ಭಾನುವಾರ, ನವೆಂಬರ್ 29, 2020
21 °C

ಮಕ್ಕಳ ಮೇಲೆ ಪೋಷಕರ ಒತ್ತಡ

ಕೋಕಿಲ ಎಂ.ಎಸ್. Updated:

ಅಕ್ಷರ ಗಾತ್ರ : | |

Prajavani

‘ನಿಶಾ, ಅಡುಗೆ ಮನೆಯಲ್ಲಿ ಏನ್ ಮಾಡ್ತಿದ್ದೀಯಾ ಅಷ್ಟೊತ್ತಿಂದ? ಇನ್ನೇನು ಆನ್‌ಲೈನ್ ಕ್ಲಾಸ್ ಶುರುವಾಗೋ ಸಮಯ ಆಯ್ತು..’ ಎತ್ತರದ ದನಿಯಲ್ಲಿ ಕೂಗುತ್ತಾ ಒಳಬಂದ ಅಮ್ಮನಿಗೆ ನಿಶಾಳನ್ನು ನೋಡಿ ಕೋಪ ನೆತ್ತಿಗೇರಿತು. ‘ನಾನೆಷ್ಟು ಸಲ ನಿನಗೆ ಹೇಳಿದ್ದೇನೆ ಚಾಕು ಮುಟ್ಟಬೇಡ ಅಂತ. ಆದರೂ ನನ್ನ ಮಾತು ಕೇಳೋಲ್ಲ ಅಲ್ವಾ ನೀನು. ಏನಾದ್ರೂ ಆದ್ರೆ..’ ಎನ್ನುತ್ತಾ ತರಕಾರಿಗಳನ್ನು ಕತ್ತರಿಸುತ್ತಿದ್ದ ನಿಶಾ ಕೈಯಿಂದ ಚಾಕು ಮತ್ತು ಟ್ರೇ ಎರಡನ್ನೂ ಒಂದೇ ಕ್ಷಣಕ್ಕೆ ಕಿತ್ತುಕೊಂಡಳು ನಿಶಾಳ ಅಮ್ಮ. ‘ಅಮ್ಮಾ, ನನಗೀಗ ಹದಿಮೂರು ವರ್ಷ. ಹುಷಾರಾಗಿ ಕತ್ತರಿಸಬಲ್ಲೆ, ದೀಪಾಳ ತಾಯಿ ಅವಳಿಗೆ ಅಡುಗೆ ಮಾಡೋದಕ್ಕೆ ಬಿಡ್ತಾರೆ. ನೀನು ಯಾವ ಕೆಲಸವನ್ನೂ ನಾನಾಗೆ ಮಾಡೋದಕ್ಕೆ ಬಿಡೋದಿಲ್ಲ’ ಎಂದ ನಿಶಾ ಮುನಿಸಿಕೊಂಡು ಕೊಠಡಿಗೆ ಹೋದಳು.

ನಮ್ಮಲ್ಲಿ ಬಹಳಷ್ಟು ಪೋಷಕರು ಮಾಡುವ ಕೆಲಸ ಇದೇ. ಮಕ್ಕಳ ಪ್ರತಿಯೊಂದು ಚಟುವಟಿಕೆಯ ಮೇಲೂ ನಿಗಾವಹಿಸುತ್ತೇವೆ. ಅವರ ಪ್ರತೀ ನಿರ್ಧಾರವನ್ನೂ ನಾವೇ ಮಾಡಿಬಿಡುತ್ತೇವೆ. ಅವರ ಅನುಭವವನ್ನು ಕಿತ್ತುಕೊಳ್ಳುತ್ತೇವೆ. ಮಕ್ಕಳಿಗೆ ಏನು ಬೇಕು, ಬೇಡ ಎಂಬುದು ನಮಗೆ ಮಾತ್ರವೇ ಗೊತ್ತು ಎನ್ನುವುದು ಸುಲಭವಾಗಿ ಕೊಡುವ ಸಮಜಾಯಿಷಿ. ಇದೇ 360 ಡಿಗ್ರಿ ಪೇರೆಂಟಿಂಗ್. ಬಹುಷಃ ಮಗು ನಡೆಯಲು ಕಲಿಯುವುದನ್ನು ಹೊರತುಪಡಿಸಿ ಮಿಕ್ಕೆಲ್ಲ ವಿಷಯಗಳ ನಿರ್ಧಾರವೂ ಪೋಷಕರ ಮೇಲೆಯೇ ನಿಂತಿರುತ್ತದೆ. ಮಕ್ಕಳ ಮೇಲಿನ ಅತಿಯಾದ ಪ್ರೀತಿ, ಅತ್ಯುತ್ತಮವಾದದನ್ನೆ ಕೊಡಬಯಸುವ ಕಾಳಜಿಯೇ ಎಲ್ಲಕ್ಕೂ ಪೂರಕ. ಈ ರೀತಿಯ ಪೇರೆಂಟಿಂಗ್‌ ಕೋವಿಡ್-19 ಸಮಯದಲ್ಲಿ ಸ್ವಲ್ಪ ಹೆಚ್ಚಾಗಿಯೇ ಕಾಣಬಹುದು. ಮಕ್ಕಳೀಗ ಸಂಪೂರ್ಣವಾಗಿ ಮನೆಯಲ್ಲೆ ಇರುವುದೆ ಇದಕ್ಕೆ ಮೂಲ ಕಾರಣ.

ಪ್ರಸುತ್ತ ಕೋವಿಡ್‌–19 ಸಂದರ್ಭದಲ್ಲಿ ಏನಿದ್ದರೂ ಮಕ್ಕಳಿಗೆ ತಂದೆ– ತಾಯಿಯೇ ಎಲ್ಲಾ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಫುಲ್ ಟೈಂ ಪೋಷಕರಾಗಿ, ಒನ್ ಟು ಒನ್ ಶಿಕ್ಷಕರಾಗಿ, ಆಟದಲ್ಲಿ ಸ್ನೇಹಿತರಾಗಿ, ಜೊತೆಗೆ ಹೊರಗಿನ ಸಮಾಜವೂ ಅವರೇ. ಎಲ್ಲ ವಿಚಾರಗಳಲ್ಲೂ ನಿರ್ಧಾರ ಅವರದ್ದೇ, ಆದರೆ ಪಾತ್ರ ಬೇರೆ ಬೇರೆ ಅಷ್ಟೆ. ಇಡೀ ದಿನದಲ್ಲಿ ಮಗು ಏನನ್ನೆಲ್ಲಾ ಮಾಡಬೇಕೆಂಬುದನ್ನು, ಆಟುವ ಆಟವನ್ನು, ಓದುವ ಪಾಠವನ್ನು ನಿರ್ಧರಿಸುವುದು ಪೋಷಕರೆ. ಇದರಿಂದ ಮತ್ತೆ ಶಾಲೆಗೆ ಹೋಗಲು ಪ್ರಾರಂಭಿಸಿದಾಗ ಮಗುವಿಗೆ ಕಷ್ಟವಾಗಬಹುದು. ಇದೇ ಮುಂದುವರಿದು ದೊಡ್ಡವರಾದ ಮೇಲೆ ಸಣ್ಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದೇ ಹೋಗಬಹುದು.

(ಲೇಖಕಿ: ತುಮಕೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕಿ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು