ಸಾಧ್ಯವೇ? ಕಣ್ಮುಂದೆಯೇ ನಮ್ಮ ಕಂದಗಳ ಭಾವಕೋಶದಲ್ಲಿ ಇಂಥ ನಕಾರಾತ್ಮಕ ಅಂಶಗಳನ್ನು ತುಂಬುವುದು ನಮಗೆ ಸಹನೀಯವೇ? ಇದಕ್ಕೆ ಪರಿಹಾರಗಳೇನೂ ಇಲ್ಲವೇ?

ಪರಿಹಾರಗಳು:

* ಮಕ್ಕಳಿಗೆ ಪರಸ್ಪರ ಗೌರವಿಸುವುದನ್ನು ಕಲಿಸಬೇಕು : ಹೆಣ್ಣಮಕ್ಕಳನ್ನು  ಮಾತ್ರವಲ್ಲ, ಗಂಡುಮಕ್ಕಳನ್ನೂ ಗೌರವಿಸುವುದು ಕಲಿಸಬೇಕು. ಪ್ರತಿ ಜೀವವೂ ಅಮೂಲ್ಯ, ಅಪ್ರತಿಮ ಎಂಬುದು ಗೊತ್ತಿರಬೇಕು.

* ಪದಕೋಶ ವಿಸ್ತರಿಸುವಾಗ ಅವುಗಳ ಹಿಂದಿನ ಭಾವಕೋಶ ಹೇಗಿದೆ ಎಂಬುದನ್ನು ಪರಿಶೀಲಿಸುತ್ತಿರಬೇಕು: ಆಗಾಗ ಅವರ ಸಿಟ್ಟು ಸೆಡವುಗಳಲ್ಲಿ ಬಳಸುವ ಭಾಷೆಯನ್ನು ಗಮನಿಸಬೇಕು. ಸಮಾಧಾನದಲ್ಲಿ ಅವರ ಪದಪ್ರಯೋಗದಲ್ಲಿರುವ ವ್ಯತ್ಯಾಸಗಳನ್ನು ತಿಳಿಸಿಹೇಳಬೇಕು.

ನಮಗೆ ಗೊತ್ತಿಲ್ಲದೆಯೇ ನಮ್ಮ ಮಕ್ಕಳ ಪದಕೋಶ ಮತ್ತು ಭಾವಕೋಶಗಳೆರಡೂ ವಿಸ್ತಾರವಾಗುತ್ತಲೇ ಇರುತ್ತವೆ. ಈಗ ನಾವು ನಿರ್ಧರಿಸೋಣ.. ನಮ್ಮ ಮಕ್ಕಳ ಕಿವಿಗೆ ಬೀಳುತ್ತಿರುವ ಪದಗಳು ಎಂಥವು? ಅವುಗಳಿಂದ ನಾವು ಯಾವ ಪೀಳಿಗೆಯನ್ನು ನಿರ್ಮಿಸುತ್ತಿದ್ದೇವೆ? ಅವರ ಪದಕೋಶಕ್ಕೆ, ಭಾವಕೋಶಕ್ಕೆ ಎಂಥ ಶಬ್ದಗಳನ್ನು ನೀಡುತ್ತಿದ್ದೇವೆ, ನೀಡಬೇಕು ಎಂಬುದನ್ನು.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು