ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳ ‘ನಡವಳಿಕೆ’ ‌ಗಮನಿಸಲು ಅರಿಕೆ

Last Updated 16 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಮಕ್ಕಳಲ್ಲಿ ತಲೆದೋರುವ ‘ನಡವಳಿಕೆ ಸಮಸ್ಯೆ’ ಗಳನ್ನು ಪೋಷಕರು ಗಂಭೀರವಾಗಿ ಪರಿಗಣಿಸಬೇಕು, ತಕ್ಷಣ ಸ್ಪಂದಿಸಿ ಪರಿಹರಿಸಬೇಕು. ಸ್ವಲ್ಪ ನಿರ್ಲಕ್ಷ್ಯಿಸಿದರೂ ತೀವ್ರ ಪರಿಣಾಮ ಎದುರಿಸಬೇಕಾಗಬಹುದು.

**

‘ಡಾಕ್ಟರ್, ಇವಳಿಗೆ ಆರು ವರ್ಷ. ಇನ್ನೂ ಹಾಸಿಗೇಲಿ ಉಚ್ಚೆ ಮಾಡ್ಕೋತಾಳೆ. ಯಾರಾದರೂ ಮನೇಲಿ ಉಳ್ಕೊಂಡಾಗ ಮುಜುಗರ ಆಗುತ್ತೆ’.

'ಸರ್, ಇವನಿಗೀಗ ನಾಲ್ಕು ವರ್ಷ. ಇನ್ನೂ ಚಡ್ಡೀಲೇ ಕಕ್ಕ ಮಾಡ್ಕೋತಾನೆ'

-ಇವು ಪ್ರತಿಯೊಬ್ಬ ವೈದ್ಯರೂ ತನ್ನ ವೃತ್ತಿ ಬದುಕಿನಲ್ಲಿ ಒಂದಲ್ಲ ಒಂದು ಬಾರಿ ಮಕ್ಕಳ ಪಾಲಕರಿಂದ ಕೇಳುವ ಮಾತುಗಳು. ಇವೆಲ್ಲ ಮಕ್ಕಳ ನಡವಳಿಕೆಯ ಸಮಸ್ಯೆಗಳ ಸ್ಯಾಂಪಲ್‌ಗಳು. ಮಕ್ಕಳಲ್ಲಿ ಇಂಥ ಸಮಸ್ಯೆಗಳು ಸೃಷ್ಟಿಯಾಗಲು ಕಾರಣವೇನು? ಈ ಬಗ್ಗೆ ಒಂದು ಸ್ಥೂಲ ನೋಟ ಹರಿಸೋಣ.

ಅನೊರೆಕ್ಸಿಯಾ ನರ್ವೋಸಾ
ಇದು ಹದಿವಯಸ್ಸಿನ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ತಮ್ಮ ವಯಸ್ಸಿಗಿಂತಲೂ ಗಣನೀಯವಾಗಿ ಕಡಿಮೆ ತೂಕವುಳ್ಳವರಾಗಿರುವ ಇಂಥ ಮಕ್ಕಳು ತಾವೆಲ್ಲಿ ದಪ್ಪವಾಗಿಬಿಡುವೆವೋ ಎಂಬ ಅನಗತ್ಯ ಭಯದಿಂದ ಊಟವನ್ನು ತ್ಯಜಿಸಿಬಿಡುತ್ತಾರೆ. ತೂಕ ಕಳೆದುಕೊಳ್ಳಲು ಕೆಲವರು ಅತಿ ವ್ಯಾಯಾಮದಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಇನ್ನೂ ಕೆಲವರು ತಿಂದದ್ದನ್ನೆಲ್ಲಾ ಬಲವಂತವಾಗಿ ವಾಂತಿ ಮಾಡಿಕೊಳ್ಳುತ್ತಾರೆ. ಕೆಲವು ಮಕ್ಕಳು ಭೇದಿ ಔಷಧಗಳನ್ನು ಬಳಸುವುದುಂಟು. ಇಂಥ ಮಕ್ಕಳಲ್ಲಿ ಚಡಪಡಿಕೆ, ಖಿನ್ನತೆ, ಗೀಳು ಮುಂತಾದ ಮಾನಸಿಕ ಕಾಯಿಲೆಗಳು ಸರ್ವೇಸಾಮಾನ್ಯ. ಪೋಷಕಾಂಶಗಳ ಕೊರತೆಯಿಂದ ರಕ್ತದೊತ್ತಡದಲ್ಲಿ ಏರುಪೇರು, ಕಾಲುಗಳಲ್ಲಿ ಊತ ಮುಂತಾದ ಹಲವಾರು ದೈಹಿಕ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. ಮನಶಾಸ್ತ್ರಜ್ಞರು ಮತ್ತು ಮನೋವೈದ್ಯರ ಸಲಹೆ ಪಡೆದು ಸೂಕ್ತ ಚಕಿತ್ಸೆ ನೀಡಬೇಕಾಗುತ್ತದೆ.

ಬುಲಿಮಿಯಾ ನರ್ವೋಸಾ
ಇದೂ ಕೂಡಾ ಹದಿಹರೆಯದ ಹೆಣ್ಣು ಮಕ್ಕಳಲ್ಲಿ‌ ಕಾಣಿಸಿಕೊಳ್ಳುವ ಒಂದು ನಡವಳಿಕೆಯ ಸಮಸ್ಯೆ. ಈ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳು ಒಂದು ನಿಗದಿತ ಅವಧಿಯವರೆಗೆ ಅತಿಯಾಗಿ ಊಟ ಮಾಡುತ್ತಾರೆ. ಇದರಿಂದ ತಮ್ಮ ತೂಕದಲ್ಲಿ ಎಲ್ಲಿ ಹೆಚ್ಚಳವಾಗುವುದೋ ಎಂಬ ಭಯದಿಂದ ತಿಂದದ್ದನ್ನೆಲ್ಲಾ ಬಲವಂತವಾಗಿ ವಾಂತಿ ಮಾಡಿಕೊಳ್ಳುತ್ತಾರೆ. ಕೆಲವರು ಅತಿಯಾದ ವ್ಯಾಯಾಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ತೂಕ ಇಳಿಸಿಕೊಳ್ಳಲು ಭೇದಿ ಔಷಧ ಮತ್ತು ಎನಿಮಾಗಳ ಮೊರೆ ಹೋಗುವುದೂ ಉಂಟು. ಈ ನಡವಳಿಕೆ ಸಾಮಾನ್ಯವಾಗಿ ಒಂದು ವಾರದಲ್ಲಿ ಎರಡು ಬಾರಿಯಂತೆ ಮೂರು ತಿಂಗಳುಗಳವರೆಗೆ ನಿರಂತರವಾಗಿರುತ್ತದೆ. ಈ ಸಮಸ್ಯೆಯಿಂದ ಬಳಲುವ ಮಕ್ಕಳಲ್ಲಿಯೂ ಹಲವು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿರುತ್ತವೆ.

ಪೈಕಾ
ಇದು ಐದು ವರ್ಷದ ಒಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಒಂದು ಸಮಸ್ಯೆ. ಈ ಸಮಸ್ಯೆಯಿಂದ ಬಳಲುವ ಮಕ್ಕಳು ಮಣ್ಣು, ಪೇಂಟ್, ಸೀಮೆ ಸುಣ್ಣ, ಇದ್ದಿಲು, ಪೆನ್ಸಿಲ್ ಮುಂತಾದ ಆಹಾರವಲ್ಲದ ಪದಾರ್ಥಗಳನ್ನು ಸೇವಿಸಲು ಹಾತೊರೆಯುತ್ತಾರೆ. ನಿರ್ಲಕ್ಷಿತರು, ದೌರ್ಜನ್ಯಕ್ಕೊಳಗಾದವರು, ಪ್ರೀತಿ ವಂಚಿತರು, ಮಾನಸಿಕ ಒತ್ತಡಕ್ಕೊಳಗಾದವರು ಮುಂತಾದ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು. ಇಂಥ ಮಕ್ಕಳು ಕಬ್ಬಿಣಾಂಶ ಕೊರತೆಯ ರಕ್ತಹೀನತೆ, ಜಂತು ಹುಳುಗಳ ಬಾಧೆ, ಸೀಸದ ಅಂಶದ ಹೆಚ್ಚಳ ಮುಂತಾದ‌ ಆರೋಗ್ಯ ಸಮಸ್ಯೆಗಳಿಂದ ಬಳಲುವ ಸಂಭವ ಹೆಚ್ಚು. ಇವುಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಅಗತ್ಯವೆನಿಸಿದರೆ ಮನೋಚಿಕಿತ್ಸಕರ ಸಲಹೆ ಪಡೆಯಬೇಕು.

ಅತಿ ಕೋಪ:ಈ ಸಮಸ್ಯೆ ಸಾಮಾನ್ಯವಾಗಿ ಮೂರು ವರ್ಷದ ಒಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಮತ್ತು ಆರು ವರ್ಷಗಳು ತುಂಬುವಷ್ಟರಲ್ಲಿ ತಹಬದಿಗೆ ಬರುತ್ತದೆ. ಹೆತ್ತವರ ಗಮನ ಸೆಳೆಯಲು ಕೆಲವು ಮಕ್ಕಳು ಅತಿಯಾಗಿ ಕಿರಿಚುವುದು, ಕಚ್ಚುವುದು, ವಸ್ತುಗಳನ್ನು ಎಸೆಯುವುದು, ಒದೆಯುವುದು, ತಳ್ಳುವುದು, ಗೋಡೆಗೆ ಹಣೆ ಚಚ್ಚಿಕೊಳ್ಳುವುದು ಮುಂತಾದ ಕ್ರಿಯೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಯಾವ ಸಂದರ್ಭಗಳಲ್ಲಿ ಮಗು ಈ ಬಗೆಯ ನಡವಳಿಕೆಯಲ್ಲಿ ತೊಡಗಿಕೊಳ್ಳುತ್ತದೆ ಎಂಬುದನ್ನು ಪಾಲಕರು ಗುರುತಿಸಬೇಕು ಮತ್ತು ಕೋಪ ಪ್ರದರ್ಶನದ ಸಂದರ್ಭದಲ್ಲಿ ಅತಿಯಾಗಿ ಸ್ಪಂದಿಸದೆ ಸಮಾಧಾನಚಿತ್ತರಾಗಿ ವರ್ತಿಸಬೇಕು. ಕೆಲ ಸಮಯದ ನಂತರ ಮಗು ಅತಿ ಕೋಪ ಪ್ರದರ್ಶನವನ್ನು ತಾನೇ ನಿಲ್ಲಿಸುತ್ತದೆ. ಅಂಥ ಸಂದರ್ಭಗಳಲ್ಲಿ ಮಗು ತನ್ನ ದೇಹಕ್ಕೆ ಗಾಯ ಮಾಡಿಕೊಳ್ಳದಂತೆ ನಿಗಾ ವಹಿಸಬೇಕು.

ಉಸಿರುಗಟ್ಟುವಿಕೆ:ಕೆಲವು ಮಕ್ಕಳು ಅತ್ತು ಅತ್ತು ಉಸಿರುಗಟ್ಟಿಬಿಡುತ್ತವೆ. ಆಗ ಕೆಲವು ಮಕ್ಕಳು ಬಿಳಿಚಿಕೊಂಡರೆ ಇನ್ನೂ ಕೆಲವು ಮಕ್ಕಳಲ್ಲಿ ದೇಹ ನೀಲಿಗಟ್ಟಬಹುದು. ಕೆಲವು ಮಕ್ಕಳು ಪ್ರಜ್ಞೆ ತಪ್ಪಿದರೆ ಇನ್ನೂ ಕೆಲವು ಮಕ್ಕಳಲ್ಲಿ ಫಿಟ್ಸ್ ಕಾಣಿಸಿ ಕೊಳ್ಳಬಹುದು. ಎರಡು ವರ್ಷ ವಯಸ್ಸಿನೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಈ ಸಮಸ್ಯೆ ದಿನಗಳೆದಂತೆ ಕಡಿಮೆಯಾಗುತ್ತದೆ.‌

ಹೆತ್ತವರು ಹೆಚ್ಚು ಗಾಬರಿಯಾಗುವ ಅಗತ್ಯವಿಲ್ಲ. ಆ ಸಂದರ್ಭದಲ್ಲಿ ಮಗುವನ್ನು ಒಂದು ಪಕ್ಕಕ್ಕೆ ಹೊರಳಿಸಿ, ಬಾಯಿಯಲ್ಲಿರುವ ಸ್ರವಿಕೆಗಳನ್ನು ಸ್ವಚ್ಛಗೊಳಿಸಬೇಕು. ಈ ಸಮಸ್ಯೆಯಿಂದ ಬಳಲುವ ಮಕ್ಕಳಲ್ಲಿ ಕಬ್ಬಿಣಾಂಶ ಕೊರತೆಯ ರಕ್ತಹೀನತೆ ಇರುವ ಸಾಧ್ಯತೆಯಿರುವುದರಿಂದ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಬೇಕು.

ಮಲಮೂತ್ರ ವಿಸರ್ಜನೆಯ ಸಮಸ್ಯೆಗಳು
ಎರಡು ವರ್ಷಗಳು ತುಂಬುವಷ್ಟರಲ್ಲಿ ಮಗು ಹಗಲಿನ ವೇಳೆಯ ಮೂತ್ರ ವಿಸರ್ಜನೆಯ ಮೇಲೆ ನಿಯಂತ್ರಣ ಸಾಧಿಸುತ್ತದೆ. ಆರು ವರ್ಷಗಳು ತುಂಬುವವರೆಗೂ ಕೆಲ ಮಕ್ಕಳು ರಾತ್ರಿಯ ವೇಳೆ ಹಾಸಿಗೆ ಒದ್ದೆ ಮಾಡಿಕೊಳ್ಳಬಹುದು.

ಇದು ಆರು ವರ್ಷಗಳ ನಂತರವೂ ಮುಂದುವರಿದರೆ ಚಿಕಿತ್ಸೆಯ ಅಗತ್ಯವಿರುತ್ತದೆ. ಸಂಜೆ ಐದರ ನಂತರ ನೀರು ಮತ್ತಿತರ ದ್ರವ ಪದಾರ್ಥಗಳ ಸೇವನೆಯ ನಿಯಂತ್ರಣ, ಚಹಾ, ಕಾಫಿಯಂಥ ಪಾನೀಯಗಳನ್ನು ವರ್ಜಿಸುವುದು, ಹಾಸಿಗೆಯಡಿಯಲ್ಲಿ ಅಲರಾಂ ಅಳವಡಿಕೆ, ಮಲಗುವ ಮುನ್ನ ಕಡ್ಡಾಯ ಮೂತ್ರ ವಿಸರ್ಜನೆ, ತನ್ನ ಹಾಸಿಗೆಯನ್ನು ತಾನೇ ಸ್ವಚ್ಛಗೊಳಿಸುವಂಥ ಜವಾಬ್ದಾರಿ ನೀಡುವಿಕೆ, ಮೂತ್ರ ವಿಸರ್ಜನೆ ಮಾಡಿಕೊಳ್ಳದಿರುವ (ಒಣ) ರಾತ್ರಿಗಳ ಸಂಖ್ಯೆಯನ್ನು ಡೈರಿಯಲ್ಲಿ ಗುರುತು ಹಾಕಿಕೊಳ್ಳುವುದು ಮತ್ತು ಅದಕ್ಕನುಗುಣವಾಗಿ ಪ್ರೋತ್ಸಾಹದಾಯಕ ಚಿಕ್ಕಪುಟ್ಟ ಗಿಫ್ಟ್ ಗಳನ್ನು ನೀಡುವುದು ಮುಂತಾದ ಸುಲಭೋಪಾಯಗಳಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಮಕ್ಕಳ ವರ್ತನೆಯಲ್ಲಿ ಇಂಥ ವ್ಯತ್ಯಾಸಗಳು ಕಂಡಾಗ ಪೋಷಕರು ಕೋಪಿಸಿಕೊಳ್ಳುವುದಾಗಲಿ ಮತ್ತುಗುವಿಗೆ ಶಿಕ್ಷೆ ನೀಡುವುದಾಗಲಿ ಮಾಡಬಾರದು. ಇದರಿಂದ ಏನೂ ಪ್ರಯೋಜನವಾಗದು. ಪರೀಕ್ಷೆ, ಹೋಂ ವರ್ಕ್ ಮುಂತಾದ ಆತಂಕ, ಒತ್ತಡ ತರುವ ಸಂದರ್ಭಗಳಲ್ಲಿ ಸಮಸ್ಯೆ ಇನ್ನಷ್ಟು ಬಿಗಡಾಯಿಸಬಹುದು. ಆಗ ಪೋಷಕರು ತಾಳ್ಮೆಗೆಡಬಾರದು.

ಮಲ ವಿಸರ್ಜನೆಯ ಮೇಲಿನ ನಿಯಂತ್ರಣ ಮೂತ್ರ ವಿಸರ್ಜನೆಯ ನಿಯಂತ್ರಣಕ್ಕಿಂತಲೂ ಕೊಂಚ ಮುಂಚಿತವಾಗಿ ಆಗುತ್ತದೆ. ಮಗುವಿಗೆ ಎರಡು ವರ್ಷಗಳು ತುಂಬಿದ ಮೇಲಷ್ಟೆ ಶೌಚಾಲಯ ಬಳಕೆಯನ್ನು ರೂಢಿ ಮಾಡಿಸಬೇಕು. ತುಂಬಾ ಮುಂಚಿತವಾಗಿಯೇ ರೂಢಿ ಮಾಡಿಸಲು ಪ್ರಯತ್ನಿಸಿದರೆ ಮಗು ಸ್ಪಂದಿಸಲಾರದು. ಮಗು ಹೀಗೆ ಬಲವಂತವಾಗಿ ಮಲವನ್ನು ತಡೆಹಿಡಿಯುವುದರಿಂದ ಮಲಬದ್ಧತೆಯ ಸಮಸ್ಯೆ ತಲೆದೋರುತ್ತದೆ.

ಕೆಲವು ಮಕ್ಕಳು ಹಿಕ್ಕೆಯಂತೆ ಸ್ವಲ್ಪ ಸ್ವಲ್ಪವೇ ಮಲವನ್ನು ವಿಸರ್ಜಿಸಿದರೆ, ಕೆಲವು ಮಕ್ಕಳು ಚಡ್ಡಿಯಲ್ಲೇ ಮಲ ವಿಸರ್ಜಿಸುತ್ತಾರೆ. ತಜ್ಞರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ.

ಜೊತೆಗೆ ಮಕ್ಕಳ ವಯಸ್ಸಿಗನುಗುಣವಾದ ಶೌಚಾಲಯಗಳನ್ನಷ್ಟೇ ಬಳಸಬೇಕು ಮತ್ತು ಮಗುವಿನ ಖಾಸಗಿತನಕ್ಕೆ ಒತ್ತು ನೀಡಬೇಕು. ಒಟ್ಟಿನಲ್ಲಿ ಆಯಾ ನಡವಳಿಕೆಯ ಸಮಸ್ಯೆಯನ್ನು ಮಕ್ಕಳ ವೈದ್ಯರು, ಮನೋವೈದ್ಯರು ಮತ್ತು ಮನಶಾಸ್ತ್ರಜ್ಞರ ಸಲಹೆ ಸೂಚನೆಗಳನ್ನು ಪಾಲಿಸಿ, ಸೂಕ್ತವಾಗಿ ನಿಭಾಯಿಸಬಹುದು.

⇒(ಲೇಖಕರು: ಪ್ರಾಧ್ಯಾಪಕರು,ಮಕ್ಕಳ ವಿಭಾಗ,
⇒ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯ ತುಮಕೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT