ಮಂಗಳವಾರ, ಆಗಸ್ಟ್ 16, 2022
22 °C
ಕ್ಯಾನ್ಸರ್‌ ಜೊತೆಯಲ್ಲೊಂದು ಪಾಸಿಟಿವ್‌ ಪಯಣ

PV Web Exclusive: ಕೈ ಹಿಡಿದಳು ಗಾಯತ್ರಿ: ದೇಹ ಸೇರಿತು ಚೊಚ್ಚಲ ಕಿಮೊ ಹನಿ

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

Prajavani

ಈ ಪೆಟ್‌ (PET–Positron Emission Tomography) ಸ್ಕ್ಯಾನಿಂಗ್‌ನಲ್ಲಿ ಕೂಡ ನಮ್ಮ ತಾಳ್ಮೆಯನ್ನು ಒರೆಗೆ ಹಚ್ಚಲೇಬೇಕು. ಏಕಾಗ್ರತೆಯನ್ನೂ ಮುನ್ನೆಲೆಗೆ ತಂದುಕೊಳ್ಳಲೇಬೇಕು. ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳಬೇಕು. ನೋವನ್ನು ತಡೆದುಕೊಳ್ಳಲು ಮನಸ್ಸನ್ನು ಕಠಿಣಗೊಳಿಸಿಕೊಳ್ಳಬೇಕು. ಮತ್ತೆ ಫಲಿತಾಂಶ ಹೇಗೆ ಏನೋ ಎಂಬ ಆತಂಕವನ್ನು ಎದುರಿಸಲು ಸಜ್ಜುಗೊಳಿಸಿಕೊಳ್ಳಬೇಕು. ಅಬ್ಬಾ... ಸ್ಕ್ಯಾನ್ ಒಂದಾದರೂ ಸವಾಲುಗಳು ಎಷ್ಟೊಂದು. ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತರೆ ಮಾತ್ರ ಮುಂದಿನ ಹೆಜ್ಜೆಯನ್ನು ದಿಟ್ಟವಾಗಿ ಇಡಬಹುದು ಎಂಬುದನ್ನು ಕಳೆದ ವಾರ ನೀವೆಲ್ಲ ಓದಿದ್ದಿರಲ್ಲ.

***

ಪೆಟ್‌ ಸ್ಕ್ಯಾನ್‌ ವರದಿಯಲ್ಲಿ ಕ್ಯಾನ್ಸರ್‌ ಎಡಭಾಗದ ಎದೆಗೂಡಿನ ಆಳದಲ್ಲಿ ಇಳಿದಿದ್ದು ಬಿಟ್ಟರೆ ಮತ್ತೆಲ್ಲೂ ಹರಡಿರಲಿಲ್ಲ. ಥ್ಯಾಂಕ್‌ ಗಾಡ್‌. ಅಂದರೆ ನಾನು ಕ್ಯಾನ್ಸರ್‌ನಿಂದ ಸಂಪೂರ್ಣ ಗುಣವಾಗಬಲ್ಲೆ. ಈ ಒಂದು ವಿಶ್ವಾಸವೇ ನನ್ನಲ್ಲಿ ಸಕಾರಾತ್ಮಕ ಭರವಸೆಯನ್ನು ಹುಟ್ಟು ಹಾಕಿತು.

ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಮುಖ್ಯವಾಗಿ ಕಿಮೊಥೆರಪಿ, ಸರ್ಜರಿ, ರೇಡಿಯೊಥೆರಪಿ, ಹಾರ್ಮೋನ್‌ ಥೆರಫಿ ಇವೇ ಪ್ರಮುಖ ಘಟ್ಟಗಳು. ನನ್ನ ಪೆಟ್‌ ಸ್ಕ್ಯಾನ್‌ ವರದಿ ಆಧರಿಸಿ, ಡಾ.ಪ್ರಸಾದ ಗುನಾರಿ ಪ್ಲಾನ್‌ ರೆಡಿ ಮಾಡಿದರು. ಕಿಮೊಥೆರಪಿಯಲ್ಲಿ ಒಟ್ಟು ಎಂಟು ಇಂಜೆಕ್ಷನ್‌. ಅವುಗಳಲ್ಲಿ ನಾಲ್ಕು ಇಂಜೆಕ್ಷನ್‌ನಲ್ಲಿ ವಿವಿಟ್ರಾ ಮೆಡಿಸಿನ್‌ ಒಳಗೊಂಡಿತ್ತು. ಇನ್ನುಳಿದ ನಾಲ್ಕರಲ್ಲಿ ಬದಲಾದ ಔಷಧದೊಂದಿಗೆ ಕಿಮೊ ಮುಂದುವರಿಯಲಿದೆ. ಪ್ರತಿ 21 ದಿನಗಳಿಗೊಮ್ಮೆ ಒಂದು ಕಿಮೊ. ಒಂದು ಇಂಜೆಕ್ಷನ್‌ ಪಡೆದು 21 ದಿನ ಕಳೆದ ಮೇಲೆ ಮತ್ತೊಂದು ಇಂಜೆಕ್ಷನ್‌ಗೆ ನಮ್ಮ ದೇಹ ಸಿದ್ಧವಾಗಿದ್ದರೆ ಮಾತ್ರ ಮುಂದಿನ ಕಿಮೊ ನೀಡಲಾಗುವುದು. ಇಂಜೆಕ್ಷನ್‌ಗೆ ದೇಹ ಸಿದ್ಧವಾಗಿರಬೇಕು ಎನ್ನಲೂ ಕಾರಣವಿದೆ. ಒಂದು ಕಿಮೊ ಇಂಜೆಕ್ಷನ್‌ ದೇಹ ಸೇರಿದಾಗ ಅದು ದೇಹದ ಎಲ್ಲ ಜೀವಕೋಶಗಳ ಮೇಲೆ ದಾಳಿಯಿಡಲಿದೆ. ಇದು ಕ್ಯಾನ್ಸರ್‌ ಜೀವಕೋಶ, ಇದು ಒಳ್ಳೆಯ ಜೀವಕೋಶ ಎಂದೆಲ್ಲ ಹೆಕ್ಕಿ ಕೊಲ್ಲಲು ಹೋಗದು. ಒಟ್ಟಿನಲ್ಲಿ ಅದರ ಕೆಲಸವೆಂದರೆ ಎಲ್ಲ ಜೀವಕೋಶಗಳನ್ನು ಕೊಲ್ಲುವುದು. ಮೆದುಳಿನ ಮುಖ್ಯ ನರಸಮೂಹದ ವ್ಯವಸ್ಥೆ ಮೇಲೆ ಪರಿಣಾಮವುಂಟು ಮಾಡುವುದರಿಂದ ರೋಗಿ ಮಾನಸಿಕವಾಗಿ ಜರ್ಜರಿತರಾಗುವರು. ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕುಂದಿ ದೇಹ ತೀರಾ ನಿತ್ರಾಣಗೊಂಡು ರೋಗಿ ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿ ಹೋಗುವರು. 21 ದಿನಗಳ ಅವಧಿಯಲ್ಲಿ ಮತ್ತೆ ಹೊಸ ಜೀವಕೋಶಗಳ ಹುಟ್ಟಿನಿಂದ ಪುನಶ್ಚೇತನ ಪಡೆದು ಮತ್ತೆ ಕಿಮೊ ಇಂಜೆಕ್ಷನ್‌ಗೆ ಸಜ್ಜುಗೊಳ್ಳುವರು. ಆದರೆ ಈ ಪ್ರಕ್ರಿಯೆ ಎಲ್ಲ ರೋಗಿಗಳಿಗೂ ಅನ್ವಯವಾಗದು. ಹೆಚ್ಚಿನ ರೋಗಿಗಳ ದೇಹ ಮುಂದಿನ ಇಂಜೆಕ್ಷನ್‌ ಪಡೆದುಕೊಳ್ಳುವಷ್ಟರ ಮಟ್ಟಿಗೆ ಸಜ್ಜಾಗಲು ಹಿನ್ನಡೆಯಾಗಬಹುದು. ಇದೇ ಕಾರಣಕ್ಕೆ ಕಿಮೊಗೆ ದೇಹ ಸಿದ್ಧವಿದ್ದರೆ ಎಂಬ ಪದವನ್ನು ಬಳಸಿದ್ದು. ಕಿಮೊ ನಂತರ ಶಸ್ತ್ರಚಿಕಿತ್ಸೆ. ಆನಂತರ ರೇಡಿಯೊಥೆರಪಿ.

ರೇಡಿಯೊ ಥೆರಪಿ ಜೊತೆ ಜೊತೆಗೆ ಮತ್ತೆ 18 ವಿವಿಟ್ರಾ ಇಂಜೆಕ್ಷನ್‌ ಪ್ರತಿ 21 ದಿನಗಳಿಗೊಮ್ಮೆ. ಒಟ್ಟಿನಲ್ಲಿ ಒಂದೂವರೆ ವರ್ಷದ ಸುದೀರ್ಘ ಚಿಕಿತ್ಸೆ ಜೊತೆಗೆ ಒಟ್ಟೂ 5 ವರ್ಷಗಳ ವರೆಗೆ ಹಾರ್ಮೋನ್ ಗುಳಿಗೆ ಸೇವನೆ ನನ್ನ ಚಿಕಿತ್ಸಾ ಪ್ಲಾನ್‌ನಲ್ಲಿ ಸೇರಿತ್ತು.

ಅಲ್ಲಿವರೆಗೂ ಮೊದಲು ಸರ್ಜರಿ ಮಾಡಿ, ಸ್ತನವನ್ನು ಸಂಪೂರ್ಣವಾಗಿ ತೆಗೆದು ನಂತರ ಕಿಮೊ ಇಂಜೆಕ್ಷನ್‌ ಕೊಡಬಹುದು ಎಂಬ ಊಹೆ ನನ್ನದಾಗಿತ್ತು. ಆದರೆ ಆ ಊಹೆ ತಪ್ಪಾಗಿತ್ತು. ಕಿಮೊ ಮೂಲಕ ಕ್ಯಾನ್ಸರ್‌ ಗಡ್ಡೆಯ ಗಾತ್ರ ಕುಗ್ಗಿಸಿ, ಶಸ್ತ್ರಚಿಕಿತ್ಸೆ ಮೂಲಕ ಗಡ್ಡೆಯನ್ನು ತೆಗೆಯುವುದು ಚಿಕಿತ್ಸೆಯ ಉದ್ದೇಶ. ಆದರೂ ಮನಸ್ಸಲ್ಲಿ ಮೂಡುವ ಗೊಂದಲಗಳನ್ನು ಪರಿಹರಿಸಿಕೊಳ್ಳುವುದು ಅಗತ್ಯ ಎಂದು ಚಿಕಿತ್ಸೆ ಮುಗಿದ ಮೇಲೂ 18 ಇಂಜೆಕ್ಷನ್‌ ಮತ್ಯಾಕೆ ಎಂದು ಡಾಕ್ಟರನ್ನೇ ಕೇಳಿದೆ.

‘ಬಯಾಪ್ಸಿ ರಿಪೋರ್ಟ್‌ನಲ್ಲಿ ಕ್ಯಾನ್ಸರ್‌ ಶೇ 66ರಷ್ಟು ಮತ್ತೆ ಮರುಕಳಿಸುವ ಸಾಧ್ಯತೆ ಇರೋದ್ರಿಂದ ಮತ್ತೆ ಒಂದು ವರ್ಷದವರೆಗೆ 18 ಇಂಜೆಕ್ಷನ್‌ ತೆಗೆದುಕೊಳ್ಳಬೇಕಾಗುತ್ತದೆ. ಒಟ್ಟೂ ಒಂದೂವರೆ ವರ್ಷದ ಚಿಕಿತ್ಸೆ. 2016ರ ಡಿಸೆಂಬರ್‌ನಲ್ಲಿ ಚಿಕಿತ್ಸೆ ಆರಂಭವಾದರೆ 2018ರ ಜೂನ್‌ವರೆಗೆ ಚಿಕಿತ್ಸೆ ನಡೆಯಲಿದೆ. ಇದೊಂದು ಸುದೀರ್ಘ ಚಿಕಿತ್ಸೆ ಗಡಿಬಿಡಿ ಮಾಡೋ ಹಾಗಿಲ್ಲ’ ಎಂಬ ಡಾಕ್ಟರ್‌ ಮಾತಿಗೆ ತಲೆಯಾಡಿಸಿದೆ. ಹಾಗಾದ್ರೆ ಡಿಸೆಂಬರ್‌ 2ರಿಂದ ಕಿಮೊ ಶುರು ಮಾಡೋಣ ಅಂದರು. ಅದಕ್ಕೂ ಹೂಂ ಅಂಥ ತಲೆಯಾಡಿಸಿ ಮನೆಗೆ ಬಂದಾಯ್ತು.

ಡಿಸೆಂಬರ್‌ 2, ಶುಕ್ರವಾರ. ಹೊಟ್ಟೆಯಲ್ಲೊಂಥರಾ ತಳಮಳ, ಏನೋ ತವಕ, ಒಂದಷ್ಟು ಕುತೂಹಲವೂ ತುಂಬಿಕೊಂಡಿತ್ತು. ಬೆಳಿಗ್ಗೆ 9.30ಕ್ಕೆ ಎಚ್‌ಸಿಜಿ ಗೆ ಬಂದಾಯ್ತು. ಕ್ಯಾನ್ಸರ್‌ ಜೊತೆಗಿನ ಹೋರಾಟದಲ್ಲಿ ನನ್ನ ಮೊದಲ ವೈದ್ಯಕೀಯ ಆಯುಧ ಪ್ರಯೋಗ ಅದಾಗಿತ್ತು. ಅಂದರೆ ಮೊದಲ ಕಿಮೊ. ಅಸಲಿಗೆ ಕಿಮೊಥೆರಪಿ ಹೇಗಿರುತ್ತೆ ಅನ್ನೋದೆ ನಂಗೊತ್ತಿರಲಿಲ್ಲ. ಅದಕ್ಕೆ ಕುತೂಹಲ. ಆಸ್ಪತ್ರೆಯಲ್ಲಿ ಕೂಡ್ರಲು ಒಂದೂ ಸೀಟು ಖಾಲಿ ಇರ್ಲಿಲ್ಲ. ಹೋಗ್ಲಿ ನಿಲ್ಲೋಕು ಜಾಗ ಇರ್ಲಿಲ್ಲ; ಅಷ್ಟು ಭರ್ತಿಯಾಗಿತ್ತು. ಕೆಲವರು ಕಾಲಿನ ಮಂಡಿಯೊಳಗೆ ಮುಖ ಹುದುಗಿಸಿಕೊಂಡು ಕುಳಿತ್ತಿದ್ದರೆ, ಕೆಲವರು ನಿಸ್ತೇಜ ಮುಖದೊಂದಿಗೆ ಕುಳಿತಿದ್ದರು. ತಲೆಯಲ್ಲಿ ಕೂದಲು ಉದುರಿದ ಕಾರಣಕ್ಕೆ ಶಾಲು ಸುತ್ತಿ ಕುಳಿತ ಹೆಂಗಸರೇ ಹೆಚ್ಚಿದ್ದರು. ಮೂಗಿನೊಳಗೆ ಕೊಳವೆ ತೂರಿಸಿಕೊಂಡ ಗಂಡಸರೂ ಕುಳಿತಿದ್ದರು.

ಇದನ್ನೂ ಓದಿ: PV Web Exclusive: ಕೈ ಹಿಡಿದಳು ಗಾಯತ್ರಿ

ಯಪ್ಪಾ ಯಪ್ಪಾ, ಕ್ಯಾನ್ಸರ್‌ಗೆ ಮನುಷ್ಯರ ಮೇಲೆ ಅದೆಷ್ಟು ಪ್ರೀತಿ ಬಂದುಬಿಟ್ಟಿದೆಯಪ್ಪ ಅಂತ ಮನದಲ್ಲೇ ಅಂದ್ಕೊಂಡೆ. ಕಾದು ಕಾದು ಸಾಕಾಗಿತ್ತು. ಕಾರಣ ನನ್ನ ಟೋಕನ್‌ ನಂಬರ್‌ 16 ಆಗಿತ್ತು. ಎಚ್‌ಸಿಜಿಯಲ್ಲಿ ಮೊದಲ ಅಪಾಯಿಂಟ್‌ಮೆಂಟ್‌ ಆಗಿದ್ದರಿಂದ ನನ್ನ ಪಾಳಿ ಅಷ್ಟು ದೂರ ಹೋಗಿತ್ತು. ಬೆಳಿಗ್ಗೆ 10ಕ್ಕೆ ಬಂದು ಟೋಕನ್‌ ತಗೊಂಡ್ರೆ ಮತ್ತಿನ್ನೇನು ಆಗೋದು. ನೋಡಿದ್ರೆ ಟೋಕನ್‌ ತಗೋಳೋಕೆ ಅಂತಾನೇ ಬೆಳಿಗ್ಗೆ 7ಕ್ಕೆ ಬಂದು ಸಾಲು ಹಚ್ಚೋದು ನಂತ್ರ ತಿಳಿತು. ಮುಂದಿನ ಬಾರಿ 8ಕ್ಕೆ ಬಂದು ಟೋಕನ್‌ ತಗೊಂಡ್ರೆ ಆಯ್ತು ಅಂತ ಅಂದ್ಕೊಳ್ಳೊವಾಗಲೇ ‘ಟೋಕನ್‌ ನಂಬರ್‌ ಒನ್‌ ಸಿಕ್ಸ್‌, ಒಂದು ಆರು’ ಎಂಬ ಅನೌನ್ಸ್‌ಮೆಂಟ್‌ ಕೇಳುತ್ತಲೇ ಎದ್ದು ನಿಂತೆ.

ಸಿಸ್ಟರ್‌ ಬಂದು ಡಾಕ್ಟರ್‌ ಕ್ಯಾಬಿನ್‌ಗೆ ಕರೆದ್ರು. ಡಾ.ಪ್ರಸಾದ ರಿಪೋರ್ಟ್‌ನ್ನ ಮತ್ತೊಮ್ಮೆ ನೋಡಿ, ಕಿಮೊ ಸ್ಟಾರ್ಟ್‌ ಮಾಡೋಣು ಅಂದ್ರು. ನಾನು ಓಕೆ ಅಂದೆ. ಇವತ್ತು ಅಡ್ಮಿಟ್‌ ಆಗ್ಬಿಡಿ. ಫಸ್ಟ್‌ ಕಿಮೊ ಆಗಿರೋದ್ರಿಂದ ವಾಂತಿ ಆಗುತ್ತೆ. ತಲೆ ಸುತ್ತು ಬರುತ್ತೆ. ನಾಲ್ಕು ಕಿಮೊ ಜೊತೆ ವಿವಿಟ್ರಾ (ಕ್ಯಾನ್ಸರ್‌ ಮರುಕಳಿಸದಂತೆ ನೀಡುವ ಇಂಜೆಕ್ಷನ್‌) ಕೂಡ ಇರುತ್ತೆ. ಸೋ ಬೆಳಿಗ್ಗೆ ಮನೆಗೆ ಹೋಗ್ಬಹುದು. ನಂತರದ ಕಿಮೊ ಎಲ್ಲ ಡೇಕೇರ್‌ ಆಗಿರಲಿದೆ’ ಅಂದ್ರು.

ಒಂದು ರೂಮ್‌ನಲ್ಲಿ ಕಿಮೊ ಇಂಜೆಕ್ಷನ್‌ಗೆ ರೆಡಿ ಮಾಡಿದ್ರು. ಬ್ಲಡ್‌ ಟೆಸ್ಟ್‌ಗೆ ಒಂದಷ್ಟು ರಕ್ತ ಬೇಕಿತ್ತು. ಸಿಸ್ಟರೊಬ್ಬರು ಸಿರಿಂಜ್‌ ಚುಚ್ಚಿ ಬ್ಲಡ್‌ ತೆಗೆದು ಲ್ಯಾಬ್‌ಗೆ ಕಳುಹಿಸಿದರು. ಇನ್ನೊಬ್ಬ ಸಿಸ್ಟರ್‌ ಬಂದವರೇ ಬಲಗೈ ನರ ಹಿಡಿದು ಕ್ಯಾನುಲಾ ಚುಚ್ಚಿದ್ರು. ಹುಂ... ಒಂದ್‌ ಕ್ಷಣ ಕರುಳು ಹಿಂಡಿದಂತಾಯ್ತು. ಹಾಗೂ ಹೀಗೂ ಮಧ್ಯಾಹ್ನ 3.30ಕ್ಕೆ ಒನ್‌ ಬೈ ಒನ್‌ ಇಂಜೆಕ್ಷನ್‌ ಕ್ಯಾನುಲಾ ಮೂಲಕ ನನ್ನ ದೇಹವನ್ನು ಪ್ರವೇಶಿಸಲು ಆರಂಭಿಸಿತು. ಮೊದಲಿಗೆ ಗ್ಲುಕೋಸ್‌ ಏರಿಸಿದ್ದು. ಅದಿನ್ನೂ ಪೂರ್ತಿ ಆಗಿರ್ಲಿಲ್ಲ. ಸಿಸ್ಟರ್‌ ಬಂದು ನಿಮ್ಗೆ ರೈಟ್‌ ಸೈಡ್‌ ಆಪರೇಟಿಂಗ್‌ ಅಲ್ವಾ ಅಂದ್ರು. ಹೌದು ಅಂದೆ. ಹಾಗಾದ್ರೆ ಬಲಗೈಗೆ ಇಂಜೆಕ್ಷನ್‌ ಬೇಡ. ಎಡಗೈಗೆ ಕ್ಯಾನುಲಾ ಹಾಕ್ತಿವಿ ಅನ್ನಬೇಕೆ! ಅಯ್ಯೋ ಅಂತ ಮನಸ್ಸು ಮರುಗಿತು. ಒಂದು ಸರ್ತಿ ಚುಚ್ಚೋವಾಗ್ಲೆ ಕಣ್‌ಮುಚ್ಚಿತ್ತು. ಇನ್ನು ಈ ಕೈಗೂ ಚುಚ್ಕೊಬೇಕಾ. ಇದನ್ನೆಲ್ಲಾ ಮೊದಲೇ ಯೋಚಿಸಿ ಮಾಡೋದಲ್ವಾ..? ಮಾತು ಮನಸ್ಸಿನಿಂದ ನಾಲಿಗೆವರೆಗೂ ಬಂದರೂ ಹೊರಬರಲಿಲ್ಲ. ಒಳಗೊಳಗೆ ಸಿಟ್ಟು ಕೂಡ ಒತ್ತರಿಸಿ ಬಂತು. ಆಯ್ತು ಚುಚ್ಚಿ ಎಂದು ಎಡಗೈ ಮುಂದೆ ಚಾಚಿದೆ.

‘ತುಂಬಾ ಸೆನ್ಸೆಟಿವ್‌ ಇದೆ ನರಗಳು. ಸಿಗ್ತಾನೆ ಇಲ್ಲ ನೋಡಿ...’ ಎನ್ನುತ್ತಲೇ ಮೂರ್ನಾಲ್ಕು ಕಡೆ ಚುಚ್ಚಿ ಚುಚ್ಚಿ ಅಂತೂ ಒಂದು ಕಡೆ ಕ್ಯಾನುಲಾವನ್ನು ತೂರಿಸಿದ್ರು. ಅಬ್ಬಾ ಅಂದ್ಕೊಂಡೆ. ಇಂಜೆಕ್ಷನ್‌ ಒಂದೊಂದೇ ಬಾಟಲ್‌ ಖಾಲಿಯಾಗ್ತಿತ್ತು. ಕಿಮೊ ಇಂಜೆಕ್ಷನ್‌ ಬಾಟಲಿ ಸ್ಟ್ಯಾಂಡ್‌ ಏರಿತ್ತು. 2 ಸೆಕೆಂಡ್‌ಗೆ ಒಂದು ಹನಿಯಂತೆ ನಿಧಾನವಾಗಿ ಹನಿಹನಿ ಕಿಮೊ ಇಂಜೆಕ್ಷನ್‌ ನನ್ನ ದೇಹ ಸೇರುತ್ತಿತ್ತು. ಸ್ವಲ್ಪ ಹೊತ್ತಿನ ನಂತರ ನರ್ಸ್‌ ಒಬ್ಬರು ಬಂದು, ‘ಏನಾದ್ರು ತ್ರಾಸು ಅನ್ನಿಸ್ತಿದೆಯಾ’ ಅಂದ್ರು. ಏನಿಲ್ಲ. ಚೆನ್ನಾಗಿದ್ದೇನೆ ಎಂದೆ. ತಲೆಯೆನಾದ್ರು ಸುತ್ತುತ್ತಿದ್ಯಾ ಅಂದ್ರು. ಇಲ್ಲ ಅಂದೆ. ಒಂದು ತಾಸು ಬಿಟ್ಟು ಇಬ್ಬರು ಸಿಸ್ಟರ್ಸ್‌ ಬಂದ್ರು. ಅದೇ ಪ್ರಶ್ನೆ ರಿಪೀಟ್‌. ನಾನು ಚೆನ್ನಾಗೇ ಇದ್ದೀನಿ... ಅಂತ ನಗುತ್ತ ತಲೆಯಾಡಿಸಿದೆ. ಅವರಿಬ್ಬರು ಮುಖಮುಖ ನೋಡ್ಕೊಂಡು ನಕ್ಕೊತ ಹೋದ್ರು. ಹೀಗೆ ಇಂಜೆಕ್ಷನ್‌ ಮುಗಿವಲ್ಲಿವರೆಗೆ ರಾತ್ರಿ 10.30 ಆಗಿತ್ತು. ಅಂದ್ರೆ ಬರೋಬ್ಬರಿ ಏಳು ತಾಸು. ಊಟಾ ಮಾಡಿದೆ. ಸೇಬು ತಿಂದೆ. ಇಂಜೆಕ್ಷನ್‌ ಪವರ್‌ಗೆ ವಾಂತಿ ಆಗುತ್ತೆ ಅಂದಿದ್ರಲ್ಲ ಡಾಕ್ಟರು; ಆಗಬಹುದು ಅನ್ನೋ ನಿರೀಕ್ಷೆಯಲ್ಲೇ ವಾಶ್‌ರೂಮ್‌ ಹೋದೆ. ಹಾಗೇನು ಆಗ್ಲೇ ಇಲ್ಲ. ಮತ್ತೆ ರಾತ್ರಿ ಪಾಳಿ ಸಿಸ್ಟರ್‌ ಬಂದು ಹೇಗಿದ್ದೀರಿ ಅಂತ ಕೇಳಿದ್ರು. ಚೆನ್ನಾಗೇ ಇದ್ದೀನಿ ಅಂದೆ.

ನಾವಿದ್ದ ರೂಮ್‌ನಲ್ಲೇ ಬಾಗಲಕೋಟೆಯಿಂದ ಬಂದಿದ್ದ ಅಜ್ಜಿಯೊಬ್ರು ಮೊದಲೇ ಅಡ್ಮಿಟ್‌ ಇದ್ದಿದ್ರು. ಅವರಿಗೂ ಸುಮಾರು ಕಿಮೊ ಆಗಿತ್ತು. ಆದರ ಅಡ್ಡ ಪರಿಣಾಮ ಕಾಲು ನಡೆಯಲಾಗದಷ್ಟು ಬಾತುಕೊಂಡಿದ್ದರಿಂದ ಅವರಿಗೂ ಸಲೈನ್‌ ಏರಿಸಿದ್ರು. ಪಾಪ ಅಜ್ಜಿ ಅವರ ಅನುಭವ ಹೇಳಿಕೊಳ್ಳಲು ಶುರು ಮಾಡಿತು. ಕಣ್ಣೀರು ಹಾಕ್ತಿತ್ತು. ಅದು ಕಾಯಿಲೆಯನ್ನು ಮನಸ್ಸಿಗೆ ಹಚ್ಚಿಕೊಂಡು ಬಿಟ್ಟಿದೆ ಎಂಬುದು ಅವರಾಡುವ ಮಾತಿನಲ್ಲೇ ಗೊತ್ತಾಯ್ತು. ‘ನಿಮ್ಗೂ ಸಣ್ಣ್‌ ವಯಸ್ಸಿಗೇ ಈ ಕಾಯಿಲೆ ಬಂತಾ. ಯಾರಿಗೂ ಬರಬಾರದಪ್ಪ ಈ ಕಾಯಿಲೆ’ ಎಂದು ನನ್ನ ನೋಡಿ ಮರುಕ ಪಟ್ಟರು.

‘ಅಜ್ಜಿ ಇದಕ್ಕೆಲ್ಲ ಹೆದರ್ಕೊಬಾರ್ದು. ಎಲ್ಲ ಗುಣ ಆಗತ್ತೆ. ಧೈರ್ಯದಿಂದ ಇರಬೇಕಷ್ಟೆ, ಏನೂ ಆಗಲ್ಲ’ ಎಂದು ನಾನೇ ಸಮಾಧಾನ ಹೇಳಿದೆ. ಅಷ್ಟಕ್ಕೆ ಅಜ್ಜಿ ಎದ್ದು ಕೂತು ಕಥೆ ಹೊಡಲಿಕ್ಕೆ ಶುರು ಮಾಡೋದೆ! ನನಗೋ ನಿದ್ದೆ ಎಳಿತಿತ್ತು. ಹಗಲೆಲ್ಲ ನನ್ ಜೊತೆಯಿದ್ದ ಮಾಮಿಯನ್ನ ಮನೆಗೆ ಕಳುಹಿಸಿದ ಗಿರೀಶ ನನ್ನ ಜೊತೆ ಉಳಿದ್ರು. ನಿದ್ದೆ ಬಂದರೂ ನಡುನಡುವೆ ಎಚ್ಚರವಾಗಿ ಅಂತೂ ಇಂತು ಬೆಳಗಾಯಿತು. ಬೆಳಿಗ್ಗೆ 6ಕ್ಕೆ ಜಾಗ ಖಾಲಿ ಮಾಡಿದೆವು. ಸ್ಕೂಟರ್‌ ಏರಿದ ಮೇಲೆ ಐದೇ ನಿಮಿಷ; ಮನೆಗೆ ಬಂದಾಯ್ತು.

PV Web Exclusive| ಕೈ ಹಿಡಿದಳು ಗಾಯತ್ರಿ 1| ಮಡುಗಟ್ಟಿದ ದುಗುಡಭಾವ

PV Web Exclusive| ಕೈ ಹಿಡಿದಳು ಗಾಯತ್ರಿ 2| ಮೆಮೊಗ್ರಾಂ, ಸ್ಕ್ಯಾನಿಂಗ್‌ ಪುರಾಣ ಏನ್‌ ಕೇಳ್ತಿರಿ...

PV Web Exclusive |ಕೈ ಹಿಡಿದಳು ಗಾಯತ್ರಿ 3| ಯಾರ‍್ರೀ ‍ಪೇಷಂಟ್‌; ಎಲದಾರ್‍ರೀ...

PV Web Exclusive| ಕೈ ಹಿಡಿದಳು ಗಾಯತ್ರಿ 4|  ಕೈ ಹಿಡಿದಳು ಗಾಯತ್ರಿ

PV Web Exclusive| ಕೈ ಹಿಡಿದಳು ಗಾಯತ್ರಿ 5| ಪೆಟ್ (PET) ಸ್ಕ್ಯಾನ್‌ನ ವಿಭಿನ್ನ ಅನುಭವ

PV Web Exclusive| ಕೈ ಹಿಡಿದಳು ಗಾಯತ್ರಿ 7| ಕೈ ಹಿಡಿದಳು ಗಾಯತ್ರಿ: ದೇಹ ಸೇರಿತು ಚೊಚ್ಚಲ ಕಿಮೊ ಹನಿ

PV Web Exclusive| ಕೈ ಹಿಡಿದಳು ಗಾಯತ್ರಿ 8| ಕೇಶ ರಾಶಿಯ ನಾಮಾವಶೇಷ

PV Web Exclusiveಕೈ ಹಿಡಿದಳು ಗಾಯತ್ರಿ 9 | ಕ್ಯಾನ್ಸರ್ ಜೊತೆಗೊಂದು ಪಯಣ 9: ಸಾಥ್‌ ನೀಡಿದ ಸೋಷಿಯಲ್‌ ಮೀಡಿಯಾ

PV Web Exclusive| ಕೈ ಹಿಡಿದಳು ಗಾಯತ್ರಿ 10| ಕಿಮೊ ಹಾದಿಯಲ್ಲಿ ಮುಗಿದ ಅರ್ಧ ಪಯಣ 

PV Web Exclusive| ಕೈ ಹಿಡಿದಳು ಗಾಯತ್ರಿ 11| ನರಗಳ ಹಾದಿಯಲ್ಲಿ ಸುಡುವ ಕಿಮೊ

PV Web Exclusive|ಕೈ ಹಿಡಿದಳು ಗಾಯತ್ರಿ 12| ಕಿಮೊ ಕಾಂಡದ ಅಂತಿಮ ಅಧ್ಯಾಯ

PV Web Exclusive|ಕೈ ಹಿಡಿದಳು ಗಾಯತ್ರಿ 13| ಐಸಿಯುನಲ್ಲಿ ಕಳೆದ ಘೋರ ರಾತ್ರಿ

PV Web Exclusive|ಕೈ ಹಿಡಿದಳು ಗಾಯತ್ರಿ 14| ಕತ್ತರಿಸಿದ್ದ ಜಾಗ ಮುಚ್ಚಿದ್ದವು 80 ಪಿನ್‌ಗಳು!

PV Web Exclusive|ಕೈ ಹಿಡಿದಳು ಗಾಯತ್ರಿ 15| ಕ್ಯಾನ್ಸರ್‌ ಜೊತೆಗೆ ಆತ್ಮವಿಶ್ವಾಸದ ನಡೆ

(ಮುಂದಿನ ವಾರ: ಕ್ಯಾನ್ಸರ್‌ v/s ಕಿಮೊ=ಏನ್‌ ಯಾತನೆ ಅಂತೀರಿ.. )

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು