ಗುರುವಾರ , ಜೂನ್ 30, 2022
21 °C
ಕೋವಿಡ್‌ ಸಂದರ್ಭದಲ್ಲಿ ಹೊಸ ಸಮಸ್ಯೆ

ಬಾಲಕಿಯರ ಕಾಡುವ ಅಕಾಲಿಕ ಋತು ಪ್ರಾಪ್ತಿ

ಮನಸ್ವಿ Updated:

ಅಕ್ಷರ ಗಾತ್ರ : | |

Prajavani

‘ನನ್ನ ಮಗಳು ಪೂರ್ವಿಗೆ ಇನ್ನೂ 8 ವರ್ಷ ವಯಸ್ಸು. ಶಾಲೆ ಇಲ್ಲದ ಕಾರಣ ಮನೆಯಲ್ಲೇ ಆಟವಾಡಿಕೊಂಡಿದ್ದ ಅವಳು ಕಳೆದ ಹದಿನೈದು ದಿನಗಳ ಹಿಂದೆ ಇದ್ದಕ್ಕಿದಂತೆ ಕಿಬ್ಬೊಟ್ಟೆ ನೋವು ಎಂದು ಅಳುತ್ತಿದ್ದಳು. ನಾನು ಯಾಕಿರಬಹುದು ಎಂದು ತಲೆ ಕೆಡಿಸಿಕೊಂಡಿದ್ದೆ. ಅದಾಗಿ ಸ್ವಲ್ಪ ಹೊತ್ತಿಗೆ ರಕ್ತಸ್ರಾವ ಆರಂಭವಾಗಿತ್ತು. ಅವಳು ಋತುಮತಿಯಾಗಿದ್ದಳು. ನಗರದ ಹೆಣ್ಣುಮಕ್ಕಳು ಬೇಗ ಮೈ ನೆರೆಯುತ್ತಾರೆ ಎಂದು ಕೇಳಿದ್ದೆ, ಆದರೆ ನನ್ನ ಮಗಳು ಹಳ್ಳಿಯಲ್ಲೇ ಹುಟ್ಟಿ ಬೆಳೆದವಳು. ಅವಳು ಇಷ್ಟು ಬೇಗ ಋತುಮತಿಯಾಗಿದ್ದು ನಿಜಕ್ಕೂ ನನಗೆ ಗಾಬರಿ ಉಂಟು ಮಾಡಿತ್ತು’ ಎಂದು ಗೆಳತಿ ಸುಮಿತ್ರಾಳೊಂದಿಗೆ ತನ್ನ ಅನುಭವ ಹಂಚಿಕೊಂಡಿದ್ದರು ಮಂಗಳಾ ಪಾಟೀಲ್‌. ಮಂಗಳಾ ಮಾತು ಕೇಳಿದ ಮೇಲೆ ಸುಮಿತ್ರಾ ಅವರಿಗೂ ಚಿಂತೆ ಆರಂಭವಾಗಿತ್ತು. ಕಾರಣ ಅವರ ಮಗಳಿಗೂ ಈಗ 7 ವರ್ಷ ವಯಸ್ಸು.

ಹೌದು, ಇತ್ತೀಚೆಗೆ ಹೆಣ್ಣುಮಕ್ಕಳು ಬೇಗನೇ ಮೈ ನೆರೆಯುವ ವಿಷಯ ತಾಯಂದಿರಲ್ಲಿ ಆತಂಕ ಮೂಡಿಸಿದೆ. ಅದರಲ್ಲೂ ಕೋವಿಡ್‌ ಬಂದಾಗಿನಿಂದ ಬಹಳ ಚಿಕ್ಕ ವಯಸ್ಸಿಗೇ ಋತುಮತಿಯಾಗುತ್ತಿರುವ ಹೆಣ್ಣುಮಕ್ಕಳ ಸಂಖ್ಯೆ ಜಾಸ್ತಿಯಾಗಿದೆ. ಕೆಲವು ದೈಹಿಕ ಸಮಸ್ಯೆಗಳ ಜೊತೆಗೆ ಮಾನಸಿಕ ಸಮಸ್ಯೆಯೂ ಇದಕ್ಕೆ ಕಾರಣ ಎನ್ನುತ್ತಾರೆ ತಜ್ಞರು.

‘ಆನುವಂಶೀಯ ಕಾರಣಗಳಿಂದ ಕೆಲವರು ಬಹಳ ಬೇಗನೇ ಮೈನೆರೆಯುತ್ತಾರೆ. ಇದರೊಂದಿಗೆ ಬದಲಾದ ಜೀವನಶೈಲಿಯೂ ಪ್ರಮುಖ ಕಾರಣ. ಕೋವಿಡ್‌ ಸಂದರ್ಭದಲ್ಲಿ ಅತೀ ತೂಕ, ಬೊಜ್ಜು ಮುಂತಾದ ದೈಹಿಕ ಸಮಸ್ಯೆಯೊಂದಿಗೆ ಉದ್ವೇಗ, ಒತ್ತಡ, ಆತಂಕದಂತಹ ಸಮಸ್ಯೆಯು ಅಕಾಲಿಕ ಋತುಪ್ರಾಪ್ತಿಗೆ ಕಾರಣವಾಗುತ್ತಿದೆ’ ಎನ್ನುತ್ತಾರೆ ಭದ್ರಾವತಿಯ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ. ವೀಣಾ ಎಸ್‌. ಭಟ್‌.

ಅಕಾಲಿಕ ಋತುಪ್ರಾಪ್ತಿಗೆ ಕಾರಣ

‘8 ವರ್ಷಕ್ಕೂ ಮೊದಲೇ ಋತುಪ್ರಾಪ್ತಿಯಾದರೆ ಅದನ್ನು ಅಕಾಲಿಕ ಋತುಪ್ರಾಪ್ತಿ ಎನ್ನುತ್ತೇವೆ. ಅಸಮರ್ಪಕ ಪೌಷ್ಟಿಕ ಆಹಾರ ಸೇವನೆ, ದೈಹಿಕ ಚಟುವಟಿಕೆಯ ಕೊರತೆ, ಸಣ್ಣ ವಯಸ್ಸಿಗೇ ಹೆಚ್ಚುತ್ತಿರುವ ಬೊಜ್ಜು, ಉದ್ರೇಕಕಾರಿ ಅಂಶಗಳಿಗೆ ಹೆಚ್ಚು ಹೆಚ್ಚು ತೆರೆದುಕೊಳ್ಳುವುದು ಇದಕ್ಕೆ ಪ್ರಮುಖ ಕಾರಣ. ಈ ಎಲ್ಲಾ ಅಂಶಗಳಿಂದ ಹೆಣ್ಣುಮಕ್ಕಳಲ್ಲಿ ಹೈಪೊಥಲಾಮಸ್‌, ಪಿಟ್ಯೂಟರಿ, ಅಂಡಾಶಯಗಳು ಬೇಗನೇ ಪಕ್ವವಾಗುತ್ತಿವೆ. ಹೈಪೊಥೈರಾಯಿಡಿಸಂ ಪ್ರಾಥಮಿಕ ಹಂತದಲ್ಲಿದ್ದರೂ ಬೇಗನೇ ಮುಟ್ಟಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ವೀಣಾ ಭಟ್‌.

ಉದ್ವೇಗ, ಆತಂಕ, ಹಾರ್ಮೋನ್‌ಗಳನ್ನು ಅಸಮತೋಲನಗೊಳಿಸುವ ಹಾಗೂ ಪ್ರಚೋದನೆಗೊಳಿಸುವ ರಾಸಾಯನಿಕ ಅಂಶಗಳು ದೇಹವನ್ನು ಸೇರುವುದು, ಅತಿತೂಕ, ಅತಿಯಾಗಿ ಜಂಕ್ ಆಹಾರ ಸೇವಿಸುವುದು, ಪ್ರಾಣಿಜನ್ಯ ಆಹಾರ ಹಾಗೂ ಹಾಲು ಸೇವನೆಯಿಂದಲೂ ಬೇಗನೆ ಋತುಮತಿಯಾಗುತ್ತಾರೆ ಎನ್ನುತ್ತವೆ ಕೆಲವು ಅಧ್ಯಯನಗಳು.

ಸಮಸ್ಯೆಗಳು

* ಬೇಗನೇ ಋತುಪ್ರಾಪ್ತಿಯಾದವರಲ್ಲಿ ಪಿಸಿಒಡಿಯಂತಹ ಸಮಸ್ಯೆಗಳು ಹೆಚ್ಚಾಗಿ ಕಾಣಿಸುತ್ತವೆ.‌

* ಬೇಗ ಮೈನೆರೆದ ಹೆಣ್ಣುಮಕ್ಕಳು ಹೆಚ್ಚು ಎತ್ತರ ಬೆಳೆಯುವುದಿಲ್ಲ. ಹಾರ್ಮೋನ್‌ ಪ್ರಭಾವದಿಂದ ಉದ್ದನೆಯ ಮೂಳೆಗಳು ಬೇಗನೇ ಕೂಡಿಕೊಳ್ಳುವುದರಿಂದ ಕುಬ್ಜರಾಗುವ ಸಾಧ್ಯತೆ ಹೆಚ್ಚು.

* ಲೈಂಗಿಕ ಆಸೆಗಳು ಬೇಗನೇ ಪಕ್ವವಾಗುವುದರಿಂದ ಹೆಚ್ಚು ಕುತೂಹಲ ಮೂಡಿ ಅದರಿಂದ ಹಲವು ಸಮಸ್ಯೆಗಳು ಉಂಟಾಗಬಹುದು.

* ಮುಜುಗರ, ಆತ್ಮವಿಶ್ವಾಸದ ಕೊರತೆಯಿಂದ ಖಿನ್ನತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಪೋಷಕರು ಹೇಗೆ ಎದುರಿಸಬೇಕು?

ನಗರಗಳಲ್ಲಾಗಲೀ ಅಥವಾ ಹಳ್ಳಿಗಳಲ್ಲಾಗಲೀ ಮಕ್ಕಳು ಮೈ ನೆರೆಯುವ ಬಗ್ಗೆ ಪೋಷಕರಲ್ಲಿ ಆತಂಕ ಹಾಗೂ ಗೊಂದಲಗಳಿರುವುದು ಸಹಜ. ಇದರೊಂದಿಗೆ ಮುಟ್ಟಿಗೆ ಸಂಬಂಧಿಸಿ ಹಲವು ರೀತಿಯ ಮೂಢನಂಬಿಕೆಗಳೂ ಇವೆ. ಹಾಗಾಗಿ ಪೋಷಕರು ಮೊದಲು ಈ ಕುರಿತು ಅರಿವು ಮೂಡಿಸಿಕೊಳ್ಳಬೇಕು. 7– 8 ವರ್ಷ ವಯಸ್ಸಿನ ಹೆಣ್ಣುಮಕ್ಕಳಿಗೆ ಋತುಸ್ರಾವ ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿವರವಾಗಿ ತಿಳಿಸಿ ಹೇಳಬೇಕು.

* ಋತುಚಕ್ರ ನಿರ್ವಹಣೆ, ಮುಟ್ಟಿನ ಸಮಯದಲ್ಲಿನ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು. ಸ್ವಚ್ಛವಾಗಿಲ್ಲದಿದ್ದರೆ ಸೋಂಕಿನಂತಹ ಸಮಸ್ಯೆ ಉಂಟಾಗುತ್ತದೆ ಎಂಬುದನ್ನು ತಿಳಿಸಬೇಕು.

* ಮಕ್ಕಳಿಗೆ ಇದರ ಕುರಿತು ಪ್ರಾಯೋಗಿಕ ಸಲಹೆ ನೀಡುವುದು ಮುಖ್ಯವಾಗುತ್ತದೆ. ಯಾವಾಗ ಆರಂಭವಾಗುತ್ತದೆ, ಯಾವ ಭಾಗದಲ್ಲಿ ನೋವಾಗುತ್ತದೆ, ಯಾವ ಕಾರಣಕ್ಕೆ ನೋವಾಗುತ್ತದೆ, ಎಷ್ಟು ದಿನಗಳವರೆಗೆ ಸ್ರಾವವಿರುತ್ತದೆ, ಮುಟ್ಟಿನ ನೈರ್ಮಲ್ಯ ವಿಧಾನ, ಮುಟ್ಟಿನ ಸಮಯದಲ್ಲಿ ಬಳಸುವ ಪ್ಯಾಡ್‌, ಬಟ್ಟೆ, ಮೆನ್‌ಸ್ಟ್ರುಯಲ್ ಕಪ್‌ ಮುಂತಾದವುಗಳ ಬಳಕೆ, ಅವುಗಳ ಸ್ವಚ್ಛತೆ ಹಾಗೂ ಬಳಸಿದ ನಂತರ ಏನು ಮಾಡಬೇಕು ಎಂಬೆಲ್ಲಾ ವಿಷಯಗಳನ್ನು ತಿಳಿಸಬೇಕು.

* ಪೋಷಕರು ಇದರ ಬಗ್ಗೆ ತಾವೇ ಅರಿವು ಮೂಡಿಸಬಹುದು ಅಥವಾ ಕುಟುಂಬ ವೈದ್ಯರ ಬಳಿ ಕರೆದುಕೊಂಡು ಹೋಗಿ ತಿಳಿವಳಿಕೆ ಮೂಡಿಸಬಹುದು. ವೈದ್ಯರಿಂದ ಈ ಕುರಿತು ಆಪ್ತಸಮಾಲೋಚನೆ ಮಾಡಿಸಬಹುದು.

* ಮಕ್ಕಳಿಗೆ ಕೌಟುಂಬಿಕ ಹಾಗೂ ಸಾಮಾಜಿಕ ಭದ್ರತೆ ಕೊಡಿಸುವುದು.

* ಕೌಟುಂಬಿಕವಾಗಿ ಹಾಗೂ ಸಾಮಾಜಿಕವಾಗಿ ಮಕ್ಕಳ ವರ್ತನೆ ಹೇಗಿರಬೇಕು, ಮುಟ್ಟಾದ ನಂತರ ಹೇಗೆ ಎಚ್ಚರಿಕೆಯಿಂದ ಇರಬೇಕು ಎಂಬ ಬಗ್ಗೆ ಮಾರ್ಗದರ್ಶನ ನೀಡಬೇಕು.

* ಹಿಂಜರಿಕೆ ಕಡಿಮೆ ಮಾಡಿ ಹೆಚ್ಚು ಆತ್ಮವಿಶ್ವಾಸ ಮೂಡಿಸಬೇಕು. ದೈಹಿಕ ಹಾಗೂ ಮಾನಸಿಕ ಬದಲಾವಣೆಯ ಕುರಿತು ತಿಳಿಸಬೇಕು.

* ಭವಿಷ್ಯದಲ್ಲಿ ಪಿಸಿಒಡಿಯಂತಹ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಆ ಕಾರಣಕ್ಕೆ ಪೋಷಕರು ಅದರ ಬಗ್ಗೆ ತಿಳಿದುಕೊಂಡು ಮಕ್ಕಳಿಗೆ ತಿಳಿ ಹೇಳಬೇಕು.

* ಕೆಲವು ಹೆಣ್ಣುಮಕ್ಕಳು ಸ್ತನಗಳ ಗಾತ್ರ ದೊಡ್ಡದಾದಾಗ ಗೂನು ಬೆನ್ನು ಮಾಡಿಕೊಂಡು ಓಡಾಡುವುದು, ಮನೆಯ ಒಳಗೇ ಕುಳಿತು ಖಿನ್ನತೆಗೆ ಒಳಗಾಗುವುದು ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ‘ಇದು ಪ್ರಕೃತಿ ಸಹಜ. ಎಲ್ಲಾ ಹೆಣ್ಣುಮಕ್ಕಳು ಈ ಸಮಸ್ಯೆ ಎದುರಿಸುತ್ತಾರೆ’ ಎಂದು ಧೈರ್ಯ ತುಂಬಿ ಆತ್ಮವಿಶ್ವಾಸ ಮೂಡಿಸುವುದು ಅಗತ್ಯ. ಇದರೊಂದಿಗೆ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ಅಪರಿಚಿತ ಪುರುಷರಿಂದ ದೂರವಿರುವುದು, ‘ಗುಡ್‌ ಟಚ್‌ ಮತ್ತು ಬ್ಯಾಡ್‌ ಟಚ್‌’ ಕುರಿತೂ ಅರಿವು ಮೂಡಿಸಬೇಕು.

ತಾಯಂದಿರಿಗೆ ಕಿವಿಮಾತು

‘ತಾಯಂದಿರು ಹೆಣ್ಣುಮಕ್ಕಳ ಆಹಾರ ಪದ್ಧತಿ ಹಾಗೂ ಜೀವನಶೈಲಿಯ ಆಧಾರದ ಮೇಲೆ ತೂಕ ನಿಯಂತ್ರಣ ಮಾಡುವುದನ್ನು ಕಲಿಯಬೇಕು. ಇದರೊಂದಿಗೆ ಋತುಮತಿಯಾದ ಮಕ್ಕಳಿಗೆ ಕನಿಷ್ಠ ಒಂದರಿಂದ ಎರಡು ಗಂಟೆ ದೈಹಿಕ ಚಟುವಟಿಕೆಗೆ ಪ್ರೋತ್ಸಾಹ ನೀಡಬೇಕು. ಪ್ರೊಟೀನ್‌ ಹಾಗೂ ಖನಿಜಾಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚು ನೀಡಬೇಕು. ಹಸಿರು ತರಕಾರಿ, ಸೊಪ್ಪು ಸೇವನೆಗೆ ಒತ್ತು ನೀಡಬೇಕು. ಇದರೊಂದಿಗೆ ಮಾನಸಿಕವಾಗಿಯೂ ಧೈರ್ಯ ಮೂಡುವಂತೆ ಮಾಡುವುದು ಅವಶ್ಯ’ ಎನ್ನುತ್ತಾರೆ ವೀಣಾ ಭಟ್‌.

‘ದೊಡ್ಡವಳಾಗುವುದು ಎಂದರೆ ಸಂತಾನೋತ್ಪತ್ತಿಯ ಅವಯವಗಳು ಕೆಲಸ ಮಾಡಲು ಆರಂಭವಾಗಿವೆ ಎಂದಷ್ಟೇ. ಇದೊಂದು ಎಚ್ಚರಿಕೆ ಅಷ್ಟೇ ಬಿಟ್ಟರೆ ಹೆಣ್ಣುಮಕ್ಕಳಿಗೆ 21 ವರ್ಷ ಆದ ನಂತರವೇ ಮದುವೆ ಮಾಡಬೇಕು. ಕೋವಿಡ್ ಸಂದರ್ಭದಲ್ಲಿ ಬಾಲ್ಯವಿವಾಹಗಳು ಹೆಚ್ಚುತ್ತಿರುವುದಕ್ಕೂ ಅಕಾಲಿಕ ಋತುಪ್ರಾಪ್ತಿ ಕಾರಣ. ಸಂತಾನೋತ್ಪತ್ತಿ ಅಂಗಾಂಗಗಳು ಸರಿಯಾಗಿ ಕಾರ್ಯ ನಿರ್ವಹಣೆ ಮಾಡಬೇಕು ಎಂದರೆ 20 ವರ್ಷ ಕಳೆಯಬೇಕು ಎಂಬುದನ್ನು ಪೋಷಕರು ಮನಗಾಣಬೇಕು, ಹದಿಹರೆಯದಲ್ಲಿ ಮಕ್ಕಳಿಗೆ ಮದುವೆ ಮಾಡಿಸಿದರೆ ಗರ್ಭಧಾರಣೆಯಂತಹ ವಿಷಯದಲ್ಲಿ ಹಲವು ತೊಂದರೆಗಳಾಗುತ್ತವೆ. ಇದರಿಂದ ತಾಯಿ, ಮಗು ಇಬ್ಬರಿಗೂ ಅಪಾಯ.

ಡಾ. ವೀಣಾ ಎಸ್‌. ಭಟ್‌

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು