ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಎಂಬ ಅಮೃತ

Last Updated 27 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಮಾನವನ ಉಪಯೋಗಕ್ಕೆ ದೇಶಕಾಲಗಳಿಗೆ ತಕ್ಕಂತೆ ಹಸು, ಆಡು, ಒಂಟೆ, ಕುರಿ, ಎಮ್ಮೆ – ಇನ್ನೂ ಹಲವು ಪ್ರಾಣಿಗಳ ಹಾಲು ಬಳಕೆಯಲ್ಲಿದೆ. ಹಾಲನ್ನು ಆಹಾರವಾಗಿಯೂ ಔಷಧವಾಗಿಯೂ ಮನುಷ್ಯ ಬಳಸುತ್ತ ಬಂದಿದ್ದಾನೆ.

ಹಾಲಾದೆ ಕರೆದರೆ ಮೊಸರಾದೆ ಹೆತ್ತರೆ

ಮೇಲೆಕೆನೆಗೆಡೆದರೆ ಬೆಣ್ಣೆಯಾದೆ

ಮೇಲಾದ ತುಪ್ಪವೂ ನಾನದೆ ಕಾಸಿದರೆ

ನೀನಾರಿಗಾದೆಯೋ ಎಲೆ ಮಾನವಾ

ಇದು ನಾವು ಚಿಕ್ಕವರಿದ್ದಾಗ ಕಲಿತ ಪದ್ಯ. ಇದರ ವಿವರಣೆಯ ಆಳ-ಅರಿವು ಅರಿಯಲು ಬಲು ಕಠಿಣ. ಹಾಲು ಎಂದೊಡನೆ ನೆನಪಿಗೆ ಬರುವುದು ತಾಯಿಯ ಅಥವಾ ಹಸುವಿನ ಹಾಲು. ಆದರೆ ಎಲ್ಲಾ ಸಸ್ತನಿಗಳೂ ಹಾಲೂಡುವ ಪ್ರಾಣಿಗಳೇ. ಅದರಲ್ಲಿ ಮಾನವನ ಉಪಯೋಗಕ್ಕೆ ದೇಶಕಾಲಗಳಿಗೆ ತಕ್ಕಂತೆ ಹಸು, ಆಡು, ಒಂಟೆ, ಕುರಿ, ಎಮ್ಮೆ – ಇನ್ನೂ ಹಲವು ಪ್ರಾಣಿಗಳ ಹಾಲು ಕೂಡ ಬಳಕೆಯಲ್ಲಿದೆ. ಇವುಗಳನ್ನು ಆಹಾರವಾಗಿಯೂ ಔಷಧವಾಗಿಯೂ ಮನುಷ್ಯ ಬಳಸುತ್ತ ಬಂದಿದ್ದಾನೆ.

