ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

National Doctors Day| ಚಿಕಿತ್ಸೆಯ ಫಲದಲ್ಲಿ ವೈದ್ಯರ ಸಾರ್ಥಕತೆ

ವೈದ್ಯರಿಗೆ ನಮನ
Published 1 ಜುಲೈ 2023, 5:15 IST
Last Updated 1 ಜುಲೈ 2023, 5:15 IST
ಅಕ್ಷರ ಗಾತ್ರ

ಡಾ  ಸ್ಮಿತಾ ಜೆ. ಡಿ.

ವೈದ್ಯ ವೃತ್ತಿಯನ್ನು ನೊಬೆಲ್ ಪ್ರೊಫೆಷನ್ ಎಂದು ಬಣ್ಣಿಸುತ್ತಾರೆ. ಸಮಾಜದಲ್ಲಿ ವೈದ್ಯ ವೃತ್ತಿಗೆ ಅತ್ಯಂತ ಉನ್ನತ ಸ್ಥಾನ ನೀಡಲಾಗಿದೆ. ವೈದ್ಯರಾದವರು ಸ್ವಾರ್ಥವನ್ನು ಮೀರಿ ರೋಗಗಳೊಂದಿಗೆ ಸೆಣಸಾಡುತ್ತಾರೆ.  ರೋಗಿ ಹಾಗೂ ಅವರ ಕುಟುಂಬದ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುವ ಜವಾಬ್ದಾರಿಯೂ ವೈದ್ಯರ ಮೇಲಿರುತ್ತದೆ. ಇಷ್ಟೆಲ್ಲ ಮಾಡಿದ ಮೇಲೆ ರೋಗಿ ಗುಣಮುಖನಾದರೆ ವೈದ್ಯರು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ. 

ಹೀಗೆ ರೋಗಿಗಳು ಗುಣಮುಖರಾದರೆ ಆ ತೃಪ್ತ ಭಾವವೇ ವೈದ್ಯರಲ್ಲಿ ಮುಂದಿನ ಕೆಲಸಕ್ಕೆ ಇನ್ನಷ್ಟು ಪ್ರೇರಣೆ ನೀಡುತ್ತದೆ. ಮತ್ತಷ್ಟು ಕ್ರಿಯಾಶೀಲರಾಗಿರುವಂತೆ ಹುರಿದುಂಬಿಸುತ್ತದೆ. ಕೊಂಚ ನಿರ್ಲಕ್ಷ್ಯವೂ ಇನ್ನೊಂದು ಜೀವಕ್ಕೆ ಮುಳವಾಗಬಹುದು. ಹಾಗಾಗಿ ವೈಯಕ್ತಿಕವಾಗಿ ಏನೇ ಸಮಸ್ಯೆ, ಜಂಜಾಟಗಳಿದ್ದರೂ ವೈದ್ಯರಾದವರು ವೃತ್ತಿನಿಷ್ಠೆಯನ್ನು ಹೊಂದಬೇಕಿರುವುದು ಅನಿವಾರ್ಯ.

ವೈದ್ಯ ಸೇವೆ ಅನನ್ಯ

ವೈದ್ಯರಾದವರಿಗೆ ಇಂತಿಷ್ಟೇ ಸಮಯಕ್ಕೆ ಊಟ, ಇಂತಿಷ್ಟೇ ಸಮಯಕ್ಕೆ ನಿದ್ದೆ ಎಂಬುದು ಇಲ್ಲವಾದರೂ  ವೈದ್ಯ ವೃತ್ತಿಯು ನಮ್ಮ ಆಯ್ಕೆ. ಹಾಗೆಯೆ ನಮಗೆ ಸಂತೃಪ್ತಿಯನ್ನು ತಂದುಕೊಡುವುದೆಂದು ಭಾವಿಸುವುದು ವೈದ್ಯ  ಧರ್ಮ. ಒಂದು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ವೈದ್ಯರ ಸೇವೆ ಅನನ್ಯ ಎಂಬುದನ್ನು ಮರೆಯುವಂತಿಲ್ಲ. 

‘ವೈದ್ಯೋ ನಾರಾಯಣೋ ಹರಿಃ’ ಎಂದು  ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಾರೆ. ರೋಗಿ ಗುಣಮುಖ ನಾಗುತ್ತಾನೆ. ಈ ಪ್ರಕ್ರಿಯೆಯಲ್ಲಿ ರೋಗಿಯ ಸ್ಪಂದನೆಯೂ ಬಹಳ ಮುಖ್ಯ. ಏಕೆಂದರೆ, ರೋಗ ಉಲ್ಬಣವಾಗುವ ಮುನ್ನವೇ ರೋಗಿಯು ಸಕಾಲದಲ್ಲಿ ವೈದ್ಯರನ್ನು ಭೇಟಿ ಮಾಡುವುದರಿಂದ, ಚಿಕಿತ್ಸೆಯೂ ಯಶಸ್ವಿಯಾಗುತ್ತದೆ, ರೋಗಿಯೂ ಗುಣಮುಖನಾಗುತ್ತಾನೆ.

ಇನ್ನು, ವೈದ್ಯರ ವಿರುದ್ಧದ ಸಮರ, ಹೋರಾಟದ ಬಗ್ಗೆ ಆಗಾಗ್ಗೆ ಕೇಳಿರುತ್ತೇವೆ.  ವೈದ್ಯರು ಹಾಗೂ ರೋಗಿಯ ನಡುವಿನ ಈ ಸಂಕೀರ್ಣತೆಗಳು, ಸೂಕ್ಷ್ಮತೆಯನ್ನು ಅರಿಯುವ ಕೆಲಸವೂ ಆಗಬೇಕಿದೆ. ಬದಲಾದ ಕಾಲಘಟ್ಟದಲ್ಲಿ ವೈದ್ಯ  ಹಾಗೂ ರೋಗಿಯ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಬೇಕಿದೆ. 

ವೈದ್ಯರು ತೆಗೆದುಕೊಳ್ಳುವ ಚಿಕಿತ್ಸಾ ನಿರ್ಧಾರಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಬಹುದು. ಆದರೆ ವೈದ್ಯರು ರೋಗಿಯ ಸಮಸ್ಯೆಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಬೇಕಾಗಿದೆ. ಆದ್ದರಿಂದ ವೈದ್ಯರ ಮೇಲೆ ಭರವಸೆಯನ್ನಿಡುವುದು ಮುಖ್ಯ.

ಸ್ವಯಂ ಚಿಕಿತ್ಸೆ ಸರಿಯಾದ ಕ್ರಮವಲ್ಲ

ಹಲವು ಬಾರಿ ರೋಗಿಗಳು ಬೇರೆ ಬೇರೆ ಮಾಧ್ಯಮಗಳಿಂದ ಸಿಕ್ಕ ಮಾಹಿತಿಯನ್ನು ಆಧರಿಸಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುತ್ತಾರೆ. ಇದರಿಂದ ಉಪಯೋಗಕ್ಕಿಂತ ನಷ್ಟವೇ ಅಧಿಕ. 

ಇತ್ತೀಚೆಗೆ ವೈದ್ಯರನ್ನು ಸಂಪರ್ಕಿಸುವ ಮೊದಲೇ ಗೂಗಲ್ ಸರ್ಚ್ ಮಾಡುತ್ತಾ, ಅಸಮರ್ಪಕ ಮಾಹಿತಿಯೊಂದಿಗೆ, ತಪ್ಪಾದ ಚಿಕಿತ್ಸೆಗಳಿಗೆ ತಮ್ಮನ್ನು ಒಡ್ಡಿಕೊಳ್ಳುವಂತಹವು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗಳ ಬಾಗಿಲು ತಟ್ಟುವಂತಹ ಪ್ರಕರಣಗಳೂ ಹೆಚ್ಚುತ್ತಿವೆ. ರೋಗಿಗಳಿಗೂ ಈ ವಿಚಾರದಲ್ಲಿ ಸ್ಪಷ್ಟತೆ ಸಿಗಬೇಕು. ವಿಷಯತಜ್ಞತೆ ಇರುವ ವೈದ್ಯರ ಸಲಹೆಗಳನ್ನು ಸ್ವೀಕರಿಸುವ ಮನಸ್ಥಿತಿ ಇದ್ದಾಗ ಮಾತ್ರ ಚಿಕಿತ್ಸೆ ಫಲಪ್ರದವಾಗುತ್ತದೆ. ಅಂತರ್ಜಾಲ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಮೆಟಾವರ್ಸ್, ಟೆಲಿಮೆಡಿಸಿನ್ ಹೀಗೆ ವೈದ್ಯಶಾಸ್ತ್ರವು ಎಷ್ಟೇ ಮುಂದುವರಿದಿದ್ದರೂ ರೋಗಿಯು ವೈದ್ಯರನ್ನು ಕಂಡು, ಮಾತನಾಡಿಸಿ, ವೈದ್ಯರೊಂದಿಗೆ ತಮ್ಮ ಸಮಸ್ಯೆಗಳನ್ನು ವಿವರಿಸಿದಾಗ ಹಾಗೆಯೇ ವೈದ್ಯರು ಅದನ್ನು ಆಲಿಸಿ, ಅರ್ಥೈಸಿ, ವಿವರಿಸಿ, ಪರೀಕ್ಷಿಸಿ, ಬೆನ್ನುತಟ್ಟಿ, ಔಷಧಿಗಳನ್ನು ನೀಡಿ, ಸಾಂತ್ವನ ಹೇಳುವ ಭಾವವು ಚಿಕಿತ್ಸೆ ಪರಿಣಾಮಕಾರಿಯಾಗಿ ನೆರವಾಗುತ್ತದೆ. 

ವೈದ್ಯರಾಗಿರುವವರ ಜೀವನದಲ್ಲಿಯೂ ಮಾನಸಿಕ ತುಮುಲಗಳು, ಆತಂಕ, ಭಯ, ಅಸಹಾಯಕತೆ, ನಕಾರಾತ್ಮಕ ಆಲೋಚನೆಗಳು  ಇರುವುದರಿಂದ ತೀವ್ರ ಒತ್ತಡ ಅನುಭವಿಸುವುದು ಸಹಜವಾದರೂ ಗುಣಮುಖನಾದ ರೋಗಿಯ ತೃಪ್ತ ಮಂದಹಾಸದಲ್ಲಿದೆ ವೈದ್ಯರ ಸಾರ್ಥಕತೆ.

(ಲೇಖಕರು: ಓರಲ್ ಮೆಡಿಸನ್ ಹಾಗೂ ರೆಡಿಯಾಲಜಿ ತಜ್ಞರು)

ರಾಷ್ಟ್ರೀಯ ವೈದ್ಯರ ದಿನಾಚರಣೆ

ಪಶ್ಚಿಮ ಬಂಗಾಳದ ಶ್ರೇಷ್ಠ ವೈದ್ಯ, ಭಾರತ ರತ್ನ ಪುರಸ್ಕೃತ ಡಾ.ಬಿ.ಸಿ.ರಾಯ್ (ಬಿಧಾನ್‌ ಚಂದ್ರ ರಾಯ್‌) ಅವರು ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ಸ್ಮರಣಾರ್ಥ, ಪ್ರತಿ ವರ್ಷ ಜುಲೈ 1 ರಂದು ’ರಾಷ್ಟ್ರೀಯ ವೈದ್ಯ ದಿನ’ವಾಗಿ ಆಚರಿಸಲಾಗುತ್ತಿದೆ.

ಜುಲೈ 1, ಬಿ.ಸಿ.ರಾಯ್ ಜನ್ಮದಿನ ಹಾಗೂ ಪುಣ್ಯ ಸ್ಮರಣೆಯ ದಿನವೂ ಹೌದು. ಅದೇ ಕಾರಣಕ್ಕೆ ಈ ದಿನವನ್ನು ರಾಷ್ಟ್ರೀಯ ವೈದ್ಯಕೀಯ ದಿನವನ್ನಾಗಿ ಆಚರಿಸಲು ತೀರ್ಮಾನಿಸಲಾಯಿತು. 1991ರಂದು ದೇಶದಲ್ಲಿ ಮೊದಲ ಬಾರಿಗೆ ವೈದ್ಯರ ದಿನ ಆಚರಿಸಲಾಯಿತು.‌

ವೈದ್ಯರಿಗೆ ಗೌರವ ಸಲ್ಲಿಸುವ ದಿನ

ಮನುಷ್ಯನಿಗೆ ಆರೋಗ್ಯವೇ ಭಾಗ್ಯ. ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಬೇಕು. ಆರೋಗ್ಯ ಕೆಟ್ಟಾಗ, ಅದಕ್ಕೆ ಮದ್ದು ನೀಡಿ ಗುಣಪಡಿಸುವವರು ವೈದ್ಯರು. ಅದಕ್ಕೆ ಅವರನ್ನು ‘ವೈದ್ಯೋ ನಾರಾಯಣ ಹರಿಃ’ ಎಂದು ಗೌರವದಿಂದ ಕರೆಯಲಾಗುತ್ತದೆ.

ಅನಾರೋಗ್ಯಪೀಡಿತರಿಗೆ ಚಿಕಿತ್ಸೆ ನೀಡಿ ಗುಣಪಡಿಸುವ, ಸಾವಿನ ದವಡೆಯಲ್ಲಿದ್ದವರನ್ನು ಪಾರು ಮಾಡುವ, ಒಂದು ರೀತಿ ಪುನರ್ಜನ್ಮ ನೀಡುವ ವೈದ್ಯರಿಗೆ ವಿಶೇಷ ಗೌರವ ಸಲ್ಲಿಸುವ ಸಲುವಾಗಿ ದೇಶದಾದ್ಯಂತ ಜುಲೈ 1ರಂದು ಭಾರತೀಯ ವೈದ್ಯಕೀಯ ಸಂಘವು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸುತ್ತದೆ.

ಈ ದಿನದಂದು, ವೈದ್ಯರ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗು ತ್ತದೆ. ಅಲ್ಲದೇ ನಮ್ಮ ಜೀವನಕ್ಕೆ ವೈದ್ಯರು ನೀಡಿದ ಕೊಡುಗೆಯನ್ನು ಸ್ಮರಿಸಿ ಪ್ರಶಂಸಿಸಲಾಗುತ್ತದೆ. ಈ ವಿಶೇಷ ದಿನವನ್ನು ಜನರ ಸೇವೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸಮರ್ಪಿಸಲಾಗುತ್ತದೆ.

ಯಾರು ಬಿ.ಸಿ.ರಾಯ್ ?: ಡಾ. ಬಿಧಾನ್ ಚಂದ್ರ ರಾಯ್ (ಬಿ.ಸಿ.ರಾಯ್) , ಪಶ್ಚಿಮ ಬಂಗಾಳದ ಶ್ರೇಷ್ಠ ವೈದ್ಯರು. ಶಿಕ್ಷಣ ತಜ್ಞರು. ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಮಂತ್ರಿ. ಜುಲೈ 1, 1882 ರಂದು ಬ್ರಿಟಿಷ್‌ ಆಡಳಿತದ ಪಾಟ್ನಾ ಬೆಂಗಾಲ್ ಪ್ರೆಸಿಡೆನ್ಸಿಯಲ್ಲಿ ಜನಿಸಿದ ಅವರು, ಜುಲೈ 1,1962 ರಲ್ಲಿ ಮರಣ ಹೊಂದಿದರು. ವೈದ್ಯಕೀಯ ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ರಾಯ್ ಅವರಿಗೆ, 1961 ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಲಾಯಿತು.

ಬಿ.ಸಿ.ರಾಯ್ ಅವರು, ಭಾರತೀಯ ವೈದ್ಯಕೀಯ ಮಂಡಳಿ ಹಾಗೂ ಭಾರತೀಯ ವೈದ್ಯಕೀಯ ಸಂಘದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ವೈದ್ಯಕೀಯ ಕ್ಷೇತ್ರವಲ್ಲದೇ, ಶಿಕ್ಷಣ ಕ್ಷೇತ್ರ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸಿದ್ದರು.

ವಿಶ್ವದಾದ್ಯಂತ ಆಚರಣೆ: ವೈದ್ಯರ ದಿನ ಭಾರತದಲ್ಲಷ್ಟೇ ಅಲ್ಲದೇ, ಬೇರೆ ಬೇರೆ ರಾಷ್ಟ್ರಗಳಲ್ಲಿ, ಬೇರೆ ಬೇರೆ ತಿಂಗಳು, ದಿನಾಂಕದಂದು ಆಚರಿಸುತ್ತಾರೆ, ಅಮೆರಿಕದಲ್ಲಿ ಮಾ. 30, ಕ್ಯೂಬಾದಲ್ಲಿ ಡಿಸೆಂಬರ್ 3, ಇರಾನ್‌ನಲ್ಲಿ ಆಗಸ್ಟ್ 23ರಂದು ವೈದ್ಯರ ದಿನ ಆಚರಿಸುತ್ತಾರೆ. ಅಮೆರಿಕದಲ್ಲಿ 1933 ಮಾರ್ಚ್‌ ತಿಂಗಳಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT