ಶನಿವಾರ, ಜುಲೈ 2, 2022
27 °C
ಚಿಣ್ಣರ ಆರೋಗ್ಯ ರಕ್ಷಣೆಗೆ ಮಕ್ಕಳ ತಜ್ಞೆ ಡಾ.ಅರುಂಧತಿ ಪಾಟೀಲ ಸಲಹೆ

ಚಳಿಗಾಲದಲ್ಲಿ ಮಕ್ಕಳ ರಕ್ಷಣೆಯನ್ನು ಹೀಗೆ ಮಾಡಿ: ಇಲ್ಲಿದೆ ವೈದ್ಯರ ವಿವರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಈಗ ಶೀತಗಾಳಿ ಹೆಚ್ಚಾಗಿದೆ. ದೈನಂದಿನ ಕನಿಷ್ಠ ಉಷ್ಣಾಂಶ 13 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಇಂಥ ವಾತಾವರಣದಲ್ಲಿ ಮಕ್ಕಳಿಗೆ ಬರುವ ಸಾಮಾನ್ಯ ಕಾಯಿಲೆಗಳು ಯಾವವು? ಅವುಗಳಿಂದ ಪಾರಾಗಲು ಮುಂಜಾಗೃತಾ ಕ್ರಮಗಳೇನು ಎಂಬ ಬಗ್ಗೆ ಮಕ್ಕಳ ತಜ್ಞೆ ಡಾ.ಅರುಂಧತಿ ಪಾಟೀಲ ಕೆಲವು ಸಲಹೆ ನೀಡಿದ್ದಾರೆ.

‘ಚಳಿಗಾಲ ಬಂದ ತಕ್ಷಣ ಮಕ್ಕಳಲ್ಲಿ ಕಫ, ಕೆಮ್ಮು ಸೇರಿದಂತೆ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಕ್ಕಳು ಶುಷ್ಕ ವಾತಾವರಣಕ್ಕೆ ಹೊಂದಿಕೊಂಡಿರುತ್ತಾರೆ. ತಾಪಮಾಣದಲ್ಲಿ ಕುಸಿತ ಕಂಡಾಗ ಆರೋಗ್ಯ ಏರುಪೇರಾಗುವುದು ಸಹಜ. ನಾನು ಮಕ್ಕಳ ಆರೋಗ್ಯವನ್ನು ನಾಲ್ಕು ಭಾಗವಾಗಿ ಪರಿವರ್ತಿಸಿದ್ದು, ಪ್ರತಿ ವಯಸ್ಸಿಗೂ ಅದರದೇ ಆದ ಮುಂಜಾಗೃತಾ ಕ್ರಮಗಳು ಅಗತ್ಯ’ ಎಂದು ಅವರು ‘‍ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.


ಮಕ್ಕಳ ತಜ್ಞೆ ಡಾ. ಅರುಂಧತಿ

ಅವರ ನಾಲ್ಕು ಸಲಹೆಗಳು ಇಲ್ಲಿವೆ.

ಮೊದಲನೇಯದ್ದು: ನವಜಾತ ಶಿಶುಗಳನ್ನು ಆದಷ್ಟು ಬೆಚ್ಚಗೆ ಇಡಬೇಕು. ಮುಖ್ಯವಾಗಿ ಶಿಶುಗಳ ತಲೆಗೆ ಶೀತಗಾಳಿ, ಎ.ಸಿ, ತಣ್ಣೀರು ತಗಲದಂತೆ ನೋಡಿಕೊಳ್ಳಬೇಕು. ಎಣ್ಣೆಯಿಂದ ತೀಡಿ– ತಿಕ್ಕಿ, ಬಿಸಿನೀರಿನಿಂದ ಸ್ನಾನ ಮಾಡಿಸುವ ರೂಢಿ ಒಳ್ಳಯದು. ಹೆಚ್ಚು ಚಳಿ ಉಂಟಾದರೆ ಬಿಸಿಯಾದ ಬಾಟಲಿಯನ್ನು ಬಟ್ಟೆಯಲ್ಲಿ ಸುತ್ತಿ ಮಗುವಿಗೆ ಹಿತಕರವಾಗುವಂಥ ಶಾಖ ನೀಡಬೇಕು. ಮೇಲಾಗಿ, ಬಾಣಂತಿ ಕೂಡ ಇದರಲ್ಲಿ ಎಚ್ಚರಿಕೆ ವಹಿಸಬೇಕು.

ಎರಡನೇಯದ್ದು: ಒಂದರಿಂದ ಐದು ವರ್ಷದೊಳಗಿನ ಮಕ್ಕಳು ಹೊರಗೆ ಹೆಚ್ಚು ಓಡಾಡದಂತೆ ಕಾಯಬೇಕು. ಉಲನ್‌ ಬಟ್ಟೆಗಳನ್ನು ಹಾಕಿ ದೇಹವನ್ನು ಆದಷ್ಟು ಬೆಚ್ಚಗೆ ಇಡಿ. ಜ್ವರ ಕಂಡುಬಂದರೆ ಮಾತ್ರ ತೆಳುವಾದ ಬಟ್ಟೆ ಹಾಕಿ, ಗಾಳಿಯಾಡುವಂತೆ ಮಾಡಿ. ‘ಫ್ಲೂ’ ಅಂಟಿಕೊಂಡರೆ ವೈದ್ಯರನ್ನು ಸಂಪರ್ಕಿಸಿ. ಮನೆಯಲ್ಲಿಯೇ ಕಫದ ಔಷಧಿ ಹಾಕುವುದು, ಮಾತ್ರೆ ನುಂಗಿಸುವುದು ಬೇಡ. ಈ ಔಷಧವನ್ನು ಮಗುವಿನ ಆರೋ‌ಗ್ಯ ಸ್ಥಿತಿ ನೋಡಿ ಕೊಡಬೇಕಾಗುತ್ತದೆ. ತಾವೇ ವೈದ್ಯರು ಎಂಬಂತೆ ಏನೆಲ್ಲ ಔಷಧಿ ಹಾಕುವವರೂ ಇದ್ದಾರೆ. ಇದರಿಂದ ಆರೋಗ್ಯ ಹಾಳಾಗುವ ಜತೆಗೆ, ರೋಗನಿರೋಧಕ ಶಕ್ತಿಯೂ ಕ್ಷೀಣಿಸುತ್ತದೆ. ಹಾಗಾಗಿ, ಸ್ವಯಂ ಉಪಚಾರ ಮಾಡಿ ಮಗುವಿಗೆ ಹಿಂಸೆ ಕೊಡಬೇಡಿ.

ಮೂರನೇಯದ್ದು: ಶೀತಗಾಳಿ ಹೆಚ್ಚಾದಂತೆ ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಇದು ಚರ್ಮತುರಿಕೆ, ಅಲರ್ಜಿ, ಚರ್ಮರೋಗಗಳಿಗೂ ಕಾರಣವಾಗಬಹುದು. ಮಕ್ಕಳಲ್ಲಿ ಹೆಚ್ಚಾಗಿ ಅಲರ್ಜಿ ಕಂಡುಬರುತ್ತದೆ. ಹೆಚ್ಚು ನೀರು ಕುಡಿಯುವುದೇ ಇದಕ್ಕೆ ಮುಂಜಾಗೃತಾ ಕ್ರಮ. ಮಕ್ಕಳು ಆಟದಲ್ಲಿ ಮೈಮರೆತರೂ ಅವರಿಗೆ ನೀರು ಕುಡಿಸುವುದನ್ನು ಮರೆಯಬೇಡಿ.

ನಾಲ್ಕನೇಯದ್ದು: ರೋಗ ನಿರೋಧಕ ಶಕ್ತಿ ಕಡಿಮೆ ಇರುವ, ಅಪೌಷ್ಟಿಕತೆಯಿಂದ ಬಳಲುವ ಅಥವಾ ಆಸ್ತಮಾದಂಥ ರೋಗಗಳು ಇರುವ ಮಕ್ಕಳ ಬಗ್ಗೆ ತೀಕ್ಷ್ಣವಾಗಿ ಕಾಳಜಿ ವಹಿಸಬೇಬೇಕು. ಚಳಿಯಿಂದ ದೇಹವು ಸುಕ್ಕುಗಟ್ಟುವುದರಿಂದ ಆಸ್ತಮಾ ಇದ್ದ ಮಕ್ಕಳು ತೀವ್ರ ಉಸಿರಾಟದ ತೊಂದರೆ ಎದುರಿಸುತ್ತಾರೆ. ಅಪೌಷ್ಟಿಕೆತೆಯಿಂದ ಬಳಲುವ ಮಕ್ಕಳು ಸಣ್ಣಪುಟ್ಟ ಕಾರಣಕ್ಕೂ ಕಾಯಿಲೆ ಬೀಳುತ್ತಾರೆ. ಹಾಗಾಗಿ, ಅವರನ್ನು ಹೆಚ್ಚು ಬೆಚ್ಚಗೆ ಇಡಿ, ಬೆಚ್ಚನೆಯ ಊಟ, ಬಿಸಿನೀರು ಕೊಡಿ.

ಹೀಗಿರಲಿ ನಿಮ್ಮ ಮಗುವಿನ ಊಟ

ಒಂದು ವರ್ಷದ ಮಗು ತಂದೆ–ತಾಯಿ ತಿನ್ನುವ ಎಲ್ಲವನ್ನೂ ತಿನ್ನುವಂತಿರಬೇಕು. ರೊಟ್ಟಿ, ಪಲ್ಲೆ, ಬೇಳೆಕಾಳು, ಹಣ್ಣು, ತರಕಾರಿ, ಮೊಳಕೆಕಾಳು, ಗಜ್ಜರಿ, ಸವತೆಕಾಯಿಗಳನ್ನು ಮಕ್ಕಳಿಗೆ ಕೊಡಬೇಕು. 6 ತಿಂಗಳಿಗೊಮ್ಮೆ ಜಂತುಹುಳುವಿನ ಔಷಧಿ ಕೊಡಿಸಬೇಕು. ಹಲ್ಲು ಬಾರದಿದ್ದರೂ ಮಗುವಿಗೆ ಗಟ್ಟಿ ಆಹಾರ ನೀಡಬೇಕು. ಇದರಿಂದ ಮಗು ಅಗಿಯವುದನ್ನು ರೂಢಿ ಮಾಡಿಕೊಳ್ಳುತ್ತದೆ ಎಂಬುದು ವೈದ್ಯರ ಸಲಹೆ.

‘ಆ್ಯಂಟಿ ಬಯಾಟಿಕ್‌’ ಅಪಾಯಕಾರಿ

ಸಣ್ಣಪುಟ್ಟ ಕಾಯಿಲೆ ಬಂದಾಗ ಬಹಳಷ್ಟು ಪಾಲಕರು ಮನೆಯಲ್ಲಿರುವ ಹಳೆಯ ಔಷಧಿ ಕೊಟ್ಟುಬಿಡುತ್ತಾರೆ. ಅಥವಾ ಔಷಧಿ ಅಂಗಡಿಯಿಂದ ಆ್ಯಂಟಿ ಬಯಾಟಿಕ್‌ ತಂದು ಹಾಕುತ್ತಾರೆ. ಆದರೆ, ವೈರಾಣು ಸೋಂಕಿಗೆ ಆ್ಯಂಟಿ ಬಯಾಟಿಕ್‌ ಕೆಲಸ ಮಾಡುವುದಿಲ್ಲ. ಒಂದು ವೇಳೆ ವೈದ್ಯರೇ ಕೊಡುವುದು ಅನಿವಾರ್ಯವಾದಾಗ, ಮಗುವಿನ ಎತ್ತರ– ತೂಕ ಆಧರಿಸಿ ಕೊಟ್ಟಿರುತ್ತಾರೆ. ವೈದ್ಯರ ಸಲಹೆ ಇಲ್ಲದೇ ಈ ಮಾತ್ರೆ ಕೊಡುವುದು ಅಪಾಯಕಾರಿ ಮತ್ತು ಅಪರಾಧ ಎಂಬುದನ್ನೂ ಪಾಲಕರು ಅರಿಯಬೇಕು.

‘ದೂಳಿನಿಂದಾಗಿ ಮಕ್ಕಳ ಎಳೆಯ ಕಣ್ಣುಗಳು ಒಣಗುತ್ತವೆ. ಅದಕ್ಕೂ ಯಾವುದೋ ‘ಐ–ಡ್ರಾಪ್‌’ ತಂದು ಹಾಕಬೇಡಿ. ಇದು ಮುಂದೆ ಅವರ ಕುರುಡುತನಕ್ಕೂ ಕಾರಣವಾಗಬಹದು’ ಎಂದೂ ಡಾ.ಅರುಂಧತಿ ಎಚ್ಚರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.