ಶನಿವಾರ, ಸೆಪ್ಟೆಂಬರ್ 25, 2021
22 °C

ಇಂದು ರಾಷ್ಟ್ರೀಯ ವೈದ್ಯರ ದಿನ: ಸಾಂಕ್ರಾಮಿಕ ಸಂಕಷ್ಟದ ನಡುವೆ ವೈದ್ಯರಿಗೆ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾರತದ ಹೆಸರಾಂತ ವೈದ್ಯ ಬಿ.ಸಿ.ರಾಯ್ ಅವರ ಜನ್ಮದಿನ ಮತ್ತು ನಿಧನದ ದಿನವಾದ ಜುಲೈ 1 ಅನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ವೈದ್ಯರ ಸೇವೆಯನ್ನು ಪ್ರಶಂಸಿಸುವುದು ಮತ್ತು ಆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವೈದ್ಯರ ದಿನದ ಉದ್ದೇಶ.

1882ರ ಜುಲೈ 1ರಂದು ಪಟ್ನಾದಲ್ಲಿ ಜನಿಸಿದ ಬಿ.ಸಿ.ರಾಯ್ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಭಾರಿ ಸಾಧನೆ ಮಾಡಿದ್ದಾರೆ. ಭಾರತೀಯ ವೈದ್ಯಕೀಯ ಪರಿಷತ್ತಿನ ಸ್ಥಾಪನೆಯಲ್ಲಿ ಅವರ ಕೊಡುಗೆ ಅಪಾರ. ಸ್ವಾತಂತ್ರ್ಯ ಚಳುವಳಿಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು, ಮಹಾತ್ಮಾ ಗಾಂಧಿ ಅವರ ಅಸಹಕಾರ ಚಳವಳಿಯಲ್ಲಿ ಭಾಗಿಯಾಗಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕರಾಗಿದ್ದ ರಾಯ್ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ತರುವಲ್ಲಿ ಅವರು ಶ್ರಮಿಸಿದ್ದರು. ಸಕ್ರಿಯ ರಾಜಕಾರಣಿಯೂ ಆಗಿದ್ದ ಕಾರಣ ವೈದ್ಯಕೀಯ ಶಿಕ್ಷಣ ಮತ್ತು ಸೇವೆಗೆ ಸಂಬಂಧಿಸಿದಂತೆ ನೀತಿಗಳನ್ನು ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. 1962ರ ಜುಲೈ 1ರಂದು ಅವರು ನಿಧನರಾದರು. ವೈದ್ಯಕೀಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯ ಸ್ಮರಣಾರ್ಥ ಪ್ರತಿ ವರ್ಷ ಜುಲೈ 1 ಅನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸುವುದಾಗಿ 1991ರಲ್ಲಿ ಕೇಂದ್ರ ಸರ್ಕಾರ ಘೋಷಿಸಿತು. ಆ ಪ್ರಕಾರ 1991ರ ಜುಲೈ 1ರಂದು ಮೊದಲ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಯಿತು. ನಂತರ ಅದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ.

ಇದನ್ನೂ ಓದಿ: 

ಪ್ರತಿ ವರ್ಷ ಜುಲೈ 1ರಂದು ಸರ್ಕಾರಗಳು ಮತ್ತು ಹಲವು ಖಾಸಗಿ ಸಂಸ್ಥೆಗಳು ಹಾಗೂ ಸಂಘಟನೆಗಳು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸುತ್ತವೆ. ಅಂದು ದೇಶದಾದ್ಯಂತ ಹಲವೆಡೆ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದಾನ ಶಿಬಿರ ನಡೆಸಲಾಗುತ್ತದೆ. ರೋಗಿಗಳು ತಮ್ಮ ವೈದ್ಯರಿಗೆ ಶುಭಾಶಯ ಕೋರುವ, ಉಡುಗೊರೆ ನೀಡುವ ಪದ್ಧತಿಯೂ ರೂಢಿಯಲ್ಲಿದೆ.

ಕೋವಿಡ್‌ನ ಕಾರಣದಿಂದ 2020ರ ಮತ್ತು 2021ರ ರಾಷ್ಟ್ರೀಯ ವೈದ್ಯರ ದಿನ ಹೆಚ್ಚು ಮಹತ್ವ ಪಡೆದುಕೊಂಡಿದೆ. ಕೋವಿಡ್‌ ಸಾಂಕ್ರಾಮಿಕದಲ್ಲಿ ಸಾವಿನ ಭಯ ಇದ್ದರೂ, ತಮ್ಮ ಮತ್ತು ತಮ್ಮ ಕುಟುಂಬದವರ ಸುರಕ್ಷತೆಯನ್ನು ಗಣನೆಗೆ ತೆಗೆದುಕೊಳ್ಳದೆ ವೈದ್ಯರು ದೇಶದ ಜನರಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲಾ ಅಪಾಯಗಳನ್ನು ಎದುರು ಹಾಕಿಕೊಂಡು ಜನರಿಗೆ ಚಿಕಿತ್ಸೆ ನೀಡಲು ವೈದ್ಯರು ದಿನವಿಡೀ ದುಡಿಯುತ್ತಿದ್ದಾರೆ. 

ರಕ್ಷಣೆಗೆ ಬೇಕು ಕಾನೂನಿನ ಬಲ
ಜನರ ಜೀವ ರಕ್ಷಿಸುವ ವೈದ್ಯರು, ರೋಗಿಗಳ ಸಂಬಂಧಿಕರು ಅಥವಾ ಸ್ನೇಹಿತರಿಂದ ಹಲ್ಲೆಗೆ ಒಳಗಾದ ಸಂದರ್ಭಗಳು ಸಾಕಷ್ಟು ಇವೆ. ತಮಗೆ ರಕ್ಷಣೆ ನೀಡುವಂತೆ ಒತ್ತಾಯಿಸಿ ವೈದ್ಯರು ಬೀದಿಗಿಳಿದು ಅನೇಕ ಬಾರಿ ಪ್ರತಿಭಟನೆ ನಡೆಸಿದ್ದಿದೆ. ಕೋವಿಡ್‌ ಸಂದರ್ಭದಲ್ಲೂ ಇಂಥ ಪ್ರಕರಣಗಳು ನಡೆದು, ನಾಲ್ಕಾರು ರಾಜ್ಯಗಳಲ್ಲಿ ವೈದ್ಯರು ಹಲವು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದು ಇನ್ನೂ ಹಸಿರಾಗಿದೆ.

ಹಾಗೆಂದು ವೈದ್ಯರಿಗೆ ರಕ್ಷಣೆ ನೀಡಬಲ್ಲಂಥ ಕಾನೂನೇ ಇರಲಿಲ್ಲ ಎಂದೂ ಹೇಳುವಂತಿಲ್ಲ. ವೈದ್ಯರ ಮೇಲೆ ಹಲ್ಲೆ ನಡೆಸಿದವರಿಗೆ ಗರಿಷ್ಠ ₹ 50,000 ದಂಡ ಹಾಗೂ ಮೂರು ವರ್ಷಗಳ ಜೈಲು ವಿಧಿಸಬಹುದಾದಂಥ ಕಾನೂನನ್ನು ಅನೇಕ ರಾಜ್ಯಗಳು ರೂಪಿಸಿ ದಶಕವೇ ಕಳೆದಿದೆ. ಆದರೆ ಆ ಕಾನೂನು ಕಾಗದದಿಂದ ಹೊರಗೆ ಬಂದಿಲ್ಲ ಎಂಬುದು ವೈದ್ಯರ ದೂರು.

ಮೇಲ್ನೋಟಕ್ಕೆ ಇದು ಕಠಿಣ ಕಾನೂನಿನಂತೆ ಕಂಡರೂ, ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳಲು ಐಪಿಸಿಯಲ್ಲಾಗಲಿ, ಸಿಆರ್‌ಪಿಸಿಯಲ್ಲಾಗಲಿ ಅವಕಾಶ ಇರುವುದಿಲ್ಲ. ಇದರಿಂದಾಗಿ ದೂರು ನೀಡಲು ಹೋದರೆ ಪೊಲೀಸರೇ ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ವೈದ್ಯರಿಗೆ ರಕ್ಷಣೆ ನೀಡುವುದು ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಕೇಂದ್ರ ಸರ್ಕಾರವು ಕಾನೂನು ರೂಪಿಸುವಂತೆಯೂ ಇಲ್ಲ ಎಂದು ವೈದ್ಯರು ಹೇಳುತ್ತಾರೆ. ಆ ಕಾರಣಕ್ಕೇ ವೈದ್ಯರ ರಕ್ಷಣೆಗೆ ಕೇಂದ್ರವೇ ಕಾನೂನು ರೂಪಿಸುವಂತಾಗಬೇಕು ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಒತ್ತಾಯಸುತ್ತಿದೆ.

ಇದನ್ನೂ ಓದಿ: 

ಭಾರತೀಯ ವೈದ್ಯಕೀಯ ಸಂಘವು 2017ರಲ್ಲಿ ಬಿಡುಗಡೆ ಮಾಡಿದ್ದ ಅಧ್ಯಯನ ವರದಿಯೊಂದರ ಪ್ರಕಾರ, ದೇಶದಲ್ಲಿ ಶೇ 75ರಷ್ಟು ವೈದ್ಯರು ಒಂದಲ್ಲ ಒಂದು ರೀತಿಯಲ್ಲಿ ಹಿಂಸೆ ಅನುಭವಿಸಿದ್ದಾರೆ. ‘ಅದು ದೈಹಿಕವೇ ಆಗಬೇಕೆಂದಿಲ್ಲ. ಪ್ರತಿನಿತ್ಯವೂ ನಾವು ರೋಗಿಗಳ ಕಡೆಯವರಿಂದ ನಿಂದನೆ, ಬೈಗುಳಗಳನ್ನು ಕೇಳಿಸಿಕೊಳ್ಳಬೇಕಾಗಿದೆ. ಅನೇಕ ಬಾರಿ ಬೇರೆ ದಾರಿ ಕಾಣದೆ ಪೊಲೀಸರನ್ನು ಕರೆಯಿಸಬೇಕಾಗುತ್ತದೆ’ ಎಂದು ವೈದ್ಯರು ಹೇಳುತ್ತಾರೆ.

ದೇಶದ ಯಾವ ಆಸ್ಪತ್ರೆಯಲ್ಲೂ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ವೈದ್ಯರಿಲ್ಲ. ಇದರಿಂದಾಗಿ ಅನೇಕ ಬಾರಿ ಊಟ–ತಿಂಡಿ ಇಲ್ಲದೆಯೇ ಕೆಲಸ ಮಾಡಬೇಕಾಗತ್ತದೆ. ಚಿಕಿತ್ಸೆ ಸ್ವಲ್ಪ ತಡವಾದರೂ ರೋಗಿಯ ಕಡೆಯವರು ಹಲ್ಲೆಗೆ ಮುಂದಾಗುತ್ತಾರೆ. ಗ್ರಾಮೀಣ ಪ್ರದೇಶದ ವೈದ್ಯರು ಹೆಚ್ಚಾಗಿ ಇಂಥ ಹಲ್ಲೆ ಅನುಭವಿಸಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಕೋವಿಡ್‌ ಸಮಯದಲ್ಲಿ ಕಾನೂನು
ಕೋವಿಡ್‌ ಸಂದರ್ಭದಲ್ಲಿ ವೈದ್ಯರ ಮೇಲೆ ಹಲ್ಲೆಯ ಪ್ರಕರಣಗಳು ಹೆಚ್ಚಾದಾಗ, ಐಎಂಎ ಒತ್ತಾಯದ ಮೇರೆಗೆ ಕೇಂದ್ರವು ಅವರ ರಕ್ಷಣೆಗೆ ವಿಶೇಷ ಕಾನೂನು ರೂಪಿಸಿತು. 2020ರ ಎಪ್ರಿಲ್‌ನಲ್ಲಿ ಆ ಕುರಿತ ಸುಗ್ರೀವಾಜ್ಞೆಯೊಂದನ್ನು ಹೊರಡಿಸಿತು.

ಸುಮಾರು 123 ವರ್ಷಗಳಷ್ಟು ಹಳೆಯದಾದ (1897ರ) ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ತಿದ್ದುಪಡಿ ಮಾಡಿ, ವೈದ್ಯರ ಮೇಲೆ ಹಲ್ಲೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲು ಅಲ್ಲಿ ಅವಕಾಶ ನೀಡಲಾಯಿತು.

ಹೊಸ ಕಾನೂನಿನ ಪ್ರಕಾರ ಈಗ ವೈದ್ಯರ ಮೇಲಿನ ಹಲ್ಲೆಯು ಜಾಮೀನುರಹಿತ ಅಪರಾಧ ಎನಿಸಿದೆ. ದೂರು ದಾಖಲಾಗಿ 30 ದಿನದೊಳಗೆ ತನಿಖೆ ನಡೆಸಬೇಕಾಗುತ್ತದೆ. ಅಪರಾಧಿಗೆ ಕನಿಷ್ಠ 3 ತಿಂಗಳು ಮತ್ತು ಗರಿಷ್ಠ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ ಕನಿಷ್ಠ ₹ 50,000ದಿಂದ ಗರಿಷ್ಠ ₹ 2 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ ಇದೆ. ವೈದ್ಯರಿಗೆ ಗಂಭೀರ ಸ್ವರೂಪದ ಗಾಯಗಳಾದರೆ ಅಪರಾಧಿಗೆ ಗರಿಷ್ಠ 7 ವರ್ಷ ಜೈಲು ಮತ್ತು ₹ 5ಲಕ್ಷದ ವರೆಗೆ ದಂಡ ವಿಧಿಸಲೂ ಅವಕಾಶ ಇದೆ. ಆಸ್ತಿಗೆ ಹಾನಿ ಉಂಟುಮಾಡಿದರೆ, ಅದರ ಮಾರುಕಟ್ಟೆ ಮೌಲ್ಯದ ಎರಡರಷ್ಟು ದಂಡ ವಿಧಿಸಲೂ ಅವಕಾಶ ಕಲ್ಪಿಸಲಾಗಿದೆ. ಈ ಕಾಯ್ದೆಗೆ 2020ರ ಸೆಪ್ಟೆಂಬರ್‌ನಲ್ಲಿ ರಾಜ್ಯಸಭೆಯೂ ಅನುಮೋದನೆ ನೀಡಿದೆ.

ವೈದ್ಯರ ಕಾಳಜಿ ಅಪಾರ
ಕೊರೊನಾ ಸೋಂಕು ವ್ಯಾಪಿಸಿದ ಕಾಲದಲ್ಲಿ ವೈದ್ಯರು ಹಗಲಿರುಳು ಶ್ರಮಿಸಿದರು. ಸೋಂಕಿತರನ್ನು ಅತ್ಯಂತ ಕಾಳಜಿಪೂರ್ವಕವಾಗಿ ಆರೈಕೆ ಮಾಡಿದರು. ಇಡೀ ಜಗತ್ತನ್ನೇ ಕಂಗೆಡಿಸಿರುವ ಈ ಸೋಂಕು ಎದುರಿಸುವಲ್ಲಿ ವೈದ್ಯರ ಪಾತ್ರ ಮಹತ್ವದ್ದಾಗಿದೆ. ಅತ್ಯಂತ ಕಷ್ಟದ ಕಾಲದಲ್ಲಿ ದುಡಿದ ವೈದ್ಯರಿಗೆ ಸನ್ಮಾನ ಆಗಬೇಕು. ಅವರ ವೇತನವನ್ನು ಇನ್ನಷ್ಟು ಹೆಚ್ಚಿಸಿ, ಅವರ ವಿದ್ವತ್ ಹಾಗೂ ಸೇವೆಯನ್ನು ಮತ್ತಷ್ಟು ಉಪಯೋಗ ಮಾಡಿಕೊಳ್ಳಬೇಕಿದೆ.

-ಡಾ. ಚೆನ್ನವೀರ ಕಣವಿ, ಹಿರಿಯ ಕವಿ

ಮಾನವೀಯ ಸೇವೆ
ವೈದ್ಯ ವೃತ್ತಿ ಅತ್ಯಂತ ಪವಿತ್ರವಾದುದು. ಪ್ರೀತಿ, ತ್ಯಾಗ ಮತ್ತು ಸೇವಾ ಮನೋಭಾವದಿಂದ ಚಿಕಿತ್ಸೆ ನೀಡಿ, ರೋಗಿಗಳ ಭಯ, ಆತಂಕ ನಿವಾರಿಸಿ, ಅವರು ಪೂರ್ಣ ಆರೋಗ್ಯ ಭಾಗ್ಯವನ್ನು ಹೊಂದುವಂತೆ ಮಾಡುವುದೇ ವೈದ್ಯರ ಗುರಿಯಾಗಿದೆ. ಕೋವಿಡ್‌ ಸಂಕಷ್ಟದ ದಿನಗಳಲ್ಲಂತೂ ಎಲ್ಲ ವೈದ್ಯರು ತಮ್ಮ ಮನೆ ಹಾಗೂ ಕುಟುಂಬದ ಸಂಪರ್ಕವೂ ಇಲ್ಲದೆ ಆಹಾರ, ವಿಶ್ರಾಂತಿ ಮತ್ತು ಸಮಯದ ಮಿತಿಯನ್ನೂ ಮರೆತು ಮಾನವೀಯತೆಯಿಂದ ರೋಗಿಗಳ ಸೇವೆ ಮಾಡಿದ್ದಾರೆ.

-ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮಾಧಿಕಾರಿ

ನಿತ್ಯವೂ ವೈದ್ಯರ ದಿನವೇ...
ಪ್ರತಿಯೊಬ್ಬ ವ್ಯಕ್ತಿಯ ಶರೀರದೊಳಗಿನ ದಿವ್ಯತೆ ಕೊಂಡಾಡುವ ಸಾಮರ್ಥ್ಯ, ಈ ಸೌಭಾಗ್ಯದ ಸತ್ಕಾರ್ಯ ಮಾಡುವ ಅವಕಾಶ ವೈದ್ಯರಿಗಷ್ಟೇ ಲಭ್ಯ. ನಿತ್ಯವೂ ಇದನ್ನು ಸ್ಮರಿಸಿಕೊಂಡು ವೈದ್ಯರು ಸೇವೆಯಲ್ಲಿ ತಲ್ಲೀನರಾಗಬೇಕು. ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ನಮ್ಮ ಸಮಾಜವು ಸಾಂಕೇತಿಕವಾಗಿ ವೈದ್ಯರ ದಿನ ಆಚರಿಸುವುದು, ವೈದ್ಯ ಸಮೂಹವನ್ನು ಗೌರವಿಸಿ–ಅವರ ಸೇವೆ ಕೊಂಡಾಡುವುದು ಜುಲೈ 1ರಂದು. ಆದರೆ, ವೈದ್ಯ ಸಮೂಹಕ್ಕೆ ಪ್ರತಿ ದಿನವೂ ವೈದ್ಯರ ದಿನವೇ. ನಿತ್ಯವೂ ತಮ್ಮ ಪಾಲಿನ ಪವಿತ್ರ ಜವಾಬ್ದಾರಿ ನಿಭಾಯಿಸಬೇಕಾದ ಹೊಣೆಗಾರಿಕೆ ಅವರದು.

-ಡಾ.ಆರ್.ಬಾಲಸುಬ್ರಹ್ಮಣ್ಯ, ಮೈಸೂರು

ವೈದ್ಯರ ಸಂತತಿ ಸಾವಿರವಾಗಲಿ
ಕೋವಿಡ್‌ ನಿಯಂತ್ರಣದಲ್ಲಿ ವೈದ್ಯರ ಪಾತ್ರ ಅನನ್ಯ. ಅವರ ಮಹೋನ್ನತ ಕಾರ್ಯವನ್ನು ಪ್ರಶಂಸಿಸುವುದಕ್ಕೆ ಜನರ ಕೃತಜ್ಞತೆಯ ಕಣ್ಣೀರನ್ನು ಬಿಟ್ಟರೆ ಬಹುಶಃ ನಿಘಂಟಿನ ಯಾವ ಪದಗಳಿಗೂ ಸಾಧ್ಯವಿಲ್ಲವೇನೋ. ವೈದ್ಯರ ಸಂತತಿ ಸಾವಿರವಾಗಲಿ. ಭಗವಂತ ಸದಾ ಅವರ ಪಾಲಿಗಿರಲಿ. ಬೈಬಲ್‌ನಲ್ಲಿ ಯೇಸುಕ್ರಿಸ್ತರನ್ನು ಮಹೋನ್ನತ ವೈದ್ಯ ಎಂದು ಕರೆಯಲಾಗಿದೆ. ತಮ್ಮ ಕಾಲಘಟ್ಟದಲ್ಲಿ ಕುಂಟರು, ಕಿವುಡರು, ಮೂಕರು, ಕುಷ್ಠರೋಗಿಗಳಾದಿಯಾಗಿ ರೋಗಗ್ರಸ್ಥರಿಗೆ ಸೌಖ್ಯವನ್ನು ನೀಡಿದ್ದು ಕ್ರಿಸ್ತ. ಅವರಂತೆಯೇ ನಮ್ಮ ವೈದ್ಯರು ಹಗಲು ಇರುಳುಗಳೆನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲ ರೋಗಗಳ ವಿರುದ್ಧ ಹೋರಾಡಿದ, ಹೋರಾಡಿ ಮಡಿದ, ಹೋರಾಡುತ್ತಲೇ ಇರುವ ಸಮಸ್ತ ವೈದ್ಯರ ಅನನ್ಯ ಅನುಪಮ ಸೇವೆಯನ್ನು ಸ್ಮರಿಸುವ ಹಾಗೂ ಕೊಂಡಾಡುವ ಸುದಿನ ಈ ವೈದ್ಯರ ದಿನ. ಜನರ ಜೀವ ಉಳಿಸುವ ಕಾರ್ಯದಲ್ಲಿ ಸಾಕಷ್ಟು ವೈದ್ಯರು ಅಸುನೀಗಿದರೂ ಧೃತಿಗೆಡದೆ, ಜನಸೇವೆಯೇ ಜನಾರ್ದನ ಸೇವೆ ಎಂಬ ದಿಸೆಯಲ್ಲಿ ಕಾರ್ಯನಿರ್ವಹಿಸಿದ ನಮ್ಮ ವೈದ್ಯರುಗಳು ನಮ್ಮ ಹೆಮ್ಮೆ.

-ಡಾ. ಪೀಟರ್ ಮಚಾದೊ, ಬೆಂಗಳೂರಿನ ಆರ್ಚ್‍ಬಿಷಪ್

ಕಣ್ಣಿಗೆ ಕಾಣುವ ದೇವರು
ಇಂದು ವೈದ್ಯರ ದಿನ. ಜನರ ಅಮೂಲ್ಯ ಜೀವ ರಕ್ಷಿಸುವ ವೈದ್ಯರನ್ನು ಗೌರವಿಸುವ ದಿನ. ಹಾಗಾಗಿ ಈ ದಿನವಷ್ಟೇ ಅಲ್ಲದೆ ಪ್ರತಿದಿನವೂ ವೈದ್ಯರನ್ನು ಕೃತಜ್ಞತೆಯಿಂದ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ನಮ್ಮ ರಾಜ್ಯ- ದೇಶ ಅಷ್ಟೇ ಅಲ್ಲ. ಇಡೀ ಜಗತ್ತಿನಲ್ಲಿ ವೈದ್ಯರು ಜನರ ಆರೋಗ್ಯ ಕಾಪಾಡಲು ದೊಡ್ಡ ಹೋರಾಟವನ್ನೇ ನಡೆಸುತ್ತಿದ್ದಾರೆ. ಕೋವಿಡ್‌ ಸಂಕಷ್ಟದ ನಡುವೆ ವೈದ್ಯರು ಜೀವ ಒತ್ತೆ ಇಟ್ಟು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ‘ದೇವರಿಲ್ಲದ ದೇವಾಲಯ, ವೈದ್ಯರಿಲ್ಲದ ಸಮಾಜ’ವನ್ನು ಊಹಿಸಿಕೊಳ್ಳುವುದೂ ಕಷ್ಟ. ಕಣ್ಣಿಗೆ ಕಾಣದ ಭಗವಂತ ನಮ್ಮೆಲ್ಲರನ್ನೂ ಮುನ್ನಡೆಸುತ್ತಿದ್ದರೆ, ಕಣ್ಣಿಗೆ ಕಾಣುವ ದೇವರಾದ ವೈದ್ಯರು ಸದಾ ಕಾಲ ನಮ್ಮ ಆರೋಗ್ಯ- ಆರೈಕೆ ಮಾಡುತ್ತಾ ಕಾಪಾಡುತ್ತಿದ್ದಾರೆ. ಮಾನವೀಯತೆಯನ್ನೇ ಮೈವೆತ್ತ ವೈದ್ಯರಿಗೆ ನಮಿಸೋಣ.


-ಡಾ.ಸಿ.ಎನ್. ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ

ಜೀವ ರಕ್ಷಕರಿಗೆ ನಮಿಸೋಣ
ಸದಾಕಾಲ ಜನರ ಆರೋಗ್ಯವನ್ನು ಕಾಪಾಡುವ ಸೇವಕರು ಮತ್ತು ಆರೋಗ್ಯ ವಲಯದ ಪ್ರಮುಖ ಸ್ತಂಭಗಳು ಎಂದರೆ ವೈದ್ಯರು. ಹಗಲು ರಾತ್ರಿ ಎನ್ನದೇ ರೋಗಿಗಳ ಜೀವ ಉಳಿಸುವ ಜೀವ ರಕ್ಷಕರು ವೈದ್ಯರು. ಕೋವಿಡ್‌ ಸಾಂಕ್ರಾಮಿಕ ಆರಂಭವಾದ ಬಳಿಕ ವೈದ್ಯರ ಕಾರ್ಯದ ಒತ್ತಡ ಹೆಚ್ಚಿದೆ. ಕೊರೊನಾ ನಿರ್ಮೂಲನೆಯಲ್ಲಿ ತೊಡಗಿದ ಅನೇಕ ವೈದ್ಯರು ಜೀವ ಕಳೆದುಕೊಂಡಿದ್ದಾರೆ. ಇಂತಹ ಹುತಾತ್ಮ ವೈದ್ಯರಿಗೆ ಈ ದಿನದಂದು ನಮಿಸೋಣ. ಕೋವಿಡ್‌ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಹಾಗೂ ಲಸಿಕೆ ಪಡೆದು ಆ ಮೂಲಕವೇ ವೈದ್ಯರ ಕಾರ್ಯದ ಒತ್ತಡ ಕಡಿಮೆ ಮಾಡೋಣ. ಕೊರೊನಾ ಯೋಧರಾಗಿ ಕೆಲಸ ಮಾಡುತ್ತಿರುವ ನಮ್ಮ ವೈದ್ಯ ಸಮೂಹಕ್ಕೆ ಕೃತಜ್ಞತೆ ಸಲ್ಲಿಸೋಣ.

-ಡಾ.ಕೆ.ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು

ಜಗತ್ತಿನ ಸಾರ್ವಕಾಲಿಕ ಬಂಧು!
ಸಾಂಕ್ರಮಿಕ ರೋಗ ನಮ್ಮನ್ನು ಕಾಡಿದಾಗ ಹತ್ತಿರದವರು ಇರಲಿ ಹೆತ್ತವರೂ ಕೂಡ ನಮ್ಮ ಸಮೀಪ ಸುಳಿಯುವುದಿಲ್ಲ ಎಂಬುದನ್ನು ಕೋವಿಡ್-19 ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ರೋಗಿಗಳ ಸಮೀಪದಲ್ಲೇ ನಿಂತು, ಹಗಲು-ಇರುಳು, ಮನೆ ಮಕ್ಕಳನ್ನು ಮರೆತು ವಾರಗಟ್ಟಲೆ ಆಸ್ಪತ್ರೆಯಲ್ಲಿ ಉಳಿದು ವ್ರತಬದ್ಧರಾಗಿ, ಸೇವೆಗೈದು ನಮ್ಮ ಪ್ರಾಣಗಳನ್ನು ಉಳಿಸಿಕೊಟ್ಟರಲ್ಲ ವೈದ್ಯರು! ಇವರನ್ನು ನಡೆದಾಡುವ ದೇವರೆನ್ನದೇ ಮತ್ತೇನೆನ್ನಬೇಕು! ಆದ್ದರಿಂದ ವೈದ್ಯನನ್ನು ‘ವೈದ್ಯೋ ನಾರಾಯಣ ಹರಿಃ’ ಎಂದು ಭಾರತೀಯ ಸಂಸ್ಕೃತಿ ಶತಶತಮಾನಗಳಷ್ಟು ಹಿಂದೆಯೇ ಮುಕ್ತ ಕಂಠದಿಂದ ಶ್ಲಾಘಿಸಿದೆ. ಆ ನಾರಾಯಣ, ಆ ಹರಿ ಜಗತ್ತಿಗೆ ಸಾರ್ವಕಾಲಿಕ ಬಂಧು! ಅವನು ಸುಖವಾಗಿರಲಿ!


-ಸ್ವಾಮಿ ನಿರ್ಭಯಾನಂದ,ಅಧ್ಯಕ್ಷರು, ರಾಮಕೃಷ್ಣ ವಿವೇಕಾನಂದ ಆಶ್ರಮ, ವಿಜಯಪುರ–ಗದಗ

ನಾರುಬೇರಿನ ವೈದ್ಯರ ಮರೆಯಲುಂಟೆ?
ಒಮ್ಮೆ ತೆಂಗಿನ ನಾರು ಗಂಟಲಲ್ಲಿ ಸಿಲುಕಿಕೊಂಡು ಒದ್ದಾಡುತ್ತಾ ಇನ್ನೇನು ಡಾಕ್ಟರ್ ಬಳಿ ಓಡಬೇಕು ಎನ್ನುವ ಸ್ಥಿತಿಯಲ್ಲಿ ನನ್ನ ಅಜ್ಜಿ ಎರಡು ಚಮಚ ಒಣ ಅವಲಕ್ಕಿ ತಿನ್ನಿಸಿ ಕ್ಷಣ ಮಾತ್ರದಲ್ಲಿ ನನ್ನ ಕಷ್ಟ ಪರಿಹರಿಸಿದ್ದಳು! ಒಮ್ಮೆ ಕೋಳಿಮೊಟ್ಟೆ ಪೆಪ್ಪರಮೆಂಟ್ ಗಂಟಲಲ್ಲಿ ಸಿಲುಕಿ ತೇಲುಗಣ್ಣು ಮೇಲುಗಣ್ಣಾದಾಗ ನನ್ನ ತಾಯಿ ಬೆನ್ನಿಗೆ ಗುದ್ದಿ ಕ್ಷಣಮಾತ್ರದಲ್ಲಿ ಉಸಿರು ಪಡೆದು ಬಚಾವಾಗಿದ್ದೆನು! ಬಾಲ್ಯದಲ್ಲಿ ಚಂದಮಾಮದಲ್ಲಿ ಸರ್ಪ ಯಜ್ಞದ ಕತೆ ಓದಿ ಮನಸಿಗೆ ತೆಗೆದುಕೊಂಡು ರಾತ್ರಿಯೆಲ್ಲಾ ಭಯದಿಂದ ಚೀರುತ್ತಿದ್ದೆನಂತೆ. ಆಗ ಪಕ್ಕದ ಮನೆಯ ಮಂತ್ರದ ಭಾಗೀರಥಿ ಕಲ್ಲುಸಕ್ಕರೆ ನೀಡಿ ಮೈದಡವಿ ‘ಇವತ್ತಿನಿಂದ ನಿನಗೆ ಕನಸಿನಲ್ಲಿ ಹಾವು ಕಾಣಿಸುವುದಿಲ್ಲ’ ಎಂದದ್ದೇ ಕೆಟ್ಟ ಕನಸು ಬೀಳುವುದು ನಿಂತೇ ಬಿಟ್ಟಿತಲ್ಲ!

ನಾನು ಸದಾ ನಾರುಬೇರಿನ ವೈದ್ಯರ ಪಕ್ಷಪಾತಿ. ಹಲ್ಲುನೋವಿಗೆ, ಕೀಲುನೋವಿಗೆ ಅಲೋಪಥಿ. ನೋವು ನೀಗಿದ ಈ ಮಂದಿಯನ್ನು ಮರೆಯಲುಂಟೆ?

-ಸವಿತಾ ನಾಗಭೂಷಣ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು