ಭಾನುವಾರ, ಜೂಲೈ 12, 2020
29 °C

ಒತ್ತಡವೇ? ಮುದ್ದು ಪ್ರಾಣಿಯಲ್ಲಿದೆ ಮದ್ದು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುದ್ದು ಪ್ರಾಣಿಗಳ ಜೊತೆಗಿನ ಒಡನಾಟ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂಬುದು ಗೊತ್ತಿರುವ ಸಂಗತಿಯೇ. ಆದರೆ, ಈ ಕೋವಿಡ್‌ 19 ಪಿಡುಗಿನ ಸಂದರ್ಭದಲ್ಲಿ ಖಿನ್ನತೆ, ಆತಂಕ, ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಬಹಳಷ್ಟು ಜನ ನಾಯಿ, ಬೆಕ್ಕು, ಗಿಳಿಗಳಂತಹ ಮುದ್ದು ಪ್ರಾಣಿ– ಪಕ್ಷಿಗಳ ಮೊರೆ ಹೋಗುವುದು ಜಾಸ್ತಿಯಾಗಿದೆಯಂತೆ. ಕೆಲವು ಮನೋಚಿಕಿತ್ಸಕರು ಕೂಡ ಇಂತಹ ‘ಚಿಕಿತ್ಸಕ’ ಮುದ್ದು ಪ್ರಾಣಿಗಳ ಜೊತೆ ಒಡನಾಡುವಂತೆ ಸಲಹೆ ನೀಡುತ್ತಿದ್ದಾರೆ.

ಮುದ್ದು ಪ್ರಾಣಿಗಳನ್ನು ಸಾಕಿಕೊಂಡು ಒಡನಾಡುವುದರಿಂದ ಖುಷಿ ಜಾಸ್ತಿಯಾಗುತ್ತದೆ. ‘ಫೀಲ್‌ ಗುಡ್‌’ ಹಾರ್ಮೋನ್‌ ಹೆಚ್ಚಾಗುತ್ತದೆ ಎಂಬುದು ಗೊತ್ತೇ ಇದೆ. ಆದರೆ ಇಂತಹ ಪ್ರಾಣಿಗಳು ತಮ್ಮ ಒಡೆಯನ/ ಒಡತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನೂ ಸುಧಾರಿಸಲು ತಮ್ಮ ಕೊಡುಗೆ ನೀಡುತ್ತಿವೆ.

ಸಾಮಾನ್ಯವಾಗಿ ಸಾಕಿದ ನಾಯಿ ನಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತದೆ. ನಮ್ಮ ಧ್ವನಿ, ಮುಖದಲ್ಲಿನ ಭಾವನೆ, ಹಾವಭಾವಗಳನ್ನು ಬಹಳ ತೀಕ್ಷ್ಣವಾಗಿ ಗಮನಿಸುತ್ತದೆ. ನಾಯಿಗಳನ್ನು ಸಾಕಿದವರಿಗೆ ಗೊತ್ತಿರಬಹುದು, ಅವು ನಮ್ಮ ಕಣ್ಣುಗಳನ್ನೇ ಗಮನಿಸುತ್ತಿರುತ್ತವೆ.

ದೈಹಿಕ ಆರೋಗ್ಯಕ್ಕೆ...

‘ಮುದ್ದು ಪ್ರಾಣಿಗಳು ಅದರಲ್ಲೂ ನಾಯಿ ಮತ್ತು ಬೆಕ್ಕು ಸಾಕಿಕೊಂಡು ಒಡನಾಡುವುದು ಒತ್ತಡ, ಆತಂಕ, ಗಾಬರಿ, ಒಂಟಿತನ, ಖಿನ್ನತೆಯನ್ನು ಕಡಿಮೆ ಮಾಡಲು ಸಹಕಾರಿ’ ಎನ್ನುತ್ತಾರೆ ಮನಃಶಾಸ್ತ್ರಜ್ಞೆ ಡಾ.ಪ್ರಮೀಳಾ ಎಸ್‌. ಇವು ದೈಹಿಕ ಆರೋಗ್ಯ ಸುಧಾರಿಸಲೂ ನೆರವು ನೀಡುತ್ತವೆ. ಅದರ ಜೊತೆ ನಡಿಗೆ, ಓಟ, ಮನೆಯೊಳಗೆ ಅದರ ಹಿಂದೆ ಓಡುವುದರಿಂದ ದೇಹಕ್ಕೆ ವ್ಯಾಯಾಮ ಸಿಗುವುದು ನಿಶ್ಚಿತ. ಅಧಿಕ ರಕ್ತದೊತ್ತಡ ಇರುವವರು, ಕೊಲೆಸ್ಟ್ರಾಲ್‌ ಜಾಸ್ತಿ ಇರುವವರು ಈ ಸಮಸ್ಯೆಯನ್ನು ನಿಯಂತ್ರಿಸಿಕೊಂಡಿದ್ದು ಅಧ್ಯಯನದಿಂದ ಸಾಬೀತಾಗಿದೆ.

ಒಂಟಿತನಕ್ಕೆ ಔಷಧಿ

ಕೋವಿಡ್‌ 19 ಸಂದರ್ಭದಲ್ಲಿ ಮನೆಯೊಳಗೇ ಇರುವಂತಹ ಮಕ್ಕಳು, ವಯಸ್ಕರಂತೂ ಮುದ್ದು ಪ್ರಾಣಿಗಳಿಂದ ಹೆಚ್ಚಿನ ಲಾಭ ಕಂಡುಕೊಂಡಿದ್ದಾರೆ. ಅವುಗಳನ್ನು ಮುಟ್ಟುವುದರಿಂದ, ಮುದ್ದಾಡುವುದರಿಂದ ಒಂಟಿತನವೂ ಮಾಯವಾಗುತ್ತದೆ ಎನ್ನುತ್ತಾರೆ ತಜ್ಞರು. ಈ ಮುದ್ದು ಪ್ರಾಣಿಗಳಿಗೆ ಸ್ನಾನ ಮಾಡಿಸುವುದು, ಊಟ ತಿನ್ನಿಸುವುದು, ಟೆರೇಸ್ ಮೇಲೆ ಓಡಾಡಿಸುವುದು ಕೂಡ ಆಪ್ತ ಭಾವನೆ ಮೂಡಿಸುತ್ತದೆ. ಮಕ್ಕಳು, ಕೆಲವೊಮ್ಮೆ ವಯಸ್ಕರೂ ಕೂಡ ನಾಯಿ, ಬೆಕ್ಕಿನ ಜೊತೆ ಮಾತನಾಡುವುದನ್ನು ಕೇಳಿಸಿಕೊಂಡಿರಬಹುದು. ಇದು ಒಂಟಿತನ, ಮನಸ್ಸಿನೊಳಗಿರುವ ದುಗುಡವನ್ನು ಹೊರಹಾಕಲು ಸಹಾಯಕ.

ಇವು ನಿಮ್ಮ ಆಲಸ್ಯವನ್ನೂ ಕಡಿಮೆ ಮಾಡುತ್ತವೆ ಗೊತ್ತೇ? ಅವುಗಳಿಗೆ ಊಟ ನೀಡುವ ಸಮಯ, ವಾಕಿಂಗ್ ಮಾಡಿಸುವ ಸಮಯವನ್ನು ನೀವು ಮರೆತರೂ ಅವು ಮರೆಯುವುದಿಲ್ಲ. ಹೀಗಾಗಿ ನೀವು ಶಿಸ್ತುಬದ್ಧ ವೇಳಾಪಟ್ಟಿಯನ್ನು ಅನುಸರಿಸಲೇಬೇಕಾಗುತ್ತದೆ.

ಮುದ್ದು ಪ್ರಾಣಿಗಳನ್ನು ದೀರ್ಘಾವಧಿ ಸಾಕಲು ಸಾಧ್ಯವಿಲ್ಲದವರು ಪ್ರಾಣಿಗಳ ರಕ್ಷಣಾ ಕೇಂದ್ರದವರಿಂದ ದತ್ತು ಪಡೆಯಬಹುದು. ಅಲರ್ಜಿ ಇದ್ದವರು, ನಾಯಿಗೆ ಅಥವಾ ಬೆಕ್ಕಿಗೆ ಅನಾರೋಗ್ಯ ಉಂಟಾದಾಗ ಎಚ್ಚರಿಕೆ ವಹಿಸಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು