ಭಾನುವಾರ, ಆಗಸ್ಟ್ 14, 2022
21 °C

Pv Web Exclusive| ಗ್ಲುಟನ್‌ (gluten) ಅಂಟಿನ ನಂಟಿನೊಳಗೆ...

ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

Prajavani

ಬಹಳಷ್ಟು ಮಂದಿ ಗೋಧಿ, ಬಾರ್ಲಿ, ಜವೆ ಗೋಧಿ, ಗೋಧಿ ರವಾ, ಮೈದಾಗಳಿಂದ ಮಾಡಿದ ಆಹಾರ ಪದಾರ್ಥಗಳನ್ನು ತಿಂದಾಗ ಸಾಕಷ್ಟು ತೊಂದರೆ ಪಡುತ್ತಾರೆ. ಗ್ಲುಟನ್‌ (gluten) ಅಲರ್ಜಿ ಇದೆ ಎನ್ನುವುದೇ ಅವರ ಗಮನಕ್ಕೆ ಬಂದಿರುವುದಿಲ್ಲ. ಇಂಥ ಅನುಭವ ನಿಮಗೂ ಆಗಿರಬಹುದು...ನಿಮ್ಮ ಮನೆ ವೈದ್ಯರು ಕೂಡ ಈ ವಿಷಯದಲ್ಲಿ ನಿಮಗೆ ಸಲಹೆ ಕೊಡದೇ ಹೋಗಿರಬಹುದು. ‘ನೀವು ಭಾಳ ಸೆನ್ಸಿಟಿವ್. ಎಲ್ಲಾನೂ ಚೆನ್ನಾಗಿ ತಿನ್ನಿ’ ಅಂತ ಹೇಳಿ ನಿಮ್ಮನ್ನು ಸಾಗ ಹಾಕಿರುತ್ತಾರೆ. ಆದರೆ ಕಷ್ಟ ಪಡುವವರು ಮಾತ್ರ ನೀವಾಗಿರುತ್ತೀರಿ... ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸಿದ್ಧ ಆಹಾರ ಪದಾರ್ಥಗಳ ಮೇಲೆ ‘ಗ್ಲುಟನ್‌ ಫ್ರೀ‘ (gluten-free) ಎಂಬ ಬರಹವನ್ನು ಎದ್ದು ಕಾಣುವಂತೆ ಮುದ್ರಿಸಲಾಗುತ್ತಿದೆ...

* * *

‘ಚಪಾತಿ, ಪೂರಿ ತಿಂದ್ರೆ ಆಗಲ್ಲ ಡಾಕ್ಟ್ರೇ ಏನ್ ಮಾಡೋದ್ರಿ?’

‘ಹೌದೇನು? ಏನಾಗ್ತಾವ್ರೀ...’

‘ಅಲರ್ಜಿ ಆಗ್ತಾವ್ರೀ...ಮೊದಲೆಲ್ಲ ಏನೂ ಆಗ್ತಿರ್ಲಿಲ್ರೀ.....ನಾಲ್ಕು ವರ್ಷ ಆತು ನೋಡ್ರೀ ಹೀಗಾಗಿ’

‘ಅರೇ ಪೂರಿ, ಚಪಾತಿ ಎಲ್ಲಾರೂ ತಿಂತಾರಲ್ರೀ...ನಿಮ್ಮ ಹೊಟ್ಟಿ ಸರಿ ಇಲ್ಲ ಬಿಡ್ರಿ...’

–ನಮ್ಮ ಫ್ಯಾಮಿಲಿ ಡಾಕ್ಟ್ರ ಮುಂದೆ ಹಿಂದೊಮ್ಮೆ ಹಲುಬಿಕೊಂಡಾಗ ಅವರು ಹೀಗೆ ಹೇಳಿ ಸಾಗ ಹಾಕಿದ್ದರು.

ಇಂಥ ಅನುಭವ ನಿಮಗೂ ಆಗಿರಬಹುದು...

ಚಪಾತಿ ಮಾತ್ರವಲ್ಲ, ಗೋಧಿಯಿಂದ ಮಾಡಿದ ಆಹಾರ ಪದಾರ್ಥಗಳನ್ನು ತಿಂದರೆ ಆಗದವರು, ಪ್ರೋಟೀನ್ಸ್‌ ತೆಗೆದುಕೊಂಡರೆ ಆಗದವರು, ಮೊಟ್ಟೆ ತಿಂದರೆ ಆಗದವರು, ರಾಗಿ, ಜೋಳ, ಪಾಲಕ್‌ ಸೊಪ್ಪು, ಹರಿವೆ ಸೊಪ್ಪು ತಿಂದರೆ ಆಗದವರು, ದ್ರಾಕ್ಷಿ, ಮಾವಿನಹಣ್ಣು, ಪಪ್ಪಾಯಿ, ಸಪೋಟ, ಪೇರಲ, ಹಲಸಿನ ಹಣ್ಣು ತಿಂದರೆ ಆಗದವರು, ತಿಂದುಕೊಂಡು ಸಂಕಟ ಪಡುವವರು ನಮ್ಮ ನಡುವೆ ಸಾಕಷ್ಟಿದ್ದಾರೆ. ಇನ್ನು ಬ್ರೆಡ್‌, ಡೋನಟ್‌, ಕೇಕ್, ಪಿಜ್ಜಾ, ಕುಕೀಸ್, ಪಾಸ್ತಾ, ಚಿಪ್ಸ್ ಇತ್ಯಾದಿ ಆಹಾರ ಪದಾರ್ಥ ತಿಂದರೆ ಆಗದವರ ಪಟ್ಟಿ ಇನ್ನೂ ದೊಡ್ಡದು.

ಬಹಳಷ್ಟು ಸಲ ಇವೆಲ್ಲ ಒಂದು ಸಮಸ್ಯೆ ಎಂದುಕೊಳ್ಳದೇ, ‘ಎಲ್ಲೋ ಒಮ್ಮೆ ತಿಂತೀವಿ ಬಿಡ್ರೀ’ ಎಂದೋ, ಚೆನ್ನಾಗಿ ತಿಂದು ಆಮೇಲೆ... ‘ಅದ್ಯಾಕೋ ಹೊಟ್ಟೆ ಜಾಡಿಸ್ತು’ ಅಂದುಕೊಂಡು ಸುಮ್ಮನಾಗುವವರೇ ಹೆಚ್ಚು.

‘ಅಯ್ಯ ಬಿಡ್ರಿ, ಚೆನ್ನಾಗಿ ತಿನ್ನಬೇಕ್ರಿ, ಎಲ್ಲ ಸರಿ ಆಗ್ತದ್ರೀ...ನೀವು ಭಾಳ ಹೆದರ್ತೀರಾ ತಿನ್ನೋದಕ್ಕೆ’ ಅಂತ ಹೇಳುವ ಸಹೋದ್ಯೋಗಿಗಳು, ಸ್ನೇಹಿತರು, ನೆಂಟರು, ಅಕ್ಕಪಕ್ಕದ ಮನೆಯವರು ಎಲ್ಲೆಡೆ ಇದ್ದೇ ಇರ್ತಾರೆ. ಇನ್ನು ಬಹುತೇಕ ವೈದ್ಯರು ಕೂಡ ಇದನ್ನೆಲ್ಲ ಕಡೆಗಣಿಸುತ್ತಾರೆ. ಒಂದೋ ಅವರು ನಿಮ್ಮ ಮಾತನ್ನು ಕೇಳಿಸಿಕೊಳ್ಳುವಷ್ಟು ವ್ಯವಧಾನ ಅವರಿಗೆ ಇರುವುದಿಲ್ಲ. ಇಲ್ಲವೇ ದೇಹಕ್ಕೆ ಅಲರ್ಜಿ ಆಗುವ ಆಹಾರಗಳ ಬಗ್ಗೆ ಅವರಿಗೆ ಸ್ಪಷ್ಟತೆ ಇರುವುದಿಲ್ಲ.

‘ನೀವು ಭಾಳ ಸೆನ್ಸಿಟಿವ್. ಎಲ್ಲಾನೂ ಚೆನ್ನಾಗಿ ತಿನ್ನಿ’ ಅಂತ ಹೇಳಿ ನಿಮ್ಮನ್ನು ಸಾಗ ಹಾಕುತ್ತಾರೆ.

ಆದರೆ ವಿಷಯ ಅಷ್ಟು ಸರಳವಾಗಿರುವುದಿಲ್ಲ. ಗೋಧಿ, ಓಟ್ಸ್, ಬಾರ್ಲಿ, ಜವೆ ಗೋಧಿ ಮತ್ತು ಸಣ್ಣ ಗೋಧಿಗಳಿಂದ ಮಾಡಿರುವ ಆಹಾರಗಳನ್ನು ಸೇವನೆ ಮಾಡಿ ತೊಂದರೆ ಪಡುವ ಜನರಿಗಷ್ಟೇ ಗೊತ್ತು ಅದರ ಕಷ್ಟ ಏನೆಂದು? ಇವುಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಗ್ಲುಟನ್‌ (gluten) ಇರುವುದೇ ಇದಕ್ಕೆಲ್ಲ ಕಾರಣ. ಹೀಗಾಗಿಯೇ ವಿಶ್ವದೆಲ್ಲೆಡೆ ಕೆಲ ವರ್ಷಗಳಿಂದ ‘ಗ್ಲುಟನ್‌ ಫ್ರೀ ಡಯಟ್‌’ ಆರಂಭವಾಗಿದೆ. ಬಹಳಷ್ಟು ಆಹಾರ ಪದಾರ್ಥಗಳ ಮೇಲೆ ‘ಗ್ಲುಟನ್‌ ಫ್ರೀ‘ (gluten-free) ಎಂಬ ಬರಹವನ್ನು ಎದ್ದು ಕಾಣುವಂತೆ ಮುದ್ರಿಸಲಾಗುತ್ತಿದೆ.

ಚಯಾಪಚಯ ಕ್ರಿಯೆ ಸಮಸ್ಯೆ...

ಗ್ಲುಟನ್‌ ಸೆನ್ಸಿಟಿವಿಟಿಯಿಂದ ಕಾಣಿಸಿಕೊಳ್ಳುವ ಸಮಸ್ಯೆಗಳು ಹಲವು. ನಮ್ಮ ದೇಹದ ಮೆಟಾಬಾಲಿಸಂ (ಚಯಾಪಚಯ ಕ್ರಿಯೆ) ಸಮಸ್ಯೆಯಿದು. ಹಲವರ ಉದರಕ್ಕೆ ಆಹಾರ ಪದಾರ್ಥಗಳಲ್ಲಿರುವ ಗ್ಲುಟನ್‌ ಅಂಶವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಇರುವುದಿಲ್ಲ. ಇದರಿಂದಾಗಿಯೇ  ಇಂತಹ ಆಹಾರ ಪದಾರ್ಥಗಳನ್ನು ತಿಂದಾಗ ಸಮಸ್ಯೆ ತಲೆದೋರುತ್ತದೆ.

ಉದರ ಕಾಯಿಲೆ (celiac disease) ಇದ್ದವರಿಗಂತೂ ಗ್ಲುಟನ್‌ಯುಕ್ತ ಆಹಾರ ಪದಾರ್ಥಗಳಿಂದ ಆಗುವ ತೊದರೆ ಅಷ್ಟಿಷ್ಟಲ್ಲ. ಅವರ ಸಣ್ಣ ಕರುಳಿನಲ್ಲಿ ಈ ಆಹಾರ ಜೀರ್ಣವಾಗುವುದಿಲ್ಲ. ಇದು ಆಹಾರದಲ್ಲಿನ ಪೋಷಕಾಂಶಗಳನ್ನು ರಕ್ತಗತವಾಗಲು ಬಿಡುವುದಿಲ್ಲ. ದೇಹಕ್ಕೆ ಸೂಕ್ತ ಪೋಷಕಾಂಶಗಳು ಸಿಗಲೂ ಬಿಡದೇ ಹೈರಾಣಾಗಿ ದೇಹವೂ ಸಣ್ಣಗಾಗುತ್ತದೆ.

ಉದರ ಕಾಯಿಲೆ ಇರುವವರನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಗ್ಲುಟನ್‌ಯುಕ್ತ ಆಹಾರ ಸುರಕ್ಷಿತ ಎಂಬ ವಾದ ಕೆಲವರದ್ದು. ಮತ್ತೊಂದೆಡೆ, ಕೆಲವು ಆರೋಗ್ಯ ತಜ್ಞರು ಗ್ಲುಟನ್ ಹೆಚ್ಚಿನ ಜನರಿಗೆ ಹಾನಿಕಾರಕ ಎನ್ನುತ್ತಾರೆ. ಅಷ್ಟಕ್ಕೂ  ಅಂತಿಮವಾಗಿ ಇವೆಲ್ಲ ಆಯಾ ಆಹಾರವನ್ನು ಸೇವಿಸುವವರಿಗೆ ಅವರವರ ದೇಹದ ಮೇಲೆ ಆಗುವ ತೊಂದರೆಯಿಂದಲೇ ಕಂಡುಕೊಳ್ಳಬೇಕಾದ ಸತ್ಯ. ಒಬ್ಬರ ದೇಹಕ್ಕೆ ಒಗ್ಗುವುದು ಇನ್ನೊಬ್ಬರ ದೇಹಕ್ಕೆ ಒಗ್ಗಬೇಕು ಅಂತೇನೂ ಇಲ್ಲ.

ಗ್ಲುಟನ್ ಗೋಧಿ, ಬಾರ್ಲಿ, ಜವೆ ಗೋಧಿ, ಗೋಧಿ ರವಾ (semolina) ಸೇರಿದಂತೆ ಹಲವು ಧಾನ್ಯಗಳಲ್ಲಿ ನೈಸರ್ಗಿಕವಾಗಿ ಕಂಡುಬರುವ ಪ್ರೋಟೀನ್. ಇದು ಗೋಧಿಯಲ್ಲಿ ಅತಿ ಹೆಚ್ಚು. ಅಂಟು, ಜಿಗುಟಿನ ಗುಣಕ್ಕೆ ಗ್ಲುಟನ್‌ ಎಂಬ ಹೆಸರು ಬಂದಿದೆ. ಈ ಅಂಟು ಉದರ ಸಮಸ್ಯೆ ಇರುವವರಿಗೆ ಸುಲಭಕ್ಕೆ ಜೀರ್ಣವಾಗುವುದಿಲ್ಲ. ಹೀಗಾಗಿಯೇ ಅಂಥವರಿಗೆ ಗೋಧಿಯಿಂದ ಮಾಡಿದ ಆಹಾರಪದಾರ್ಥಗಳನ್ನು ತಿಂದಾಗ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಗ್ಲುಟನ್‌ನಲ್ಲಿರುವ ಎರಡು ಮುಖ್ಯ ಪ್ರೋಟೀನ್‌ಗಳು ಗ್ಲುಟೆನಿನ್ (glutenin) ಮತ್ತು ಗ್ಲಿಯಾಡಿನ್ (gliadin). ಹೆಚ್ಚಿನ ಆರೋಗ್ಯದ ದುಷ್ಪರಿಣಾಮಗಳಿಗೆ ಗ್ಲುಟನ್‌ನಲ್ಲಿರುವ ಗ್ಲಿಯಾಡಿನ್ ಕಾರಣವಾಗಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಉದರ ಸಮಸ್ಯೆ ಇದ್ದವರಿಗೆ ಗ್ಲುಟನ್‌ಯುಕ್ತ ಆಹಾರಗಳಿಂದ ಮೊದಲು ಸಮಸ್ಯೆ ಕಾಣಿಸಿಕೊಳ್ಳುವುದೇ ಹೊಟ್ಟೆಯಲ್ಲಿ. ಹೊಟ್ಟೆ ಉಬ್ಬರ, ಅಜೀರ್ಣ, ಮಲಬದ್ಧತೆ, ಅತಿಸಾರ, ಐಬಿಎಸ್‌, ಮಾಂಸಖಂಡಗಳಲ್ಲಿ ನೋವು ಬರುವುದು, ಕಾಲುನೋವು, ವಾತದ ಲಕ್ಷಣ (ಫೈಬ್ರೋಮಯಾಲ್ಜಿಯಾ), ಎಲುಬು ನೋವು, ಪದೇ ಪದೇ ತಲೆನೋವು, ಮೈಗ್ರೇನ್‌, ಸೈನಸ್‌, ದಣಿವು, ಕಬ್ಬಿಣಾಂಶದ ಕೊರತೆ, ತೂಕ ಏರದೇ ಇರುವುದು ಇಂತಹ ಹಲವಾರು ಸಮಸ್ಯೆಗಳೆಲ್ಲ ಕಾಣಿಸಿಕೊಳ್ಳುತ್ತವೆ.

ಇನ್ನು ಹೊಟ್ಟೆಯ ಸಮಸ್ಯೆ ಇಲ್ಲದವರಲ್ಲಿಯೂ ಗ್ಲುಟನ್‌ಯುಕ್ತ ಆಹಾರ ಸೇವನೆಯಿಂದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎನ್ನುತ್ತಾರೆ ವೈದ್ಯರು. ಹೊಟ್ಟೆ ಉಬ್ಬರ, ಅಜೀರ್ಣ, ಭೇದಿ, ಹೊಟ್ಟೆ ತೊಳೆಸುವಿಕೆ, ವಾಂತಿ ಕೂಡ ಆಗುತ್ತವೆ.

ಗ್ಲುಟನ್‌ ಮುಕ್ತ ಆಹಾರ ಸೇವಿಸಿ...

ಗ್ಲುಟನ್‌ ಇಲ್ಲದ ಆಹಾರ ಸೇವನೆಯಿಂದ ಈ ಸಮಸ್ಯೆಯಿಂದ ಹೊರಬರಬಹುದು. ವಿಶೇಷವಾಗಿ ಗೋಧಿ ಹಾಗೂ ಗೋಧಿಯಿಂದ ಮಾಡಿದ ಆಹಾರಗಳನ್ನು ತ್ಯಜಿಸಬೇಕು. ಜಿಗುಟು ರಹಿತವಾದ ಆಹಾರವನ್ನು ಸೇವನೆ ಮಾಡುವುದರಿಂದ ಬಹಳಷ್ಟು ಉದರ ಸಂಬಂಧಿ ಕಾಯಿಲೆಗಳಿಂದ ಹೊರಬರಲು ಸಾಧ್ಯ. ಆದಾಗ್ಯೂ, ಬಹಳಷ್ಟು ಸಲ ಇಂತಹ ಆಹಾರ ಪದಾರ್ಥಗಳ ಪಟ್ಟಿ ಮಾಡಿಕೊಂಡು ಕಟ್ಟುನಿಟ್ಟಾದ ಪಥ್ಯ ಮಾಡುವುದು ಹಾಗೂ ಯಾವ ಆಹಾರಗಳಲ್ಲಿ ಗ್ಲುಟನ್‌ ಇದೆ ಎಂದು ಅರ್ಥಮಾಡಿಕೊಳ್ಳುವುದು ಮತ್ತು ಅದನ್ನು ತ್ಯಜಿಸುವುದು ಸವಾಲಿನ ಸಂಗತಿಯೂ ಹೌದು. ಹೀಗಾಗಿ ಇದಕ್ಕೆ ಸೂಕ್ತ ಆಹಾರತಜ್ಞರ ಮಾರ್ಗದರ್ಶನ ಪಡೆದುಕೊಳ್ಳಬೇಕು ಇಲ್ಲವೇ ನಿಮಗೆ ಅಲರ್ಜಿ ಆಗುವ ಆಹಾರ ಪದಾರ್ಥಗಳ ಪಟ್ಟಿ ಮಾಡಿಕೊಳ್ಳಬೇಕು.

ಹುಬ್ಬಳ್ಳಿ–ಧಾರವಾಡದ ಡಯಟಿಷಿಯನ್ ಮತ್ತು ನ್ಯೂಟ್ರಿಷನಿಸ್ಟ್ ಸೋನಲ್‌ ಮೆಹ್ತಾ ಅವರು ಹೇಳುವುದು ಹೀಗೆ...‘ಯಾರಿಗೆಲ್ಲ ಗ್ಲುಟನ್‌ ಅಲರ್ಜಿ ಕಾಣಿಸಿಕೊಳ್ಳುತ್ತದೆಯೋ ಅಂಥವರು ಮೊದಲು ಗೋಧಿ ಹಾಗೂ ಗೋಧಿಯಿಂದ ಮಾಡುವ ಎಲ್ಲ ಆಹಾರ ಪದಾರ್ಥಗಳ ಬಳಕೆಯನ್ನು ನಿಲ್ಲಿಸಬೇಕು. ಏಕೆಂದರೆ ಇವುಗಳಲ್ಲಿಯೇ ಅತಿ ಹೆಚ್ಚಿನ ಪ್ರಮಾಣದ ಗ್ಲುಟನ್‌ ಇರುವುದು. ನಾರಿನ ಅಂಶ ದೇಹಕ್ಕೆ ಅತ್ಯಗತ್ಯ. ಹೆಸರುಕಾಳು, ಕಡಲೆ, ಉದ್ದು, ಮಡಿಕೆಕಾಳು ಮತ್ತಿತರ ದ್ವಿದಳ ಧಾನ್ಯಗಳನ್ನು ಬಳಸಿ, ಗೋಧಿ ತಿನ್ನದೇ ಇರುವುದರ ಕೊರತೆ ನೀಗಿಸಿಕೊಳ್ಳಬಹುದು. ಗೋಧಿ ಬದಲಿಗೆ ಜೋಳ, ಸಜ್ಜೆ ಬಳಸಿ ರೊಟ್ಟಿ ಮಾಡಿಕೊಂಡು ತಿನ್ನಬಹುದು. ಉತ್ತರ ಕರ್ನಾಟಕದಲ್ಲಿಯಂತೂ ಜೋಳದ ರೊಟ್ಟಿ ಬೇಸಿಗೆಯಲ್ಲಿ ಬಹಳ ಹಿತಕಾರಿ. ದೇಹವನ್ನು ತಂಪು ಮಾಡುತ್ತದೆ. ಈಗ ಚಳಿಗಾಲದಲ್ಲಿ ಸಜ್ಜೆ ರೊಟ್ಟಿ ಬಳಸಬಹುದು. ಇದು ದೇಹವನ್ನು ಬೆಚ್ಚಗಿಡುತ್ತದೆ. ಉತ್ತಮ ಪೋಷಕಾಂಶಗಳನ್ನೂ ಹೊಂದಿದೆ’ ಎನ್ನುತ್ತಾರೆ.

ಒಟ್ಟಿನಲ್ಲಿ ಗ್ಲುಟನ್‌ಯುಕ್ತ ಆಹಾರಗಳಿಂದ ನಿಮಗೆ ಅಲರ್ಜಿ ಇದ್ದರೆ ಅದರಿಂದ ದೂರ ಇರಿ. ಗ್ಲುಟನ್‌ ಮುಕ್ತ ಆಹಾರ ಪದಾರ್ಥಗಳ ಕಡೆಗೆ ಆಸಕ್ತಿ ಹೆಚ್ಚಿಸಿಕೊಳ್ಳಿ. ಗೋಧಿ ಬದಲಿಗೆ ಸಿರಿಧಾನ್ಯಗಳನ್ನು ಬಳಸುವತ್ತ ಹೆಜ್ಜೆ ಇಟ್ಟಲ್ಲಿ ಗ್ಲುಟನ್‌ ಅಲರ್ಜಿಯಿಂದ ಪಾರಾಗಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು