ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆ ದಿನಗಳ’ ವಿರಾಮ ಯಾಕೆ ಬೇಕು...

Last Updated 28 ಜನವರಿ 2023, 5:49 IST
ಅಕ್ಷರ ಗಾತ್ರ
ಡಾ. ಚಂದ್ರಿಕಾ ಆನಂದ್
ಡಾ. ಚಂದ್ರಿಕಾ ಆನಂದ್
ADVERTISEMENT

ಮತ್ತೆ ಮುನ್ನೆಲೆಗೆ ಬಂದಿದೆ ‘ಆ ದಿನಗಳ’ ಸಮಾಚಾರ. ಋತುಚಕ್ರದ ರಜೆ ಅಥವಾ ಮುಟ್ಟಿನ ರಜೆ ಬೇಕೇ? ಬೇಡವೆ? ಬೇಕು ಎಂದಾದರೆ ಯಾಕೆ ಬೇಕು, ಎಷ್ಟು ದಿನ ಬೇಕು, ಈ ರಜೆಯ ದುರುಪಯೋಗ ಸಾಧ್ಯತೆಯನ್ನು ತಡೆಯುವುದು ಹೇಗೆ... ಇಂಥವೇ ಪ್ರಶ್ನೆಗಳನ್ನು, ಅನುಮಾನಗಳೊಂದಿಗೆ ಇದೀಗ ‘ಆ ದಿನಗಳ’ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ.

ವಿದ್ಯಾರ್ಥಿಗಳ ಒಕ್ಕೂಟದ ಬೇಡಿಕೆಯನ್ನು ಆಧರಿಸಿ ಕೇರಳ ಸರ್ಕಾರ ತನ್ನ ರಾಜ್ಯದ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಋತುಚಕ್ರದ ರಜೆ ಘೋಷಿಸಿದೆ. ಅನಂತರ ಅನೇಕ ಖಾಸಗಿ ಸಂಸ್ಥೆಗಳು ಸಹ ಸ್ವಯಂಪ್ರೇರಿತವಾಗಿ ತಮ್ಮ ಮಹಿಳಾ ಉದ್ಯೋಗಿಗಳಿಗೆ ಈ ವಿಶೇಷ ರಜೆಯನ್ನು ನೀಡಿವೆ. ಈ ನಿರಾಳತೆ ಇತರೆಲ್ಲಾ ಉದ್ಯೋಗಸ್ಥ ಮಳೆಯರಲ್ಲಿ ಹೊಸದೊಂದು ಆಶಾಭಾವವನ್ನು ಹುಟ್ಟಿಸಿದೆ.

ಯಾಕೆ ಬೇಕು ಆ ರಜೆ?

ಋತುಚಕ್ರ ಒಂದು ಸಹಜ ಕ್ರಿಯೆಯೇ ಆದರೂ ಆ ದಿನಗಳಲ್ಲಿ ಹಾರ್ಮೋನು ವ್ಯತ್ಯಾಸದಿಂದ ದೇಹವೂ, ಮನಸೂ ಬಳಲುತ್ತದೆ. ಇದು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಆದಾಗ್ಯೂ, ಸಣ್ಣಮಟ್ಟದ ಅಸಹನೆಯಂತೂ ಎಲ್ಲರಲ್ಲೂ ಇದ್ದೇ ಇರುತ್ತದೆ.

‘ಋತುಸ್ರಾವದ ನೋವು ಯಾರೋ ಒಂದಿಬ್ಬರ ಸಮಸ್ಯೆಯಲ್ಲ. ಶೇ 80ರಷ್ಟು ಮಹಿಳೆಯರು ಈ ಅವಧಿಯಲ್ಲಿ ಒಂದಲ್ಲ ಒಂದು ರೀತಿಯ ನೋವು ಅನುಭವಿಸುತ್ತಾರೆ. ನೋವಿನ ಪ್ರಮಾಣ ಹೆಚ್ಚೂ–ಕಡಿಮೆ ಇರಬಹುದು. ನೋವು ಕೆಲವರಿಗೆ ಅತಿಯಾದರೆ, ಕೆಲವರಿಗೆ ಸಾಮಾನ್ಯವಾಗಿರಬಹುದು. ಕೆಲವರಿಗೆ ಒಂದು ದಿನದ ನೋವಿದ್ದರೆ, ಮತ್ತೆ ಕೆಲವರು ಐದೂ ದಿನಗಳ ಕಾಲ ನೋವು ಅನುಭವಿಸಬಹುದು’ ಎನ್ನುತ್ತಾರೆ ಬೆಂಗಳೂರಿನ ಸರಸ್ವತಿ ಸ್ಪೆಷಾಲಿಟಿ ಕ್ಲಿನಿಕ್ಸ್‌ನ ಸ್ತ್ರೀರೋಗ ತಜ್ಞೆ ಡಾ. ಚಂದ್ರಿಕಾ ಆನಂದ್.

‘ಕೆಲವೊಮ್ಮೆ ಮುಟ್ಟಿನ ನೋವಿಗೆ ವೈದ್ಯಕೀಯ ಕಾರಣಗಳೂ ಇರುತ್ತವೆ. ಈ ನೋವಿನ ಪ್ರಮಾಣವನ್ನು ಆಧರಿಸಿ ಈ ಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ‘ಪ್ರೈಮರಿ ಡಿಸ್ಮೆನೋರಿಯಾ’ ಮತ್ತು ‘ಸೆಕೆಂಡರಿ ಡಿಸ್ಮೆನೋರಿಯಾ’ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಪ್ರೊಸ್ಟಗ್ಲಾಂಡಿನ್‌ (Prostaglandin) ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದರಿಂದಾಗಿ ಮಹಿಳೆಯರಲ್ಲಿ ಋತುಚಕ್ರದ ಅವಧಿ ಕಷ್ಟಕರವಾಗುತ್ತದೆ. ಭಾರತದಲ್ಲಿ ಶೇ 36.6ರಷ್ಟು ಮಹಿಳೆಯರು ತೀವ್ರವಾದ ರಕ್ತಸ್ರಾವ, ಕಿಬ್ಬೊಟ್ಟೆಯ ನೋವು, ವಿಪರೀತ ಸುಸ್ತು, ಆಯಾಸ, ಸ್ನಾಯು ಸೆಳೆತ, ಬೆನ್ನು ನೋವು, ತಲೆ ನೋವು ಹಾಗೂ ಮಾನಸಿಕ ಕಿರಿಕಿರಿಯಿಂದ ಪರಿತಪಿಸುವುದೂ ಇದೆ. ಇವರಿಗೆ ತಮ್ಮ ದೈನಂದಿನ ಕೆಲಸವನ್ನು ಮಾಡಿಕೊಳ್ಳುವುದೂ ಕಷ್ಟವಾಗುತ್ತದೆ. ಈ ಸ್ಥಿತಿಯಲ್ಲಿ ಇರುವವರಿಗೆ ಚಿಕಿತ್ಸೆಯ ಅಗತ್ಯವಿರುತ್ತದೆ. ಜೊತೆಗೆ ಆ ದಿನಗಳಲ್ಲಿ ವಿಶ್ರಾಂತಿಯೂ ಬೇಕೇ ಬೇಕು’ ಎನ್ನುತ್ತಾರೆ ಡಾ. ಚಂದ್ರಿಕಾ.

ವರ್ಕ್‌ ಫ್ರಮ್‌ ಹೋಮ್

ಕೆಲವೊಮ್ಮೆ ಬಹಳ ನಿರ್ಣಾಯಕ ಹುದ್ದೆಗಳಲ್ಲಿರುವ ಮಹಿಳೆಯರಿಗೆ ಆ ಸಮಯದಲ್ಲಿ ರಜೆ ಪಡೆಯಲು ಸಾಧ್ಯವೇ ಆಗುವುದಿಲ್ಲ. ಹೀಗಿದ್ದಾಗ, ಮನೆಯಿಂದಲೇ ಕಚೇರಿ ಕೆಲಸ ಮಾಡಲು (ವರ್ಕ್‌ ಫ್ರಮ್‌ ಹೋಮ್‌) ಅವಕಾಶ ಇರಬೇಕು. ಕೆಲಸದ ಸ್ವಭಾವವನ್ನು, ಅಗತ್ಯವನ್ನು ಆಧರಿಸಿ ಆಕೆ ಮನೆಯಿಂದ ಕೆಲ ಗಂಟೆ ಕೆಲಸ ಮಾಡಿ ವಿಶ್ರಾಂತಿ ಪಡೆಯಬಹುದು. ಇದರಿಂದ ಅನಿವಾರ್ಯ ಕೆಲಸಗಳನ್ನು ಪೂರ್ಣಗೊಳಿಸುವ ಜೊತೆಗೆ ತನ್ನ ಯೋಗಕ್ಷೇಮವನ್ನೂ ನೋಡಿಕೊಳ್ಳಲು ಸಾಧ್ಯವಾಗುತ್ತದೆ. ಈ ಕ್ರಮ ಅನೇಕ ಖಾಸಗಿ ಸಂಸ್ಥೆಗಳಲ್ಲಿ ಜಾರಿಯಲ್ಲಿದೆ. ‘ನಮ್ಮಲ್ಲಿ ಅನಿವಾರ್ಯ ರಜೆ (Indispensable Leave) ಎಂಬ ಪ್ರಯೋಗ ಚಾಲ್ತಿಯಲ್ಲಿದೆ. ಸಿಎಲ್‌(ಸಾಮಾನ್ಯ ರಜೆ) ಅಥವಾ ಎಸ್‌ಎಲ್‌(ಅನಾರೋಗ್ಯ ನಿಮಿತ್ತ ರಜೆ) ಗಳನ್ನು ಈ ವರ್ಗದಲ್ಲಿ ತೆಗೆದುಕೊಳ್ಳಬಹುದು. ಅನಿವಾರ್ಯ ಕಾರಣದ (Indispensable Reason) ಆಧಾರದಲ್ಲಿ ಅವರು ಮನೆಯಿಂದಲೇ ಕಚೇರಿ ಕೆಲಸಮಾಡಬಹುದು.

ನಮ್ಮ ಮಹಿಳಾ ಉದ್ಯೋಗಿಗಳು ತಿಂಗಳಲ್ಲಿ ಆ ಒಂದು ಅಥವಾ ಎರಡು ದಿನ ಈ ವರ್ಗದಲ್ಲಿ ವರ್ಕ್‌ ಫ್ರಮ್‌ ಹೋಮ್‌ ತೆಗೆದುಕೊಳ್ಳುವುದುಂಟು. ಆದರೆ, ಇದಕ್ಕೆ ನಿರ್ದಿಷ್ಟವಾದ ನಿಯಮಗಳು ರೂಪುಗೊಂಡಿಲ್ಲ, ಎಲ್ಲಾ ಹೊಂದಾಣಿಕೆಯ ಮೇರೆಗೆ ನಡೆಯುತ್ತಿದೆ. ಇದು ಕಾನೂನು ವ್ಯಾಪ್ತಿಗೆ ಒಳಪಟ್ಟರೆ ಹೆಚ್ಚು ಉಪಯುಕ್ತ’ ಎನ್ನುತ್ತಾರೆ ಮಾನವ ಸಂಪನ್ಮೂಲ ಏಜೆನ್ಸಿಯೊಂದರ ಸಿಇಒ ಮೇಘನಾ ರಾವ್‌.

ಅನೇಕರು ತಮ್ಮ ಸಿಎಲ್‌, ಎಸ್‌ಎಲ್‌ಗಳನ್ನು ಈ ಅವಧಿಗಾಗಿ ಬಳಸಿಕೊಳ್ಳುವುದುಂಟು. ಆದರೆ, ಈ ಸಮಯದಲ್ಲಿ ಮಹಿಳೆಯರಿಗೆ ವಿಶೇಷ ರಜೆಗಳು ಇದ್ದರೆ, ಅದು ಕಾನೂನಿನ ಚೌಕಟ್ಟಿನಲ್ಲಿ ಬಂದರೆ ಹೆಚ್ಚು ನೆಮ್ಮದಿ. ಇಷ್ಟೆಲ್ಲ ಅಸಹನೆ, ಕಿರಿಕಿರಿ ಯನ್ನು ಹೊತ್ತು ಕಚೇರಿಗೆ ಹೋದರೂ ಕೆಲಸದಲ್ಲಿ ಏಕಾಗ್ರತೆಯ ಕೊರತೆ ಎದುರಾಗಬಹುದು. ಶೇ 100ರಷ್ಟು ಕಾರ್ಯಕ್ಷಮತೆಯನ್ನು ಪ್ರದರ್ಶಿಸುವುದು ಕಷ್ಟ. ಇದರಿಂದ ಉತ್ಪಾದನಾ ಗುಣಮಟ್ಟದಲ್ಲಿಯೂ ವ್ಯತ್ಯಾಸ ಉಂಟಾಗಬಹುದು.

ಒಂದೆರಡು ದಿನಗಳ ವಿರಾಮ ಅವರ ಚೈತನ್ಯವನ್ನು ಇಮ್ಮಡಿಗೊಳಿಸುವ ಜೊತೆಗೆ, ಕೆಲಸದ ಶ್ರದ್ಧೆಯನ್ನೂ, ಆ ಮೂಲಕ ಉತ್ಪಾದಕತೆಯನ್ನೂ ಹೆಚ್ಚಿಸಬಲ್ಲದು ಎನ್ನುವುದಾದರೆ ಈ ರಜೆ ಕಂಪನಿಗಳಿಗೂ ಲಾಭದಾಯಕವೇ ಅಲ್ಲವೆ? ಸದ್ಯಕ್ಕೆ ಸರ್ಕಾರದಿಂದ ಅನುಮೋದನೆಗೊಂಡ ಮುಟ್ಟಿನ ರಜೆ ಜಾರಿಯಲ್ಲಿರುವುದು ಬಿಹಾರದಲ್ಲಿ ಮಾತ್ರ. ಮಹಿಳಾ ಉದ್ಯೋಗಿಗಳಿಗೆ ತಮ್ಮ ಸಾಮಾನ್ಯ ರಜೆಯ ಹೊರತಾಗಿ ಪ್ರತಿ ತಿಂಗಳು ಎರಡು ವಿಶೇಷ ರಜೆ ಪಡೆಯುವ ಹಕ್ಕು ಅಲ್ಲಿನ ಮಹಿಳೆಯರಿಗೆ ದಕ್ಕಿದೆ. ಇದು ಕಾನೂನು ವ್ಯಾಪ್ತಿಗೆ ಒಳಪಡಲಿ ಬಿಡಲಿ. ಎಲ್ಲಾ ರಾಜ್ಯಗಳೂ, ಎಲ್ಲಾ ಸಂಸ್ಥೆಗಳೂ ಈ ಮಹಿಳಾ ಸ್ನೇಹಿ ನೀತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಸೌಜನ್ಯ ಮೆರೆಯಬೇಕಿದೆ.

*****

ಈಟಿಯಂತಹ ಮಾತಿಗೆ ಅನುವಾಗಬೇಕಲ್ಲ...

ಈ ರಜೆ ಇನ್ನೂ ನಮ್ಮಲ್ಲಿ ಜಾರಿಯಾಗಿಲ್ಲ. ಆಗಲೇ, ಕುಹಕದ ಮಾತುಗಳು, ಅಪಹಾಸ್ಯ, ಅನುಕಂಪಗಳು ಒಟ್ಟೊಟ್ಟಿಗೇ ಹರಿದು ಬರುತ್ತಿವೆ. ‘ಪುರುಷ ಸಹೋದ್ಯೋಗಿಗಳಿಗೆ, ಮೇಲ್ವಿಚಾರಕರಿಗೆ ಆ ರಜೆಯನ್ನು ಕೇಳುವುದೇ ಸವಾಲು. ನೀವು ಅದೇ ಕಾರಣಕ್ಕೆ ರಜೆ ಕೇಳಿದ್ದೀರಿ ಅಂತ ಯಾವ ಗ್ಯಾರಂಟಿ? ಎಂದು ಸಹೋದ್ಯೋಗಿಯೊಬ್ಬರು ನಗಾಡಿದರು’ ಎಂದು ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್‌ ಆಗಿರುವ ಪ್ರಜ್ಞಾ ನೋವು ತೋಡಿಕೊಂಡರು.

ಆ ರಜೆಗಳ ಬಗ್ಗೆ ಸಹೋದ್ಯೋಗಿಗಳು ಕಿರಿಕಿರಿ ಮಾಡಬಹುದು, ಹಾಸ್ಯ ಮಾಡಬಹುದು ಎನ್ನುವ ಅಳುಕು ಅನೇಕರದ್ದು. ಆದರೆ, ‘ಮುಟ್ಟಿನ ರಜೆ ಪಡೆಯಲು ನಾಚಿಕೆ ಪಡಬೇಕಾಗಿಲ್ಲ. ಎದುರು ಹೋಗಿ ನಿಂತು ಪರವಾನಿಗೆ ಕೇಳಬೇಕಾಗಿಲ್ಲ. ಇದನ್ನು Inexplicable Reason (ವಿವರಿಸಲಾಗದ ಕಾರಣ) ಎನ್ನುವ ವರ್ಗಕ್ಕೆ ಸೇರಿಸಬೇಕು. ಮಹಿಳಾ ಉದ್ಯೋಗಿಗಳು ತಮಗೆ ವಿವರಿಸಲಾಗದ ಕಾರಣದ ರಜೆ ಬೇಕು ಎಂದು ಮನೆಯಿಂದಲೇ ಸಂದೇಶ ಅಥವಾ ಇ-ಮೇಲ್ ಕಳುಹಿಸಲು ಅವಕಾಶ ನೀಡಬೇಕು. ಇದು ಇನ್ನೂ ಚರ್ಚೆಯ ಹಂತದಲ್ಲಿ ಇರುವುದರಿಂದ ಈ ಎಲ್ಲಾ ಅಂಶಗಳನ್ನು ಗಮನಿಸಿ ನಿಯಮ ರೂಪಿಸಬೇಕು’ ಎನ್ನುತ್ತಾರೆ ಮೇಘನಾ ರಾವ್‌.

***

ಇದೊಂದು ಸೌಜನ್ಯದ ನಡೆ

ಭವ್ಯಾ ವಿಶ್ವನಾಥ
ಭವ್ಯಾ ವಿಶ್ವನಾಥ

ಹತ್ತಾರು ಒತ್ತಡಗಳಿಗೆ ಒಟ್ಟಿಗೇ ಹೆಗಲುಕೊಡುತ್ತ ಹೈರಾಣಾಗುವ ದುಡಿಯುವ ಹೆಣ್ಣಿಗೆ ಋತುಚಕ್ರದ ರಜೆ ಒಂದು ಕೃತಜ್ಞತಾ ಹೆಜ್ಜೆ ಎಂದೇ ಹೇಳಬಹುದು ಎನ್ನುತ್ತಾರೆ ಮನಃಶಾಸ್ತ್ರಜ್ಞೆ ಭವ್ಯಾ ವಿಶ್ವನಾಥ.

ಮುಟ್ಟು ಕೇವಲ ದೈಹಿಕ ಪ್ರಕ್ರಿಯೆ ಅಲ್ಲ. ಇದು ಮನಸ್ಸಿನ ಸ್ವಾಸ್ಥ್ಯ ಹಾಗೂ ಸಮತೋಲನದ ಮೇಲೆಯೂ ಪರಿಣಾಮ ಬೀರುತ್ತದೆ. ಈ ಅವಧಿಯಲ್ಲಿ ಹಾರ್ಮೋನುಗಳು ಅತಿಹೆಚ್ಚು ಚಟುವಟಿಕೆಯಿಂದ ಕೂಡಿರುತ್ತವೆ. ಭಾವನಾತ್ಮಕವಾಗಿಯೂ ಬಹಳ ಸೂಕ್ಷ್ಮರಾಗಿರುತ್ತಾರೆ. ಮನಸೂ ನಾಜೂಕಾಗಿರುತ್ತದೆ. ಸಹನಶೀಲತೆ ಕಡಿಮೆ ಇರುತ್ತದೆ. ಪ್ರತಿಯೊಂದಕ್ಕೂ ಅತಿಯಾಗಿ, ಕೆಲವೊಮ್ಮೆ ಅನಗತ್ಯವಾಗಿ ಪ್ರತಿಕ್ರಿಯಿಸುವ ಸಾಧ್ಯತೆ ಹೆಚ್ಚು. ಸಿಟ್ಟು, ಆಕ್ರೋಶ, ಅಸಹನೆ ಹೆಚ್ಚು. ಇದೆಲ್ಲ ಅವರ ಕೆಲಸದ ಮೇಲೆ, ಸಹೋದ್ಯೋಗಿಗಳೊಂದಿಗಿನ ಅವರ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ.

‘ಆ ದಿನಗಳ ಒಂದು ಅಥವಾ ಎರಡು ದಿನಗಳ ರಜೆ ಅವಳ ಸಾಸ್ಥ್ಯವನ್ನೂ–ಸಂಬಂಧಗಳನ್ನೂ ಸುಸ್ಥಿತಿಯಲ್ಲಿಡಲು ನೆರವಾಗುತ್ತವೆ’ ಎನ್ನುವುದು ಭವ್ಯಾ ಅವರ ಮನೋವೈಜ್ಞಾನಿಕ ವಿಶ್ಲೇಷಣೆ.

***

ಒಂದು ರಜೆಯಾದರೂ ಸಿಗಲಿ

ತಾಯ್ತನದ ರಜೆ ಇರುವ ಹಾಗೇ ಮುಟ್ಟಿನ ಸಂದರ್ಭದಲ್ಲಿಯೂ ಕನಿಷ್ಠ ಒಂದು ದಿನಾವಾದರೂ ಇಂಥ ರಜೆ ಇರಬೇಕು. ಆದರೆ ಒಂದೇ ವಿಭಾಗದಲ್ಲಿ ಇಬ್ಬರು ಹೆಣ್ಣುಮಕ್ಕಳಿದ್ದು, ಇಬ್ಬರಿಗೂ ಮುಟ್ಟಿನ ಸಂದರ್ಭ ಬಂದರೆ ಆಗ ವಿರಾಮದ ಅವಧಿ ಹಾಗೂ ದಿನವನ್ನು ಅವರಿಬ್ಬರ ನಿರ್ಣಯಕ್ಕೆ ಬಿಟ್ಟುಬಿಡಬೇಕು. ಅವರು ಪರಸ್ಪರ ಮಾತನಾಡಿಕೊಂಡು ತಮ್ಮ ಅನುಕೂಲಕ್ಕೆ ತಕ್ಕ ಹಾಗೇ ರಜೆ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

– ಶಾಂತಾಕುಮಾರಿ, ಮೆಕ್ಯಾನಿಕ್‌, ಕೆಎಸ್‌ಆರ್‌ಟಿಸಿ, ಬೆಂಗಳೂರು

ಪರ್ಯಾಯ ಉದ್ಯೋಗಿ ಇರಲಿ

ಇಂಥ ಸಂದರ್ಭದಲ್ಲಿ ಕನಿಷ್ಠ ಎರಡು ದಿನವಾದರೂ ರಜೆ ಬೇಕು. ಆದರೆ, ಕೆಲಸವೂ ಬಹಳ ಮುಖ್ಯವಾಗಿರುವುದರಿಂದ ಪರ್ಯಾಯ ಉದ್ಯೋಗಿಯನ್ನು ನೇಮಿಸಬೇಕು. ನಮಗೆ ವರ್ಕ್‌ ಫ್ರಂ ಹೋಂ ಆಯ್ಕೆ ಇಲ್ಲದೇ ಇರುವುದರಿಂದ ರಜೆ ಹಾಗೂ ಕೆಲಸ ಎರಡನ್ನೂ ಸರಿದೂಗಿಸುವ ಕೆಲಸ ಆಗಲಿ.

– ಮಧುರಾ, ಬಸ್‌ ಚಾಲಕಿ, ಕೆಎಸ್‌ಆರ್‌ಟಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT