ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳ ಆಹಾರದಲ್ಲಿ ಬಾಪೂ ಆರೋಗ್ಯದ ಸೂತ್ರ

Last Updated 1 ಅಕ್ಟೋಬರ್ 2020, 20:00 IST
ಅಕ್ಷರ ಗಾತ್ರ

ಅಹಿಂಸೆ ಮತ್ತು ಸತ್ಯದೊಂದಿಗೆ ಪ್ರಯೋಗ ನಡೆಸಿದ್ದ ಮಹಾತ್ಮ ಗಾಂಧಿ, ಆಹಾರದೊಂದಿಗೂ ಅನೇಕ ಪ್ರಯೋಗಗಳನ್ನು ನಡೆಸಿದ್ದರು. ಸಸ್ಯಾಹಾರ, ಮಾಂಸಾಹಾರ ಮತ್ತು ಮಿಶ್ರ ಆಹಾರ ಹೀಗೆ ಮೂರು ರೀತಿಯಾಗಿ ಆಹಾರವನ್ನು ವಿಂಗಡಿಸಿದ್ದ ಬಾಪೂ ‘ಆಹಾರವೇ ಜೀವನ’ ಎಂಬುದನ್ನು ಪ್ರತಿಪಾದಿಸಿದರು.

ಬಾಪೂ ತಮ್ಮ ಜೀವಿತಾವಧಿಯಲ್ಲಿ ಆಹಾರದೊಂದಿಗೆ ನಡೆಸಿದ ಪ್ರಯೋಗಗಳನ್ನು ‘ಡಯೆಟ್ ಅಂಡ್ ಡಯೆಟ್ ರಿಫಾರ್ಮ್ಸ್’, ‘ದ ಮಾರಲ್ ಬೇಸಿಸ್ ಆಫ್ ವೆಜಿಟೇರಿಯನಿಸಂ’ ಮತ್ತು ‘ಕೀ ಟು ಹೆಲ್ತ್‌’ ಎನ್ನುವ ಕೃತಿಗಳಲ್ಲಿ ಪ್ರತಿಪಾದಿಸಿದ್ದಾರೆ. ‘ಡಯೆಟ್ ಅಂಡ್ ಡಯೆಟ್ ರಿಫಾರ್ಮ್ಸ್’ ಕೃತಿಯಲ್ಲಿ ಹೇಳುವಂತೆ ಆಹಾರದೊಂದಿಗೆ ಪ್ರಯೋಗ ನಡೆಸುತ್ತಿರುವಾಗ, ಗಾಂಧಿ ನಿತ್ಯವೂ ಎರಡು ಹೊತ್ತು ಮಾತ್ರ ಆಹಾರ ಸೇವಿಸುತ್ತಿದ್ದರು (ಬೆಳಿಗ್ಗೆ 11ಕ್ಕೆ ಮತ್ತು ಸಂಜೆ 6.15ಕ್ಕೆ). ಆಗ ಮೊಳಕೆಯೊಡೆದ ಕಾಳು, ಬಾದಾಮಿ, ಹಸಿರು ಸೊಪ್ಪು, ನಿಂಬೆ ಹಣ್ಣು ಮತ್ತು ಜೇನುತುಪ್ಪವನ್ನು ಬಳಸುತ್ತಿದ್ದರಂತೆ. ಕಚ್ಚಾ ಆಹಾರಕ್ಕೆ ಆದ್ಯತೆ ನೀಡಿದ್ದ ಅವರು ನಿಂಬೆಹಣ್ಣಿನ ರಸ ಮತ್ತು ಜೇನುತುಪ್ಪವನ್ನು ಬೆರೆಸಲು ಮಾತ್ರ ಬಿಸಿ ನೀರು ಬಳಸಿದ್ದಾಗಿ ಹೇಳಿಕೊಂಡಿದ್ದಾರೆ. ತಮ್ಮ ಈ ಪ್ರಯೋಗದಿಂದ ದೇಹದ ತೂಕ ತುಸು ಕಳೆದುಕೊಂಡಿದ್ದಾಗಿಯೂ ಬಾಪೂ ಹೇಳಿದ್ದರು.

‘ಸಸ್ಯಾಹಾರಿ ಕುಟುಂಬದಲ್ಲಿ ಜನಿಸಿದ ಗಾಂಧಿ, ಹೆನ್ರಿ ಸಾಲ್ಟ್ ಅವರ ಸಸ್ಯಾಹಾರ ಕುರಿತ ಕೃತಿ ಓದಿ ಸಸ್ಯಾಹಾರ ಪದ್ಧತಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ’ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಗುರುತಿಸುತ್ತಾರೆ. (ಗಾಂಧಿ ಬಿಫೋರ್ ಇಂಡಿಯಾ) ‌

ಸಸ್ಯಾಹಾರಕ್ಕೆ ಒತ್ತು ನೀಡಿದ್ದರೂ ಮಾಂಸಾಹಾರದ ಮಹತ್ವವನ್ನು ಪ್ರತಿಪಾದಿಸುವ ಬಾಪೂ, ಸಸ್ಯಾಹಾರಕ್ಕಿಂತಲೂ ಹಾಲು ಮತ್ತು ಮಾಂಸದಲ್ಲಿ ಹೆಚ್ಚು ಪ್ರೋಟಿನ್ ಇರುತ್ತದೆ ಮತ್ತು ಇದು ಸುಲಭವಾಗಿ ಜೀರ್ಣವಾಗುತ್ತದೆ ಎಂದಿದ್ದಾರೆ (ಕೀ ಟು ಹೆಲ್ತ್‌). ಬ್ರಹ್ಮಚರ್ಯ ಪಾಲನೆ ಮಾಡುವಾಗ ತಾಜಾ ಹಣ್ಣುಗಳು ಮತ್ತು ಒಣಹಣ್ಣುಗಳನ್ನು ಗಾಂಧೀಜಿ ಸೇವಿಸುತ್ತಿದ್ದರಂತೆ.

ಮೇಕೆಯ ಹಾಲು, ಶೇಂಗಾ ಬೀಜ, ತಾಜಾ ಹಣ್ಣು–ತರಕಾರಿಗಳು, ಪಾಲಿಶ್ ಮಾಡದ ಅಕ್ಕಿ, ರಾಗಿ, ಸೋಯಾಬೀನ್ಸ್ ಮತ್ತು ಹುಣಸೇ ಹಣ್ಣು ಗಾಂಧಿ ಅವರ ಆಹಾರದ ಭಾಗವಾಗಿತ್ತು.

ಆಹಾರದೊಂದಿಗೆ ತಾವು ಮಾಡಿರುವ ಪ್ರಯೋಗಗಳನ್ನು ಮತ್ತೊಬ್ಬರ ಮೇಲೆ ಬಲವಂತವಾಗಿ ಹೇರಲು ಬಯಸದ ಬಾಪೂ, ಪ್ರತಿಯೊಬ್ಬರು ಈ ನಿಟ್ಟಿನಲ್ಲಿ ತಾವೇ ಪ್ರಯೋಗಶೀಲರಾಗಬೇಕೆಂಬ ಮಾತನ್ನೂ ಆಡಿದ್ದಾರೆ.

(ಗಾಂಧಿ ಅವರ ಕೃತಿಗಳು ಮತ್ತು ವಿವಿಧ ಮೂಲಗಳಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT