ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯುಮೋನಿಯಾ ಅಪಾಯಕ್ಕೆ ಲಸಿಕೆ ಉಪಾಯ

Last Updated 15 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಜ್ವರ, ಕೆಮ್ಮು, ಉಸಿರಾಟದ ತೊಂದರೆ ಉಂಟು ಮಾಡುವ ನ್ಯುಮೋನಿಯ ಮಕ್ಕಳನ್ನೇ ಬಾಧಿಸುವುದು ಹೆಚ್ಚು. ಚಿಕ್ಕ ಮಕ್ಕಳಿಗೆ ಇದರ ವಿರುದ್ಧ ಲಸಿಕೆ ಕೊಡಿಸುವುದೇ ಇದನ್ನು ತಡೆಯುವ ಉತ್ತಮ ಉಪಾಯ.

ಭಾರತದಲ್ಲಿ ಪ್ರತಿ ವರ್ಷ 4.8 ಲಕ್ಷ ಮಕ್ಕಳು ವಿವಿಧ ಹಂತದ ನ್ಯುಮೋನಿಯಾಕ್ಕೆ ಬಲಿಯಾಗುತ್ತಾರೆ ಎಂದರೆ ಈ ಕಾಯಿಲೆ ಎಷ್ಟು ಅಪಾಯಕಾರಿ ಎಂಬುದು ಅರಿವಿಗೆ ಬರದೇ ಇರದು. ನಮ್ಮ ದೇಶದಲ್ಲಿ ಸದ್ಯ ಮಾರಣಾಂತಿಕ ಕಾಯಿಲೆಗಳಲ್ಲಿ ಮೂರನೇ ಸ್ಥಾನದಲ್ಲಿರುವ ನ್ಯುಮೋನಿಯಾ ನಿಯಂತ್ರಣಕ್ಕೆ ಬಾರದ ಕಾಯಿಲೆಯೇನಲ್ಲ. ನ್ಯುಮೋಕಾಕಸ್ ರೋಗಾಣುಗಳು ಉಸಿರಾಟಕ್ಕೆ ಸಂಬಂಧಿಸಿದ ಅಂಗಾಂಗಗಳ ಮೇಲ್ಭಾಗದಲ್ಲಿ ಸೇರಿಕೊಂಡು ತೊಂದರೆ ಉಂಟು ಮಾಡುತ್ತವೆ. ಇದೇ ನ್ಯುಮೋನಿಯಾಕ್ಕೆ ಪ್ರಮುಖ ಕಾರಣ. ನ್ಯುಮೋನಿಯಾ ಬಹುತೇಕ ಸಂದರ್ಭಗಳಲ್ಲಿ ಸ್ಟ್ರೆಪ್ಟೋಕಾಕಸ್ ನ್ಯುಮೋನಿಯಾ ಎಂಬ ರೋಗಾಣುವಿನಿಂದ ಉಂಟಾದರೂ, ಸ್ಟೆಪೆಲೋಕಾಕಸ್ ನ್ಯುಮೋನಿಯ, ಇ.ಕೊಲಿ, ಕ್ಲೆಬ್ಸಿಯೆಲ್ಲಾ, ಫ್ರೀಡ್ ಲ್ಯಾಂಡರ್ ಅಣುಜೀವಿಗಳು, ಮೈಕೋಪ್ಲಾಸ್ಮಾಗಳು ಮತ್ತು ಕ್ಷಯದ ರೋಗಾಣುಗಳು ನ್ಯುಮೋನಿಯಾ ಉಂಟು ಮಾಡುತ್ತವೆ.

ಯಾವ ಮಕ್ಕಳಿಗೆ ಅಪಾಯ ಹೆಚ್ಚು?

ಅವಧಿಗೆ ಮುನ್ನ ಜನಿಸಿದ, ಅಲ್ಪಾವಧಿ ಸ್ತನ್ಯಪಾನ ಮಾಡಿದ, ಆಸ್ತಮಾದಿಂದ ಬಳಲುತ್ತಿರುವ, ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವ ಮಕ್ಕಳು ನ್ಯುಮೋಕಾಕಸ್ ಸೋಂಕಿಗೆ ತುತ್ತಾಗುವುದು ಹೆಚ್ಚು. ಡೇಕೇರ್ ಸೆಂಟರ್, ಮಾಂಟೆಸರಿ, ಅಂಗನವಾಡಿಗಳೇ ನ್ಯುಮೋಕಾಕಸ್‌ಗೆ ವಾಹಕ ಕೇಂದ್ರಗಳು ಎಂಬುದು ದುರಂತ. ಸೀನು, ಕೆಮ್ಮು ಮತ್ತು ಉಸಿರಾಟದ ನೇರ ಸಂಪರ್ಕ ರೋಗ ಹರಡುವಿಕೆಯಲ್ಲಿ ಸಹಕರಿಸುತ್ತವೆ.

ಸಣ್ಣಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಿರುವುದು ರೋಗವೃದ್ಧಿಗೆ ಕಾರಣ. ಮಕ್ಕಳು ಬೆಳೆಯುತ್ತಾ ಹೋದಂತೆ, ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದರಿಂದ ನ್ಯುಮೋಕಾಕಸ್ ಸೋಂಕಿನ ಹಾವಳಿ ತಗ್ಗುತ್ತದೆ. ಇತ್ತೀಚೆಗೆ ಅಮೆರಿಕ ಮತ್ತು ಯೂರೋಪ್‌ನಲ್ಲಿ ನಡೆದ ಸಂಶೋಧನೆಗಳು ಇದನ್ನು ಪುಷ್ಟೀಕರಿಸಿವೆ.

ರೋಗ ಲಕ್ಷಣ ಮತ್ತು ವಿವಿಧ ಹಂತ

ಶ್ವಾಸಕೋಶಗಳ ಒಂದು, ಎರಡು ಅಥವಾ ಹಲವು ಹಾಲೆಗಳಲ್ಲಿ ಉರಿಯೂತ ಕಾಣಿಸಿಕೊಂಡರೆ ನ್ಯುಮೋನಿಯಾ ಹಂತಕ್ಕೆ ತಿರುಗಿದೆ ಎನ್ನಬಹುದು. ಇದನ್ನೇ ಪುಪ್ಪುಸದ ಉರಿಯೂತ ಎಂದು ಹೇಳಬಹುದು. ಕೆಲವು ಪ್ರದೇಶದಲ್ಲಿ ಈ ರೋಗವನ್ನು ರೇಷ್ಮೆರೋಗ ಎಂದೂ ಕರೆಯುವ ಸಂಪ್ರದಾಯವಿದೆ. ರೋಗಜನಕ ರೋಗಾಣುಗಳು ಪುಪ್ಪುಸವನ್ನು ಸೇರಿ ಉರಿಯೂತಕ್ಕೆ ನಾಂದಿ ಹಾಡಿ, ಊತವು ಹೆಚ್ಚುವಂತೆ ಮಾಡುವುದರಿಂದ ಆ ಭಾಗದ ಪುಪ್ಪುಸವು ಘನೀಕೃತವಾಗುವುದು. ಸಾಮಾನ್ಯವಾಗಿ ನ್ಯುಮೋಕಾಕಸ್ ನ್ಯುಮೋನಿಯಾ ರೋಗಾಣು ಕಾರಣವಾಗಿದ್ದರೆ ಒಂದೇ ಹಾಲೆ ಉರಿಯೂತಕ್ಕೆ ಒಳಗಾಗುತ್ತದೆ. ಬೇರೆ ಬ್ಯಾಕ್ಟೀರಿಯಾಗಳಿಂದ ಉಂಟಾಗಿದ್ದರೆ ಹಲವು ಸಣ್ಣ ಹಾಲೆಗಳು, ವೈರಸ್‌ಗಳಿಂದ ಉಂಟಾಗಿದ್ದರೆ ಎಲ್ಲಾ ಹಾಲೆಗಳು ಬದಲಾವಣೆ ತೋರಿಸುತ್ತವೆ. ಶ್ವಾಸನಾಳ ಮತ್ತು ಪುಪ್ಪುಸ ಎರಡರಲ್ಲೂ ಉರಿಯೂತ ಕಂಡರೆ ಅದಕ್ಕೆ ಬ್ರಾಂಕೋನ್ಯುಮೋನಿಯಾ ಎನ್ನಲಾಗುತ್ತದೆ.

ರೋಗಾಣುಗಳು ಸ್ರವಿಸುವ ವಿಷವು ರಕ್ತದಲ್ಲಿ ಸೇರಿ ಚಳಿ, ನಡುಕ, ವಾಂತಿಯಾಗಿ ಒಮ್ಮೆಲೇ ಜ್ವರ ಬರಬಹುದು. ಇದು ಸುಮಾರು 103– 104 ಡಿಗ್ರಿವರೆಗೂ ಏರಬಹುದು. ಜ್ವರದೊಂದಿಗೆ ಒಣಕೆಮ್ಮು ಇರುತ್ತದೆ. ಎದೆಯ ಒಂದು ಪಕ್ಕದಲ್ಲಿ ತಿವಿಯುವಂತಹ ನೋವಿದೆಯೆಂದು ರೋಗಿ ಹೇಳಬಹುದು. ಆ ನೋವಿನ ಬಾಧೆ ತಾಳಲಾರದೆ ರೋಗಿ ಆ ಕಡೆಗೆ ಬಾಗಿ, ಎದೆ ಹಿಡಿದುಕೊಂಡು ಕೂಡಬಹುದು. ಕೆಮ್ಮಿದಾಗ, ದೊಡ್ಡ ಉಸಿರು ತೆಗೆದುಕೊಂಡಾಗ ಆ ನೋವು ಇನ್ನೂ ಹೆಚ್ಚಾಗುತ್ತದೆ. ನಿದ್ದೆ ಬಾರದಿರುವಿಕೆ, ಅತಿಯಾದ ತಲೆನೋವು ಕಾಡಬಹುದು.

ಎಳವೆಯಲ್ಲೇ ಲಸಿಕೆ

ಅಪಾಯ ತಪ್ಪಿಸಲು ಇರುವ ಉತ್ತಮ ಉಪಾಯವೆಂದರೆ ಲಸಿಕೆ ಹಾಕಿಸುವುದು. ನ್ಯುಮೋಕಾಕಲ್ ಪಾಲಿಸೆಕರೈಡ್ ಲಸಿಕೆ ಹಸುಗೂಸುಗಳಲ್ಲಿ ಪರಿಣಾಮಕಾರಿಯಾಗಿದ್ದು, ರಕ್ಷಣಾ ಸಾಮರ್ಥ್ಯ ಪ್ರತಿಶತ 90ಕ್ಕಿಂತ ಅಧಿಕವಾಗಿರುತ್ತದೆ. ಎರಡು ತಿಂಗಳು ತುಂಬಿದ ಮಗುವಿಗೆ ಲಸಿಕೆಯನ್ನು ಮೂರು ಸಲ ಎರಡು ತಿಂಗಳ ಅಂತರದಲ್ಲಿ ಕೊಡಬೇಕು. ವರ್ಧಕ ಪ್ರಮಾಣವನ್ನು 12–15 ತಿಂಗಳ ಕಾಲಾವಧಿಯಲ್ಲಿ ನೀಡಬೇಕು.

ಎರಡು ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಲಭ್ಯವಿದ್ದು, ಅದು 25 ಎಂ.ಜಿ.ನಷ್ಟು ಶುದ್ಧೀಕರಿಸಿದ ಕ್ಯಾಫ್ಸುಲಾರ್ ಪಾಲಿಸೆಕರೈಡ್ ಪ್ರತಿಜನಕವನ್ನು ಹೊಂದಿರುತ್ತದೆ. ನ್ಯುಮೋಕಾಕಸ್‌ನ ಸುಮಾರು 90 ಪ್ರಬೇಧಗಳಿರುವುದು ಈಗಾಗಲೇ ಗೊತ್ತಾಗಿದ್ದರೂ, ಲಭ್ಯವಿರುವ ಲಸಿಕೆ ಮಾತ್ರ ಕೇವಲ 23 ಪ್ರಮುಖ ಪ್ರಬೇಧಗಳನ್ನು ಒಳಗೊಂಡಿದೆ. ಹೀಗಾಗಿ ರಕ್ಷಣಾ ಸಾಮರ್ಥ್ಯ ಸುಮಾರು ಪ್ರತಿಶತ 60ರಷ್ಟಿದೆ. ಎರಡು ವರ್ಷಕ್ಕಿಂತ ದೊಡ್ಡ ಮಕ್ಕಳಿಗೆ, ಸಿಕಲ್ ಸೆಲ್‌ರೋಗ, ಪ್ಲೀಹ ಇಲ್ಲದಿರುವವರಿಗೆ, ನೆಪ್ರೋಟಿಕ್ ಸಿಂಡ್ರೋಮ್ ಸುಳಿಯಲ್ಲಿ ಸಿಕ್ಕವರಿಗೆ, ದೀರ್ಘಕಾಲಿಕ ಮೂತ್ರಪಿಂಡದ ವೈಫಲ್ಯಕ್ಕೆ ತುತ್ತಾದವರಿಗೆ, ಕ್ಯಾನ್ಸರ್‌ ಪೀಡಿತರಿಗೆ, ಹೆಚ್‌ಐವಿ ಸೋಂಕಿರುವವರಿಗೆ ಈ ಲಸಿಕೆಯನ್ನು ನೀಡಲಾಗುವುದು. ಮರುಲಸಿಕೆಯನ್ನು ಪ್ರಾಥಮಿಕ ಲಸಿಕೆ ನೀಡಿದ 3–5 ವರ್ಷಗಳ ಅವಧಿಯಲ್ಲಿ ಕೊಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT