ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನ: ಗರ್ಭನಿಂತು 2 ತಿಂಗಳು.. ವಿಪರೀತ ವಾಂತಿ, ನನಗೆ ಗರ್ಭವೇ ಬೇಡವೆನಿಸಿದೆ!

ಡಾ. ವೀಣಾ ಎಸ್ ಭಟ್ ಅವರ ಸ್ಪಂದನ ಅಂಕಣ
Published 1 ಮಾರ್ಚ್ 2024, 22:36 IST
Last Updated 1 ಮಾರ್ಚ್ 2024, 22:36 IST
ಅಕ್ಷರ ಗಾತ್ರ

ಮೇಡಂ ನನಗೆ 29 ವರ್ಷಗಳು. ಮದುವೆಯಾಗಿ 10 ತಿಂಗಳು. ಮೊದಲ ಬಾರಿಗೆ ಗರ್ಭನಿಂತು ಎರಡು ತಿಂಗಳಾಗಿದೆ.  ಮಾತ್ರೆ ತೆಗೆದುಕೊಂಡರೂ ಒಂದು ಬಾರಿ ಅಡ್ಮಿಟ್ ಆದರೂ ವಾಂತಿ ಹಾಗೂ ವಿಪರೀತ ಸುಸ್ತಾಗುವುದು ಕಡಿಮೆಯಾಗಿಲ್ಲ. ನನಗೆ ಈ ಗರ್ಭವೇ ಬೇಡವೆನಿಸಿದೆ.

–ಸರಳ, ಚೆನ್ನರಾಯಪಟ್ಟಣ.

ಉತ್ತರ: ಸರಳಾ, ಗರ್ಭಧರಿಸಿದ ಮುಕ್ಕಾಲುಪಾಲು ಮಹಿಳೆಯರಲ್ಲಿ ಗರ್ಭಧಾರಣೆಯ ಆರಂಭದಲ್ಲಿ ವಾಕರಿಕೆ, ಪದೇಪದೇ ವಾಂತಿಯಾಗುವುದು, ಹೊಟ್ಟೆತೊಳೆಸುವಿಕೆ, ನಿತ್ರಾಣ, ಸುಸ್ತು, ತಲೆಸುತ್ತಿದ ಅನುಭವ, ಜೋರಾಗಿ ವಾಂತಿ ಏನಾದರೂ ಆದರೆ ವಾಂತಿಯೊಂದಿಗೆ ರಕ್ತ ಬರುವುದು ಕೂಡ ಆಗಬಹುದು. ಬೆಳಗಿನ ಸಮಯದಲ್ಲಿಯೇ ಈ ರೀತಿಯ ತೊಂದರೆ ಹೆಚ್ಚಾಗುವುದರಿಂದ ಇದನ್ನ ಮಾರ್ನಿಂಗ್‌ ಸಿಕ್‌ನೆಸ್‌ (ಬೆಳಗಿನ ಸಂಕಟ) ಅಂತಲೂ ಕರೆಯುತ್ತಾರೆ. ಗರ್ಭಧರಿಸಿ ನಾಲ್ಕರಿಂದ ಆರುವಾರದೊಳಗೆ ಆರಂಭವಾಗಿ 12 ರಿಂದ 14 ವಾರದೊಳಗೆ ಈ ರೀತಿಯ ಸಮಸ್ಯೆ ಮುಂದುವರಿದು ನಂತರ ಹೆಚ್ಚಿನವರಲ್ಲಿ ಸರಿ ಹೋಗುತ್ತದೆ. ಶೇ. ಹತ್ತರಷ್ಟು ಜನರಲ್ಲಿ ಮಾತ್ರ ಇಡೀ ಗರ್ಭಧಾರಣೆಯಲ್ಲೂ ವಾಂತಿ ಮುಂದುವರಿಯಬಹುದು. ತೀವ್ರತರವಾದ ವಾಂತಿ ಆಗಿ ನಿರ್ಜಲೀಕರಣ ಉಂಟಾದರೆ ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ಹೈಪರ್ ಎನಿಸಿಸ್ ಗ್ರಾವಿಡೇರಂ ಎನ್ನುತ್ತಾರೆ.

ಈ ಪರಿಸ್ಥಿತಿಗೆ ನಿರ್ದಿಷ್ಟ ಕಾರಣ ತಿಳಿದಿಲ್ಲವಾದರೂ ಗರ್ಭಧಾರಣೆಯಲ್ಲಿ ಹೆಚ್ಚಾಗುವ ಎಚ್.ಸಿ.ಜಿ ಹಾರ್ಮೋನು ಮತ್ತು ಕೆಲವೊಮ್ಮೆ ಎಚ್. ಪೈಲೋರಿ ಎಂಬ ಸೂಕ್ಷ್ಮಾಣು ಜೀವಿಯ ಸೋಂಕು ಜಠರದಲ್ಲಿದ್ದಾಗ, ಥೈರಾಯಿಡ್ ಹಾರ್ಮೋನಿನ ಕಾರಣ ಇತ್ಯಾದಿಗಳನ್ನು ಸಂಭವನೀಯ ಕಾರಣಗಳೆಂದು ತಿಳಿಯಲಾಗಿದೆ. ವಾಂತಿಯಾಗುವುದು ಕೆಲವು ಆಹಾರ ತ್ಯಜಿಸಲು ಆ ಮೂಲಕ ವಿಷಕಾರಿ ವಸ್ತುಗಳ ವಿರುದ್ದ ಭ್ರೂಣವನ್ನು ರಕ್ಷಿಸುವ ವಿಶೇಷಲಕ್ಷಣ ಎನ್ನುವ ವಾದವು ಇದೆ.

ಗರ್ಭಪಾತ ಮಾಡಿಸಬೇಕೆಂಬ ಯೋಚನೆಯನ್ನು ತಲೆಯಿಂದ ತೆಗೆದುಹಾಕಿ. ಇವೆಲ್ಲ ಸಮಸ್ಯೆಗಳು ಇನ್ನು ಕೆಲವೇ ದಿನದಲ್ಲಿ ಸಂಪೂರ್ಣ ಕಡಿಮೆಯಾಗುತ್ತದೆ.

ವೈದ್ಯರ ಸಲಹೆಯ ಮೇರೆಗೆ ಔಷಧ ಸೇವಿಸುವುದು ಜತೆಗೆ ಹೀಗೆ ಮಾಡಿ.

*ರಾತ್ರಿಯೇ ಹಲ್ಲುಜ್ಜಿ ಮಲಗಿಬಿಡಿ. ಬೆಳಗ್ಗೆ ಹಾಸಿಗೆಯಿಂದ ಬೇಗನೆ ಎದ್ದು ಹೊರಹೋಗದೆ, ಉಗುರು ಬೆಚ್ಚಗಿನ ನೀರಲ್ಲಿ ಬಾಯಿ ಮುಕ್ಕಳಿಸಿ ವೈದ್ಯರು ಕೊಟ್ಟಿರುವ ಮಾತ್ರೆಯನ್ನ ಖಾಲಿ ಹೊಟ್ಟೆಯಲ್ಲಿ ಸೇವಿಸಿ (ಸ್ವಲ್ಪವೇ ನೀರನ್ನು ಬಳಸಿ) ಒಂದು ಗಂಟೆಯ ಬಳಿಕ ಏಳಿ. 

*ಒಮ್ಮೆಲೇ ಅತಿ ಹೆಚ್ಚು ಆಹಾರವನ್ನು ಸೇವಿಸದೆ ಆಗಾಗ ಸ್ವಲ್ಪ ಸ್ವಲ್ಪ ಆಹಾರವನ್ನು ಸೇವಿಸುವುದು ಒಳ್ಳೆಯದು.

*ಅತಿಯಾದ ಖಾರ ಮಸಾಲೆಯುಕ್ತ, ಜಿಡ್ಡಿನ ಅಂಶವುಳ್ಳ ಪದಾರ್ಥಗಳನ್ನು ಕಡಿಮೆ ಸೇವಿಸಬೇಕು ಆಹಾರದಲ್ಲಿ ಹೆಚ್ಚು ಹಣ್ಣು ತರಕಾರಿಗಳಿರಲಿ.

ಕೆಲವರಿಗೆ ಅಡುಗೆ ಮನೆಯ ಅನ್ನ ಬೇಳೆ ಬೆಂದ ವಾಸನೆಯಿಂದ ವಾಂತಿ ಹೆಚ್ಚಾಗಬಹುದು. ಅಡುಗೆ ಮನೆಗೆ ಹೋಗದೇ ಬೇರೆಯವರ ಸಹಾಯ ಪಡೆಯಿರಿ.

*ಶುಂಠಿಯ ಸೇವನೆ ಗರ್ಭಿಣಿಯರ ಬೆಳಗಿನ ಸಂಕಟಕ್ಕೆ ತುಂಬಾ ಒಳ್ಳೆಯದು. ಶುಂಠಿಯ ಸಣ್ಣಸಣ್ಣ ತುಂಡುಗಳನ್ನು ಬಾಯಲ್ಲಿಟ್ಟು ಅಗಿಯಬಹುದು ಅಥವಾ ಶುಂಠಿ ರಸ, ನಿಂಬೆರಸದೊಂದಿಗೆ ಉಗುರು ಬೆಚ್ಚಗಿನ ನೀರಲ್ಲಿ ಸ್ವಲ್ಪ ಉಪ್ಪು ಸ್ವಲ್ಪ ಸಕ್ಕರೆ ಹಾಕಿ ಸೇವಿಸುವುದು ಉತ್ತಮ. ಶುಂಠಿಯಲ್ಲಿರುವ ಜಿಂಜೆರಾಲ್ ಎಂಬ ಅಂಶ ಮೆದುಳಿನ ಮಟ್ಟದಲ್ಲಿ ಡೋಪಮಿನ್ ಮತ್ತು ಸೆರಾಟೋನಿನ್ ಬಿಡುಗಡೆ ಮಾಡಿ ಸಕಾರಾತ್ಮಕ ಸಂದೇಶ ರವಾನಿಸಲು ಸಹಾಯವಾಗುತ್ತದೆ. ಜಠರಾಮ್ಲ ಹೆಚ್ಚಾಗುವುದನ್ನು ತಡೆಯುತ್ತದೆ.

*ಕೃತಕ ಪೇಯಗಳನ್ನು, ಅತಿಯಾಗಿ ಸಕ್ಕರೆ ಹಾಕಿದ ಹಣ್ಣಿನ ಜ್ಯೂಸುಗಳನ್ನು ಕುಡಿಯಲೇಬೇಡಿ.

ಆಗಾಗ್ಗೆ ದ್ರವಾಹಾರ ಸೇವಿಸಿ, ನೀರು, ನಿಂಬೆ ಮತ್ತು ಶುಂಠಿ ಜ್ಯೂಸು, ಜೀರಾಗೋಲಿ, ಒಣದ್ರಾಕ್ಷಿ ಸೇವನೆ ಐಸ್‌ಕ್ಯೂಬ್ ಬಾಯಲ್ಲಿಟ್ಟು ಚೀಪೋದು, ಬ್ಲಾಕ್ ಟೀ ಸೇವನೆ ಇತ್ಯಾದಿ ಮಾಡಬಹುದು. ಪಿರಿಡಾಕ್ಸಿನ್ ಹೆಚ್ಚಿರುವ  ಅಕ್ಕಿ, ಬೀನ್ಸ್, ಬಟಾಣಿ ಇತ್ಯಾದಿಗಳನ್ನ ಸೇವಿಸಬಹುದು.  

––––––––

ಪ್ರಶ್ನೆಗಳನ್ನು ಕಳುಹಿಸಿ

ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು. ನಿಮ್ಮ ಪ್ರಶ್ನೆಗಳಿಗೆ ಪ್ರಸೂತಿ ಮತ್ತು ಸ್ತ್ರೀರೋಗತಜ್ಞೆ ಡಾ.ವೀಣಾ ಎಸ್‌. ಭಟ್ ಅವರು ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು bhoomika@prajavani.co.inಗೆ ಕಳುಹಿಸಬಹುದು

******

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT