ಮಂಗಳವಾರ, ಏಪ್ರಿಲ್ 13, 2021
24 °C
ಚಾಮರಾಜನಗರದಲ್ಲಿ ನಡೆದಿದೆ ವಿಶೇಷ ಕಾರ್ಯಾಗಾರ

PV Web Exclusive: ಅಂಗವಿಕಲರ ಆರೈಕೆದಾರರಿಗೂ ತೋರಬೇಕಿದೆ ಕಾಳಜಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ತೀವ್ರತರವಾದ ಅಂಗವೈಕಲ್ಯ ಹೊಂದಿರುವವರನ್ನು (ಇನ್ನೊಬ್ಬರ ಸಹಾಯವಿಲ್ಲದೆ ಕುಳಿತುಕೊಳ್ಳಲು, ನಡೆಯುವುದು ಸೇರಿದಂತೆ ಯಾವುದೇ ಕೆಲಸ ಮಾಡಲು ಸಾಧ್ಯವಾಗದವರು) ನೋಡಿಕೊಳ್ಳುವುದು ದೊಡ್ಡ ಸವಾಲು. ಅವರ ಆರೈಕೆ ಮಾಡುವವರಿಗೆ ವಿಶ್ರಾಂತಿಯೇ ಸಿಗದಷ್ಟು ಕೆಲಸ ಇರುತ್ತದೆ. ಮನೆ ಬಿಟ್ಟು ಎಲ್ಲೂ ಹೋಗುವುದಕ್ಕೆ ಆಗುವುದಿಲ್ಲ. ಸಾಮಾಜಿಕ ಜೀವನ ಎಂಬುದೇ ಇರುವುದಿಲ್ಲ. ದೈಹಿಕ ಶ್ರಮವಲ್ಲದೇ, ಮಾನಸಿಕವಾಗಿಯೂ ಅವರು ಕುಗ್ಗಿರುತ್ತಾರೆ.

ಎಲ್ಲರೂ ಅಂಗವಿಕಲರ ಬಗ್ಗೆ ಗಮನ ಹರಿಸುತ್ತಾರೆಯೇ ವಿನಾ, ಅವರ ಆರೈಕೆದಾರರ ಬಗ್ಗೆ ಯೋಚಿಸುವವರು ವಿರಳ.   

ಅಂಗವಿಕಲರ ಪರ ಕೆಲಸ ಮಾಡುತ್ತಿರುವ ಮಾರ್ಗದರ್ಶಿ (http://www.margadarshionline.org/) ಸ್ವಯಂ ಸೇವಾ ಸಂಸ್ಥೆ ಈಗ ಆರೈಕೆದಾರರ ಪರವಾಗಿಯೂ ಕೆಲಸ ಮಾಡಲು ಆರಂಭಿಸಿದೆ. ಅವರ ಸ್ಥಿತಿಗಳನ್ನು ಅಧ್ಯಯನ ನಡೆಸುವುದಕ್ಕಾಗಿ ಸಂಸ್ಥೆಯು ಕೇರರ್ಸ್‌ ವರ್ಲ್ಡ್‌ ವೈಡ್‌ ಸಂಸ್ಥೆಯ (ಕನ್ನಡಿಗ ಪಶು ವೈದ್ಯ ಡಾ.ಅನಿಲ್‌ ಕೆ.ಪಾಟೀಲ ಅವರು ಇಂಗ್ಲೆಂಡ್‌ನಲ್ಲಿ ಸ್ಥಾಪಿಸಿರುವ ಸಂಸ್ಥೆ) ಸಹಾಯದಿಂದ, ರಾಜ್ಯದಲ್ಲೇ ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಯಲ್ಲಿ ಆರೈಕೆದಾರರ ಸಮೀಕ್ಷೆ ನಡೆಸಿದೆ. 

115ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮೀಕ್ಷೆ ಕಾರ್ಯ ಮುಗಿಸಿರುವ ಸಂಸ್ಥೆ 1,500 ಆರೈಕೆದಾರರನ್ನು ಗುರುತಿಸಿದೆ. ಈ ಪೈಕಿ, ಶೇ 91ರಷ್ಟು ಮಂದಿ ಮಹಿಳೆಯರೇ ಆಗಿದ್ದಾರೆ (ಹೆಚ್ಚಿನ ಸಂದರ್ಭಗಳಲ್ಲಿ ಆರೈಕೆದಾರರು ತಾಯಂದಿರೇ ಆಗಿರುತ್ತಾರೆ. ವಯಸ್ಕರ ವಿಚಾರದಲ್ಲಿ ಅವರ ಪತ್ನಿಯರು ನೋಡಿಕೊಳ್ಳುವ ಕೆಲಸ ಮಾಡುತ್ತಾರೆ. ಅಕ್ಕ, ತಂಗಿಯರೂ ಸ್ವಲ್ಪ ಪ್ರಮಾಣದಲ್ಲಿ ಇದ್ದಾರೆ).   


ಅಗತ್ಯಕ್ಕೆ ತಕ್ಕಂತೆ ಮಾರ್ಪಾಡು ಮಾಡಿದ ವಿಶೇಷ ಕುರ್ಚಿಯಲ್ಲಿ ಮಗು ಕುಳಿತಿರುವುದು

ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಆರೈಕೆದಾರರ ಹೊರೆಯನ್ನು ಇಳಿಸುವ ಅಗತ್ಯವಿದೆ ಎಂದು ಮನಗಂಡಿರುವ ಮಾರ್ಗದರ್ಶಿ ಸಂಸ್ಥೆ, ‌ಅವರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.

‘ಆರೈಕೆದಾರರು ಎಷ್ಟೋ ಸಂದರ್ಭಗಳಲ್ಲಿ ಅಂಗವಿಕಲರಿಗಿಂತಲೂ ಹೆಚ್ಚು ಕಷ್ಟ ಅನುಭವಿಸುತ್ತಾರೆ. ನಮ್ಮ ಸಮೀಕ್ಷೆಯಲ್ಲಿ ಇದು ಸ್ಪಷ್ಟವಾಗಿ ಗೊತ್ತಾಗಿದೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಅವರು ದಣಿದಿರುತ್ತಾರೆ. ಬಡ ಕುಟುಂಬಗಳಿಗಾಗಿದ್ದರೆ ಕೌಟುಂಬಿಕ ಕಲಹಗಳು ಅವರ ನೆಮ್ಮದಿಯನ್ನು ಕಸಿದುಕೊಂಡಿರುತ್ತವೆ. ಅಂಗವಿಕಲರಿಗೆ ನೀಡುತ್ತಿರುವಷ್ಟೇ ಗಮನವನ್ನು ಆರೈಕೆದಾರರಿಗೂ ನೀಡಬೇಕಾಗಿದೆ. ಅವರಿಗೂ ಸೌಲಭ್ಯಗಳು ಸಿಗಬೇಕಿದೆ’ ಎಂದು ಹೇಳುತ್ತಾರೆ ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕ ಕೆ.ವಿ.ರಾಜಣ್ಣ.

‘ಸರ್ಕಾರವೂ ಆರೈಕೆದಾರರ ಬಗ್ಗೆ ಗಮನ ಹರಿಸಬೇಕು. ಅವರಿಗೂ ಭತ್ಯೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವುದಕ್ಕೆ ಪ್ರಯತ್ನವನ್ನೂ ನಡೆಸಲಾಗುತ್ತದೆ’ ಎಂದು ಹೇಳುತ್ತಾರೆ ರಾಜಣ್ಣ.

ಕೌಶಲ ತಿಳಿಹೇಳುವ ಪ್ರಯತ್ನ
ಮೊದಲ ಪ್ರಯತ್ನವಾಗಿ, ಆರೈಕೆದಾರರಿಗೆ ಆರೈಕೆಯ ಕೌಶಲಗಳನ್ನು ತಿಳಿ ಹೇಳುವುದಕ್ಕಾಗಿ ಮೋಟಿವೇಷನ್‌ ಇಂಡಿಯಾ (https://www.motivationindia.org/home) ಎಂಬ ಎನ್‌ಜಿಒ ಸಹಯೋಗದಲ್ಲಿ ಚಾಮರಾಜನಗರದಲ್ಲಿ ವಿಶಿಷ್ಟ ಕಾರ್ಯಾಗಾರವನ್ನು ಸಂಸ್ಥೆ ಹಮ್ಮಿಕೊಂಡಿತ್ತು. 

ಅಂಗವೈಕಲ್ಯ, ಬುದ್ಧಿಮಾಂದ್ಯತೆಯಂತಹ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರನ್ನೇ ಗುರಿಯಾಗಿಸಿಕೊಂಡು ನಡೆಯುವ ಕಾರ್ಯಾಗಾರ, ಉಪನ್ಯಾಸ, ತರಬೇತಿ ಶಿಬಿರಗಳು ಸಾಮಾನ್ಯ. ಆರೈಕೆದಾರರನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಗಾರ, ಶಿಬಿರಗಳು ನಡೆಯುವುದು ಬಹಳ ಅಪರೂಪ. ಹಾಗಾಗಿ ಇದೊಂದು ವಿಶಿಷ್ಟ ಕಾರ್ಯಾಗಾರವಾಗಿತ್ತು.


ಮಾರ್ಪಾಡು ಮಾಡಿದ ಗಾಲಿಕುರ್ಚಿಯನ್ನು ತೋರಿಸಿ ಪೋಷಕರಿಗೆ ವಿವರಣೆ ನೀಡುತ್ತಿರುವುದು

ಸೆರೆಬ್ರಲ್‌ ಪಾಲ್ಸಿಯಿಂದ ಬಳಲುತ್ತಿರುವ ಮಕ್ಕಳ ಪೋಷಕರಿಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸೆರೆಬ್ರಲ್‌ ಪಾಲ್ಸಿ ಹಾಗೂ ಅದರ ಪರಿಣಾಮಗಳ ಬಗ್ಗೆ ತಿಳಿಸಿಕೊಡುವುದರ ಜೊತೆಗೆ, ಈ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳನ್ನು ಹೊರೆಯಾಗದ ಆಗದ ರೀತಿಯಲ್ಲಿ ಯಾವ ರೀತಿ ನೋಡಿಕೊಳ್ಳಬೇಕು ಎಂಬುದನ್ನು ಮೋಟಿವೇಷನ್‌ ಇಂಡಿಯಾದ ತಜ್ಞರಾದ ಪ್ರವೀಣ್‌ ಕುಮಾರ್‌, ಸುಧಾಕರ್ ಅವರು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಟ್ಟರು.

‘ಅಂಗವಿಕಲರನ್ನು ನೋಡಿಕೊಳ್ಳುವವರ ಕೆಲಸ ಸುಲಭವಾಗಬೇಕು. ಅವರ ಕಷ್ಟಗಳನ್ನು ಹಗುರಗೊಳಿಸುವ ಅಗತ್ಯವಿದೆ. ಅವರಿಗೆ ಮತ್ತಷ್ಟು ಪ್ರೋತ್ಸಾಹ ನೀಡುವ ಉದ್ದೇಶದಿಂದ ಕಾರ್ಯಾಗಾರ ಆಯೋಜಿಸಲಾಗಿದೆ’ ಎಂದು ಹೇಳುತ್ತಾರೆ ಮಾರ್ಗದರ್ಶಿ ಉಪಾಧ್ಯಕ್ಷೆ ಕೆ.ಎಂ.ಗೀತಾಮೃತ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು