ಜೀವನದ ಸಣ್ಣ ಸಣ್ಣ ಸಡಗರಗಳನ್ನು ಸಂತೃಪ್ತಿಯಿಂದ ಆಸ್ವಾದಿಸಲು ಅವಕಾಶವನ್ನು ಮಾಡಿಕೊಡುವ ಆಲೋಚನಾ ಕ್ರಮಗಳನ್ನು ಅಳವಡಿಸಿಕೊಂಡರೆ ಬದುಕು ಸದಾ ಸಡಗರದಿಂದ ಕೂಡಿರುತ್ತದೆ

ಬದುಕು ಅದೆಷ್ಟು ವೈವಿಧ್ಯಪೂರ್ಣ; ಬದುಕಿನ ಪ್ರತಿ ಘಟ್ಟಕ್ಕೂ ಅದೆಂಥ ವಿಶಿಷ್ಟ ಚೆಲುವು; ಪ್ರತಿಯೊಂದು ಅನುಭವಕ್ಕೂ ಅನಂತ ಆಯಾಮಗಳು. ಎಲ್ಲರೂ ‘ಇರುವುದು ಒಂದೇ ಜೀವನ’ ಎಂದು ಆಗಾಗ ಹೇಳುತ್ತಲೇ ಇರುತ್ತೇವೆ. ಆದರೆ ಸರಿಯಾಗಿ ದೃಷ್ಟಿಸಿ ನೋಡಿದಾಗ ‘ಒಂದೇ’ ಜೀವನವೇ ಇರುವುದು – ಎಂಬ ಪ್ರಶ್ನೆ ಹುಟ್ಟುತ್ತದೆ. ಹಾಗೆ ‘ಒಂದೇ’ ಜೀವನ ಎಂದರೇನೆಂದು ಕೇಳಿಕೊಂಡು ನೋಡಿ; ಆ ಒಂದೇ ಜೀವನದೊಳಗೂ ಅವೆಷ್ಟೆಷ್ಟು ಜೇವನಗಳು, ಒಂದೇ ಮನುಷ್ಯನೊಳಗೂ ನೂರಾರು ವ್ಯಕ್ತಿಗಳು, ಒಂದೇ ಘಟನೆಗೂ ಆಲೋಚನೆಗೂ ಭಾವನೆಗೂ ಸಾವಿರಾರು ದಿಕ್ಕಿನ ನೋಟಗಳು, ಸಾವಿರಾರು ಅರ್ಥಗಳು ಇರುವುದನ್ನು ಕಾಣಬಹುದು.

ನಾವು ಏನೇನೆಲ್ಲಾ ಆಗಬೇಕೆಂದು ಕನಸು ಕಾಣುತ್ತೇವೆ; ಎಲ್ಲೆಲ್ಲಾ ಹೋಗಬೇಕು, ಹೇಗೆಗೆಲ್ಲಾ ಜೀವನವಿರಬೇಕು, ಯಾರೊಂದಿಗೆಲ್ಲಾ ನಕ್ಕು ನಲಿಯಬೇಕು, ಎಷ್ಟೊಂದು ಮಾತಾಡಬೇಕು, ಹೃದಯ ತೆರೆದಿಡಬೇಕು – ಎಂದು ಹೇಗೆಲ್ಲಾ ಒಂದಿಡೀ ದಿನದಲ್ಲಿ ಮನಸ್ಸಿನಲ್ಲಿ ಮಾತಾಡಿಕೊಳ್ಳುತ್ತಿರುತ್ತೇವೆ ನೋಡಿಕೊಳ್ಳಿ, ಎಷ್ಟೊಂದು ಬಗೆಬಗೆಯ ಬದುಕುಗಳ ಆಕಾಂಕ್ಷಿಗಳು ನಾವು ಎನ್ನುವುದು ಗೊತ್ತಾಗುತ್ತದೆ.

ಅಂದರೆ ಬದುಕನ್ನು ಕಾಲ-ದೇಶಗಳಲ್ಲಿ ವಿಸ್ತರಿಸಿಕೊಂಡಿರುವ ವಿದ್ಯಮಾನ, ಘಟನೆಗಳ, ಆಗು-ಹೋಗುಗಳ ಸರಮಾಲೆ ಎಂದುಕೊಂಡಾಗ ಆಗುವ ಅನುಭವಕ್ಕೂ, ಬದುಕೆಂದರೆ ಪ್ರತಿಕ್ಷಣವೂ ವಿವಿಧ ಅರ್ಥಗಳು, ವಿವಿಧ ಪ್ರಚೋದನೆಗಳು, ವಿಧವಿಧ ಬಯಕೆಗಳು, ಗುರಿಗಳು, ಧ್ಯೇಯಗಳು, ಉದ್ದೇಶಗಳು, ನೆನಪುಗಳು ಎಲ್ಲವೂ ಸೇರಿ ಹೆಣೆದ ಅನೇಕ ಬಣ್ಣ, ಚಿತ್ತಾರಗಳಿರುವ ಸುಂದರ, ಸಂಕೀರ್ಣ, ಸತ್ವಭರಿತ ಕಸೂತಿಯ ಹಾಸು ಎಂದು ನೋಡಿದಾಗ ಆಗುವ ಅನುಭವಕ್ಕೂ ಅಗಾಧ ವ್ಯತ್ಯಾಸವಿದೆ.

ಯಾವುದೇ ಅನುಭವವನ್ನು ನಾವು ಆ ಕ್ಷಣಕ್ಕೆ ಗ್ರಹಿಸುವ ರೀತಿಯೇ ಬೇರೆ, ಅದೇ ಅನುಭವ ಮನಸ್ಸಿನ ಅನೇಕ ಪದರಗಳನ್ನು ಹಾದು, ಅನೇಕ ಸಂಸ್ಕಾರಗಳಿಗೆ ಒಳಗಾಗಿ ಬಂದ ಮೇಲೆ ಅದು ತೋರಿಕೊಳ್ಳುವ ರೀತಿಯೇ ಬೇರೆ. ಅಂದರೆ ಮನುಷ್ಯ ಎರಡು ಲೋಕಗಳ ನಿವಾಸಿ: ಒಂದು ಬಾಹ್ಯಲೋಕ ಮತ್ತೊಂದು ಆಂತರ್ಯಲೋಕ. ಈ ಎರಡೂ ಲೋಕಗಳ ನಡುವೆ ಸದಾ ಒಂದಿಲ್ಲೊಂದು ‘transaction’ – ವ್ಯವಹಾರ – ನಡೆಯುತ್ತಲೇ ಇರುತ್ತದೆ. ಹೊರಗಿರುವುದು ಆಂತರ್ಯಲೋಕದ ರೀತಿ ನೀತಿಗಳಿಗನುಗುಣವಾಗಿ ರೂಪಾಂತರ ಹೊಂದಿ ಒಳಲೋಕದ ಭಾಗವಾಗುವುದು, ಒಳಲೋಕದಲ್ಲಷ್ಟೇ ಇದೆ ಎಂದುಕೊಂಡಿದ್ದು ಸುಳಿವೇ ಕೊಡದೆ ಥಟ್ಟನೆ ಹೊರಲೋಕದಲ್ಲಿ ಪ್ರಕಟಗೊಂಡು ಬದುಕಿನ ದಿಕ್ಕು ದಿಸೆ ಬದಲಾಗುವುದು. ಈ ಒಳಹೊರ ಲೋಕಗಳ ನಡುವಿನ ನಿತ್ಯ ಓಡಾಟವೇ ಜೀವನದ ಸಡಗರ, ಸಂಭ್ರಮ, ಉತ್ಸವ, ಪರ್ವ.

ಹಬ್ಬಗಳು, ಉತ್ಸವಗಳು, ಮದುವೆ ಮುಂತಾದ ಕಾರ್ಯಕ್ರಮಗಳು ಪ್ರತಿಯೊಂದು ಸಡಗರಕ್ಕೂ ಇರುವ ಸಾಮಾನ್ಯ ಅಂಶ ಯಾವುದು ಹೇಳಿ? ಎಲ್ಲ ಸಂಭ್ರಮಗಳಿಗೂ ಮೂಲ ಲವಲವಿಕೆಯ ಓಡಾಟ, ಬಂಧುಮಿತ್ರರ, ನೆರೆಹೊರೆಯ, ಸಮಾನಮನಸ್ಕರ ಭೇಟಿ, ಮಾತುಕತೆ, ನಗು, ಕೇಕೆ, ಹಾಸ್ಯ, ಒಬ್ಬರಿಗೊಬ್ಬರು ಆಸರೆಯಾಗುವುದು, ಮನಸ್ತಾಪಗಳಿಗೆ ಚಲನಶೀಲತೆಯ ಮೂಲಕವೇ ಅಂತ್ಯವನ್ನು ಕಾಣಿಸುವುದು, ಒಳಹೊರಮನೆಗಳ ನಡುವಿನ ಸರಭರ ಓಡಾಟ, ಕಾಲ್ಗೆಜ್ಜೆಯ, ಕೈಬಳೆಯ ಸುಮಧುರ ನಾದ, ರೇಷ್ಮೆ ಸೀರೆಯ ವರ್ಣವೈಭವ, ಬೆಚ್ಚನೆ ಅಪ್ಪುಗೆಯ, ನೇವರಿಸುವಿಕೆಯ ಹಿತಸ್ಪರ್ಶ, ಕಣ್ಣುಕೋರೈಸುವ ದೀಪಗಳ ಬೆಳಕು, ಚಿನ್ನದ ಥಳಕು, ಹಾಡು, ಕುಣಿತ, ಊಟ, ಉಪಚಾರ, ಉಡುಗೊರೆ, ಹರಟೆ - ಏನುಂಟು ಏನಿಲ್ಲ ಬದುಕಿನ ಸಂಭ್ರಮದಲ್ಲಿ?

ಈ ಎಲ್ಲ ಸಡಗರವೂ ನಮ್ಮ ಜೊತೆ ನಮ್ಮವರು ಎನಿಸಿಕೊಂಡವರು ಇದ್ದಾಗಲಷ್ಟೇ ಸಾಧ್ಯ; ಒಬ್ಬರೇ ಇದ್ದಾಗ ಸಡಗರ ಸಾಧ್ಯವಾಗಬೇಕಾದರೆ ನಾವು ಪ್ರೀತಿಸುವವರು ನಮ್ಮ ಮನಸ್ಸಿನ ತುಂಬಾ ತುಂಬಿಕೊಂಡಿರಬೇಕು, ಅವರನ್ನು ಪ್ರತಿಕ್ಷಣವೂ ನಮ್ಮ ಬದುಕಿನಲ್ಲಿ ಆವಾಹಿಸಿಕೊಂಡಿರಬೇಕು. ಒಳ–ಹೊರ ಲೋಕಗಳಲ್ಲಿ ಪ್ರೀತಿಸುವ ಜೀವಗಳ ಸಾನ್ನಿಧ್ಯ ಇಲ್ಲವಾದರೆ, ಆಂತರ್ಯವೂ ಬಾಹ್ಯವೂ ಬರಡಾಗಿ ಸಡಗರ ಮರೀಚಿಕೆಯೇ ಸರಿ. ಪ್ರೀತಿಸುವ ವ್ಯಕ್ತಿಯ ಒಡನಾಟಕ್ಕೂ ಮಿಗಿಲಾದ ಸಡಗರವೇ ಇಲ್ಲ !

ಜೀವನದ ಸಡಗರವನ್ನು ಸಂತೃಪ್ತಿಯಿಂದ ಆಸ್ವಾದಿಸಲು ಅವಕಾಶಮಾಡಿಕೊಡುವ ಆಲೋಚನಾ ಕ್ರಮಗಳು ಇಲ್ಲಿವೆ:

*ಹೊರಲೋಕವನ್ನು ಒಳಗೆಳೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿರುವುದು ಇಂದ್ರಿಯಾನುಭವಗಳು; ಅದರಲ್ಲಿ ಮನವಿಟ್ಟು ತೊಡಗಿಕೊಂಡಾಗ ಎಷ್ಟೊಂದು ಅಸಾಧಾರಣ ವಿಷಯಗಳು ಅನಾವರಣಗೊಳ್ಳುತ್ತದೆಯಲ್ಲವೇ? ಸಂಗೀತ ಆಲಿಸುವಾಗ, ಕಣ್ಬಿಟ್ಟು ಈ ವರ್ಣರಂಜಿತ ಪ್ರಪಂಚ ಕಾಣುವಾಗ ಒಳ–ಹೊರ ಲೋಕಗಳ ನಡುವಿನ ಸಂಭಾವ್ಯ ಸಂಭಾಷಣೆಯನ್ನು ಆಲಿಸುವ, ಅನ್ವೇಷಣೆಯ ಮನೋಭಾವವಿರಲಿ.

*ನಮ್ಮ ದೇಹವೇ ಒಂದು ನಿತ್ಯಕೌತುಕ, ಒಂದೊಂದು ಭಾವಕ್ಕೂ, ಒಂದೊಂದು ಸೂಕ್ಷ್ಮ ಪ್ರಚೋದನೆಗೂ ಈ ದೇಹ ಹೇಗೆ ಮಿಡಿಯುವುದು, ಹೇಗೆ ಸ್ಪಂದಿಸುವುದು, ದೇಹದ ಮೂಲಕವೇ ನಾವು ಪ್ರಪಂಚವನ್ನು ಗ್ರಹಿಸುವ ಬಗೆಯನ್ನು ಕಂಡಾಗ ಈ ದೇಹದ ಕಣಕಣದಲ್ಲೂ ಎಂಥ ಅಗಾಧ ಜೀವಂತಿಕೆಯ, ಜೀವನಪ್ರೀತಿಯ ಕುಣಿದು ಕುಪ್ಪಳಿಸುವ ಓಡಾಟವಿದೆ ಎನ್ನುವುದು ಗೊತ್ತಾಗುತ್ತದೆ.
ಪ್ರತಿಯೊಬ್ಬ ವ್ಯಕ್ತಿಯ ಒಳ ಹೊರ ಪ್ರಪಂಚವೂ ಅದಿನ್ನೆಷ್ಟು ಕಲೆಗಾರಿಕೆಯಿಂದ ನೇಯ್ಗೆ ಮಾಡಲಾಗಿದೆಯಲ್ಲವೇ? ಅವರ ಒಳ ಲೋಕಗಳ ಒಳಒಳ ಲೋಕಗಳು ಹೊರಲೋಕದಲ್ಲಿ ಹೇಗೆ ತಮ್ಮ ಇರವನ್ನು ಕಾಣಿಸುತ್ತದೆ ಎನ್ನುವುದನ್ನು ವಿಮರ್ಶಿಸುವಾಗ ಅಂತಃಕರಣ, ಪ್ರೀತಿ, ವಾತ್ಸಲ್ಯ, ಅಭಿಮಾನ, ಕರುಣೆಗಳು ಕೆಲಸಮಾಡಿದರೆ ಬದುಕಿನಲ್ಲಿ ಸಡಗರಕ್ಕೇನು ಕೊರತೆ?

*ಧರ್ಮ, ಧಾರ್ಮಿಕ ಆಚರಣೆಗಳು, ನಂಬಿಕೆಗಳು, ಪೌರಾಣಿಕ ಕಥೆಗಳು, ನಿತ್ಯಜೀವನದಲ್ಲೂ ಹಾಸುಹೊಕ್ಕಾಗಿರುವ ಕಲೆಯ ಸರಳ ತತ್ತ್ವಗಳು - ಈ ಸಾಂಕೇತಿಕ ಪ್ರಪಂಚದ ಜೊತೆಗಿನ ಮನುಷ್ಯನ ನಂಟನ್ನು ಅರಿಯುವ ಪ್ರಯತ್ನದಲ್ಲಿ ನಿಮ್ಮ ದಾರಿ ಯಾವುದು ಕೇಳಿಕೊಂಡಿದ್ದೀರಾ? ಇಲ್ಲವಾದರೆ ಇಂದಿನಿಂದಲೇ ಇವುಗಳ ಬಗ್ಗೆ ಆಲೋಚಿಸಲು ಪ್ರಾರಂಭಿಸಿ, ಆಗ ಜೀವನದಲ್ಲಿ ಸಂಸ್ಕೃತಿಯ ಸಡಗರವನ್ನು ಕಂಡು ಹೃದಯ ಹಾಡದೇ ಇರದು.

*ಬದುಕಿನ ಆತ್ಯಂತಿಕ ಗುರಿ, ಪರಮಾರ್ಥ, ದೇಶ ಕಾಲಾತೀತ, ದೇಹ ಭಾಷಾತೀತ ಅನುಭವಗಳು, ಗೊತ್ತಿರುವ ಎಲ್ಲವನ್ನೂ ಮೀರಿ ಹೋಗಬೇಕೆನ್ನುವ ಮಾನವ ಹಂಬಲ, ಮುಕ್ತಿಗಾಗಿ ನಮ್ಮೊಳಗಿನ ನಿರಂತರ ಮೊರೆ - ಇದು ಹೇಗೆ ನಮ್ಮ ನಿತ್ಯಜೀವನವನ್ನು, ನಮ್ಮ ಬಾಹ್ಯಪ್ರಪಂಚದಲ್ಲಿನ ನಡವಳಿಕೆಯನ್ನು ಪ್ರಭಾವಿಸಿದೆ ಎಂದು ಪ್ರಶ್ನಿಸಿಕೊಳ್ಳುತ್ತಲೇ ಇದ್ದರೆ ಜೀವನದಲ್ಲಿ ಸಡಗರ ಎನ್ನುವುದು ಉಸಿರಾಟದಷ್ಟೇ ಸಹಜವಾಗಿಬಿಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.