ಹಸುವಿನ ಹಾಲಿನಲ್ಲೂ ಈಗ ದೇಸಿ(ನಾಟಿ) ಹಸು ಮತ್ತು ಸೀಮೆ ಹಸುಗಳ ಹಾಲಿನಲ್ಲೂ ಗುಣಧರ್ಮಗಳು ವ್ಯತ್ಯಾಸವಿದ್ದು, ದೇಸಿ ಹಸುವಿನ ಹಾಲು ಆರೋಗ್ಯಕ್ಕೆ ಅತ್ಯುತ್ತಮ ಎಂದು ವೈಜ್ಞಾನಿಕವಾಗಿಯೂ ದೃಢಪಟ್ಟಿದೆ. ಇದು ಹುಟ್ಟಿದ ಮಗುವಿನಿಂದ ಶತಾಯುಷಿ ಮುದುಕರವರೆಗೂ ಸೇವಿಸಬಹುದಾದ ಆಹಾರ ಹಾಲು. ಹಾಲು ಪ್ರೊಟೀನು, ಕೊಬ್ಬು, ಅನೇಕ ಪೋಷಕಾಂಶಗಳು ಮತ್ತು ಎನ್‌ಜೈಮ್‌ಗಳನ್ನು ಒಳಗೊಂಡಿದೆ. ಇದು ದೇಹದ ಬೆಳವಣಿಗೆಗೆ ಸಹಾಯಕವಾಗುವ ಎಲ್ಲ ಪೋಷಕಾಂಶಗಳನ್ನೂ ಒಳಗೊಂಡಿದೆ.
ಆಗತಾನೇ ಕರೆದ ಹಾಲು, ಕರೆದ ಬಿಸಿ ಆರುವ ಮುನ್ನ ಹಸಿಯಾಗಿ ಸೇವಿಸಿದರೆ ಶರೀರದ ಎಲ್ಲ ಧಾತುಗಳನ್ನೂ ವರ್ಧಿಸುತ್ತದೆ. ಇದರ ನೊರೆ ಕೂಡ ತೀವ್ರವಾದ ಜ್ವರ, ಕ್ಷಯದಂತಹ ರೋಗಗಳಲ್ಲಿ ಔಷಧವೂ ಹೌದು. ಆದರೆ ಬಿಸಿ ಆರಿದ ನಂತರ ಹಸಿ ಹಾಲುಸೇವನೆ ಅನಾರೋಗ್ಯಕರ. ಇದು ಜಡತೆ, ಮಲಬದ್ಧತೆಗಳನ್ನು ಉತ್ಪತ್ತಿ ಮಾಡುತ್ತದೆ. ಆದರೆ ಕಾಯಿಸಿದ ಹಾಲು ಪುನಃ ದೇಹಕ್ಕೆ ಬಲ ಪುಷ್ಟಿಯನ್ನು ನೀಡುತ್ತದೆ. ಆದರೆ ಕುದಿಸಿ ಶೈತ್ಯೀಕರಿಸಿದ ಹಾಲು ರಸಗ್ರಂಥಿಗಳ ಸ್ರಾವವನ್ನು ವಿಕೃತಗೊಳಿಸುತ್ತದೆ ಮತ್ತು ಮಧುಮೇಹ ಮುಂತಾದ ರೋಗಗಳಿಗೆ ನಾಂದಿ ಹಾಡುತ್ತದೆ. ಕರು ಹಾಕಿದ ಕೂಡಲೆ ಸಿಗುವ ಗಿಣ್ಣುಹಾಲು ಜೀರ್ಣಕ್ಕೆ ಕಷ್ಟ. ಶ್ರಮಜೀವಿಗಳಿಗೆ, ಅತ್ಯಗ್ನಿ ಇರುವವರಿಗೆ ಇದರ ಸೇವನೆಯಿಂದ ಸುಖವಾಗಿ ನಿದ್ರೆ ಬರುತ್ತದೆ.

ಹಾಲು ಹಾಲಾಗಿದ್ದರೆ ಇಷ್ಟು ಉಪಯುಕ್ತವಾದರೆ ಹಾಲು ಒಡೆದರೆ! ತಾನಾಗೆ ಕಾಲವಶಾತ್ ಒಡೆದ ಹಾಲು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ನಾವಾಗೇ ನಿಂಬೆಹುಳಿ ಹಾಕಿ ಒಡೆಸಿದ ಹಾಲು, ಪನ್ನೀರು ಮಾಡಲು ಅತ್ಯುತ್ತಮ. ಪನ್ನೀರು ಅತ್ಯಂತ ಹೆಚ್ಚು ಪ್ರೊಟೀನನ್ನು ಹೊಂದಿರುವಂತಹದ್ದು. ಜೀರ್ಣಶಕ್ತಿ ಕಡಿಮೆ ಇರುವವರಿಗೆ ಮೊಟ್ಟೆಗಿಂತಲೂ ಸುಲಭವಾಗಿ ಜೀರ್ಣವಾಗಿ ಪ್ರೊಟೀನ್‌ನ ಕೊರತೆಯನ್ನು ನೀಗಿಸುತ್ತದೆ. ಆದರೆ ಇದರ ತಿಳಿಭಾಗ ಇನ್ನೂ ಹೆಚ್ಚು ಉಪಯುಕ್ತ. ಇದು ಅಜೀರ್ಣ, ಜ್ವರ, ವಾಂತಿ, ಭೇದಿ ಮುಂತಾದ ರೋಗಗಳಲ್ಲಿ ಚಿಕಿತ್ಸೆಯಾಗಿಯೂ ಉಪಯೋಗಿಸಬಹುದಾದ ಆಹಾರ. ಹಾಲು ಜೀರ್ಣವಾಗದ ಮಕ್ಕಳು ಅಥವಾ ಮುದುಕರಿಗೆ ಹಾಲಿನ ಪೋಷಕಾಂಶಗಳನ್ನು ಒದಗಿಸುವ ಉತ್ತಮ ಪಾನೀಯ ಹಾಲು ಒಡೆದ ನೀರು.

ಹಾಲು ಕಾಯಿಸಿದಾಗ ಬರುವ ಹಾಲಿನ ಕೆನೆ ಅತಿ ಹೆಚ್ಚು ಪೋಷಕಾಂಶಗಳನ್ನು ಹೊಂದಿರುತ್ತದೆ. ಅದನ್ನು ಹಚ್ಚುವುದರಿಂದ ಚಳಿಗಾಲದಲ್ಲಿ ಚರ್ಮ ಒಡೆಯುವುದನ್ನು ತಡೆಗಟ್ಟುವುದರ ಜೊತೆಗೆ ಕಾಂತಿಯನ್ನೂ ಹೆಚ್ಚಿಸುತ್ತದೆ. ಅತಿ ಕೃಶರು ಹಾಲಿನ ಕೆನೆಯನ್ನು ಅಥವಾ ಅದರಿಂದ ತಯಾರಿಸಿದ ಬಾಸುಂದಿ ಮೊದಲಾದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಯಾವುದಾದರೂ ರೋಗದಿಂದ ಕೃಶರಾಗಿದ್ದವರಿಗೂ ಬಲ, ಓಜಸ್ಸು, ರೋಗನಿರೋಧಕ ಶಕ್ತಿಯನ್ನೂ ವರ್ಧಿಸುತ್ತದೆ. ಆದರೆ ಹಾಲಿನೊಡನೆ, ಉಪ್ಪು, ಮಜ್ಜಿಗೆ, ಹುಳಿಪದಾರ್ಥ, ಹಣ್ಣು, ಮಾಂಸ, ಮೊಟ್ಟೆಗಳನ್ನು ಸೇವಿಸುವುದು ವಿರುದ್ಧಾಹಾರವಾಗಿ ಪರಿಣಮಿಸಿ ಉಗ್ರ ಸ್ವರೂಪದ ರೋಗಗಳಿಗೆ ನಾಂದಿ ಹಾಡುತ್ತದೆ.

ಇನ್ನು ಹೆಪ್ಪಿಟ್ಟು ತಯಾರಾದ ಮಜ್ಜಿಗೆ, ಮೊಸರುಗಳ ಬಗ್ಗೆ ಹೇಳಬೇಕಾದ್ದೆ ಇಲ್ಲ. ಜೀರ್ಣಶಕ್ತಿ ಚೆನ್ನಾಗಿದ್ದವರಿಗೆ ಮೊಸರು ಬಲವನ್ನು ಕೊಡುತ್ತದೆ. ಅದರೆ ಜೀರ್ಣಶಕ್ತಿ ಕಡಿಮೆ ಇರುವವರಿಗೆ, ಅಜೀರ್ಣ ಆದವರಿಗೆ ಮೊಸರು ಸರ್ವಥಾ ನಿಷಿದ್ಧ. ಇದು ನೆಗಡಿ, ತಲೆನೋವು, ಮಧುಮೇಹ, ರಕ್ತದೊತ್ತಡ, ಹೃದ್ರೋಗವೇ ಮೊದಲಾದ ರೋಗಗಳಿಗೆ ನಾಂದಿ ಹಾಡುತ್ತದೆ. ಇನ್ನು ಇದನ್ನು ಶೈತ್ಯೀಕರಿಸಿ, ಸೇವಿಸಿದರೆ ಸಿರೆಗಳ ಉಬ್ಬುವಿಕೆಯಿಂದಾಗಿ ಕೈಕಾಲುನೋವು, ರಕ್ತದಲ್ಲಿ ಕೊಬ್ಬಿನ ಅಂಶ ಹೆಚ್ಚಾಗುತ್ತದೆ. ಹುಳಿಮೊಸರು, ಹಾಲಿನ ಜೊತೆ ಮೊಸರನ್ನು ಬೆರೆಸಿ ಸೇವಿಸುವುದು, ಸರಿಯಾಗಿ ಹೆಪ್ಪಾಗದ ಸಿಹಿಮೊಸರಿನ ಸೇವನೆ ಯಾರಿಗೂ ಒಳ್ಳೆಯದಲ್ಲ. ರಾತ್ರಿ ಮೊಸರಿನ ಸೇವೆನೆ ಅತ್ಯಂತ ಕೆಟ್ಟದ್ದು. ಮೊಸರನ್ನು ಸೇವಿಸಲೇ ಬೇಕೆಂದಾಗ ಸಕ್ಕರೆ, ಜೇನು, ನೆಲ್ಲಿಕಾಯಿಪುಡಿ, ಹೆಸರುಕಾಳು ಅಥವಾ ಬೇಳೆಯಿಂದ ತಯಾರಿಸಿದ ಪದಾರ್ಥದೊಡನೆ ಸೇವಿಸಬೇಕು.

ಕಡೆದರೆ ಬರುವ ಮಜ್ಜಿಗೆ ಅಮೃತಸಮಾನವಾದ ಗುಣ ಉಳ್ಳದ್ದು. ಬೆಣ್ಣೆ ತೆಗೆದ ಮಜ್ಜಿಗೆ ಆಹಾರವಾಗಿಯೂ ಔಷಧವಾಗಿಯೂ ಅತ್ಯಂತ ಉಪಯುಕ್ತ ಪದಾರ್ಥ. ಇದು ಅಜೀರ್ಣನಾಶಕ; ಹೀಗಾಗಿ ಊಟದ ಕೊನೆಯಲ್ಲಿ ಮಜ್ಜಿಗೆ ಸೇವಿಸುವ ಪದ್ಧತಿ ಇರುವುದು. ಇದು ಮೊಳೆರೋಗ ಅಥವಾ ಅರ್ಶಸ್ಸುರೋಗದಲ್ಲಿ ಔಷಧವಾಗಿಯೂ ಬಳಕೆಯಲ್ಲಿದೆ. ಭೇದಿ, ಅಜೀರ್ಣ, ಹೊಟ್ಟೆಯುರಿ, ಹೊಟ್ಟೆಯುಬ್ಬರಗಳಲ್ಲಿ, ದಪ್ಪಗಿರುವವರು ತೂಕ ಕಡಿಮೆ ಮಾಡಲು ಹಿಂಗು, ಶುಂಠಿ, ಉಪ್ಪು – ಇವುಗಳನ್ನು ಸೇರಿಸಿ ಸೇವಿಸುವುದು ಒಳ್ಳೆಯದು. ಅತಿಯಾದ ಬಾಯಾರಿಕೆ ಇದ್ದರೆ ನೀರನ್ನು ಸೇರಿಸಿ ಸೇವಿಸುವ ಮಜ್ಜಿಗೆ ಔಷಧವೂ ಹೌದು.

ಮಜ್ಜಿಗೆಯಿಂದ ಬರುವ ಬೆಣ್ಣೆ ಮತ್ತು ಕಾಯಿಸಿದಾಗ ಬರುವ ತುಪ್ಪದ ಬಗ್ಗೆ ಬರೆದಷ್ಟೂ ವಿಷಯವಿದೆ. ಕ್ರಮವರಿತು ಸೇವಿಸಿದ ಬೆಣ್ಣೆ–ತುಪ್ಪಗಳು ಅಗ್ನಿಯನ್ನೂ, ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಇವುಗಳು ಬಾಹ್ಯ ಮತ್ತು ಆಂತರಿಕವಾಗಿಯೂ ಉಪಯುಕ್ತ ದ್ರವ್ಯಗಳು.

(ಲೇಖಕಿ: ಆಯುರ್ವೇದವೈದ್ಯೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT