ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷಕ್ಕೆ ಹೊಸ ಮನಸ್ಸು

Last Updated 27 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಆದ್ಯತೆಯನ್ನು ನೀಡಬೇಕು; ಮನಃಸಂತೋಷವಿಲ್ಲ ಎಂದಾದರೆ, ಜೀವನದಲ್ಲಿ ಉತ್ಸಾಹವೇ ಕುಂದಿಹೋಗುತ್ತದೆ.

ಹೊಸ ವರ್ಷ ಬಂತೆಂದರೆ ಅನೇಕರು ಹೊಸ ಹೊಸ ನಿರ್ಣಯಗಳ ಪಟ್ಟಿಯನ್ನೇ ಮಾಡುತ್ತಾರೆ. ಅವುಗಳಲ್ಲಿ ‘ಫಿಟ್ನೆಸ್ ಗೋಲ್’, ಆರ್ಥಿಕ ವಿಚಾರದ ಗುರಿಗಳು – ಹೀಗೆ ಅನೇಕ ಗುರಿಗಳನ್ನು ಇಟ್ಟುಕೊಳ್ಳಲಾಗುತ್ತದೆ. ಕೆಲವರು ತಮ್ಮ ಗುರಿಗಳನ್ನು ಸಾಧಿಸುವಲ್ಲಿ ಸಫಲರಾದರೂ, ಇನ್ನೊಂದಷ್ಟು ಜನರು ಹೊಸ ವರ್ಷ ಆರಂಭವಾಗಿ ಹತ್ತು-ಹದಿನೈದು ದಿನಗಳೊಳಗೇ ಅವನ್ನು ಮರೆತುಬಿಡುತ್ತಾರೆ. ಆಮೇಲೆ ಆ ಕುರಿತು ಹಾಸ್ಯರೂಪದ ಕಮೆಂಟ್‌ಗಳೂ ಬರುತ್ತವೆ! ಒಂದಷ್ಟು ತಿಂಗಳುಗಳ ಬಳಿಕ ತಮ್ಮ ನಿರ್ಣಯಗಳು ಏನಿದ್ದುವು ಎಂಬುದೂ ಮರೆತು ಹೋಗಿರುತ್ತದೆ. ಆದರೆ ಇಷ್ಟೆಲ್ಲದರ ನಡುವೆ ಇನ್ನೊಂದು ಸಣ್ಣ ಅಂದರೆ, ಇತರೆ ಇಷ್ಟೆಲ್ಲಾ ವಿಚಾರಗಳ ಕುರಿತು ನಾವು ಯೋಚನೆ, ಯೋಜನೆಗಳನ್ನು ಮಾಡಿದರೂ ಮೂಲಭೂತವಾದ ಒಂದು ವಿಚಾರವನ್ನು ಎಲ್ಲೋ ಬದಿಗೊತ್ತಿರುತ್ತೇವೆ.

ಸಾಧಾರಣವಾಗಿ ‘ಯಾಕೆ’ ಎನ್ನುವ ಪ್ರಶ್ನೆಗಳ ಸರಮಾಲೆಯನ್ನು ಕೇಳಿದಾಗ ವ್ಯಕ್ತಿಗಳು ತಲುಪುವಂತಹ ಉತ್ತರ ಅದು! ಉದಾಹರಣೆಗೆ, ‘ವಿದ್ಯಾರ್ಜನೆ ಯಾಕೆ ಮಾಡುವುದು?’ ಎಂದು ಕೇಳಿದರೆ, ಆಗ ಸಿಗುವ ಉತ್ತರ ‘ಉತ್ತಮ ಕೆಲಸವನ್ನು ಗಿಟ್ಟಿಸಿಕೊಳ್ಳಲು’ ಎಂದು. ‘ಉತ್ತಮ ಕೆಲಸ ಯಾಕೆ ಬೇಕು?’ ಎಂದು ಕೇಳಿದರೆ, ‘ಹೆಚ್ಚಿನ ಹಣ ಸಂಪಾದಿಸಲು’ ಎಂದು ಪ್ರತಿಕ್ರಿಯೆ ಬರುತ್ತದೆ. ‘ಯಾಕೆ ಹೆಚ್ಚಿನ ಹಣ ಸಂಪಾದಿಸಬೇಕು?’ ಎಂದರೆ, ‘ಮನೆ, ವಾಹನ, ಸಂಪತ್ತು ಮುಂತಾದುವುಗಳನ್ನು ನಮ್ಮದಾಗಿಸಿಕೊಳ್ಳಲು’ ಎಂದಾಗುತ್ತದೆ! ‘ಅದರ ಅಗತ್ಯ ಯಾಕೆ ಇದೆ?’ ಎಂದು ಕೇಳಿದರೆ, ‘ಸಂತೋಷವಾಗಿರಲು’ ಎಂಬ ಉತ್ತರ ಸಿಗುತ್ತದೆ.

ಈ ಪ್ರಶ್ನಾಸರಣಿಯಲ್ಲಿ ಅರ್ಥವಾಗುವುದೇನೆಂದರೆ, ಅನೇಕರು ‘ಸಂತೋಷ’ಕ್ಕಾಗಿ ಇಷ್ಟೆಲ್ಲಾ ವಿಷಯಗಳ ಅಗತ್ಯವಿದೆ ಎಂಬ ಮನೋಧರ್ಮದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಖುಷಿಯಾಗಿರಲು ಅಥವಾ ಜೀವನದಲ್ಲಿ ಆನಂದವನ್ನು ಕಂಡುಕೊಳ್ಳಲು ಇಷ್ಟೆಲ್ಲಾ ನಿಯಮಗಳನ್ನು ಹಾಕಿಕೊಂಡವರು ಯಾರು? ಮತ್ತು ನಾವು ಯಾಕೆ ಸಂತೋಷವನ್ನು ಕೊನೆಯ ಭಾಗವಾಗಿ ಇಟ್ಟುಕೊಂಡಿದ್ದೇವೆ ಎಂಬುವುದು ಅನೇಕರು ಇವತ್ತು ಕೇಳಿಕೊಳ್ಳಬೇಕಾದ ಪ್ರಶ್ನೆ!

ಇಡೀ ಹಗಲು–ರಾತ್ರಿ ಕೆಲಸ ಮಾಡಿ, ಜೀವನದಲ್ಲಿ ನೆಮ್ಮದಿ ಹಾಗೂ ಸಂತೋಷವಿಲ್ಲದಿದ್ದರೆ, ಹತ್ತಿಯ ಹಾಸಿಗೆಯೂ ಮುಳ್ಳಿನ ಹಾಸಿಗೆಯಂತೆಯೇ ಭಾಸವಾಗುತ್ತದೆ.

ನಾವು ಎಡವಿದ್ದೆಲ್ಲಿ?

ನಾವಿನ್ನೂ ಕಣ್ಣಿಗೆ ಕಾಣುವ ವಿಚಾರಗಳ ಆಧಾರದ ಮೇಲೆಯೇ ನಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಯಾವುದು ಮೂರ್ತವೋ ಅಷ್ಟಕ್ಕೆ ನಮ್ಮ ಗಮನ ಕೇಂದ್ರೀಕೃತವಾಗಿರುತ್ತದೆಯೇ ಹೊರತು, ಅಮೂರ್ತವಾಗಿದ್ದೂ ಆನುಭಾವಿಕ ವಿಚಾರಗಳು ನಮ್ಮ ದೃಷ್ಟಿಗೆ ಗೋಚರವಾಗುವುದಿಲ್ಲ.

ಹಾಗಾಗಿಯೇ ಇಷ್ಟೊಂದು ವರ್ಷಗಳಿಂದ ನಾವು ಮಾನಸಿಕ ಆರೋಗ್ಯದ ಕುರಿತು ಇಷ್ಟೊಂದು ಅಲಕ್ಷ್ಯ ವಹಿಸುತ್ತಿರುವುದು. ‘ನನ್ನ ಮನಸ್ಸನ್ನು ನಾನು ಸಂಪೂರ್ಣವಾಗಿ ಹಿಡಿತದಲ್ಲಿರಿಸಿಕೊಳ್ಳಬಲ್ಲೆ’ ಎಂದು ನಾವು ಅಂದುಕೊಂಡಿರುತ್ತೇವೆ ಅಷ್ಟೇ! ಆದರೆ ಹಾಗೆ ಅಂದುಕೊಳ್ಳುವಷ್ಟರಲ್ಲೇ ಮನಸ್ಸು ಎಲ್ಲೆಲ್ಲೋ ಅಡ್ಡಾಡಿ ಬಂದಿರುತ್ತದೆ. ಅದು ನಮಗೆ ಗೊತ್ತೇ ಆಗಿರುವುದಿಲ್ಲ. ಅಂತೆಯೇ, ಮನಸ್ಸು ಯಾವಾಗ ಕ್ಲೇಶಕ್ಕೊಳಗಾಗುತ್ತದೋ, ಯಾವಾಗ ಕೋಪ ಬರುತ್ತದೋ ಅಥವಾ ಯಾವಾಗ ಕೆಲವು ಪ್ರಚೋದನೆಗಳಿಂದ ಕೆಲವೊಂದು ವರ್ತನೆಗಳನ್ನು ನಮ್ಮಲ್ಲಿ ತೋರ್ಪಡಿಸುತ್ತದೋ ಅಂತಹ ಮನಸ್ಸಿನ ಆರೋಗ್ಯದ ಕುರಿತು ಬಹಳ ಕಡಿಮೆ ಜನರು ಕಾಳಜಿಯನ್ನು ವಹಿಸುತ್ತಾರೆ. ಮನಸ್ಸಿನ ಆರೋಗ್ಯದ ಕುರಿತು ನಿರ್ಲಕ್ಷ್ಯ ವಹಿಸುವ ಬದಲು ಪ್ರಾಮುಖ್ಯ ಕೊಡುವ ಅಗತ್ಯವಿದೆ.

ಕೋವಿಡ್ ಸೋಂಕಿನ ನಂತರದ ದಿನಗಳಲ್ಲಿ ಅನೇಕರ ಮಾನಸಿಕ ಆರೋಗ್ಯದಲ್ಲಿ ಏರುಪೇರುಂಟಾಯಿತು. ಭಯ, ಆತಂಕ, ಉದ್ವೇಗ ಮುಂತಾಗಿ ಅನೇಕ ರೀತಿಯ ಸಮಸ್ಯೆಗಳು ಹಲವರ ಜೀವನದಲ್ಲಿ ಕಾಣಿಸಿಕೊಂಡವು. ತನ್ಮೂಲಕ ಒಂದಷ್ಟು ಮಾನಸಿಕ ಆರೋಗ್ಯದ ಕುರಿತು ಎಚ್ಚರ ಮೂಡಿದ್ದು ಸುಳ್ಳಲ್ಲ. ಆದರೆ ಮನಸ್ಸಿನ ಆರೋಗ್ಯದ ಕುರಿತು ಇನ್ನಷ್ಟು ಹೆಚ್ಚು ಆದ್ಯತೆ ನೀಡುವ ಅಗತ್ಯವಿದೆ. ಏನೇ ಇದ್ದರೂ, ಮನಃಸಂತೋಷವಿಲ್ಲ ಎಂದಾದರೆ, ಜೀವನದಲ್ಲಿ ಉತ್ಸಾಹವೇ ಕುಂದಿಹೋಗುತ್ತದೆ. ಚಿಂತೆಗಳು ನಮ್ಮನ್ನು ಆವರಿಸಿಬಿಡುತ್ತವೆ. ರಾತ್ರಿ ಚೆನ್ನಾಗಿ ನಿದ್ದೆ ಬರುವುದಿಲ್ಲ. ಯಾವತ್ತೂ ಚಂಚಲತೆ ಹಾಗು ಅವಿಶ್ರಾಂತತೆ ಕೂಡಿರುತ್ತದೆ. ಅತೃಪ್ತಿ, ಅಸಮಾಧಾನ ಮೊದಲಾದವುಗಳಿಂದ ಪರಿತಪಿಸಬೇಕಾಗುತ್ತದೆ.

ಏನು ಮಾಡಬೇಕು?

ವರ್ಷದ ಆರಂಭದಲ್ಲಿ ಇಟ್ಟುಕೊಳ್ಳುವ ಸಂಕಲ್ಪಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಪ್ರಾಶಸ್ತ್ಯವನ್ನು ಕೊಡಬೇಕು. ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಂಡು ಮಾನಸಿಕ ಆರೋಗ್ಯಕ್ಕೆ ಬೆಂಬಲವಾಗುವಂತಹ ಚಟುವಟಿಕೆಗಳಲ್ಲಿ ಮಗ್ನರಾಗಬೇಕು. ಜೀವನದ ಸವಾಲುಗಳನ್ನು ಎದುರಿಸುವಾಗ ಸಹಜವಾಗಿಯೇ ಉಂಟಾಗುವಂತಹ ಭಯ, ಆತಂಕ, ಅನುಮಾನ ಮುಂತಾದುವುಗಳನ್ನು ಒಪ್ಪಿಕೊಂಡು ತಜ್ಞರ ಸಲಹೆಗಳನ್ನು ಪಡೆಯಬೇಕು. ಮಾನಸಿಕ ಆರೋಗ್ಯವಿಲ್ಲದಿದ್ದರೆ, ದೈಹಿಕ ಆರೋಗ್ಯವೂ ಹದಗೆಡುತ್ತದೆ. ಹಾಗಾಗಿ ದೇಹ-ಮನಸ್ಸಿನ ಆರೋಗ್ಯದ ಕುರಿತು ಹೆಚ್ಚಿನ ಗಮನ ಹರಿಸಿ ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು.

ಕೊನೆಯದಾಗಿ, ವರ್ಷದ ಆರಂಭದಲ್ಲಿ ಮಾಡುವ ಗುರಿಗಳೇನಿದ್ದರೂ ಅವು ನಿಮ್ಮವೇ! ಅವುಗಳನ್ನು ಪಾಲಿಸದೆ ಇದ್ದಾಗ ಅದರ ಕುರಿತು ಹಾಸ್ಯವನ್ನು ಮಾಡುವುದರ ಬದಲು ಗಂಭೀರವಾಗಿ ಯೋಚಿಸುವ ಅಗತ್ಯವಿದೆ. ಯಾಕೆಂದರೆ, ಇವುಗಳು ಒಂದು ರೀತಿಯಲ್ಲಿ ನಿಮಗೆ ನೀವು ಕೊಟ್ಟುಕೊಳ್ಳುವ ಮಾತು. ನಿಮ್ಮ ಮಾತನ್ನು ನೀವೇ ನಿಮಗೋಸ್ಕರ ಅನುಸರಿಸಲಾಗದಿದ್ದರೆ, ಅದು ನಿಮ್ಮ ಸಮಗ್ರತೆಗೆ (integrity) ಪ್ರಶ್ನೆಯಾಗುತ್ತದೆ. ನಿಮಗೆ ನೀವೇ ಮೋಸ ಮಾಡಿದಂತೆ. ಹಾಗಾಗುವುದಕ್ಕೆ ನೀವ್ಯಾರು ಬಿಡುವುದಿಲ್ಲ ತಾನೇ?

(ಲೇಖಕ: ಮನಃಶಾಸ್ತ್ರಜ್ಞ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT