ಲೇಖಕರು: ಡಾ. ಅನಿತಾ ಕಡಗದ ಕೆಂಭಾವಿ, ಹುಬ್ಬಳ್ಳಿ
ಪೌಷ್ಟಿಕ ಆಹಾರ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಸೆಪ್ಟೆಂಬರ್ ಮೊದಲ ವಾರ (1 ರಿಂದ 7ರವರೆಗೆ) ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ಆರೋಗ್ಯಕ್ಕೆ ಮತ್ತು ಮಕ್ಕಳ ಬೆಳವಣಿಗೆಗೆ ಪೂರಕವಾದ ಪೌಷ್ಟಿಕ ಆಹಾರ ಹೇಗಿರಬೇಕು ಎಂಬುದನ್ನು ಅರಿಯೋಣ.
***
ನನ್ನಲ್ಲಿ ಚಿಕಿತ್ಸೆಗಾಗಿ ಬರುವ ಅನೇಕ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಗಳೆಂದರೆ ಮಾಸಿಕ ಋತುಚಕ್ರದಲ್ಲಿ ವ್ಯತ್ಯಾಸ, ಸಣ್ಣ ವಯಸ್ಸಿಗೆ ಅಧಿಕ ತೂಕ, ಅತಿಯಾದ ಋತುಸ್ರಾವ, ಸಪೂರ ದೇಹದವರಿಗೂ ಮಂಡಿನೋವು... ಇಂಥವೇ. ಈ ಪ್ರಕರಣಗಳನ್ನು ವಿಶ್ಲೇಷಿಸಿದಾಗ ತಿಳಿದುಬಂದಿದ್ದು ಒಂದು ಹಾರ್ಮೋನುಗಳ ವ್ಯತ್ಯಾಸ ಮತ್ತು ಬಹುಮುಖ್ಯವಾಗಿ ಜೀವನ ಶೈಲಿ ಹಾಗೂ ಆಹಾರ ಕ್ರಮದಲ್ಲಾದ ಬದಲಾವಣೆ. ಹಾಗಾಗಿ, ಅವರೆಲ್ಲರಿಗೂ ಔಷಧಗಳ ಜೊತೆಗೆ ಪೌಷ್ಟಿಕ ಹಾಗೂ ಸಮತೋಲಿತ ಆಹಾರ ಸೇವಿಸುವ ಸಲಹೆಯನ್ನೂ ನೀಡುತ್ತೇನೆ.
ಇಡೀ ಕುಟುಂಬವನ್ನು ಕಣ್ಣಿನ ರೆಪ್ಪೆಯಂತೆ ಕಾಪಿಡುವ ಹೆಣ್ಣುಮಕ್ಕಳ ಆರೋಗ್ಯದಲ್ಲಿ ದಿನೇ ದಿನೇ ವ್ಯತ್ಯಯ ಕಾಣುತ್ತಿದೆ. ಇದಕ್ಕೆಲ್ಲ ಕಾರಣ ಏನಿರಬಹುದು ಎಂದು ಗಮನಿಸಿದರೆ ಆಹಾರದ ಗುಣ, ಕಾಲ, ಸಂಯೋಜನೆಗಳನ್ನು ನೋಡದೇ ತಿನ್ನುವುದು. ದೇಹಕ್ಕೆ ಒಗ್ಗದ ಜಂಕ್ ಫುಡ್‌ನಂತಹ ತಿಂಡಿ ತಿನಿಸುಗಳನ್ನು ತಿನ್ನುವುದು, ಅಸಮತೋಲಿತ ಆಹಾರ ಸೇವನೆಯಿಂದಾಗಿ ಮಹಿಳೆಯರಲ್ಲಿ ಪಿಸಿಒಡಿ ಹಾಗೂ ಪಿಸಿಒಎಸ್, ಹಾರ್ಮೋನ್‌ನಲ್ಲಿ ವ್ಯತ್ಯಯ, ಕ್ಯಾಲ್ಸಿಯಂ ಕೊರತೆ, ರಕ್ತ ಹೀನತೆ, ಸಂಧಿವಾತ, ಆಮವಾತ, ನರದೌರ್ಬಲ್ಯದಂಥ ಸಮಸ್ಯೆಗಳು ಕಾಣಿಸಿಕೊಂಡಿವೆ. ಸಣ್ಣ ವಯಸ್ಸಿಗೆ ಹಲ್ಲಿನ ಸಮಸ್ಯೆ, ಮಂಡಿ ನೋವು, ಮಧುಮೇಹ, ರಕ್ತದೊತ್ತಡದಂತಹ ಸಮಸ್ಯೆಗಳು ಕಾಡುತ್ತಿವೆ. ಹದಿಹರೆಯದ ಹೆಣ್ಣುಮಕ್ಕಳಲ್ಲಿ ಬೊಜ್ಜು, ಮುಟ್ಟಿನ ತೊಂದರೆಗಳು ಹೆಚ್ಚುತ್ತಿವೆ.
ಇದಕ್ಕೆ ಪರಿಹಾರವೇನು?
ಈ ಅನಾರೋಗ್ಯ ಸಮಸ್ಯೆಗಳು ಕಂಡಾಗ, ತಕ್ಷಣ ಸಿಗುವ ಸಲಹೆಯೇ ‘ಡಯಟ್’ ಅರ್ಥಾತ್ ಮಿತ ಆಹಾರ ಸೇವನೆ. ಈ ಪದದ ಅರ್ಥವನ್ನು ಸರಿಯಾಗಿ ಗ್ರಹಿಸಬೇಕಿದೆ. ಡಯಟ್ ಎಂದರೆ ಉಪವಾಸ ಅಲ್ಲ ಅಥವಾ ಕೆಲವು ಪದಾರ್ಥಗಳನ್ನು ಬಿಟ್ಟು, ಕೆಲವನ್ನಷ್ಟೇ ಸೇವಿಸುವುದು ಎಂದರ್ಥವಲ್ಲ. ‘ಡಯಟ್’ ಎಂದರೆ ದೇಹಕ್ಕೆ ನಿತ್ಯ ಅಗತ್ಯವಿರುವಷ್ಟೇ ಆಹಾರ ಸೇವಿಸುವುದು (ಡೈಲಿ ಇನ್‌ಟೇಕ್ ಆಫ್ ಎಸೆನ್‌ಷಿಯಲ್ ಥಿಂಗ್ಸ್) ಎಂಬುದನ್ನು ತಿಳಿದುಕೊಳ್ಳಬೇಕಿದೆ. ಪ್ರತಿದಿನ ದೇಹಕ್ಕೆ ಅಗತ್ಯ ಇರುವಷ್ಟು ಪೌಷ್ಟಿಕ ಆಹಾರವನ್ನು ಸೇವಿಸಲೇಬೇಕು. ಜೊತೆಗೆ ಸಮತೋಲಿತ ಆಹಾರವೂ ಇರಬೇಕು. ಆಗ ಮಾತ್ರ ಶರೀರದ ಬೆಳವಣಿಗೆ, ಚಯಾಪಚಯ ಕ್ರಿಯೆಗಳು ಹಾಗೂ ಅಂಗಾಂಶಗಳ ಸಂರಕ್ಷಣೆಯಾಗುತ್ತದೆ. ಇದರಲ್ಲಿ ನಿರ್ಲಕ್ಷ್ಯ ತೋರಿದರೆ ವಿವಿಧ ಕಾಯಿಲೆಗಳು ಬೆನ್ನುಹತ್ತುವುದು ಗ್ಯಾರಂಟಿ.
ಸಮತೋಲಿತ ಆಹಾರ ಏಳು ಅಂಶಗಳನ್ನು ಹೊಂದಿರಬೇಕು. ಪಿಷ್ಠ, ಪ್ರೊಟೀನ್ಸ್, ಕೊಬ್ಬು, ನಾರಿನ ಅಂಶಗಳು, ಜೀವಸತ್ವಗಳು, ಖನಿಜಗಳು ಹಾಗೂ ನೀರಿನ ಅಂಶಗಳು. ಇದರಲ್ಲೂ ಮಹಿಳೆಯರು ನಾರಿನ ಅಂಶ, ಜೀವಸತ್ವ ಹಾಗೂ ಖನಿಜಾಂಶಯುಕ್ತ ಆಹಾರಗಳನ್ನು ತಪ್ಪಿಸಬಾರದು. ಪಾಲಿಶ್ ಮಾಡದ ಅಕ್ಕಿ ಹಾಗೂ ಸಿರಿಧಾನ್ಯಗಳಲ್ಲಿ ನಾರಿನ ಅಂಶ ಅಧಿಕವಾಗಿರುತ್ತದೆ. ಸಿರಿಧಾನ್ಯಗಳ ಅಡುಗೆ ರುಚಿಸದಿದ್ದರೆ, ಅದನ್ನು ಸ್ವಲ್ಪ ಪ್ರಮಾಣದಲ್ಲಿ ರೂಢಿಸಿಕೊಂಡು ನಿತ್ಯದ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದು ಉತ್ತಮ. ಏಕೆಂದರೆ ಇವುಗಳಲ್ಲಿ ನಾರಿನ ಅಂಶ ಹೆಚ್ಚಿರುತ್ತದೆ. ಈ ಧಾನ್ಯಗಳು ಸಕ್ಕರೆಯ ಅಂಶವನ್ನು ನಿಧಾನವಾಗಿ ರಕ್ತದಲ್ಲಿ ಬಿಡುವುದರಿಂದ ಸಕ್ಕರೆ ಪ್ರಮಾಣ ಸಮತೋಲನದಲ್ಲಿ ಇರುತ್ತದೆ. ಬೇಗನೇ ಹಸಿವಾಗುವುದಿಲ್ಲ. ಜೊತೆಗೆ ಅಡುಗೆಯಲ್ಲಿ ಹಸುವಿನ ತುಪ್ಪ ಹಾಗೂ ಗಾಣದಿಂದ ತೆಗೆದ ಎಣ್ಣೆಯ ಬಳಕೆಯೂ ಉತ್ತಮ. ನಿತ್ಯದ ಆಹಾರದಲ್ಲಿ ಬೇಳೆ–ಕಾಳುಗಳು, ಮೊಳಕೆಕಾಳು, ಹಾಲು–ಹಣ್ಣು–ತರಕಾರಿ ಕಡ್ಡಾಯವಾಗಿರಲಿ. ಅಭ್ಯಾಸವಿದ್ದರೆ ಗ್ರಿಲ್ಡ್ ಮೊಟ್ಟೆ, ಮಾಂಸ ಬಳಸಬಹುದು. ಇವುಗಳನ್ನು ಸಮತೋಲಿತ
ವಾಗಿ ಬಳಸಿ. ಸಾಂಪ್ರದಾಯಿಕ, ಪ್ರಾದೇಶಿಕ ಮತ್ತು ಋತುವಿಗೆ ಅನುಗುಣವಾಗಿ ಆಹಾರ ಸೇವಿಸುವುದು ಪರಿಣಾಮಕಾರಿ. ಅಂದರೆ ಆಯಾ ಕಾಲದಲ್ಲಿ ದೊರೆಯುವ ಹಣ್ಣು, ತರಕಾರಿಗಳನ್ನು ಉಪಯೋಗಿಸಿ.
ಇವುಗಳನ್ನೂ ಗಮನಿಸಿ..
ಮಹಿಳೆಯರು, ಹಿಂದಿನ ದಿನ ಉಳಿದಿದ್ದ ಆಹಾರ ಪದಾರ್ಥಗಳನ್ನು ತಿನ್ನಬೇಡಿ. ತಾಜಾ ಹಾಗೂ ಪೌಷ್ಟಿಕ ಆಹಾರವನ್ನೇ ಸೇವಿಸಬೇಕು. ಇದನ್ನು ಪಾಲಿಸಿದರೆ ಮುಟ್ಟು ನಿಲ್ಲುವ ಹಂತದಲ್ಲಿ ಹಾಗೂ ವೃದ್ಧಾಪ್ಯದಲ್ಲಿ ಕಂಡು ಬರುವ ಸಮಸ್ಯೆಗಳನ್ನೂ ತಡೆಗಟ್ಟಬಹುದು.
ಮಹಿಳೆಯರು ಈಗ ಮನೆ ಮತ್ತು ಹೊರಗಡೆ ಎರಡೂ ಕಡೆ ದುಡಿಯುತ್ತಾಳೆ. ಸಮಯದ ಅಭಾವದಿಂದಾಗಿ ಮನೆಯಲ್ಲಿ ಅಡುಗೆ ಮಾಡಲಾಗದೇ ಹೊರಗಿನ ಆಹಾರದ ಮೇಲೆ ಅವಲಂಬಿತರಾಗುತ್ತಾರೆ. ಅಷ್ಟೇ ಅಲ್ಲ, ಹೊತ್ತಲ್ಲದ ಹೊತ್ತಲ್ಲಿ ಹೋಟೆಲ್‌ಗಳಲ್ಲಿ ತಿನ್ನುವುದು ಅಭ್ಯಾಸವಾಗುತ್ತದೆ. ಇವೆಲ್ಲ, ಆಹಾರದ ಸಮತೋಲನ ತಪ್ಪಲು ಕಾರಣವಾಗುತ್ತದೆ. ಹಾಗಾಗಿ, ಆದಷ್ಟು ಮನೆಯ ಆಹಾರಕ್ಕೆ ಆದ್ಯತೆ ನೀಡಬೇಕು.
ಆಯುರ್ವೇದದಲ್ಲಿ ಹೇಳಿರುವಂತೆ ಗರ್ಭಿಣಿ ಪರಿಚರ್ಯ ಹಾಗೂ ಸೂತಿಕಾ ಪರಿಚರ್ಯ (ಬಾಣಂತಿ ಆರೈಕೆ) ವಿಧಿಯನ್ನು ನುರಿತ ವೈದ್ಯರ ಸಲಹೆ ಪಡೆದು ಪಾಲಿಸಿದಲ್ಲಿ ತಾಯಿ ಹಾಗೂ ಮಗುವಿನ ಆರೋಗ್ಯ ಉತ್ತಮವಾಗುತ್ತದೆ. ಸಾಂಪ್ರದಾಯಿಕವಾಗಿ ಹೇಳಿದ ಆಹಾರವನ್ನು ಸೇವಿಸಿ ಆರೈಕೆ ಮಾಡಿಕೊಂಡರೆ ಮುಂದೆ ಬರಬಹುದಾದ ಸಂಧಿವಾತ, ಆಮವಾತ, ಬೊಜ್ಜು ಇತ್ಯಾದಿಗಳನ್ನು ತಡೆಗಟ್ಟಬಹುದು. ಅಂಟಿನ ಉಂಡೆ, ಆಳ್ವಿ ಪಾಯಸ, ತುಪ್ಪ, ಬೆಲ್ಲಗಳನ್ನು ಬಾಣಂತಿಯರಿಗೆ ನೀಡುವುದು ಇದೇ ಕಾರಣಕ್ಕೆ. ಗರ್ಭಿಣಿಯರು ಹಾಗೂ ಬಾಣಂತಿಯರು ತೀಕ್ಷ್ಣ, ಖಾರ ಹಾಗೂ ಆಲೂಗಡ್ಡೆ, ಕಡಲೆಯಂಥ ವಾಯು ಆಹಾರಗಳನ್ನು ಹೆಚ್ಚು ಸೇವಿಸಬಾರದು. ಮೊಸರಿಗಿಂತ ಮಜ್ಜಿಗೆ ಸೇವನೆ ಉತ್ತಮ.
ಆಯುರ್ವೇದದಲ್ಲಿ ‘ಆಹಾರ’ ಎಂದರೆ...
ಎಲ್ಲ ಅನ್ನ ಹಾಗೂ ಪಾನೀಯಗಳನ್ನು ಆಹಾರವೆಂದು ಪರಿಗಣಿಸಲಾಗುತ್ತದೆ. ಆಹಾರವೇ ಪ್ರಾಣಕ್ಕೆ ಮೂಲ. ಲೋಕದ ಸ್ಥಿತಿ, ಉತ್ಪತ್ತಿ ಹಾಗೂ ವಿನಾಶದ ಕಾರಣ ಆಹಾರವೇ ಆಗಿದೆ. ಆಹಾರ ಪಂಚಭೌತಿಕವಾಗಿದ್ದು ಪಂಚಭೂತಗಳಿಂದ ನಿರ್ಮಿತ ದೇಹವನ್ನು ನಿರ್ವಹಿಸುತ್ತದೆ.
ಆಹಾರವು ಗುರು (ಭಾರದ) ಅಥವಾ ಲಘು (ಹಗುರವಾದ) ಗುಣ ಹೊಂದಿರಬಹುದು. ಆಯುರ್ವೇದದ ಪ್ರಕಾರ ಆಹಾರವು ಬಲವೃದ್ಧಿ ಮಾಡುವ, ತೃಪ್ತಿಕರ, ಆಯಷ್ಕರ, ಉತ್ಸಾಹಕರ, ಸ್ಮೃತಿಕರ, ಓಜಸ್ಕರ ಹಾಗೂ ಅಗ್ನಿವರ್ಧನ ಮಾಡುವ ಗುಣ ಹೊಂದಿರಬೇಕು.ಸೂಕ್ತ ಪ್ರಮಾಣದಲ್ಲಿ ದೇಹದ ಅಗ್ನಿ ಬಲ ಅನುಸಾರವಾಗಿ ಆಹಾರ ಸೇವಿಸಬೇಕು. ಹೊಟ್ಟೆಯ ಎರಡು ಭಾಗ ಅನ್ನ, ಒಂದು ಭಾಗ ಪಾನ, ಒಂದು ಭಾಗ ವಾತ ಸಂಚಲನಕ್ಕೆ ಬಿಡಬೇಕೆಂದಿದ್ದಾರೆ. ಊಟದಲ್ಲಿ ಮೊದಲು ಮಧುರ ರಸ (ಸಿಹಿ– ವಾತ ನಿರ್ವಹಣೆ), ಮಧ್ಯದಲ್ಲಿ ಆಮ್ಲ (ಹುಳಿ)ಮತ್ತು ಲವಣ (ಉಪ್ಪು) ಕೊನೆಯಲ್ಲಿ ಕಟು (ಪಿತ್ತ ನಿವಾರಣೆ), ತಿಕ್ತ (ಕಹಿ) ಹಾಗೂ ಕಷಾಯ ಅಂಶಗಳು ಇದ್ದರೆ ಕಫವನ್ನು ಹತೋಟಿಯಲ್ಲಿಡುತ್ತದೆ. ಆಹಾರ ಪದ್ಧತಿಯ 8 ಪ್ರಕಾರದ ಲಕ್ಷಣಗಳನ್ನು ಆಯುರ್ವೇದ ವಿವರಿಸಿದೆ– 1) ಪ್ರಕೃತಿ (ಶರೀರದ ಗುಣ) 2) ಸಂಸ್ಕಾರ (ಆಹಾರ ತಯಾರಿಕೆ) 3) ಸಂಯೋಜನೆ (ಬೇರೆ ಬೇರೆ ಆಹಾರ ಪದಾರ್ಥಗಳ ಮಿಶ್ರಣ) 4) ರಾಶಿ (ಪ್ರಮಾಣ) 5) ದೇಶ (ಪ್ರದೇಶ) 6) ಕಾಲ (ದಿನ, ರಾತ್ರಿ, ಋತುಗಳಿಗೆ ಅನುಸಾರವಾಗಿ ಆಹಾರ ಸೇವನೆ) 7) ಉಪಯೋಗ (ಭೋಜನ ವಿಧಾನ). 8) ಉಪಭೋಕ್ತಾ (ಅಗ್ನಿಯ ಬಲಕ್ಕೆ ಅನುಸಾರವಾಗಿ)
ಪೌಷ್ಟಿಕ ಆಹಾರ ಕುರಿತ ಮಾಹಿತಿಗೆ ಸಂಪರ್ಕಿಸಬಹುದು: 9886759399 (ಸಂಪರ್ಕ ಸಮಯ ಸಂಜೆ 6 ರಿಂದ ರಾತ್ರಿ 8ಗಂಟೆವರೆಗೆ)
(ಲೇಖಕರು ಆಯುರ್ವೇದ, ಯೋಗ, ನಿಸರ್ಗೋಪಚಾರ, ಪಂಚಕರ್ಮ ತಜ್ಞರು, ಹುಬ್ಬಳ್ಳಿ)
(ನಿರೂಪಣೆ: ಸ್ಮಿತಾ ಶಿರೂರ)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.