ಮಂಗಳವಾರ, ಮೇ 18, 2021
30 °C

ಬಿಸಿಲ ಧಗೆ; ಸಾಕುಪ್ರಾಣಿಗಳ ಆರೈಕೆ ಹೇಗಿರಬೇಕು?

ಮನಸ್ವಿ Updated:

ಅಕ್ಷರ ಗಾತ್ರ : | |

Prajavani

ಬೇಸಿಗೆ ಕಾಲಿಟ್ಟು ಕೆಲ ದಿನಗಳು ಕಳೆದಿವೆ. ಬೇಸಿಗೆ ಬಂದಾಕ್ಷಣ ಸುಡು ಬಿಸಿಲಿಗೆ ಮನುಷ್ಯರು ಮಾತ್ರವಲ್ಲ, ಪ್ರಾಣಿಗಳೂ ತತ್ತರಿಸುವುದು ಸಾಮಾನ್ಯ. ಕಳೆದ ಕೆಲ ವರ್ಷಗಳಿಂದ ಬೇಸಿಗೆಯ ತಾಪ ಇನ್ನಷ್ಟು ಹೆಚ್ಚಾಗಿದೆ. ಇಂತಹ ಸಮಯದಲ್ಲಿ ನಮ್ಮ ಮನೆಯ ಮುದ್ದಿನ ಸಾಕುಪ್ರಾಣಿಗಳನ್ನು ಕಾಳಜಿ ಮಾಡುವುದು ಅಗತ್ಯ. ಈ ಸಮಯದಲ್ಲಿ ಸಾಕುಪ್ರಾಣಿಗಳಲ್ಲಿ ಸೋಂಕು, ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳು, ಹೀಟ್‌ ಸ್ಟ್ರೋಕ್‌ನಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಹಾಗಾಗಿ ಮುಂಜಾಗ್ರತೆ ವಹಿಸುವುದು ಅಗತ್ಯ.

ಸಾಕುಪ್ರಾಣಿಯನ್ನು ಕಾರಿನ ಒಳಗೆ ಇರಿಸಬೇಡಿ
ಸಾಕುಪ್ರಾಣಿಯನ್ನು ಜೊತೆಗೆ ಹೊರಗಡೆ ಕರೆದುಕೊಂಡು ಹೋದಾಗ ಕೆಲವೇ ನಿಮಿಷಗಳು ಎಂದು ಭಾವಿಸಿ ಕಾರ್‌ ಒಳಗೆ ಇರಿಸಿ ಹೋಗಬೇಡಿ. ಹೊರಗಡೆ ಬಿಸಿಲು ಕಡಿಮೆ ಇದೆ ಅನ್ನಿಸಿದರೂ ಒಳಗಿನಿಂದ ಬಾಗಿಲು ಮುಚ್ಚಿದಾಗ ಬಿಸಿಲಿನ ತಾಪ ಹೆಚ್ಚಿರುತ್ತದೆ. ಹೊರಗಡೆ 85 ಡಿಗ್ರಿ ಸೆಲ್ಸಿಯಸ್‌ ತಾಪವಿದ್ದರೆ ಕೇವಲ ಹತ್ತೇ ನಿಮಿಷಗಳಲ್ಲಿ ಕಾರಿನೊಳಗಿನ ತಾಪ 120 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಬಹುದು. ಆ ಕಾರಣಕ್ಕೆ ಎಲ್ಲಾದರೂ ಹೋಗುವಾಗ ಸಾಕುಪ್ರಾಣಿಯನ್ನು ಮನೆಯಲ್ಲೇ ಬಿಡುವುದು ಉತ್ತಮ.

ವಾಕಿಂಗ್‌ ಹೋದಾಗ ಇರಲಿ ಎಚ್ಚರ
ನಾಯಿಗಳನ್ನು ಪಾರ್ಕ್‌ ಅಥವಾ ಹುಲ್ಲು ಇರುವ ಪ್ರದೇಶದಲ್ಲಿ ವಾಕಿಂಗ್ ಮಾಡಿಸುವುದು ಉತ್ತಮ. ಪಾದಚಾರಿ ಮಾರ್ಗದಲ್ಲಿ ಬಿಸಿಲಿನ ತಾಪದಿಂದ ಅವುಗಳ ಪಾದಕ್ಕೆ ತೊಂದರೆಯಾಗಬಹುದು. ವಾಕ್ ಮಾಡುವ ಮೊದಲು ಪಾದಚಾರಿ ಮಾರ್ಗವನ್ನು ಮುಟ್ಟಿ ನೋಡಿ. ಅದು ನಿಮ್ಮ ಕೈಗೆ ಬಿಸಿ ಎನ್ನಿಸಿದರೆ ಅಲ್ಲಿ ನಾಯಿಗೆ ವಾಕ್ ಮಾಡಿಸಬೇಡಿ.

ಚಿಗಟಗಳಾಗಿವೆಯೇ ಎಂದು ಪರಿಶೀಲಿಸಿ
ಬೇಸಿಗೆಯಲ್ಲಿ ಸಾಕುಪ್ರಾಣಿಗಳ ಕೂದಲಿನಲ್ಲಿ ಚಿಗಟಗಳಾಗುವುದು ಸಾಮಾನ್ಯ. ಆ ಕಾರಣಕ್ಕೆ ಬೇಸಿಗೆಯಲ್ಲಿ 15 ದಿನಗಳಿಗೊಮ್ಮೆ ಚಿಗಟ ನಿವಾರಕ ಔಷಧಿಗಳನ್ನು ಹಚ್ಚುವುದು ಅಗತ್ಯ. ಚಿಗಟ ಹಾಗೂ ಉಣ್ಣಿಗಳು ರಕ್ತಹೀನತೆಗೂ ಕಾರಣವಾಗುತ್ತವೆ. ಇವುಗಳ ನಿವಾರಣೆಗೆ ಹಲವಾರು ಆಯ್ಕೆಗಳಿವೆ. ಆದರೆ ಅವುಗಳನ್ನು ಬಳಸುವ ಮೊದಲು ಪಶು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ತಾಪದ ಒತ್ತಡವನ್ನು ಅರಿಯಿರಿ
ಬೇಸಿಗೆಯಲ್ಲಿ ಅತೀ ತಾಪಮಾನದ ಕಾರಣ ಪ್ರಾಣಿಗಳಲ್ಲಿ ಬದಲಾವಣೆ ಉಂಟಾಗುವುದು ಅರಿವಿಗೆ ಬರುತ್ತದೆ. ಅತಿಯಾದ ಬಳಲಿಕೆ, ಕಣ್ಣಿನಲ್ಲಿ ನೀರು ಸೋರುವುದು, ಹೃದಯ ಬಡಿತದಲ್ಲಿ ಹೆಚ್ಚಳ, ಚಡಪಡಿಕೆ, ಅತಿಯಾದ ಬಾಯಾರಿಕೆ, ಅಲಸ್ಯ, ಜ್ವರ, ತಲೆ ತಿರುಗುವಿಕೆ, ವಾಂತಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ರೀತಿ ಸಮಸ್ಯೆ ನಿಮ್ಮ ಪ್ರಾಣಿಯಲ್ಲಿ ಕಾಣಿಸಿಕೊಂಡಾಗ ಅದಕ್ಕೆ ತಾಪದ ಒತ್ತಡ ಉಂಟಾಗಿದೆ ಎಂದು ಅರ್ಥ.

ಆರೈಕೆ ಹೇಗೆ?
ಬೇಸಿಗೆಯಲ್ಲಿ ಎರಡೆರಡು ಬಾರಿ ಸ್ನಾನ ಮಾಡಿದರೂ ಮನಸ್ಸಿಗೆ ಖುಷಿ ಸಿಗುತ್ತದೆ. ಹಾಗೆಯೇ ಪ್ರಾಣಿಗಳಿಗೂ ಬೇಸಿಗೆಯಲ್ಲಿ ಆಗಾಗ ಸ್ನಾನ ಮಾಡಿಸುವುದು ಉತ್ತಮ. ಕೂದಲನ್ನು ತೊಳೆಯುವುದು, ಬ್ರಷ್ ಮಾಡಿಸುವುದು ಹಾಗೂ ಉಗುರು ಕತ್ತರಿಸುವುದು ಮಾಡುತ್ತಿರಬೇಕು. ಆಗಾಗ ಕೂದಲನ್ನು ಟ್ರಿಮ್ಮಿಂಗ್ ಮಾಡುವುದು ಒಳ್ಳೆಯದು. ಇದರಿಂದ ಬೇಸಿಗೆಯಲ್ಲಿ ಅವುಗಳಿಗೆ ಆರಾಮ ಎನ್ನಿಸುತ್ತದೆ.

ಆಗಾಗ ಪಶುವೈದ್ಯರ ಬಳಿ ಕರೆದುಕೊಂಡು ಹೋಗಿ
ಬೇಸಿಗೆಯಲ್ಲಿ ನಿರ್ಜಲೀಕರಣದಿಂದ ಸಾಕುಪ್ರಾಣಿಗಳಿಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೇ ಅವುಗಳ ದೇಹದೊಳಗೆ ಕಾಣಿಸುವ ಸಮಸ್ಯೆಗಳ ಅರಿವು ನಮಗಾಗುವುದಿಲ್ಲ. ಆ ಕಾರಣಕ್ಕೆ ಆಗಾಗ ಸಾಕುಪ್ರಾಣಿಗಳನ್ನು ಪಶುವೈದ್ಯರ ಬಳಿ ತೋರಿಸುವುದು ಅಗತ್ಯ.

ಹೆಚ್ಚು ಹೆಚ್ಚು ನೀರು ಕುಡಿಸಿ
ಬೇಸಿಗೆಯಲ್ಲಿ ಮನುಷ್ಯರಂತೆ ಸಾಕುಪ್ರಾಣಿಗಳಿಗೂ ಬಾಯಾರಿಕೆ ಹೆಚ್ಚುವುದು ಸಾಮಾನ್ಯ. ಸಾಮಾನ್ಯವಾಗಿ ಸಾಕುಪ್ರಾಣಿಗಳಿಗೆ ಬಾಯಾರಿಕೆಯಾದಾಗ ವಸಡುಗಳು ಒಣಗುತ್ತವೆ. ಜೊತೆಗೆ ಇಳಿಮುಖ ಹಾಕಿಕೊಂಡಿರುತ್ತವೆ. ಸಾಕುಪ್ರಾಣಿಗಳಿಗೆ ಬೇಸಿಗೆಯಲ್ಲಿ ಕಲುಷಿತವಲ್ಲದ ಶುದ್ಧನೀರು ಕುಡಿಸುವುದು ತುಂಬಾ ಮುಖ್ಯ. ಹೊರಗಡೆ ಕರೆದುಕೊಂಡು ಹೋದಾಗಲೂ ಅವುಗಳಿಗೆ ಕುಡಿಯಲು ನೀರನ್ನು ಜೊತೆಗೆ ತೆಗೆದುಕೊಂಡು ಹೋಗುವುದು ಉತ್ತಮ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು