ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಚಳಿಗಾಲದ ಆಲಸ್ಯಕ್ಕೆ ಆಹಾರವೇ ಮದ್ದು

Last Updated 24 ನವೆಂಬರ್ 2020, 8:20 IST
ಅಕ್ಷರ ಗಾತ್ರ

ಇತ್ತೀಚಿನವರೆಗೂ ಸುರಿಯುತ್ತಿದ್ದ ಮಳೆ ಸದ್ಯ ಬಿಡುವು ಕೊಟ್ಟಿದ್ದು, ಚಳಿ ಮೆಲ್ಲಗೆ ಆ ಜಾಗವನ್ನು ಆಕ್ರಮಿಸಿಕೊಳ್ಳುತ್ತಿದೆ. ಮಲೆನಾಡಿನ ಭಾಗಗಳಲ್ಲಂತೂ ಮುಂಜಾನೆ ಮತ್ತು ಸಂಜೆ ಮುಸುಕುವ ಕಾವಳ, ಉಸಿರು ಹೊರ ಚೆಲ್ಲಿದಾಗ ಹೊಮ್ಮುವ ಹೊಗೆ ಪುಳಕ ಹುಟ್ಟಿಸಿದರೂ, ಚುಮುಚುಮು ಚಳಿ, ಹೊಟ್ಟೆಯೊಳಗಿಂದ ಶುರುವಾಗುವ ನಡುಕ ಕೂತಲ್ಲೇ ಕೂರುವಂತಹ ಜಡತ್ವ ಮೂಡಿಸಿಬಿಡುತ್ತದೆ. ಸುತ್ತಲಿನ ಪ್ರಪಂಚವೇ ಚಳಿಗೆ ಮುದುಡಿದಂತೆ ಭಾಸವಾಗಿ, ಸುದೀರ್ಘ ರಾತ್ರಿ ಕೂಡ ಈ ಆಲಸ್ಯಕ್ಕೆ ಸಾಥ್‌ ನೀಡುವಂತಿದೆ.

ಆದರೆ ಪ್ರಕೃತಿಯ ಬದಲಾವಣೆಗೆ ಹೊಂದಿಕೊಳ್ಳುತ್ತಲೇ ಈ ಆಲಸ್ಯವನ್ನೂ ಕೊಡವಿಕೊಂಡು ಓಡಾಡುವುದರಿಂದ ನಮ್ಮೊಳಗಿರುವ ಶಕ್ತಿಗೆ ಚೇತನ ನೀಡಲು ಸಾಧ್ಯ. ಈ ಚಲನಶೀಲತೆಗೆ ನಾಂದಿ ಹಾಡಲು, ನಿಸರ್ಗದ ಬದಲಾವಣೆಗೆ ಹೊಂದಿಕೊಳ್ಳಲು ಆಹಾರ, ವ್ಯಾಯಾಮ ಮುಂಚೂಣಿಯಲ್ಲಿ ನಿಲ್ಲುತ್ತವೆ. ಅಂದರೆ ಋತು ಬದಲಾದಂತೆ ನಮ್ಮ ಜೀವನಶೈಲಿಯಲ್ಲೂ ಬದಲಾವಣೆ ಮಾಡಿಕೊಳ್ಳಬೇಕು. ಇದರಿಂದ ಸಮತೋಲನದಲ್ಲಿ ಕೊಂಚ ಏರುಪೇರಾದರೂ ಸುಧಾರಿಸಿಕೊಳ್ಳಲು ಸಾಧ್ಯ.

‘ಆಯುರ್ವೇದದ ಪ್ರಕಾರ ಚಳಿಗಾಲವೆಂದರೆ ತೀವ್ರ ಕಫ ದೋಷದ ಜೊತೆಗೆ ವಾತವನ್ನೂ ಕೆರಳಿಸುವ ಕಾಲ. ಶೀತ, ಬಿಸಿಲಿನ ಕೊರತೆ, ಒಣ ಹವೆಯಿಂದಾಗಿ ದೇಹದ ಪ್ರಕೃತಿಯಲ್ಲೂ ಏರುಪೇರಾಗುವುದು ಸಹಜ. ಇದರಿಂದಾಗಿ ಕಫ ದೋಷ ಜಾಸ್ತಿಯಾಗುತ್ತದೆ. ಹಾಗೆಯೇ ವಾತ ದೋಷವೂ ತೀವ್ರವಾಗಿ ಕಾಡುತ್ತದೆ’ ಎನ್ನುತ್ತಾರೆ ಆಯುರ್ವೇದ ವೈದ್ಯರಾದ ಡಾ. ಎಸ್‌. ಸುಜಾತಾ.

ನಮ್ಮ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡು ಚಳಿಗಾಲದಲ್ಲಾಗುವ ಆರೋಗ್ಯ ಸಮಸ್ಯೆಗಳಿಗೆ ಕಡಿವಾಣ ಹಾಕಬಹುದು. ಈ ಸಮಯದಲ್ಲಿ ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಿದರೆ ಆರೋಗ್ಯದಲ್ಲಿ, ದೇಹದ ತೂಕದಲ್ಲಿ ಸಮತೋಲನ ಸಾಧಿಸಬಹುದು.

ಚಳಿಗಾಲದಲ್ಲಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಸಮತೋಲಿತ ಆಹಾರದಲ್ಲಿ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಜೀರ್ಣಕ್ರಿಯೆಯನ್ನು ವ್ಯವಸ್ಥಿತವಾಗಿ ನಿರ್ವಹಿಸಿದರೆ ಇದು ಸಾಧ್ಯ ಎನ್ನುತ್ತಾರೆ ತಜ್ಞರು. ಈ ಸಮಯದಲ್ಲಿ ಜೀರ್ಣಕ್ರಿಯೆಯನ್ನು ಮಂದವಾಗಲು ಬಿಡದೆ ತುಪ್ಪ, ಬೆಣ್ಣೆ, ಆರೋಗ್ಯಕರ ಎಣ್ಣೆಯನ್ನು ಸೇವಿಸಬೇಕಾಗುತ್ತದೆ.

ಸಂಬಾರು ಪದಾರ್ಥಗಳು

ಚೆನ್ನಾಗಿ ಬೇಯಿಸಿದ, ಬಿಸಿ ಬಿಸಿ ಇರುವ, ಕೊಂಚ ಎಣ್ಣೆ ಜಾಸ್ತಿ ಹಾಕಿರುವ, ಸಂಬಾರು ಪದಾರ್ಥಗಳನ್ನು ಸೇರಿಸಿರುವ ಆಹಾರ ಸೇವನೆ ದೇಹಕ್ಕೆ ಹಿತ ಎನ್ನುತ್ತಾರೆ ತಜ್ಞರು. ಜೊತೆಗೆ ಸಾಮಾನ್ಯ ವಾತಾವರಣದ ಉಷ್ಣಾಂಶಕ್ಕಿಂತ ಹೆಚ್ಚು ಬಿಸಿಯಾಗಿರುವ ನೀರು, ಪೇಯಗಳನ್ನು ಕುಡಿದರೆ ಒಳಿತು. ತಣ್ಣನೆಯ, ಫ್ರಿಜ್‌ನಲ್ಲಿಟ್ಟ ಪದಾರ್ಥಗಳಿಂದ ದೂರವಿರಿ. ‘ನೀರಿಗೆ ತುಳಸಿ ಎಲೆ, ಶುಂಠಿ ಚೂರು, ಕೊಂಚವೇ ದಾಲ್ಚಿನ್ನಿ ಸೇರಿಸಿ ಕುದಿಸಿ. ಇದನ್ನು ಆಗಾಗ ಕುಡಿಯುತ್ತಿದ್ದರೆ ಕಫವನ್ನು ನಿವಾರಿಸಬಹುದು’ ಎನ್ನುತ್ತಾರೆ ಶಿರಸಿಯ ಗಿಡಮೂಲಿಕೆ ವೈದ್ಯರಾದ ಮಂಜುನಾಥ ವೈದ್ಯ.

ಮೂಲಂಗಿ, ಬೀಟ್‌ರೂಟ್‌ ಕ್ಯಾರಟ್‌ನಂತಹ ನೆಲದಡಿ ಬೆಳೆಯುವ ತರಕಾರಿ‌, ಪಾಲಕ್‌ ಮತ್ತು ಬಸಳೆ, ಈರುಳ್ಳಿ ಮೊದಲಾದವುಗಳನ್ನು ತಿನ್ನಬಹುದು. ಆದರೆ ಬೇಯಿಸಿ ತಿನ್ನುವುದನ್ನು ಮರೆಯಬೇಡಿ ಎಂದು ಎಚ್ಚರಿಸುತ್ತಾರೆ ತಜ್ಞರು. ಜೊತೆಗೆ ಈ ಕಾಲದಲ್ಲಿ ಬೆಳೆಯುವಂತಹ ತರಕಾರಿಗಳನ್ನು ಧಾರಾಳವಾಗಿ ಬಳಸಬಹುದು. ಹಾಗೆಯೇ ಸಂಬಾರು ಪದಾರ್ಥಗಳಾದ ಬೆಳ್ಳುಳ್ಳಿ, ಶುಂಠಿ, ಕಾಳು ಮೆಣಸು, ಅರಿಸಿನವನ್ನು ಅಡುಗೆಯಲ್ಲಿ ನಿತ್ಯ ಬಳಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಸಾಂಪ್ರದಾಯಿಕ ಆಹಾರ

ನಮ್ಮ ಸಾಂಪ್ರದಾಯಿಕ ಆಹಾರವನ್ನೇ ಬಳಸಿದರೆ ಉತ್ತಮ. ಕೆಂಪು ಅಕ್ಕಿಯ ಅನ್ನ, ಗೋಧಿಯ ಚಪಾತಿ, ಸಿರಿಧಾನ್ಯ ತಿನ್ನಬಹುದು. ಹೆಸರು ಬೇಳೆ, ತೊಗರಿ ಬೇಳೆಯ ತೊವೆಗೆ ತುಪ್ಪ, ಸ್ವಲ್ಪ ಲಿಂಬೆ ರಸ ಸೇರಿಸಿ ಅನ್ನದ ಜೊತೆ ಸವಿಯಬಹುದು. ಊಟ ಮಾಡುವಾಗ ಮೇಲೆ ಒಂದು ಚಮಚ ತುಪ್ಪ ಹಾಕಿಕೊಂಡರೆ ವಾತದಂತಹ ಬಾಧೆಗಳನ್ನು ದೂರ ಇಡಬಹುದು. ತರಕಾರಿ ಸೂಪ್‌ ಮಾಡಿಕೊಂಡು ಅದಕ್ಕೆ ಕಾಳು ಮೆಣಸಿನ ಪುಡಿ ಸೇರಿಸಿ ಕುಡಿಯಬಹುದು. ಮೊಟ್ಟೆಯನ್ನೂ ಈ ಸಮಯದಲ್ಲಿ ತಿನ್ನಬಹುದು. ಮಾಂಸಾಹಾರಿಗಳು ಕೋಳಿ ಮಾಂಸ, ಸಿಹಿ ನೀರಿನಲ್ಲಿರುವ ಮೀನು ಸೇವಿಸಬಹುದು.

ರಾತ್ರಿ ಮಲಗುವ ಮುನ್ನ ಬಿಸಿ ಹಾಲಿಗೆ ಚಿಟಿಕೆ ಅರಿಸಿನ ಮತ್ತು ಜಾಯಿಕಾಯಿ ಪುಡಿ ಸೇರಿಸಿ ಕುಡಿದರೆ ಗಾಢ ನಿದ್ರೆಗೆ ದಿವ್ಯ ಔಷಧ ಇದ್ದಂತೆ.

ಚಳಿಗಾಲದಲ್ಲಿ ಒಣ ಹಣ್ಣುಗಳನ್ನು ತಿಂದರೆ ದೇಹದ ಉಷ್ಣಾಂಶದ ಜೊತೆಗೆ ಸಾಕಷ್ಟು ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಗೋಡಂಬಿ, ಬಾದಾಮಿ, ಅಕ್ರೂಟ್‌, ಪಿಸ್ತಾ ಮೊದಲಾದವುಗಳನ್ನು ಸೇವಿಸಬಹುದು. ಚಳಿಗಾಲದಲ್ಲಿ ಮೊಸರಿನಂತಹ ತಣ್ಣನೆಯ ಪದಾರ್ಥ ತ್ಯಜಿಸಬೇಕಾಗುತ್ತದೆ. ಹಾಗೆಯೇ ಅತಿಯಾದ ಸಿಹಿ, ಕರಿದ ಪದಾರ್ಥಗಳನ್ನು ತಿನ್ನಬೇಡಿ ಎನ್ನುತ್ತಾರೆ ಡಾ. ಸುಜಾತಾ.

ಪ್ರತಿ ನಿತ್ಯ ಏಳುವ, ಮಲಗುವ, ತಿನ್ನುವ ಸಮಯವನ್ನು ಪಾಲಿಸಿ. ಸ್ನಾನಕ್ಕೆ ಮುನ್ನ ಬೆಚ್ಚಗಿನ ಎಣ್ಣೆಯ ಮಸಾಜ್‌ ಒಳ್ಳೆಯದು. ಹಗಲು ನಿದ್ರೆ ಒಳ್ಳೆಯದಲ್ಲಿ ಎನ್ನುತ್ತಾರೆ ತಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT